13 ಕೋಣೆಗಳಲ್ಲಿ 9 ಕೋಣೆ ಬೀಳುವ ಹಂತಕ್ಕೆ ಹೊಸೂರ್ ಸರ್ಕಾರಿ ಶಾಲೆಯಲ್ಲಿ 358 ಮಕ್ಕಳು ವ್ಯಾಸಂಗ ಮಾಡುತ್ತಿದ್ದರೂ ಕಟ್ಟಡ ದುರಸ್ತಿಗೆ ಯಾರೂ ಲಕ್ಷ ಕೊಟ್ಟಿಲ್ಲ| ಸರ್ಕಾರಿ ಶಾಲೆಯಲ್ಲಿ ಸೌಲಭ್ಯದ ಕೊರತೆಯಿಂದ ಪರದಾಡುತ್ತಿರುವ ಮಕ್ಕಳು| ಮಕ್ಕಳಿಗೆ ಶಾಲೆಗೆ ಕಳಿಸಲು ಹೆದರಿಕೆ ಆಗುತ್ತಿದೆ ಎನ್ನುತ್ತಿರುವ ಪೋಷಕರು|
ಅಫಜಲ್ಪುರ/ ಕರಜಗಿ(ಡಿ.07): ಸರ್ಕಾರಿ ಶಾಲೆಯಲ್ಲಿ ಮಕ್ಕಳಿಲ್ಲ ಎಂಬ ನೆಪವೊಡ್ಡಿ ಸಾವಿರಾರು ಬಡ ಮಕ್ಕಳು ಓದುವ ಶಾಲೆಯ ಬಾಗಿಲನ್ನು ಸರ್ಕಾರ ಬಂದ್ ಮಾಡುತ್ತಲೇ ಬಂದಿದೆ. ಆದರೆ ಈ ಶಾಲೆಯ ತುಂಬ ಮಕ್ಕಳಿದ್ದರೂ ಸಂಬಂಧಿಸಿದ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಮೂಲ ಸೌಲಭ್ಯದಿಂದ ವಂಚಿತವಾಗಿ ಇಲ್ಲಿಯ ಮಕ್ಕಳು, ಶಿಕ್ಷಕರು ನಿತ್ಯ ಜೀವಭಯದಲ್ಲೇ ಪಾಠ ಆಲಿಸಬೇಕಾದ ದುಸ್ಥಿತಿ ಬಂದಿದೆ.
ಹೌದು, ಬರೋಬ್ಬರಿ ಅರ್ಧ ಶತಮಾನ ಕಂಡ ತಾಲೂಕಿನ ಗಡಿ ಗ್ರಾಮ ಹೊಸೂರ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೀನಾಯ ಸ್ಥಿತಿಗೆ ತಲುಪಿದೆ. ಶಾಲೆಯ ಕೊಠಡಿಗಳೆಲ್ಲ ಸೋರುತ್ತಿದ್ದು ಸೂರಿನ ಸಿಮೆಂಟ್ ಪದರು, ಮೇಲ್ಚಾವಣಿಗಳು ಕಿತ್ತುಹೋಗಿವೆ. ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ ಶಾಲೆಯಲ್ಲಿಯೇ ಜೀವ ಕೈಯಲ್ಲಿ ಹಿಡಿದು ಕುಳಿತುಕೊಂಡು ಆತಂಕದಲ್ಲೇ 358 ಮಕ್ಕಳು ಪಾಠ ಕೇಳುತ್ತಿದ್ದಾರೆ.
ಮಕ್ಕಳು ಶಿಕ್ಷಕರಿಗೆ ಜೀವ ಭಯ:
ಕಿತ್ತು ಹೋದ ಚಾವಣಿ ಮಳೆ ಬಂದರೆ ಸಾಕು ಸೋರುವ ಮಾಳಿಗೆ ಯಾವಾಗ ಕಟ್ಟಡ ಕುಸಿಯಬಹುದೋ ಎಂಬ ಆತಂಕದಲ್ಲೇ 1ನೇ ತರಗತಿಯಿಂದ 7ನೇ ತರಗತಿಯ ೩೫೮ ಮಕ್ಕಳು ವ್ಯಾಸಾಂಗ ಮಾಡುವ ಅನಿವಾರ್ಯ ಪರಿಸ್ಥಿತಿ ಇಲ್ಲಿದೆ.ಶಾಲೆಗೆ ಒಟ್ಟು ಮಂಜೂರಾದ ಹುದ್ದೆ ಗಳು 11 ಈಗ ಕೇವಲ 6 ಶಿಕ್ಷಕರು ಕಾರ್ಯನಿರ್ವ ಹಿಸುತ್ತಿದ್ದಾರೆ. (ಎರವಲು ಸೇವೆ ಶಿಕ್ಷಕ ಸೇರಿ) ಇತ್ತೀಚೆಗೆ ಏಕಕಾಲಕ್ಕೆ ಈ ಶಾಲೆಯಿಂದ 5 ಶಿಕ್ಷಕರು ಬೇರೆ ಶಾಲೆಗೆ ವರ್ಗಾವಣೆಯಾಗಿ ಹೋಗಿದ್ದಾರೆ. ಶಾಲೆಯಲ್ಲಿ 13 ಕೋಣೆಗಳಿದ್ದು ಕೇವಲ 4 ಕೋಣೆಗಳು ಮಾತ್ರ ಚನ್ನಾಗಿದ್ದು, ಉಳಿದ 9 ಕೋಣೆಗಳು ಸಂಪೂರ್ಣ ಶಿಥಿಲಾವಸ್ಥೆ ಯಲ್ಲಿದ್ದು ಮೇಲ್ಚಾವಣಿ ಅಲ್ಲಲ್ಲಿ ಕಡಿದು ಬೀಳುತ್ತಿದ್ದು, ಹೀಗೆ ಮಕ್ಕಳು ಪಾಠ ಕೇಳುತ್ತಿರುವಾಗ ಸಿಮೆಂಟ್ ಹಕ್ಕಳಿಗಳು ಮಕ್ಕಳ ಮೇಲೆ ಬಿದ್ದರೆ ಯಾರು ಹೊಣೆ ಎಂಬುವುದು ಶಿಕ್ಷಣ ಇಲಾಖೆ ಅಧಿಕಾರಿಗಳು ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ.
