* ನೈಸರ್ಗಿಕ ಶಿಲಾ ಸೇತುವೆ ರಕ್ಷಿಸುವ ಸಭಾಪತಿ ಕಾಳಜಿ ಮಣ್ಣುಪಾಲು
* ಪ್ರಾಕೃತಿಕ ಕಲ್ಸಂಕವನ್ನು ಮೋರಿಯನ್ನಾಗಿ ಮಾಡಿದ ನಿರ್ಮಿತಿ ಕೆಂದ್ರದ ಇಂಜಿನಿಯರ್ ಕಾಮಗಾರಿ
* ಪ್ರಾಕೃತಿಕ ಸೃಷ್ಟಿಯೊಂದನ್ನು ಆಧುನಿಕ ಇಂಜಿನಿಯರ್ ಯೋಜನೆ ನಾಶಪಡಿಸಿದ ಕತೆಯಿದು
ಶಿವಮೊಗ್ಗ, (ಮಾ.15): ಈ ದೇಶದ ಪರಂಪರೆ, ಇತಿಹಾಸ, ಅಪೂರ್ವವಾದ ಪ್ರಕೃತಿ ಸೃಷ್ಟಿ ಎಲ್ಲವನ್ನೂ ಸಂರಕ್ಷಿಸುವ ಜವಾಬ್ದಾರಿ ಹೊತ್ತ ಸರ್ಕಾರದ ಅಧಿಕಾರಿಗಳು ಹೇಗೆ ಹೊಣೆಗೇಡಿತನದಿಂದ ವರ್ತಿಸುತ್ತಾರೆ ಎಂಬುದಕ್ಕೆ ಬಹುಶಃ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿರಲಿಕ್ಕಿಲ್ಲ.
ಜೋಗ ಜಲಪಾತದ ಬಳಿ ಇರುವ ಪ್ರಾಕೃತಿಕ ಸೃಷ್ಟಿಯೊಂದನ್ನು ಅಭಿವೃದ್ಧಿ ಹೆಸರಿನಲ್ಲಿ ಹೇಗೆ ನಾಶ ಮಾಡಲಾಗಿದೆ ಎಂಬುದಕ್ಕೆ ಈ ಎರಡು ಛಾಯಾಚಿತ್ರಗಳೇ ಸ್ಪಷ್ಟವಾಗಿ ಹೇಳಿ ಬಿಡುತ್ತಿವೆ.
Shivamogga: ಹೊಳಲೂರು ಗ್ರಾಮಕ್ಕೆ ಪ್ರಧಾನಿ ಮೋದಿ ಭೇಟಿ, ಒಂದೂವರೆ ತಿಂಗಳಲ್ಲಿ 7 ಕೋಟಿ ಬಳಸಿ ಅಭಿವೃದ್ಧಿ
ಮೂಲ ಸೃಷ್ಟಿಗೆ, ಪರಿಸರಕ್ಕೆ ಸ್ವಲ್ಪವೂ ಧಕ್ಕೆ ಆಗದಂತೆ ವ್ಯವಸ್ಥೆ ಮಾಡಿ ಎಂದು ಸ್ವತಃ ಸಭಾಪತಿಗಳೇ ಹೇಳಿದ್ದನ್ನೇ ಒಂದು ನೆಪವಾಗಿಸಿಕೊಂಡು ನೈಸರ್ಗಿಕ ಶಿಲಾ ಸೇತುವೆಯೊಂದನ್ನು ಮೋರಿ ಕಾಮಗಾರಿ ರೀತಿಯಲ್ಲಿ ಯೋಜನೆ ಸಿದ್ಧಪಡಿಸಿ, ಕಾಮಗಾರಿ ಪೂರೈಸಿ ಪಾರಂಪರಿಕತೆಗೆ ಧಕ್ಕೆ ತಂದ ಅಧಿಕಾರಿಗಳ ಕಾರ್ಯ ವೈಖರಿ ಇದಾಗಿದೆ.
