ನೂರಕ್ಕೂ ಹೆಚ್ಚು ಕುಟುಂಬಗಳಿರುವ ಗ್ರಾಮದಲ್ಲಿ ಅತೀ ಹೆಚ್ಚು ಬಡವರೇ ಇದ್ದು ಇವರೆಲ್ಲರೂ ನಡೆದುಕೊಂಡೇ ಓಡಾಡುತ್ತಿದ್ದರು. ಹೀಗೆ ಐದಾರು ಕಿಲೋ ಮೀಟರ್ ನಡೆದು ಓಡಾಡಲು ಸಾಧ್ಯವಾಗದೆ, ಎಲ್ಲರೂ ಸೇರಿ ಒಂದಿಷ್ಟು ಹಣ ಕೂಡಿಸಿ ಅಡಿಕೆ ಮರಗಳನ್ನು ತಂದು ಶ್ರಮದಾನದ ಮೂಲಕ ಕಾಲು ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು(ಆ.29): ಭಾರಿ ಮಳೆಗೆ ಕುಸಿದು ಹೋದ ಸೇತುವೆಯನ್ನು ನಿರ್ಮಾಣ ಮಾಡಿಕೊಡುವಂತೆ ಎರಡು ವರ್ಷಗಳಿಂದ ಮನವಿ ಮಾಡಿ ಸುಸ್ತಾದ ಜನರು ಕೊನೆಗೆ ತಾವೇ ಸ್ವತಃ ಅಡಿಕೆ ಮರಗಳನ್ನು ತಂದು ಅದರಿಂದ ಕಾಲು ಸೇತುವೆ ಮಾಡಿಕೊಂಡಿದ್ದಾರೆ.
undefined
ಹೌದು, ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕಿನ ಮಾವಿನಹಳ್ಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಸಂಪೂರ್ಣ ಕುಸಿದು ಬಿದ್ದು ಎರಡು ವರ್ಷಗಳೇ ಕಳೆದಿವೆ. ಅದನ್ನು ಮರು ನಿರ್ಮಿಸಿಕೊಡುವಂತೆ ಎಷ್ಟೇ ಮನವಿ ಮಾಡಿದರೂ ಇಂದಿಗೂ ಸೇತುವೆಯನ್ನೇ ನಿರ್ಮಿಸಿಲ್ಲ. ಹೀಗಾಗಿ ಇಲ್ಲಿನ ನೂರಾರು ಕುಟುಂಬಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.
ಪಶ್ಚಿಮಘಟ್ಟದ ಬಫರ್ ಝೋನ್ ಬೆಟ್ಟ ಪ್ರದೇಶದಲ್ಲಿ ಅಕ್ರಮ ರೆಸಾರ್ಟ್ ನಿರ್ಮಾಣ?: ಗ್ರಾಮಸ್ಥರ ಮನವಿಯಲ್ಲೇನಿದೆ!
ಮಾವಿನಹಳ್ಳ ಗ್ರಾಮಕ್ಕೆ ಹೋಗಬೇಕಾದರೆ ಕುಶಾಲನಗರದಿಂದ ಸೋಮವಾರಪೇಟೆಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿ ಯಡವನಾಡಿನವರೆಗೆ ಸಾಗಬೇಕು. ಬಳಿಕ ಯಡವನಾಡಿನಿಂದ ಮಾವಿನಹಳ್ಳ ಗ್ರಾಮಕ್ಕೆ ತೆರಳಬೇಕು. ಆದರೆ ಯಡವನಾಡು ಹಾಗೂ ಮಾವಿನಹಳ್ಳ ನಡುವಿನ ರಸ್ತೆಯಲ್ಲಿ ಮಾವಿನಹಳ್ಳ ಗ್ರಾಮದ ಪಕ್ಕದಲ್ಲೇ ಇರುವ ಸೇತುವೆ ಕುಸಿದು ಬಿದ್ದಿದೆ. ಇದರಿಂದಾಗಿ ಗ್ರಾಮದ ಜನರು ಎರಡು ವರ್ಷಗಳಿಂದ ಹಾರಂಗಿ ಮಾರ್ಗವಾಗಿ ಐದಾರು ಕಿಲೋ ಮೀಟರ್ ಸುತ್ತಿ ಬಳಸಿ ಓಡಾಡುತ್ತಿದ್ದಾರೆ.
