ಮದುವೆ ಸೀಸನ್‌ಗೂ ಕೊರೋನಾ ಕಾರ್ಮೋಡ..!

By Kannadaprabha News  |  First Published Apr 21, 2021, 11:15 AM IST

ಕೊರೋನಾ ಎರಡನೇ ಅಲೆ ಹೆಚ್ಚಳದಿಂದ 2ನೇ ವರ್ಷವೂ ಸಮಾರಂಭ ಆಯೋಜನೆಗೆ ಸಮಸ್ಯೆ|ಶುಭ ಸಮಾರಂಭಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದವರಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡಿದ ಕೊರೋನಾ| ಆರ್ಥಿಕತೆಗೆ ಹೊಡೆತ| 


ನಾರಾಯಣ ಹೆಗಡೆ

ಹಾವೇರಿ(ಏ.21): ಸತತ ಎರಡನೇ ವರ್ಷವೂ ಮದುವೆ ಸೀಸನ್‌ಗೆ ಕೊರೋನಾ ಕಾಟ ಎದುರಾಗಿದೆ. ವಿವಾಹ, ಉಪನಯನ, ಗೃಹಪ್ರವೇಶ ಮುಂತಾದ ಮಂಗಳ ಕಾರ್ಯಕ್ರಮ ನಿಗದಿ ಮಾಡಿಕೊಂಡಿರುವವರು ಏನು ಮಾಡಬೇಕು ಎಂದು ತೋಚದೇ ಗೊಂದಲದಲ್ಲಿ ಮುಳುಗಿದ್ದಾರೆ.  ಸೀಸನ್‌ ನಂಬಿ ಜೀವನ ಕಟ್ಟಿಕೊಂಡವರು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವಂತಾಗಿದೆ.

Latest Videos

undefined

ಏಪ್ರಿಲ್‌ ಮತ್ತು ಮೇ ಎಂದರೆ ಮದುವೆ ಸೀಸನ್‌ ಎಂದೇ ವಾಡಿಕೆಯಿದೆ. ಈ ಅವಧಿಯಲ್ಲಿ ಹೆಚ್ಚಿನ ಮುಹೂರ್ತ ಸಿಗುವುದು, ಮಕ್ಕಳಿಗೆ ಬೇಸಿಗೆ ರಜೆ, ಮಳೆ ಇರುವುದಿಲ್ಲ ಎಂಬ ಕಾರಣಗಳಿಂದ ಅನೇಕ ಕುಟುಂಬಗಳು ಕಾರ್ಯಕ್ರಮ ಇಟ್ಟುಕೊಂಡಿರುತ್ತಾರೆ. ಅದೇ ರೀತಿ ಬರುವ ಮೇ ತಿಂಗಳಲ್ಲಿ ನೂರಾರು ಮದುವೆ ಸಮಾರಂಭಗಳು ನಿಗದಿಯಾಗಿದ್ದವು. ಈಗ ಅವುಗಳಿಗೆ ಕೊರೋನಾ ಕಾಟ ಎದುರಾಗಿದೆ.

ಕೊರೋನಾ ಎರಡನೇ ಅಲೆ ವ್ಯಾಪಿಸುತ್ತಿರುವುದರಿಂದ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಮದುವೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ, ಇನ್ನಿತರ ಸಮಾರಂಭಗಳಿಗೆಲ್ಲ ನಿಬಂಧನೆ ವಿಧಿಸಿದೆ. ಇದರಿಂದ ಈಗಾಗಲೇ ಮದುವೆ ಇನ್ನಿತರ ಸಮಾರಂಭ ನಿಗದಿ ಮಾಡಿಕೊಂಡಿರುವವರು ಗೊಂದಲದಲ್ಲಿ ಮುಳುಗಿದ್ದಾರೆ.

'ದೇಶದ ಅಭಿವೃದ್ಧಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಆಗಿದ್ದು ಬಿಜೆಪಿ ಸರ್ಕಾರದಲ್ಲಿ ಮಾತ್ರ'

