ಕೂಲಿ ಕಾರ್ಮಿಕ ಮಕ್ಕಳ ಪಾಲನೆಗೆ ಕೂಸಿನ ಮನೆ

By Kannadaprabha News  |  First Published Dec 23, 2023, 8:23 AM IST

ಕೂಲಿ ಕಾರ್ಮಿಕ ಮಕ್ಕಳ ಲಾಲನೆ-ಪಾಲನೆಗಾಗಿ ಕರ್ನಾಟಕ ಸರ್ಕಾರವು ಮಹತ್ವಾಕಾಂಕ್ಷೆಯ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ ) ಗಳನ್ನು ಆರಂಭಿಸಲು ಯೋಜನೆ ರೂಪಿಸಿಕೊಂಡಿದೆ. ಅದರಂತೆ ತುಮಕೂರು ಜಿಲ್ಲೆಯಲ್ಲಿ 175 ಕೂಸಿನ ಮನೆ ನಿರ್ಮಾಣವಾಗಲಿವೆ


ಜಿ.ಎಲ್. ಸುರೇಶ್

  ಕೊರಟಗೆರೆ :  ಕೂಲಿ ಕಾರ್ಮಿಕ ಮಕ್ಕಳ ಲಾಲನೆ-ಪಾಲನೆಗಾಗಿ ಕರ್ನಾಟಕ ಸರ್ಕಾರವು ಮಹತ್ವಾಕಾಂಕ್ಷೆಯ ಕೂಸಿನ ಮನೆ (ಶಿಶು ಪಾಲನಾ ಕೇಂದ್ರ ) ಗಳನ್ನು ಆರಂಭಿಸಲು ಯೋಜನೆ ರೂಪಿಸಿಕೊಂಡಿದೆ. ಅದರಂತೆ ತುಮಕೂರು ಜಿಲ್ಲೆಯಲ್ಲಿ 175 ಕೂಸಿನ ಮನೆ ನಿರ್ಮಾಣವಾಗಲಿವೆ . ಕೊರಟಗೆರೆ ತಾಲೂಕಿನಲ್ಲಿ 24 ಗ್ರಾ.ಪಂಚಾಯಿತಿ ಪೈಕಿ ಮೊದಲ ಹಂತದಲ್ಲಿ 10 ಗ್ರಾ.ಪಂ ಅಯ್ಕೆ ಮಾಡಿ ಅಲ್ಲಿ ಕೂಸಿನ ಮನೆಯನ್ನು ನಿರ್ಮಾಣ ಮಾಡಲಾಗಿದ್ದು ಅವು ಈಗ ಮಕ್ಕಳ ಲಾಲನೆ ಪಾಲನೆಗೆ ಸಿದ್ಧವಾಗಿದೆ.

Latest Videos

undefined

ರಾಜ್ಯದಲ್ಲಿ ಕೂಲಿ ಕಾರ್ಮಿಕರ ಕುಟುಂಬಗಳು ಹೆಚ್ಚಾಗಿರುವ ಹಿನ್ನೆಲೆ ಆ ಕುಟುಂಬದ 3 ವರ್ಷದ ಒಳಗಿನ ಮಕ್ಕಳ ರಕ್ಷಣೆಗಾಗಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಗ್ರಾಪಂಗಳ ವ್ಯಾಪ್ತಿಯಲ್ಲಿ ಕೂಸಿನ ಮನೆ ನಿರ್ಮಾಣ ಮಾಡಲು ತಯಾರಿ ಮಾಡಿಕೊಂಡಿದೆ. ಈಗಾಗಲೇ ಕೊರಟಗೆರೆ ತಾಲೂಕಿನ ಬಿ.ಡಿ.ಪುರ, ಬೈಚಾಪುರ, ಬೂದಗವಿ, ತೋವಿನಕೆರೆ, ಮಾವತ್ತೂರು, ನೀಲಗೊಂಡನಹಳ್ಳಿ, ಎಲೆರಾಂಪುರ, ಪಾತಗಾನಹಳ್ಳಿ, ಬುಕ್ಕಾಪಟ್ಟಣ, ಚಿನ್ನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕೂಸಿನ ಮನೆ ನಿರ್ಮಾಣಗೊಂಡಿವೆ.