ಹೌದು ಇಲ್ಲಿನ ಹೆಚ್ಚಿನ ಜನರು ಸೋಮವಾರಪೇಟೆಗೋ ಕುಶಾಲನಗರಕ್ಕೋ ಹೋಗಬೇಕಾದರೆ ಅಥವಾ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ಹೋಗಬೇಕೆಂದರೆ ಗ್ರಾಮದಿಂದ ಹಾರಂಗಿ ಭಾಗಕ್ಕೆ ಮೂರು ಕಿಲೋ ಮೀಟರ್ ಸಾಗಿ ನಂತರ ಹಾರಂಗಿ ರಸ್ತೆಯಿಂದ ಪುನಃ ಯಡವನಾಡು ತಲುಪಿ ಅಲ್ಲಿಂದ ಸೋಮವಾರಪೇಟೆ ಅಥವಾ ಕೂಡಿಗೆ, ಕುಶಾಲನಗರಗಳಿಗೆ ಹೋಗುತ್ತಿದ್ದಾರೆ. ಸ್ವಂತ ಬೈಕ್ ಅಥವಾ ವಾಹನ ಇರುವವರು ಹೇಗೆ ಸುತ್ತಿಬಳಸಿ ಹೋಗುತ್ತಾರೆ. ಆದರೆ ನೂರಕ್ಕೂ ಹೆಚ್ಚು ಕುಟುಂಬಗಳಿರುವ ಗ್ರಾಮದಲ್ಲಿ ಅತೀ ಹೆಚ್ಚು ಬಡವರೇ ಇದ್ದು ಇವರೆಲ್ಲರೂ ನಡೆದುಕೊಂಡೇ ಓಡಾಡುತ್ತಿದ್ದರು. ಹೀಗೆ ಐದಾರು ಕಿಲೋ ಮೀಟರ್ ನಡೆದು ಓಡಾಡಲು ಸಾಧ್ಯವಾಗದೆ, ಎಲ್ಲರೂ ಸೇರಿ ಒಂದಿಷ್ಟು ಹಣ ಕೂಡಿಸಿ ಅಡಿಕೆ ಮರಗಳನ್ನು ತಂದು ಶ್ರಮದಾನದ ಮೂಲಕ ಕಾಲು ಸೇತುವೆಯನ್ನು ನಿರ್ಮಿಸಿಕೊಂಡಿದ್ದಾರೆ.
ಕೊಡಗು ಕೆಸರುಗದ್ದೆ ಕ್ರೀಡಾಕೂಟ: ಕೆಸರಲ್ಲಿ ಮಿಂದೆದ್ದರು ಕೂಡ್ಲೂರು ಪ್ರೌಢಶಾಲಾ ವಿದ್ಯಾರ್ಥಿಗಳು!
ಮಾವಿನಹಳ್ಳದಿಂದ ನೇರವಾಗಿ ಯಡವನಾಡಿಗೆ ಹೋದರೆ ಕೇವಲ ಒಂದುವರೆ ಕಿಲೋಮೀಟರ್ ದೂರ ಅಷ್ಟೇ. ಕುಸಿದ ಸೇತುವೆಯನ್ನು ನಿರ್ಮಿಸುವಂತೆ ಎರಡು ವರ್ಷಗಳ ಹಿಂದೆ ಶಾಸಕರಾಗಿದ್ದ ಅಪ್ಪಚ್ಚು ರಂಜನ್ ಅವರನ್ನೂ ಭೇಟಿಯಾಗಿ ಮನವಿ ಮಾಡಿದ್ದೆವು. ಈಗ ನೂತನವಾಗಿ ಆಯ್ಕೆಯಾಗಿರುವ ಶಾಸಕ ಮಂತರ್ ಗೌಡ ಅವರನ್ನೂ ಭೇಟಿಯಾಗಿ ಸೇತುವೆ ಮಾಡಿಸಿಕೊಡುವಂತೆ ಮನವಿ ಮಾಡಿದ್ದೇವೆ. ಆದರೆ ಇದುವರೆಗೆ ಯಾರು ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಸ್ಥಳೀಯರಾದ ರಂಜಿತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಬೇರೆ ವಿಧಿಯಿಲ್ಲದೆ ನಾವೇ ಅಡಿಕೆ ಮರಗಳನ್ನು ಬಳಸಿ ಸೇತುವೆಯನ್ನು ನಿರ್ಮಾಣ ಮಾಡಿಕೊಂಡಿದ್ದೇವೆ. ಆದರೆ ಜೋರು ಮಳೆ ಬಂತೆಂದರೆ ಹೊಳೆ ಬಂದು ಕೊಚ್ಚಿ ಹೋಗುತ್ತದೆ. ಇದನ್ನು ಯಾರಿಗೆ ಹೇಳಿದರೂ ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಸ್ಥಳೀಯರಾದ ಲಲತಾ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಒಟ್ಟಿನಲ್ಲಿ ಸರ್ಕಾರ ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ನೀತಿಗೆ ಬೇಸತ್ತ ಜನರು ಕಾಲು ಸೇತುವೆ ನಿರ್ಮಿಸಿಕೊಂಡಿರುವುದು ವ್ಯವಸ್ಥೆಯನ್ನು ಅಣಕಿಸುವಂತಿದೆ.