ಇಲ್ಲಿನ 18 ಮನೆಗಳ ಪೈಕಿ ನಾಲ್ಕೈದು ಮನೆಗಳಿಗೆ ಮಾತ್ರ ಹೆಂಚಿನ ಮೇಲ್ಚಾವಣಿ, ಸರ್ಕಾರದ ಉಚಿತ ವಿದ್ಯುತ್ ಭಾಗ್ಯ ಪಡೆಯುವ ಸೌಭಾಗ್ಯ ಈ ಜನರಿಗಿಲ್ಲ
ಗಣೇಶ್ ತಮ್ಮಡಿಹಳ್ಳಿ
ಶಿವಮೊಗ್ಗ(ಜೂ.11): ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ತನ್ನ ಐದು ಗ್ಯಾರಂಟಿಯಲ್ಲಿ ಘೋಷಿಸಿದ ಉಚಿತ ವಿದ್ಯುತ್ ಪಡೆಯಲು ಜನರು ದಾಖಲೆಯನ್ನು ಜೋಡಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಗ್ರಾಮದ ಜನರಿಗೆ ಸರ್ಕಾರ ಉಚಿತ ವಿದ್ಯುತ್ ಭಾಗ್ಯ ಪಡೆಯುವ ಸೌಭಾಗ್ಯ ಇಲ್ಲ. ಏಕೆಂದರೆ ಈ ಗ್ರಾಮದ ಬಹುತೇಕ ಮನೆಗಳಿಗೆ ವಿದ್ಯುತ್ ಸಂಪರ್ಕವೇ ಇಲ್ಲ!
ಶಿವಮೊಗ್ಗದಿಂದ 30 ಕಿ.ಮೀ. ದೂರದಲ್ಲಿರುವ ಬೆಳಗಲು ಗ್ರಾಮ ಸರ್ಕಾರಿ ಸೌಲಭ್ಯ ವಂಚಿತ ಗ್ರಾಮವಾಗಿ ಹೊರಹೊಮ್ಮಿದೆ. ಶತಮಾನ ಕಳೆದರೂ ಇಲ್ಲಿನ ಜನರಿಗೆ ಯಾವುದೇ ಸರ್ಕಾರಿ ಸೌಲಭ್ಯಗಳಿಲ್ಲ. ಇಲ್ಲಿನ ಜನ ಈಗಲೂ ಆದಿವಾಸಿಗಳಂತೆ ಜೀವನ ಸಾಗಿಸುತ್ತಿದ್ದಾರೆ. ಇಂದಿನ ಆಧುನಿಕ ಕಾಲದಲ್ಲಿ ಇಂತಹ ಗ್ರಾಮಗಳು ಸಿಗುವುದು ಬಹಳ ಅಪರೂಪ.
ಶಿವಮೊಗ್ಗ: ನೀವಾದ್ರೂ ನಮಗೆ ಮನೆ ಕಟ್ಟಿಸಿಕೊಡುತ್ತೀರಾ ಸ್ವಾಮಿ?
ಬೆಳಗಲು ಗ್ರಾಮದಲ್ಲಿ ಒಟ್ಟು 18 ಮನೆಗಳಿಗೆ ಇವುಗಳ ಪೈಕಿ ನಾಲ್ಕೈದು ಮನೆಗಳಿಗೆ ಮಾತ್ರ ಹೆಂಚಿನ ಮೇಲ್ಚಾವಣಿ ಇದೆ. ಉಳಿದವು ಗುಡಿಸಲು ಮನೆಗಳು. ಶತಮಾನದಿಂದ ಇಲ್ಲಿನ ಜನ ಗುಡಿಸಲಿನಲ್ಲೇ ವಾಸಿಸುತ್ತಿದ್ದಾರೆ. ಬಿರುಸಿನ ಮಳೆಯಾದರೆ ಸೋರುವ ಮೇಲ್ಚಾವಣಿ. ಸುತ್ತಲೂ ಕತ್ತಲು ಮಧ್ಯೆಯೇ ಇಷ್ಟುದಿನ ಕಳೆಯುತ್ತಾ ಬಂದಿದ್ದಾರೆ.
