ಎಮ್ಮೆಗಳಿಗೆ ನೀರು ಹಾಕ್ಬೇಕು, ಮೇವು ಕೊಡಬೇಕು| ಅಪಹಾಸ್ಯಕ್ಕೆ ಗುರಿಯಾಗುತ್ತಿರುವ ಸಿಬ್ಬಂದಿ| ಯಾವುದೇ ತಪ್ಪು ಮಾಡದಿದ್ದರೂ ಸರದಿಯಂತೆ ಎಮ್ಮೆ ಕಾಯುತ್ತಿರುವ ಪೊಲೀಸರು| ಠಾಣೆಯಲ್ಲಿ ಚಾಲಕನ ಚಾಕರಿ|
ಶಂಕರಭಟ್ ತಾರೀಮಕ್ಕಿ
ಯಲ್ಲಾಪುರ(ಡಿ.10): ಪಟ್ಟಣದ ಪೊಲೀಸರು ಇಲ್ಲಿವರೆಗೆ ಜನತೆಗೆ ರಕ್ಷಣೆ ಒದಗಿಸುತ್ತಿದ್ದರು. ಇದೀಗ ‘ಎಮ್ಮೆ ಕಾಯುವುದು’ ಕೂಡ ಅವರ ಕರ್ತವ್ಯದ ಭಾಗವಾಗಿದೆ!
ಹೌದು! ಪಟ್ಟಣದ ಪೊಲೀಸರು ಹೀಗೆ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ತಪ್ಪು ಮಾಡಿದಾಗ ‘ಎಮ್ಮೆ ಕಾಯೋಕೆ ಹೋಗು’ ಎಂದು ಬೈಯ್ಯುವುದು ವಾಡಿಕೆ. ಆದರೆ ಇಲ್ಲಿ ಯಾವುದೇ ತಪ್ಪು ಮಾಡದಿರುವ ಪೊಲೀಸರೂ ಸರದಿಯಂತೆ ಈ ಕೆಲಸ ಮಾಡ್ತಿದ್ದಾರೆ. ಕಾಯೋದು ಮಾತ್ರವಲ್ಲ ಅವುಗಳಿಗೆ ಹುಲ್ಲು, ನೀರು ಹಾಕುವ ಕೆಲಸ ಮಾಡ್ತಿದ್ದಾರೆ. ಇದು ಪೊಲೀಸ್ ಅಧಿಕಾರಿಗಳಿಗೆ ನಿಜಕ್ಕೂ ಮುಜುಗರ ಉಂಟುಮಾಡುತ್ತಿದೆ. ಅಷ್ಟಕ್ಕೂ ಹೀಗೆ ಪೊಲೀಸರು ಎಮ್ಮೆ ಕಾಯುತ್ತಿರುವುದಕ್ಕೆ ಬಲವಾದ ಕಾರಣವೂ ಇದೆ.
ಅಕ್ರಮ ಎಮ್ಮೆ ಸಾಗಾಟ:
ಹತ್ತು ದಿನಗಳ ಹಿಂದೆ ಮಹಾರಾಷ್ಟ್ರ ನೋಂದಣಿ ಹೊಂದಿದ ಲಾರಿಯಲ್ಲಿ 15 ಎಮ್ಮೆಗಳನ್ನು ಬೆಳಗಾವಿ ಸುತ್ತಮುತ್ತಲಿನ ಹಳ್ಳಿಗಳಿಂದ ಖರೀದಿಸಿ, ಯಲ್ಲಾಪುರದ ಮೂಲಕ ರಾಷ್ಟ್ರೀಯ ಹೆದ್ದಾರಿ- 63ರ ಮೇಲೆ ಹಾದು ಹೋಗುವಾಗ ಯಲ್ಲಾಪುರ ಪೊಲೀಸರು ಹಿಡಿದು, ಎಮ್ಮೆಗಳನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯದಿಂದ ಮುಂದಿನ ಕ್ರಮ ಜರುಗಬೇಕಿದೆ. ಅಲ್ಲಿವರೆಗೆ ಎಮ್ಮೆಯ ಭದ್ರತೆ, ಸಾಕಾಣಿಕೆ, ನಿರ್ವಹಣೆ ಹೊಣೆ ಪೊಲೀಸರ ಹೆಗಲೇರಿದೆ.