ಶಾಲೆಗೆ ಸುರಕ್ಷಿತ ಕಟ್ಟಡ ಇಲ್ಲದಿರುವುದರಿಂದ ಪಾಲಕರು ತಮ್ಮ ಮಕ್ಕಳ ಸುರಕ್ಷತೆ ಬಗ್ಗೆ ಆತಂಕಪಡುವಂತಾಗಿದೆ. ಇದೇ ವ್ಯವಸ್ಥೆಯಲ್ಲೇ ಪಾಠಗಳು ನಡೆಯುವುದರಿಂದ ಎಲ್ಲಿ ಪಾಠ ಮಾಡುವಾಗ ಕಟ್ಟಡದ ಅವಶೇಷಗಳು ಕುಸಿಯುತ್ತದೋ ಎಂಬ ಆತಂಕ ಮಕ್ಕಳದು ಹಾಗೂ ಶಿಕ್ಷಕರದು.
ಸೋರುವ ಕಟ್ಟಡಗಳಲ್ಲಿ ಮಕ್ಕಳ ಕಲಿಕೆ:
ಶಾಲಾ ಪ್ರಗತಿ ನಿರ್ವಹಣೆಗೆ ಮಕ್ಕಳ ಪೋಷಕರು ಎಸ್‌ಡಿಎಂಸಿ ಸಮಿತಿ ರಚಿಸಿದ್ದರೂ ಶಾಲೆಗಳು ಸಮಸ್ಯೆಯಿಂದ ಬಿಡುಗಡೆಗೊಂಡಿಲ್ಲ. ಶಿಕ್ಷಕರಿಗೆ ಏಕಾಗ್ರತೆಯಿಂದ ಪಾಠ ಮಾಡುವುದು ಮಕ್ಕಳಿಗೆ ಪಾಠ ಆಲಿಸುವುದು ಸಾಧ್ಯವಾಗುತ್ತಿಲ್ಲ. ಶಿಕ್ಷಕರು ಎಸ್‌ಡಿಎಂಸಿ ಗ್ರಾಮದ ಯುವಕರು ಶಿಕ್ಷಣ ಪ್ರೇಮಿಗಳು ಸರ್ಕಾರದ ಜೊತೆ ಗುದ್ದಾಡಿ ಮೂಲ ಸೌಕರ್ಯ ಪಡೆಯುವಂತಾಗಿದೆ. ಶಾಲಾ ಕಟ್ಟಡದಲ್ಲಿ ಮಕ್ಕಳು ತಮ್ಮ ಶೈಕ್ಷಣಿಕ ಭವಿಷ್ಯದ ಕನಸು ಕಾಣುವಂತಾಗಿದೆ. ಕಟ್ಟಡ ಶಿಥಿಲಾವಸ್ಥೆ ತಲುಪಿರುವುದರಿಂದ ಮೇಲ್ಚಾವಣಿ ಕಡಿದು ಬಿದ್ದಿದ್ದು, ಮಳೆ ಬಂದರೆ ಸಾಕು ಕೊಠಡಿಯೊಳಗೆ ವರ್ಷಧಾರೆ ಧುಮುಕುತ್ತದೆ. ಮಳೆಗಾಲದಲ್ಲಿ ಕೊಠಡಿಯೊಳಗೆ ನೀರು ಬರುವುದರಿಂದ ಮಕ್ಕಳ ಬ್ಯಾಗ್, ಪುಸ್ತಕ ಮಕ್ಕಳ ಬಟ್ಟೆ ಸೇರಿದಂತೆ ಎಲ್ಲವೂ ತೊಯುತ್ತಿದೆ. ಆದರೂ ಸಂಬಂಧಿತ ಅಧಿಕಾರಿಗಳು ಇತ್ತ ಗಮನ ಹರಿಸದೆ ಇರುವುದು ಶೋಚನೀಯ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹೆಣ್ಣು ಮಕ್ಕಳ ಶೌಚಾಲಯಕ್ಕೂ ಪರದಾಟ: ಶಾಲೆಯಲ್ಲಿ ಕೊಠಡಿ ಸಮಸ್ಯೆಯಷ್ಟೇ ಅಲ್ಲದೆ ಶೌಚಾಲಯದ ಸಮಸ್ಯೆ ಕಾಡುತ್ತಿದೆ. ಈ ಶಾಲೆಯಲ್ಲಿರುವ ಶೌಚಾಲಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಯೋಗಿಸುವ ಅನಿವಾರ್ಯತೆ ಇಲ್ಲಿದೆ. ಹೀಗಾಗಿ ಪ್ರತ್ಯೇಕ ಶೌಚಾಲಯದ ಅವಶ್ಯಕತೆಯಿದೆ.