ಜೋಗ ಜಲಪಾತದಿಂದ ಸುಮಾರು 5ಕಿ.ಮೀ.ದೂರದಲ್ಲಿ ರಾಷ್ಟ್ರೀಯ ಹೆದ್ದಾರಿ 206ಕ್ಕೆ ಹೊಂದಿಕೊಂಡಂತೆ ಮಲವಳ್ಳಿ ಗ್ರಾಮದ ಮುಖ್ಯ ರಸ್ತೆಯ ಸನಿಹದಲ್ಲಿ ವರದಾ ನದಿಗೆ ಸೇರುವ ಹೊಳೆಯೊಂದಕ್ಕೆ ಪ್ರಕೃತಿ ನಿರ್ಮಿಸಿದ ಕಲ್ಲಿನ ಸೇತುವೆಯೊಂದಿದೆ. ಹೊಳೆಯಿಂದ 9ಅಡಿ ಎತ್ತರದಲ್ಲಿ 45 ಅಡಿ ಉದ್ದ, ಸುಮಾರು 5 ಅಡಿ ಅಗಲವಿರುವ ಈ ಪ್ರಾಕೃತಿಕ ಸೇತುವೆ ‘ಕಲ್ಸಂಕ’ ಕೋಟ್ಯಂತರ ವರ್ಷಗಳಲ್ಲಿ ಪ್ರಕೃತಿ ನಿರ್ಮಿಸಿದ ಅತ್ಯುದ್ಭುತ ಕಲಾಕೃತಿ. ದೇಶದ ಜಿಯಾಮಾರ್ಫಲಜಿಕಲ್ ಮ್ಯಾಪ್‌ನಲ್ಲಿ ಇದು ದಾಖಲಾಗಿದೆ ಕೂಡ. ಇದು ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ವಿಧಾನಸಭಾ ಕ್ಷೇತ್ರ ವ್ಯಾಾಪ್ತಿಗೆ ಬರುತ್ತದೆ ಎಂಬುದು ಕೂಡ ಗಮನಾರ್ಹ.
ಇಂತಹ ಮಹತ್ವದ ಸೇತುವೆಯಯ ಕುರಿತು ಸ್ಥಳೀಯರು ಗಮನ ಹರಿಸಿದ್ದರು. ಸೇತುವೆ ಅವಸಾನದ ಅಂಚಿಗೆ ತಲುಪುತ್ತಿದೆ ಎಂದು ಭಾವಿಸಿ ಇದರ ಸಂರಕ್ಷಣೆ ಮಾಡುವಂತೆ ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಮಾಡಿದ್ದರು. ಇದರ ಮಹತ್ವದ ಅರಿತು ಸಭಾಪತಿಗಳು ಇದರ ಬಗ್ಗೆ ಸರ್ಕಾರದ ಗಮನ ಸೆಳೆದರು. ಜೊತೆಗೆ ಶಿವಮೊಗ್ಗದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಹ್ಯಾಾದ್ರಿ ಪಾರಂಪರಿಕ ಪ್ರಾಾಧಿಕಾರಕ್ಕೆ ಭೂಗರ್ಭ ಶಾಸ್ತ್ರಜ್ಞರ ಅಭಿಪ್ರಾಯ ಪಡೆದು ಅದರ ಸಂರಕ್ಷಣೆಗೆ ಯೋಜನಾ ವರದಿ ಸಿದ್ಧಪಡಿಸಿ ಎಂದರು.
ಇಲ್ಲಿಂದಲೇ ಬದಲಾದುದ್ದು:
ಇಲ್ಲಿಯವರೆಗೆ ಎಲ್ಲವೂ ಸರಿ ಇತ್ತು. ಈಗ ಆರಂಭವಾಗಿದ್ದೇ ನಮ್ಮ ಅಧಿಕಾರಶಾಹಿ ನಡವಳಿಕೆ. ಪ್ರಾಧಿಕಾರವು ಈ ಬಗ್ಗೆ 25 ಲಕ್ಷ ರು. ವೆಚ್ಚದ ಕಾಮಗಾರಿಯ ಯೋಜನಾ ವರದಿಯೊಂದನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿತು. ಇದರಂತೆ ಸರ್ಕಾರ 25 ಲಕ್ಷ ರು. ವೆಚ್ಚದಲ್ಲಿ ಕಾಮಗಾರಿಗೆ ಮಂಜೂರಾತಿ ನೀಡಿತು. ಸಿಮೆಂಟು, ಕಬ್ಬಿಣ, ಮರಳು, ಗಾರೆಯ ಹೊರತಾಗಿ ಪ್ರಕೃತಿಯೂ ಭೂಮಿ ಮೇಲೆ ಎಲ್ಲವನ್ನೂ ನಿರ್ಮಿಸುತ್ತದೆ ಎಂಬುದರ ಗಂಧ ಗಾಳಿಯೂ ಗೊತ್ತಿಲ್ಲದಂತೆ ನಿರ್ಮಿತಿ ಕೇಂದ್ರದವರು ಇದನ್ನು ತಮ್ಮಿಚ್ಚೆಯಂತೆ, ತಮ್ಮ ಮನೋಭಾವಕ್ಕೆ, ತಮ್ಮ ಖರ್ಚಿಗೆ ತಕ್ಕಂತೆ, ತಮ್ಮ ಟೆಂಡರ್, ಯೋಜನಾ ರೂಪಕ್ಕೆ ತಕ್ಕಂತೆ ಕಾಮಗಾರಿ ಮಾಡಿದ್ದಾರೆ. ಪ್ರಕೃತಿಗೆ ಸೆಡ್ಡು ಹೊಡಿದ್ದಾರೆ. ಕೋಟ್ಯಂತರ ವರ್ಷಗಳಲ್ಲಿ ಪ್ರಕೃತಿ ನಿರ್ಮಿಸಿದ ಸೇತುವೆಯೊಂದನ್ನು ಕೆಲವೇ ದಿನಗಳಲ್ಲಿ ತಾವು ಹೇಗೆ ಬದಲಾಯಿಸಬಲ್ಲೆವು ಎಂಬುದನ್ನು ಸಾಬೀತುಪಡಿಸಿದ್ದಾರೆ.