ಆತ್ಮಲಿಂಗಕ್ಕೆ ಪೂಜೆ, ರಾಘವೇಶ್ವರ ಶ್ರೀಗಳ ಆಶೀರ್ವಾದ ಪಡೆದ ಕಟೀಲ್
ಈ ಎಮ್ಮೆಗಳಿಗೆ ದಿನವೊಂದಕ್ಕೆ ತಲಾ 50 ಕೆಜಿಯಷ್ಟು ಮೇವು, ಜೊತೆಗೆ ನೀರು ಬೇಕಿದೆ. ಯಲ್ಲಾಪುರ ಎಪಿಎಂಸಿ ಆವಾರದಲ್ಲಿ ಕಟ್ಟಿ ಹಾಕಲಾಗಿದೆ. ಅವುಗಳ ರಕ್ಷಣೆಗಾಗಿ ಪೊಲೀಸರನ್ನು ನೇಮಿಸಲಾಗಿದೆ. ಅವರು ಸರದಿಯಂತೆ ಹಗಲು ರಾತ್ರಿ ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದಾರೆ. ಈ ಎಮ್ಮೆಗಳಿಗೆ ಹುಲ್ಲು ಮತ್ತು ನೀರು ನೀಡುವಲ್ಲಿ ಪೊಲೀಸರು ಸುಸ್ತಾಗುತ್ತಿದ್ದಾರೆ. ಅಕ್ಷರಶಃ ಅವರಿಗೆ ಈ ಎಮ್ಮೆ ಕಾಯುವ ಕೆಲಸ ಸಾಕುಬೇಕಾಗಿದೆ. ಇನ್ನೆಷ್ಟು ದಿನ ಈ ಎಮ್ಮೆಗಳನ್ನು ಕಾಯಬೇಕು? ಎಂದು ಕಂಡವರೆದುರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಠಾಣೆಯಲ್ಲಿ ಚಾಲಕನ ಚಾಕರಿ:
ಈ ಎಮ್ಮೆಗಳನ್ನು ಕೇರಳಕ್ಕೆ ಒಯ್ಯುವವರು ಬರುತ್ತಿದ್ದಿಲ್ಲ. ಹೊಟ್ಟೆಪಾಡಿಗಾಗಿ ಎಮ್ಮೆಗಳನ್ನು ತಂದ ವಾಹನ ಚಾಲಕರು ಪೊಲೀಸ್ ಠಾಣೆಯಲ್ಲಿ ಚಾಕರಿ ಮಾಡುತ್ತಿದ್ದಾರೆ. ಈ ಪೊಲೀಸರು ಎಮ್ಮೆ ಕಾಯಲು ನಿಯೋಜನೆ ಆಗುತ್ತಿರುವುದು ಇದೇ ಮೊದಲೇನಲ್ಲ. ತಿಂಗಳಿಗೆ ಮೂರ್ನಾಲ್ಕು ಬಾರಿ ಈ ಎಮ್ಮೆ ಕಾಯುವ ಕೆಲಸ ನಡೆಯುತ್ತಲೇ ಇರುತ್ತದೆ. ಪಟ್ಟಣದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಯಲ್ಲಾಪುರದ ಮೂಲಕ ಅಕ್ರಮವಾಗಿ ಗೋವುಗಳನ್ನು ವಾಹನಗಳಲ್ಲಿ ತುಂಬಿಕೊಂಡು ಹೋಗಲಾಗುತ್ತದೆ. ತಿಂಗಳಿಗೆ ಕನಿಷ್ಠ ಒಂದೆರಡು ಪ್ರಕರಣದಲ್ಲಿ ರಾಸುಗಳನ್ನು ಹಿಡಿದು ರಕ್ಷಿಸಲಾಗುತ್ತೆ.
