ಜಿಂದಾಲ್‌ನಲ್ಲಿ ಹೆಚ್ಚಿನ ಸೋಂಕಿತರು ಕಾಣಿಸಿಕೊಂಡಿದ್ದಾರೆ ಎಂದಾಕ್ಷಣ ಆ ಕಾರ್ಖಾನೆ ಮುಚ್ಚಲು ಬರುವುದಿಲ್ಲ| ಕಂಟೈನ್ಮೆಂಟ್‌ನ ಮಾರ್ಗಸೂಚಿ ಬದಲಾಗಿದೆ. ಕಳೆದ ತಿಂಗಳ ಮಾರ್ಗಸೂಚಿ ಇಲ್ಲ. ಮೊದಲಿನ ಪರಿಸ್ಥಿತಿ ಇವತ್ತು ಇಲ್ಲ. ಜೀವ ಉಳಿಸಿಕೊಳ್ಳುವುದು ಎಷ್ಟು ಮುಖ್ಯವೋ ಜೀವನ ನಡೆಸುವುದೂ ಅಷ್ಟೇ ಮುಖ್ಯ|
ಬಳ್ಳಾರಿ(ಜೂ.13): ಜಿಂದಾಲ್ (ಜೆಎಸ್‌ಡಬ್ಲ್ಯೂ) ಮೈಸೂರಿನ ಜ್ಯೂಬಿಲಿಯಂಟ್‌ನಂತೆ ಆಗುವುದಿಲ್ಲ. ಅಲ್ಲಿನ ಸಮಸ್ಯೆಯೇ ಬೇರೆ ಇತ್ತು. ಇಲ್ಲಿಯದ್ದೇ ಬೇರೆ ಸಮಸ್ಯೆ. ಜ್ಯೂಬಿಲಿಯಂಟ್‌ನಲ್ಲಿ ಪ್ರಥಮ ಸಂಪರ್ಕಿತರು ಪತ್ತೆಯಾಗಲಿಲ್ಲ. ಆದರೆ, ಜಿಂದಾಲ್‌ನ ಮೊದಲ ಸೋಂಕಿತನ ಪ್ರಥಮ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡಲಾಗಿದೆ. ಹೀಗಾಗಿ, ಆತಂಕಪಡುವ ಅಗತ್ಯವಿಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಡಿಸಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಕೊರೋನಾ ವೈರಸ್‌ನಿಂದ ಜನರು ಭಯಭೀತರಾಗುವಂತೆ ಮಾಧ್ಯಮಗಳು ಸುದ್ದಿ ಮಾಡಬೇಡಿ ಎಂದು ಮನವಿ ಮಾಡಿದರು. ಜೆಎಸ್‌ಡಬ್ಲ್ಯೂನಲ್ಲಿ ಈ ವರೆಗೆ 95 ಕೊರೋನಾ ವೈರಸ್ ಪ್ರಕರಣಗಳು ಪತ್ತೆಯಾಗಿವೆ. ಜಿಂದಾಲ್‌ನವರು ಸೋಂಕು ನಿಯಂತ್ರಣಕ್ಕೆ ಸಾಕಷ್ಟುಪ್ರಯತ್ನ ಮಾಡುತ್ತಿದ್ದಾರೆ. ಜಿಂದಾಲ್‌ನಲ್ಲಿ ಮೊದಲ ವ್ಯಕ್ತಿ ತಮಿಳುನಾಡಿಗೆ ಹೋಗಿ ಬಂದದ್ದು ಗೊತ್ತಾಗಿದೆ. ಪ್ರಥಮ, ದ್ವಿತೀಯ ಸಂಪರ್ಕಿತರನ್ನು ಗುರುತಿಸಲಾಗಿದೆ. ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರು ಸೇರಿ 420 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಜಿಂದಾಲ್ ಮಾಡಿದೆ ಎಂದು ಸಚಿವ ಡಾ. ಸುಧಾಕರ್ ವಿವರಿಸಿದರು.
