ಲಾಕ್‌ಡೌನ್‌: ಕೊಡಗಿನಲ್ಲಿ 2 ಸಾವಿರಕ್ಕೂ ಅಧಿಕ ಕ್ಷೌರಿಕರು ಕೆಲಸವಿಲ್ಲದೆ ಕಂಗಾಲು!

By Kannadaprabha NewsFirst Published Apr 30, 2020, 9:38 AM IST
Highlights

ಕೊಡಗು ಜಿಲ್ಲೆಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಕ್ಷಾೌರಿಕರು ಲಾಕ್‌ಡೌನ್‌ನಿಂದ ಕಂಗಾಲಾಗಿದ್ದು, ಕಷ್ಟದಲ್ಲಿ ಜೀವನ ಮುನ್ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಮಡಿಕೇರಿ(ಏ.30): ಕೊರೋನಾ ಸೋಂಕು ಪರಿಣಾಮ ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡಲಾಗಿದೆ. ಲಾಕ್‌ಡೌನ್‌ನಿಂದಾಗಿ ಹಲವಾರು ಮಂದಿ ಸಂಕಷ್ಟಎದುರಿಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ಕ್ಷಾೌರಿಕರು ಲಾಕ್‌ಡೌನ್‌ನಿಂದ ಕಂಗಾಲಾಗಿದ್ದು, ಕಷ್ಟದಲ್ಲಿ ಜೀವನ ಮುನ್ನಡೆಸಬೇಕಾದ ಅನಿವಾರ್ಯತೆ ಉಂಟಾಗಿದೆ.

ಕೊಡಗು ಜಿಲ್ಲೆಯಲ್ಲಿ ಶೇ.85ರಷ್ಟುಮಂದಿ ಕ್ಷಾೌರಿಕರು ಇಂದಿಗೂ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿ ಜೀವ ಸಾಗಿಸುತ್ತಿದ್ದಾರೆ. ಕೊರೋನಾ ಲಾಕ್‌ಡೌನ್‌ನಿಂದಾಗಿ ಇವರ ಮೇಲೂ ತೀವ್ರ ಪ್ರಭಾವ ಬೀರಿದ್ದು, ಲಾಕ್‌ಡೌನ್‌ ಆರಂಭವಾಗಿದಲ್ಲಿಂದ ಯಾವುದೇ ಆದಾಯವಿಲ್ಲದೆ ಜೀವನ ಕಷ್ಟಕರವಾಗಿದೆ. ತಮ್ಮ ಹೇರ್‌ ಕಟ್ಟಿಂಗ್‌ ಅಂಗಡಿಗಳ ಬಾಡಿಗೆ ಪಾವತಿಗೂ ಸಮಸ್ಯೆಯಾಗುತ್ತಿದೆ.

ಇದೀಗ ಕೊಡಗು ಜಿಲ್ಲೆಯಲ್ಲಿ ಕೊರೋನಾ ಸೋಂಕು ಇಲ್ಲದಿರುವ ಹಿನ್ನೆಲೆಯಲ್ಲಿ ಹೇರ್‌ ಕಟ್ಟಿಂಗ್‌ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು ಯಾವುದೇ ಪ್ರಯೋಜನವಾಗಿಲ್ಲ. ಕ್ಷಾೌರಿಕರಿಗೆ ಯಾವುದೇ ಸಹಾಯ ಈವರೆಗೆ ಯಾರೂ ಮಾಡಿಲ್ಲ ಎನ್ನುತ್ತಾರೆ ಕ್ಷಾೌರಿಕರು. ಆದ್ದರಿಂದ ಇವರ ನೆರವಿಗೆ ಸಂಬಂಧಿಸಿದವರು ಕೂಡಲೇ ಬರಬೇಕಾಗಿದೆ.

ಮೇ 3ರ ವರೆಗೆ ಲಾಕ್‌ಡೌನ್‌ ಇರಲಿದೆ. ಇದಾದ ನಂತರ ಹೇರ್‌ ಕಟ್ಟಿಂಗ್‌ ಸೇವೆಗೆ ಅವಕಾಶ ನೀಡಬೇಕು. ಸರ್ಕಾರದಿಂದಲೇ ಮಾಸ್ಕ್‌, ಸ್ಯಾನಿಟೈಸರ್‌ನ್ನು ಆಯಾ ನಗರಸಭೆ, ಪಂಚಾಯಿತಿ ಮೂಲಕ ನೀಡುವಂತಾಗಬೇಕು. ಆದರೆ ಲಾಕ್‌ಡೌನ್‌ ಮತ್ತೆ ಮುಂದುವರಿದರೆ ನಮ್ಮ ಬದುಕು ತುಂಬಾ ಕಷ್ಟಕರವಾಗಲಿದೆ. ನಾವು ಕ್ಷಾೌರಿಕ ವೃತ್ತಿಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಈ ಕೆಲಸ ಹೊರತುಪಡಿಸಿ ನಮಗೆ ಇತರೆ ಕೆಲಸ ಗೊತ್ತಿಲ್ಲ. ಇದೀಗ ಹಲವು ದಿನಗಳಿಂದ ಕೆಲಸವಿಲ್ಲದೆ ಕುಟುಂಬ ನಿರ್ವಹಣೆಯೂ ತೀರಾ ಕಷ್ಟವಾಗಿದೆ ಎನ್ನುವುದು ಕ್ಷಾೌರಿಕರ ಅಳಲು.