ಸ್ಪಂದಿಸದ ಅಧಿಕಾರಿಗಳು:
ಕಟ್ಟಡ ದುಸ್ಥಿತಿ ಬಗ್ಗೆ ಸಂಬಂಧಿತ ಅಧಿಕಾರಿಗಳು ಕಂಡು ಕಾಣದಂತೆ ಜಾಣತನ ಪ್ರದರ್ಶಿಸುತ್ತಿದ್ದಾರೆ. ಶಾಲೆಯ ಮುಖ್ಯ ಗುರುಗಳು ಶಿಥಿಲಗೊಂಡ ಕಟ್ಟಡ ನೆಲಸಮಗೊಳಿಸುವಂತೆ ಮೂರ್ನಾಲ್ಕು ಬಾರಿ ಲಿಖಿತ ರೂಪದಲ್ಲಿ ಸಂಬಂಧಿಸಿದ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಸಂಬಂಧಿತ ಅಧಿ ಕಾರಿಗಳು ಹಾಗೂ ಜನಪ್ರತಿನಿಧಿಗಳು ಶಿಥಿಲಾವಸ್ಥೆ ಯಲ್ಲಿರುವ ಶಾಲೆಯ ಕಟ್ಟಡ ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಶ್ರೀಮಂತರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಯಲ್ಲಿ ಓದಿಸುತ್ತಾರೆ. ಆದರೆ ಬಡವರು ಸರ್ಕಾರಿ ಶಾಲೆಗೆ ಮಕ್ಕಳನ್ನು ಕಳಿಸವುದು ಅನಿವಾರ್ಯ. ಆದರೆ ಸರ್ಕಾರಿ ಶಾಲೆಯಲ್ಲಿ ಸೌಲಭ್ಯದ ಕೊರತೆಯಿಂದ ಮಕ್ಕಳು ಪರದಾಡುತ್ತಿದ್ದಾರೆ. ಶಾಲೆಯ ಕಟ್ಟಡದ ಚಾವಣಿ ಕಡಿದು ಬೀಳುತ್ತಿದೆ. ಇದರಿಂದ ನಮ್ಮ ಮಕ್ಕಳಿಗೆ ಶಾಲೆಗೆ ಕಳಿಸಲು ಹೆದರಿಕೆ ಆಗುತ್ತಿದೆ. ಸಂಬಂಧಿತ ಶಿಕ್ಷಣ ಇಲಾಖೆ ಅಧಿಕಾರಿಗಳು ಜನಪ್ರತಿನಿಧಿಗಳು ಆದಷ್ಟು ಬೇಗ ಇದರ ಬಗ್ಗೆ ಗಮನ ಹರಿಸಬೇಕು ಎಂದು ಹೊಸೂರ ಗ್ರಾಮದ ಮಹಾದೇವ ಉಂಬರ್ಗಿ ಮಲಕಪ್ಪ ಹಂಜಗಿ ಅವರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅಫಜಲ್ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಚಿತ್ರಶೇಖರ ದೇಗಲಮಡಿ ಅವರು,ಹೊಸೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಆದಷ್ಟು ಬೇಗ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು. ಈಗಾಗಲೇ ಶಾಲೆಗೆ ಒಬ್ಬ ಶಿಕ್ಷಕರನ್ನು ಎರವಲು ಸೇವೆ (ಡೆಪ್ಟೇಶನ್) ಮೂಲಕ ಬೇರೆ ಶಾಲೆಯಿಂದ ಆದೇಶಿಸಲಾಗಿದೆ. ಇನ್ನೂ ಇಬ್ಬರು ಅತಿಥಿ ಶಿಕ್ಷಕರನ್ನು ಆದಷ್ಟು ಬೇಗನೆ ನೇಮಕ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.