ಸರ್ಕಾರದ ಆದೇಶದಂತೆ ಮೊದಲ ಹಂತದಲ್ಲಿ ತಾಲೂಕಿನ 10 ಗ್ರಾಪಂಗಳಲ್ಲಿ ಮಕ್ಕಳ ಪೋಷಣೆಯ ಬಗ್ಗೆ ತಾಪಂ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ, ಗ್ರಾಪಂ ವತಿಯಿಂದ 40 ಮಂದಿ ಕೇರ್ ಟೇಕರ್‌ಗಳಿಗೆ ತರಬೇತಿ ನೀಡಿದ್ದು ಪ್ರತಿ ಕೂಸಿನ ಮನೆಯ ಮಕ್ಕಳ ಪೋಷಣೆಗೆ ನಾಲ್ವರು ಕೇರ್ ಟೇಕರ್ಸ್‌ಗಳನ್ನಾಗಿ ಆಯ್ಕೆ ಮಾಡಲಾಗಿದೆ, ಪೋಷಕರು ಸರ್ಕಾರದ ಮಹತ್ವವಾದ ಯೋಜನೆಗೆ ಪ್ರಶಂಸೆ ವ್ಯಕ್ತಪಡಿಸುತ್ತಿದ್ದು, ಶಿಶುಪಾಲನಾ ಕೇಂದ್ರಗಳ ಕುರಿತು ಸಾರ್ವಜನಿಕರ, ಪೋಷಕರ ಕುಂದುಕೊರತೆ ಪರಿಹಾರ ತಿಳಿಸಲು ಸಲಹಾ ಪೆಟ್ಟಿಗೆ ವ್ಯವಸ್ಥೆ ಮಾಡಲಾಗಿದೆ. ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆಯಾಗಲಿದೆ ಎಂದು ತಾಪಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೂಸಿನ ಮನೆ ಮುಖ್ಯ ಉದ್ದೇಶವೇನು?

ಈ ಶಿಶುಪಾಲನಾ ಕೇಂದ್ರಗಳ ಮುಖ್ಯ ಉದ್ದೇಶ ಗ್ರಾಮೀಣ ಭಾಗದಲ್ಲಿ ಹೆಚ್ಚಿನ ಸಂಖೈಯಲ್ಲಿ ಜನರು ಜಮೀನುಗಳಿಗೆ ಕೃಷಿ ಕೆಲಸಕ್ಕೆ ತೆರಳುತ್ತಾರೆ. ಕೂಲಿ ಕಾರ್ಮಿಕರು ಹಾಗೂ ಕೃಷಿ ಕಾರ್ಮಿಕರು ಬಹುತೇಕರು ಬಡ ಕುಟುಂಬದವರಾಗಿದ್ದು, ಪ್ರತಿನಿತ್ಯ ಕೂಲಿ ಕೆಲಸಕ್ಕೆ ಮತ್ತು ನರೇಗಾ ಕೆಲಸಕ್ಕೆ ತೆರಳುವ ಅನಿವಾರ್ಯತೆ ಇರುತ್ತದೆ. ಇಂತಹ ಕುಟುಂಬದ ಮಹಿಳೆಯರು ತಮ್ಮ ಚಿಕ್ಕ ಮಕ್ಕಳನ್ನು ತಮ್ಮೊಂದಿಗೆ ಕರೆದುಕೊಂಡು ಹೋಗುವುದು ಅಸಾಧ್ಯ, ಮಹಿಳೆಯರು ತಮ್ಮ ಮಕ್ಕಳನ್ನು ಮನೆಯಲ್ಲಿಯೇ ಬಿಟ್ಟು ಕೆಲಸಕ್ಕೆ ತೆರಳಿದ ಸಂದರ್ಭದಲ್ಲಿ ಅವರು ಮನೆಗೆ ಮರಳುವವರೆಗೆ ಮಗುವಿಗೆ ತಾಯಿ ಹಾಲು ದೊರೆಯುವುದಿಲ್ಲ, ಜೊತೆಗೆ ಪೌಷ್ಟಿಕ ಆಹಾರ ದೊರೆಯುವುದಿಲ್ಲ, ಇದರಿಂದ ಮಕ್ಕಳು ಅಪೌಷ್ಟಿಕತೆಗೆ ಒಳಗಾಗುತ್ತಾರೆ, ಇದರಿಂದ ಗ್ರಾಮೀಣರ ಮಾನಸಿಕ ಆರೋಗ್ಯವು ಹಾಳಾಗುತ್ತದೆ. ಗ್ರಾಮೀಣ ಭಾಗದ ಮಹಿಳೆಯರು ಕೂಸಿನ ಮನೆಯಲ್ಲಿ 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಬಿಟ್ಟು ನೆಮ್ಮದಿಯಿಂದ ಕೆಲಸಕ್ಕೆ ತೆರಳಬಹುದು.