ಕಾನೂನು ಕ್ರಮ ಕೈಗೊಂಡು ಜಾನುವಾರುಗಳನ್ನು ಗೋಶಾಲೆಗೆ ಕಳುಹಿಸಲಾಗುತ್ತದೆ.ಹೀಗೆ ತಿಂಗಳಿಗೆ ನೂರಾರು ರಾಸುಗಳ ಬಂದರೆ ಅವುಗಳ ಆಹಾರದ ವೆಚ್ಚವನ್ನು ಹೇಗೆ ಹೊಂದಿಸುವುದೆಂಬುದೇ ಗೋಶಾಲೆಗಳ ಚಿಂತೆ. ನಾಲ್ಕಾರು ತಿಂಗಳು ಬಿಟ್ಟು, ಕೆಲವರು ಬಂದು ರಾಸುಗಳನ್ನು ಒಯ್ಯುತ್ತಾರೆ. ಸಾಕಿದ ಖರ್ಚು ನೀಡಿ ಎಂದರೆ ನೀಡುತ್ತಿಲ್ಲ. ಇದು ಗೋ ಶಾಲೆಗಳ ಸ್ಥಿತಿ ಎಂದು ತಾಲೂಕಿನ ಕರಡೊಳ್ಳಿಯಲ್ಲಿ ಇರುವ ಗೋಶಾಲೆಯ ಮುಖ್ಯಸ್ಥ ಎಂ.ಎನ್. ಭಟ್ಟತಮ್ಮ ಅಳಲು ತೋಡಿಕೊಂಡರು.
ವಾಹನಗಳಲ್ಲಿ ಭಟ್ಕಳ, ಕೇರಳ ಸೇರಿದಂತೆ ಅನೇಕ ಕಡೆ ರಾಸುಗಳನ್ನು ನಿತ್ಯ ಒಯ್ಯಲಾಗುತ್ತಿದೆ. ಪೊಲೀಸರ ಕೈಗೆ ಸಿಕ್ಕಿಬಿದ್ದಾಗ ಇಂತಹ ಸ್ಥಿತಿ ನಿರ್ಮಾಣವಾಗುತ್ತಿದೆ. ಗೋಹತ್ಯೆ ನಿಷೇಧ ಕಾನೂನು ಜಾರಿ ಕುರಿತು ಸರ್ಕಾರ ಗಂಭೀರ ಚಿಂತನೆ ಮಾಡುತ್ತಿದೆ. ಆದರೆ, ಅಕ್ರಮವಾಗಿ ಸಾಗಾಟ ಮಾಡುವ ಗೋವುಗಳನ್ನು ರಕ್ಷಿಸುವುದು, ಸಾಕುವುದಕ್ಕೆ ಈಗಲೆ ಸೂಕ್ತ ಕ್ರಮ ಕೈಕೊಳ್ಳಬೇಕಿದೆ. ಇಲ್ಲದಿದ್ದರೆ ಯಲ್ಲಾಪುರ ಮಾತ್ರವಲ್ಲ, ರಾಜ್ಯದ ಬಹುತೇಕ ಠಾಣೆಯ ಪೊಲೀಸರಿಗೆ ತಮ್ಮ ಕರ್ತವ್ಯದ ಜತೆಗೆ ಆಗಾಗ ‘ಎಮ್ಮೆ ಕಾಯುವುದು’ ಕೂಡ ಅನಿವಾರ್ಯವಾಗಲಿದೆ.
ನಿತ್ಯವೂ ಹೀಗೆ ಗೋವು, ಎಮ್ಮೆ, ಕೋಣ ಸೇರಿದಂತೆ ರಾಸುಗಳನ್ನು ಅನಧಿಕೃತವಾಗಿ ಸಾಗಿಸಲಾಗುತ್ತಿದೆ. ಬಿಡಲು ಆಗುತ್ತಿಲ್ಲ. ಹಿಡಿದರೆ ರಾಸುಗಳನ್ನು ಸಾಕುವುದು ಪೊಲೀಸರಿಗೆ ತೀವ್ರ ಕಷ್ಟವಾಗುತ್ತಿದೆ ಎಂದು ಸಿಪಿಐ ಸುರೇಶ ಯಳ್ಳೂರು ತಿಳಿಸಿದ್ದಾರೆ.