ಈಚೆಗೆ ಸ್ಥಳೀಯ ಕೆಲ ಜನಪ್ರತಿನಿಧಿಗಳ ಇಚ್ಛಾಶಕ್ತಿಯಿಂದ ಗ್ರಾಮಕ್ಕೆ ಹೇಗೋ ವಿದ್ಯುತ್ ಸಂಪರ್ಕ ಬಂದಿದೆ. ಆದರೆ, ಹುಲ್ಲಿನ ಗುಡಿಸಲು ಎಂಬ ಕಾರಣಕ್ಕೆ ಇಲ್ಲಿನ ಹಲವು ಮನೆಗಳಿಗೆ ವಿದ್ಯುತ್ ಭಾಗ್ಯ ಇಲ್ಲದಂತಾಗಿದೆ. ಹೆಂಚು ಹೊಂದಿರುವ ಮನೆಗಳಿಗೆ ಮಾತ್ರ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ನೀಡಿರುವುದರಿಂದ ಹುಲ್ಲಿನ ಗುಡಿಸಲು ವಾಸಿಗಳು ಇನ್ನೂ ಕತ್ತಲು ಭಾಗ್ಯದಿಂದ ಹೊರ ಬಂದಿಲ್ಲ.
ಇಲ್ಲಿನ ನಿವಾಸಿಗಳಿಗೆ ಆಧಾರ್ ಕಾರ್ಡ್, ಪಡಿತರ ಚೀಟಿ, ಮತದಾರ ಚೀಟಿ ಇದೆ. ಇಲ್ಲಿಂದ ಹಲವು ಮಕ್ಕಳು ದೂರ ಶಾಲೆಗೆ ಹೋಗುತ್ತಿದ್ದಾರೆ. ಆದರೆ, ಕರೆಂಟ್ ಸಂಪರ್ಕ ಇಲ್ಲ. ಹೀಗಾಗಿ ಕತ್ತಲೆಯಲ್ಲಿ ವಿದ್ಯಾರ್ಥಿಗಳು ಓದುವುದೇ ಒಂದು ಸಾಹಸ. ಹಳ್ಳಿಗಳನ್ನು ಗುಡಿಸಲು ಮುಕ್ತ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದರೂ ಇಂದಿಗೂ ಗುಡಿಸಲು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ.
ಬೆಳಕಿನ ಭಾಗ್ಯಕ್ಕೆ ಬಡತನ ಅಡ್ಡಿ!
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಕಾಳಜಿಯಿಂದಾಗಿ 2016ರಲ್ಲಿ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆದರೆ, ಎಲ್ಲ ಮನೆಗಳು ವಿದ್ಯುತ್ ಕೊಡಲು ಸಾಧ್ಯವಾಗಿಲ್ಲ. ಇಲ್ಲಿರುವ ಮನೆಗಳಿಗೆ ಕರೆಂಟ್ ಕೊಡಬೇಕು ಎಂದರೆ ಹೆಂಚಿನ ಮನೆ ಹೊಂದಿರಬೇಕು ಎಂದು ಮೆಸ್ಕಾಂ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಇಲ್ಲಿರುವ ಬಹುತೇಕ ಮನೆಗಳು ಹುಲ್ಲಿನ ಗುಡಿಸಲುಗಳು. ಹೀಗಾಗಿ ಹೆಂಚಿನ ಮನೆಗಳನ್ನು ಹೊರತುಪಿಡಿಸಿ ಹುಲ್ಲಿನ ಗುಡಿಸಲುಗಳಿಗೆ ಇನ್ನೂ ವಿದ್ಯುತ್ ಭಾಗ್ಯ ಸಿಕ್ಕಿಲ್ಲ. ಇದಕ್ಕೆ ಬಡತನವೂ ಕಾರಣವಾಗಿದೆ.
ಈ ಗ್ರಾಮದಲ್ಲಿ ಹಿಂದೆ ಭತ್ತವನ್ನು ಬೆಳೆಯುತ್ತಿದ್ದರು. ಇದರಿಂದ ಹುಲ್ಲು ಸಿಗುತ್ತಿತ್ತು. ಅದನ್ನು ತಮ್ಮ ಗುಡಿಸಲಿಗೆ ಹೊದಿಸಿ, ಅದರ ಮೇಲೆ ಟಾರ್ಪಲ್‌ಗಳನ್ನು ಹಾಕಿಕೊಂಡು ಜೀವನ ಮಾಡುತ್ತಿದ್ದರು. ಈಚೇಗೆ ಭತ್ತ ಬೆಳೆಯುತ್ತಿದ್ದ ಪ್ರದೇಶ ಹಿನ್ನೀರಿಗೆ ಮುಳುಗಡೆಯಾಗಿ ಭತ್ತ ಬೆಳೆಯಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಹುಲ್ಲು ಸಿಗುತ್ತಿಲ್ಲ. ಈ ಕಾರಣಕ್ಕೆ ಕೆಲವರು ಸಂಘ-ಸಂಸ್ಥೆಗಳಲ್ಲಿ ಸಾಲ ಮಾಡಿ ಮನೆಗೆ ಹೆಂಚಿನ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆದರೆ, ಸಂಘದಲ್ಲಿ ಸಾಲ ತೆಗೆದುಕೊಂಡು ಮರುಪಾವತಿ ಮಾಡಲಾಗದಷ್ಟುಬಡತನ ಹೊಂದಿರುವ ಜನರು ಸಾಲಕ್ಕೆ ಹೆದರಿ ಇನ್ನೂ ಹುಲ್ಲಿನ ಗುಡಿಸಿನಲ್ಲೇ ವಾಸ ಮಾಡುತ್ತಿದ್ದಾರೆ. ಶತಮಾನವೇ ಕಳೆದರೂ ಇನ್ನೂ ಕತ್ತಲಿನಲ್ಲೇ ದಿನದೂಡುತ್ತಿರುವ ಇವರಿಗೆ ಸೋಲಾರ್ ಲೈಟ್‌ಗಳು, ಕೈ ಬ್ಯಾಟರಿ, ಮೊಬೈಲ್ ಟಾಚ್‌ರ್‍ಗಳೇ ಬೆಳಕಿನ ಆಸರೆಯಾಗಿವೆ.