ಪೌಷ್ಟಿಕ ಆಹಾರ ವಿತರಣೆಗೆ ಸಿದ್ಧತೆ

ಮಕ್ಕಳ ಪ್ರಾರಂಭಿಕ ಬಾಲ್ಯದ ಬೆಳವಣಿಗೆಗೆ ಪೌಷ್ಠಿಕ ಆಹಾರ ಪ್ರಮುಖ ಪಾತ್ರ ವಹಿಸುತ್ತದೆ. ಕೂಸಿನ ಮನೆಯಲ್ಲಿ ಮಕ್ಕಳಿಗೆ ಸಿರಿಧಾನ್ಯದಿಂದ ತಯಾರಿಸಿದ ಗಂಜಿ, ಹಾಲು, ಮೊಟ್ಟೆ ಜೊತೆಗೆ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಬಿಸಿ ಊಟ, ಸಂಜೆ ಲಘು ಉಪಹಾರ ನೀಡುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಕ್ಕಳ ಸಂಖ್ಯೆ ಆಧಾರಿಸಿ ಪೌಷ್ಠಿಕ ಆಹಾರ ವಿತರಣೆ ಮಾಡಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಕೂಸಿನ ಮನೆಯಲ್ಲಿ ಏನೇನಿದೆ?

ಕೂಸಿನ ಮನೆಯಲ್ಲಿ ಚಿಕ್ಕ ಮಕ್ಕಳಿಗಾಗಿ ಮಕ್ಕಳ ಸ್ನೇಹಿ ಶೌಚಾಲಯ ಮತ್ತು ವಯಸ್ಕರ ಶೌಚಾಲಯಗಳು ಪ್ರತ್ಯೇಕವಾಗಿ ಇರುತ್ತವೆ, ಮಕ್ಕಳಿಗೆ ಆಟವಾಡಲು ಆಟಿಕೆ ವಸ್ತುಗಳಿವೆ. ವಿಶೇಷ ಚೇತನ ಮಕ್ಕಳಿಗಾಗಿ ಇಳಿಜಾರು ಮತ್ತು ಕೈ ಹಳಿಗಳ ವ್ಯವಸ್ಥೆ ಇದ್ದು, ಕೇರ್ ಟೇಕರ್ಸ್‌ಗಳು ಮಕ್ಕಳಿಗೆ ಊಟ ಮಾಡಿಸಿ ಮಲಗಿಸುವ ವ್ಯವಸ್ಥೆ ಸಹ ಇರುತ್ತದೆ. ಸಂಜೆ ಲಘು ಉಪಹಾರ ನೀಡಿ ಮಕ್ಕಳನ್ನು ತಮ್ಮ ಪೋಷಕರ ಜೊತೆ ಕಳುಹಿಸಿ ಕೊಡುವುದು ಕೇರ್ ಟೇಕರ್ಸ್‌ಗಳ ಜವಾಬ್ದಾರಿಯಾಗಿರುತ್ತದೆ.

ಸರ್ಕಾರದ ಆದೇಶದ ಅನ್ವಯ ಮೊದಲ ಹಂತದಲ್ಲಿ 10 ಗ್ರಾ.ಪಂ ಗಳನ್ನು ಆಯ್ಕೆ ಮಾಡಿ ಕೂಸಿನ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಈಗಾಗಲೆ ನೇಮಿಸಿರುವ ಕೇರ್‌ಟೇಕರ್ಸ್‌ ಪ್ರತೀನಿತ್ಯ ಮಕ್ಕಳಿಗೆ ಪೌಷ್ಠಿಕಾಂಶ ಆಹಾರ ನೀಡುವುದರ ಜೊತೆಗೆ ಆಟಿಕೆ ವಸ್ತುಗಳನ್ನು ನೀಡಿ ಮಕ್ಕಳ ಲಾಲನೆ/ಪಾಲನೆಗಳನ್ನು ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆರಂಭಕ್ಕೆ ಸಿದ್ದವಾದ ಕೂಸಿನ ಮನೆಗೆ ಪೊಷಕರು ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಜಿ.ಪಂ ಅಧಿಕಾರಿಗಳು ನಿಗದಿ ಪಡಿಸಿದ ದಿನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆ ಮಾಡಲಾಗುವುದು.

ಅಪೂರ್ವ, ಇಒ, ತಾ.ಪಂ, ಕೊರಟಗೆರೆ.

click me!