ನಿಸರ್ಗದ ಅಮೂಲ್ಯ ಕೊಡುಗೆಯನ್ನು ನಿರ್ದಯವಾಗಿ ಹೊಸಕಿ ಹಾಕಿದ್ದಾಾರೆ. ಅಲ್ಲೀಗ ಸೀಮೆಂಟ್ ಕಾಮಗಾರಿ ಕಾಣಿಸುತ್ತಿದೆ. ಪ್ರಾಕೃತಿಕವಾಗಿ ಹರಿಯುತ್ತಿದ್ದ ನೀರು ಮೋರಿಯಲ್ಲಿ ಹರಿದಂತೆ ಭಾಸವಾಗುತ್ತಿದೆ. ಹಸರು ಮರಗಿಡಗಳ ನೆರಳು ಕೂಡ ಹಳ್ಳದ ಮೇಲೆ ಬೀಳದಂತೆ ಎಚ್ಚರಿಕೆಯಿಂದ ಇಂಜಿನಿಯರ್‌ಗಳು ಕೆಲಸ ಮಾಡಿದ್ದಾರೆ!? ಪ್ರಾಕೃತಿಕ ಕಲ್ಸಂಕವೊಂದನ್ನು ನಿರ್ದಯವಾಗಿ ಹೊಸಕಿ ಹಾಕಿ, ಆಧುನಿಕತೆಯ ಸಿಮೆಂಟ್ ಕಾಮಗಾರಿ ಇಲ್ಲಿ ವಿಜೃಂಭಿಸಿದೆ.
ಎಷ್ಟು ವರ್ಷ ಹಳೆಯದು?
ಭೂಗರ್ಭ ಶಾಸ್ತ್ರಜ್ಞರ ಪ್ರಕಾರ ಇದು 150 ಕೋಟಿ ವರ್ಷಗಳಿಂದ ಪ್ರಕೃತಿ ರೂಪಿಸಿದ ಕಲಾಕೃತಿ ಇದು. ಈ ಹೊಳೆಯ ಹರಿವಿನ ನಡುವೆ ಲ್ಯಾಟ್ರೀಟ್ ಶಿಲಾಪದರವಿತ್ತು. ಅಂದರೆ ಜಂಬಿಟ್ಟಿಗೆ ಪದರ. ನೀರು ಇದನ್ನು ನಿಧಾನವಾಗಿ ಕತ್ತರಿಸುತ್ತಾ ತನ್ನ ಅನುಕೂಲಕ್ಕೆ ಎಷ್ಟು ಬೇಕೋ ಅಷ್ಟು ಜಾಗ ಮಾಡಿಕೊಂಡು ಮುಂದೆ ಹರಿಯಿತು. ಶಿಲಾಪದರ ಕೂಡ ನೀರಿಗೆ ಎಷ್ಟು ಬೇಕೋ ಅಷ್ಟು ಜಾಗ ಬಿಟ್ಟು ಉಳಿದಂತೆ ಗಟ್ಟಿಯಾಗಿ ನಿಂತಿತು. ಅಲ್ಲಿ ಪ್ರಾಕೃತಿಕ ಸೇತುವೆಯೊಂದು ರಚಿಸಲ್ಪಟ್ಟಿತು.
ಗೋಪಾಲ್ ಯಡಗೆರೆ