ದೇಶ ಕಟ್ಟುವಲ್ಲಿ ಯುವಜನತೆ ಜವಾಬ್ದಾರಿ ದೊಡ್ಡದು: ಸಂಸದ ಬಿ.ವೈ.ರಾಘವೇಂದ್ರ
ಬೆಳಗಲು ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸಲು ಈಗಲೂ ಪ್ರಯತ್ನ ಮಾಡುತ್ತಿದ್ದೇವೆ. ಇವರಿಗೆ ವಸತಿ ಸೌಲಭ್ಯ ಒದಗಿಸಲು ಗ್ರಾಪಂ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡರೂ ಸರ್ಕಾರಿ ಅಧಿಕಾರಿಗಳು ಇದಕ್ಕೆ ಒಪ್ಪುತ್ತಿಲ್ಲ. ಇಲ್ಲಿನ ಜನರನ್ನು ಕರೆದುಕೊಂಡು ಸ್ಥಳೀಯ ಶಾಸಕರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿನ ಜನರ ಪರಿಸ್ಥಿತಿ ನೋಡಿ ನಮ್ಮ ಕೈಯಿಂದ ಹಣ ಖರ್ಚು ಮಾಡಿ ಕೆಲ ಸೌಕರ್ಯ ಮಾಡಿಕೊಟ್ಟಿದ್ದೇವೆ ಅಂತ ಉಂಬ್ಳೇಬೈಲು ಗ್ರಾಪಂ ಸದಸ್ಯ ಅರವಿಂದ ಹೇಳಿದ್ದಾರೆ.
ಬೆಳಗಲು ಗ್ರಾಮದ ಭೂಮಿ ಯಾರಿಗೆ ಸೇರಿದ್ದು ಎಂಬುದೇ ಇನ್ನೂ ಯಾರಿಗೂ ತಿಳಿಯುತ್ತಿಲ್ಲ. ಅರಣ್ಯ ಅಧಿಕಾರಿಗಳು ಇದು ಅರಣ್ಯ ಭೂಮಿ ಎನ್ನುತ್ತಾರೆ, ಕಂದಾಯ ಇಲಾಖೆಗೂ ಈ ಗ್ರಾಮ ಒಳಪಟ್ಟಿದೆ. ಅಧಿಕಾರಿಗಳ ತಿಕ್ಕಾಟದಿಂದ ಇಲ್ಲಿನ ಜನರಿಗೆ ಸೌಕರ್ಯ ನೀಡಲು ಆಗುತ್ತಿಲ್ಲ. ಅಧಿಕಾರದಲ್ಲಿರುವ ಜನ ಪ್ರತಿನಿಧಿಗಳು ಇವರ ಬಗ್ಗೆ ಗಮನಹರಿಸುತ್ತಿಲ್ಲ. ಈ ಗ್ರಾಮದ ನಿವಾಸಿಗಳನ್ನು ಕಂದಾಯ ಗ್ರಾಮಗಳಿಗೆ ಸ್ಥಳಾಂತರಿಸಿ ಇವರಿಗೆ ಎಲ್ಲ ಸೌಕರ್ಯಗಳನ್ನು ನೀಡುವಂತ ಕೆಲಸ ಸರ್ಕಾರದಿಂದಲೆ ಆಗಬೇಕು ಅಂತ ಶಿವಮೊಗ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ. ದುಗ್ಗಪ್ಪಗೌಡ ತಿಳಿಸಿದ್ದಾರೆ.