ಕಳೆದ ವರ್ಷ ಮಾಚ್‌ರ್‍ನಲ್ಲಿ ಕೊರೋನಾ ಲಾಕ್‌ಡೌನ್‌ ಶುರುವಾಗಿ ಮುಂದಿನ ನಾಲ್ಕಾರು ತಿಂಗಳ ಕಾಲ ಶುಭ ಸಮಾರಂಭಗಳೆಲ್ಲ ರದ್ದಾಗಿದ್ದವು. ಲಾಕ್‌ಡೌನ್‌ ತೆರವಾದ ಬಳಿಕ ಕೆಲವರು ಸರಳವಾಗಿ ಮನೆಯಲ್ಲೇ ಮದುವೆಯಾದರು. ಕಳೆದ ಡಿಸೆಂಬರ್‌ ಬಳಿಕ ಕಲ್ಯಾಣಮಂಟಪಗಳಲ್ಲಿ ಮದುವೆ ಸಮಾರಂಭಗಳು ಅದ್ಧೂರಿಯಾಗಿ ಆರಂಭವಾಗಿದ್ದವು. ಎಲ್ಲವೂ ಸರಿಯಾಯಿತು ಎಂದುಕೊಂಡು ಶುಭ ಸಮಾರಂಭಗಳನ್ನು ನಿಗದಿ ಮಾಡಿದ್ದರು. ಅನೇಕರು ಏಪ್ರಿಲ್‌, ಮೇ ತಿಂಗಳಲ್ಲಿ ವಿವಾಹ ನಿಗದಿ ಮಾಡಿಕೊಂಡು ಕಲ್ಯಾಣಮಂಟಪಗಳನ್ನು ಮುಂಗಡ ಹಣ ಕೊಟ್ಟು ಬುಕ್ಕಿಂಗ್‌ ಮಾಡಿಕೊಂಡಿದ್ದರು. ಈಗ ಕೊರೋನಾ ಕಾರ್ಮೋಡ ಕವಿದಿರುವುದರಿಂದ ಮುಂದೇನು ಎಂಬ ಪ್ರಶ್ನೆ ಎಲ್ಲರನ್ನು ಕಾಡತೊಡಗಿದೆ.

ಮದುವೆ ಗೊಂದಲ:

ಮೇ ತಿಂಗಳಲ್ಲಿ ಮದುವೆ ನಿಗದಿ ಮಾಡಿಕೊಂಡಿರುವವರು ಗೊಂದಲದಲ್ಲಿ ಮುಳುಗುವಂತಾಗಿದೆ. ಸರ್ಕಾರ ನಿಗದಿಪಡಿಸಿದಷ್ಟೇ ಜನರನ್ನು ಹೇಗೆ ಆಮಂತ್ರಿಸಬೇಕು, ಅದಕ್ಕಿಂತ ಹೆಚ್ಚು ಜನ ಬಂದರೆ ಸಮಸ್ಯೆಯಾದೀತೆ?, ಎಷ್ಟುಜನರಿಗೆ ಅಡುಗೆ ಸಿದ್ಧಪಡಿಸಬೇಕು ಎಂಬಿತ್ಯಾದಿ ಗೊಂದಲ ಶುರುವಾಗಿದೆ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಹೋಗಲು ನಿರ್ಬಂಧ ವಿಧಿಸಿದರೆ ಏನು ಮಾಡುವುದು ಎಂಬ ಚಿಂತೆ ಕೆಲವರನ್ನು ಕಾಡುತ್ತಿದೆ. ಮದುವೆ ವೇಳೆ ಕೊರೋನಾ ಸೋಂಕು ತಗುಲಿ ಹೆಚ್ಚುಕಮ್ಮಿಯಾದರೆ ಏನು ಮಾಡುವುದು ಇತ್ಯಾದಿ ತಳಮಳದಲ್ಲೇ ಕಾಲ ಕಳೆಯುವಂತಾಗಿದೆ.

ಸರ್ಕಾರ ಹೊರಡಿಸಿರುವ ಕೋವಿಡ್‌ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು ಕಡ್ಡಾಯವಾಗಿದೆ. ತೆರೆದ ಪ್ರದೇಶಗಳಲ್ಲಿ ಮದುವೆಯಾದರೆ 200 ಜನರು ಮೀರಬಾರದು. ಕಲ್ಯಾಣಮಂಟಪ, ಸಭಾಂಗಣ ಇತ್ಯಾದಿ ಮುಚ್ಚಿದ ಪ್ರದೇಶಗಳಲ್ಲಿ 100 ಜನರು ಮೀರುವಂತಿಲ್ಲ. ಜನ್ಮದಿನ ಹಾಗೂ ಇತರೆ ಆಚರಣೆಗಳಲ್ಲಿ 50 ಜನರು, ಸಭಾಂಗಣ ಇತ್ಯಾದಿ ಮುಚ್ಚಿದ ಪ್ರದೇಶದಲ್ಲಿ 25 ಜನರು ಮಾತ್ರ ಭಾಗವಹಿಸಬೇಕು. ಇತರೆ ಸಮಾರಂಭಗಳಲ್ಲಿ ಹಾಲ್‌ನ ವಿಸ್ತೀರ್ಣಕ್ಕೆ ತಕ್ಕಂತೆ 50 ಜನರು ಮೀರಬಾರದು. ಧಾರ್ಮಿಕ ಆಚರಣೆ ಅಥವಾ ಸಮಾರಂಭಗಳನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಆರ್ಥಿಕತೆಗೆ ಹೊಡೆತ:

ಮದುವೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮಗಳು, ಗೃಹಪ್ರವೇಶ ಮುಂತಾದ ಸಮಾರಂಭಗಳು ಬೇಸಿಗೆಯಲ್ಲಿ ಹೆಚ್ಚು ನಡೆಯುವುದರಿಂದ ವ್ಯಾಪಾರ ವಹಿವಾಟುಗಳು ಈ ಅವಧಿಯಲ್ಲಿ ಹೆಚ್ಚಿರುತ್ತಿದ್ದವು. ಕಳೆದ ವರ್ಷ ಇದೇ ಅವಧಿಯಲ್ಲಿ ಲಾಕ್‌ಡೌನ್‌ನಿಂದ ಆರ್ಥಿಕತೆ ಸಂಪೂರ್ಣ ಸ್ಥಗಿತಗೊಂಡಿತ್ತು. ಈ ವರ್ಷ ಕೊರೋನಾ ಎರಡನೇ ಅಲೆ ಮತ್ತೆ ಮದುವೆ ಸೀಸನ್‌ನ ವಹಿವಾಟನ್ನು ಕುಸಿಯುವಂತೆ ಮಾಡಿದೆ. ಜತೆಗೆ ಶುಭ ಸಮಾರಂಭಗಳನ್ನೇ ನಂಬಿ ಜೀವನ ಸಾಗಿಸುತ್ತಿದ್ದವರಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡಿದೆ.

ವೆಡ್ಡಿಂಗ್‌, ಪ್ರೀವೆಡ್ಡಿಂಗ್‌ ಫೋಟೋ ಶೂಟ್‌, ಫೋಟೋಗ್ರಫಿ, ವೀಡಿಯೋಗ್ರಫಿ, ಪೆಂಡಾಲ್‌, ಅಡುಗೆ ಮಾಡುವವರು ಹೀಗೆ ವಿವಿಧ ವೃತ್ತಿಯಲ್ಲಿರುವವರು ಚಿಂತಾಕ್ರಾಂತರಾಗಿದ್ದಾರೆ. ಈ ಸೀಸನ್‌ ಮುಗಿದರೆ ಮತ್ತೆ ನಮಗೆ ಕೆಲಸ ಸಿಗಲು ಒಂದು ವರ್ಷವೇ ಕಾಯಬೇಕು. ಕಳೆದ ವರ್ಷದಂತೆ ಈ ಸಲವೂ ಕೊರೋನಾದಿಂದ ಕಾರ್ಯಕ್ರಮಗಳು ನಡೆಯದಿದ್ದರೆ ತಮ್ಮ ಕುಟುಂಬಗಳಿಗೆ ದೊಡ್ಡ ಆರ್ಥಿಕ ಪೆಟ್ಟು ಬೀಳುತ್ತದೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ನನ್ನ ಮಗನ ವಿವಾಹ ಮೇ ತಿಂಗಳಲ್ಲಿ ನಿಗದಿಯಾಗಿದೆ. ಕಲ್ಯಾಣಮಂಪಟವನ್ನೂ ಬುಕ್‌ ಮಾಡಲಾಗಿದೆ. ಈಗ ಕೊರೋನಾ ಎರಡನೇ ಅಲೆ ಎಂದು ಸರ್ಕಾರ ಹಲವು ನಿಬಂಧನೆ ವಿಧಿಸಿದೆ. ಇದರಿಂದ ಮದುವೆ ಸಮಾರಂಭ ಹೇಗೆ ಮಾಡಬೇಕು ಎಂಬ ಗೊಂದಲ ಶುರುವಾಗಿದೆ ಎಂದು ವರನ ತಾಯಿ ರದಮ್ಮ ಮಡ್ಲೂರ ತಿಳಿಸಿದ್ದಾರೆ.
 

click me!