ಹಿಂದಿನ ಕಾಲದ ಪರಿಸ್ಥಿತಿ: ಲಾಕ್‌ಡೌನ್‌ನಿಂದಾಗಿ ಈಗ ಕ್ಷಾೌರಿಕರಿಗೆ ಹಿಂದಿನ ಕಾಲದ ಪರಿಸ್ಥಿತಿ ಉಂಟಾಗಿದೆ. ಹೇರ್‌ ಕಟ್‌ ಮಾಡಲು ತಾವೇ ಪೆಟ್ಟಿಗೆಯೊಂದನ್ನು ಹಿಡಿದುಕೊಂಡು ಈಗ ಮನೆ ಮನೆಗೆ ತೆರಳುವಂತಾಗಿದೆ. ಕೆಲವು ಗ್ರಾಮಸ್ಥರು ಕ್ಷಾೌರಿಕರನ್ನು ತಮ್ಮ ಗ್ರಾಮಗಳಿಗೆ ಕರೆಸಿಕೊಂಡು ಹೇರ್‌ ಕಟ್ಟಿಂಗ್‌ ಮಾಡಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಕೆಲವರು ಊರೂರು ತಿರುಗಿ ಹೇರ್‌ ಕಟ್ಟಿಂಗ್‌ ಮಾಡುತ್ತಿದ್ದಾರೆ. ಆದರೆ ಬಹುತೇಕರು ಕೆಲಸವಿಲ್ಲದೆ ಮನೆಯಲ್ಲೇ ಇರುವಂತಾಗಿದೆ. ಆದ್ದರಿಂದ ಅಂಗಡಿಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕೆಂಬುದು ಕ್ಷಾೌರಿಕರ ಆಗ್ರಹ.

ಸಾರ್ವಜನಿಕರೂ ಪರದಾಟ: ಇದೀಗ ಲಾಕ್‌ಡೌನ್‌ ಆಗಿ ತಿಂಗಳೇ ಕಳೆದಿದೆ. ಸಾರ್ವಜನಿಕರು ಹೇರ್‌ ಕಟ್ಟಿಂಗ್‌ ಮಾಡಿಸಿಕೊಳ್ಳಲು ಪರದಾಡುತ್ತಿದ್ದಾರೆ. ಕೆಲವು ಕ್ಷಾೌರಿಕರು ಮನೆ ಮನೆಗೆ ತೆರಳಿ ಹೇರ್‌ ಕಟ್ಟಿಂಗ್‌ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲವು ಸಾರ್ವಜನಿಕರು ಹೇರ್‌ ಕಟ್ಟಿಂಗ್‌ ಅಂಗಡಿಗಳು ಬಂದ್‌ ಆಗಿರುವ ಹಿನ್ನೆಲೆಯಲ್ಲಿ ತಾವೇ ಕಟ್ಟಿಂಗ್‌ ಮಾಡಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಸಾರ್ವಜನಿಕರೂ ಪರದಾಡುತ್ತಿವುದರಿಂದ ಸಲೂನ್‌ಗಳನ್ನು ತೆರೆಯಲು ಜಿಲ್ಲಾಡಳಿತ ಅವಕಾಶ ನೀಡಬೇಕೆಂದು ಸವಿತಾ ಸಮಾಜದ ಪ್ರಮುಖರು ಆಗ್ರಹಿಸಿದ್ದಾರೆ.

ಕೊಡಗು ಜಿಲ್ಲೆಯಲ್ಲಿ 2 ಸಾವಿರಕ್ಕೂ ಅಧಿಕ ಮಂದಿ ಕ್ಷಾೌರಿಕ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸುಮಾರು 15 ಸಾವಿರ ಮಂದಿ ಜನಸಂಖ್ಯೆಯಿದೆ. ಶೇ.85ರಷ್ಟುಮಂದಿ ಬಾಡಿಗೆ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಇದರಿಂದ ಜೀವನ ಕಷ್ಟಕರವಾಗಿದೆ. ಅಂಗಡಿಗಳ ಬಾಡಿಗೆ ಕೂಡ ಪಾವತಿಸಲು ಕಷ್ಟ. ಆದ್ದರಿಂದ ಅಂಗಡಿಗಳನ್ನು ತೆರೆಯುವಂತೆ ಅವಕಾಶ ನೀಡಲು ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಮನವಿ ಮಾಡಿಕೊಂಡರು ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸವಿತಾ ಸಮಾಜ ಕೊಡಗು ಜಿಲ್ಲಾಧ್ಯಕ್ಷ ದೊರೇಶ್‌.

ಕೊಡಗಿನಲ್ಲಿ ಕೊರೋನಾ ಸೋಂಕು ಇಲ್ಲ. ಇದೀಗ ಅಂಗಡಿಗಳು ಬಂದ್‌ ಆಗಿ ತಿಂಗಳೇ ಕಳೆದಿದ್ದು, ಜೀವನ ನಡೆಸಲು ಕಷ್ಟದ ಪರಿಸ್ಥಿತಿ ಉಂಟಾಗಿದೆ. ಆದ್ದರಿಂದ ಜಿಲ್ಲಾಧಿಕಾರಿಗಳು ಹೇರ್‌ ಕಟ್ಟಿಂಗ್‌ ಅಂಗಡಿಗಳನ್ನು ತೆರೆಯಲು ಆದೇಶವನ್ನು ನೀಡಬೇಕು. ಬೆಳಗ್ಗೆ 6ರಿಂದ 4 ಗಂಟೆ ವರೆಗೆ ಅಂಗಡಿ ತೆರೆಯಲು ಅವಕಾಶ ನೀಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಮ್ಮ ಕುಟುಂಬ ಸಾಗಿಸುವುದು ತೀರಾ ಕಷ್ಟವಾಗಲಿದೆ ಎಂದು ಮಾದಾಪುರ ಕ್ಷೌರಿಕ ಧರ್ಮೇಂದ್ರ ತಿಳಿಸಿದ್ದಾರೆ.

-ವಿಘ್ನೇಶ್‌ ಎಂ. ಭೂತನಕಾಡು

click me!