ಬಳ್ಳಾರಿ: ಮನೆಗೆ ಹಾಲು ಹಾಕುತ್ತಿದ್ದವನಿಗೆ ಕೊರೋನಾ ಸೋಂಕು
ಜಿಂದಾಲ್‌ನಲ್ಲಿ ಹೆಚ್ಚಿನ ಸೋಂಕಿತರು ಕಾಣಿಸಿಕೊಂಡಿದ್ದಾರೆ ಎಂದಾಕ್ಷಣ ಆ ಕಾರ್ಖಾನೆಯನ್ನು ಮುಚ್ಚಲು ಬರುವುದಿಲ್ಲ. ಕಂಟೈನ್ಮೆಂಟ್‌ನ ಮಾರ್ಗಸೂಚಿ ಬದಲಾಗಿದೆ. ಕಳೆದ ತಿಂಗಳ ಮಾರ್ಗಸೂಚಿ ಇಲ್ಲ. ಮೊದಲಿನ ಪರಿಸ್ಥಿತಿ ಇವತ್ತು ಇಲ್ಲ. ಜೀವ ಉಳಿಸಿಕೊಳ್ಳುವುದು ಎಷ್ಟುಮುಖ್ಯವೋ ಜೀವನ ನಡೆಸುವುದೂ ಅಷ್ಟೇ ಮುಖ್ಯವಾಗಿದೆ. ಕಂಟೈನ್ಮೆಂಟ್ ಜೋನ್ ಎಂದರೆ ಸೋಂಕು ಬಂದರೆ ಮನೆ ಮಾತ್ರ ಕಂಟೈನ್ಮೆಂಟ್ ಮಾಡಲಾಗುತ್ತಿದೆ ಎಂದು ತಿಳಿಸಿದರು. ಪ್ರತಿ ಗ್ರಾಮದಲ್ಲಿ ಟಾಸ್ಕ್‌ಫೋರ್ಸ್ ಸಮಿತಿ ಮಾಡಲಾಗಿದೆ. ಸರ್ವೆ ಮಾಡಲಾಗುತ್ತಿದೆ. ಫಿವರ್ ಕ್ಲಿನಿಕ್ ಹಾಗೂ ಆಸ್ಪತ್ರೆಗೆ ಬರುವವರ ಮೇಲೆ ನಿಗಾ ಇಡಲಾಗಿದೆ. ಜ್ವರ, ಕೆಮ್ಮು, ನೆಗಡಿಗೆ ಮೆಡಿಕಲ್ ಸ್ಟೋರ್‌ನಲ್ಲಿ ತೆಗೆದುಕೊಂಡರೆ ಅವರ ಮಾಹಿತಿ ಕಲೆ ಹಾಕಲಾಗುತ್ತಿದೆ. ತಂತ್ರಜ್ಞಾನ ಹಾಗೂ ಅಧಿಕಾರಿಗಳನ್ನು ಬಳಸಿಕೊಂಡು ಈ ಕೆಲಸ ಮಾಡಲಾಗುತ್ತಿದೆ. ಅವಶ್ಯಬಿದ್ದರೆ ಖಾಸಗಿ ವೈದ್ಯರನ್ನು ಕೋವಿಡ್ ನಿಗ್ರಹಕ್ಕೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಐಎಂಎ ಜತೆ ಈಗಾಗಲೇ ಮಾತನಾಡಿದ್ದೇವೆ. ಕೊರೋನಾ ವೈರಸ್ ಹೋಗುವ ಸಂದರ್ಭವಂತೂ ಇಲ್ಲ. ಸ್ಪಷ್ಟವಾದ ಲಸಿಕೆ ಸಿಗುವ ವರೆಗೆ ಅದರ ಮಧ್ಯೆಯೇ ಜೀವನ ಸಾಗಿಸಬೇಕಾಗಿದೆ ಎಂದು ಸಚಿವರು ತಿಳಿಸಿದರು.
ಮಾಧ್ಯಮಗಳು ಕೊರೋನಾ ಬಗ್ಗೆ ದೊಡ್ಡ ಹೆಡ್‌ಲೈನ್ ಕೊಡಬೇಡಿ
ರಾಜ್ಯದಲ್ಲಿ ಒಟ್ಟು 6245 ಕೊರೋನಾ ವೈರಸ್ ಸೋಂಕಿತರ ಸಂಖ್ಯೆಯಿದ್ದು, ಈ ಪೈಕಿ 3 ಸಾವಿರ ಜನ ಗುಣಮುಖರಾಗಿದ್ದಾರೆ. ಆದರೆ, ಗುಣಮುಖರಾದವರನ್ನು ಪರಿಗಣಿಸದೆ ಮಾಧ್ಯಮಗಳು ವರದಿ ಮಾಡುತ್ತಿವೆ. ಇದರಿಂದ ಸೋಂಕಿತರ ಪ್ರಮಾಣ ಏರಿಕೆಯಾದಂತೆ ಕಾಣುತ್ತಿದೆ. ಹೀಗಾಗಿ ಮಾಧ್ಯಮಗಳು ವಸ್ತುಸ್ಥಿತಿ ವರದಿ ಮಾಡಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಸಲಹೆ ನೀಡಿದರು.
ದೃಶ್ಯ ಮಾಧ್ಯಮಗಳು ವಸ್ತುಸ್ಥಿತಿಯನ್ನು ಮರೆಮಾಚಬಾರದು. ವೈರಾಣು ಬಗ್ಗೆ ದೊಡ್ಡ ಹೆಡ್‌ಲೈನ್ ಕೊಡಬೇಡಿ. ಮಾರಕವಾದ ರೋಗಾಣು ಎನ್ನಬೇಡಿ. ಸೋಂಕಿತರಲ್ಲಿ ಬರೀ ಶೇ. 3ರಷ್ಟು ಜನರಿಗೆ ಮಾತ್ರ ರೋಗದ ಲಕ್ಷಣಗಳು ಕಂಡು ಬಂದಿವೆ. ಆದರೆ, ಮಾಧ್ಯಮಗಳು ರಾಜ್ಯದಲ್ಲಿ ಕೊರೋನಾ ವೈರಸ್ ಪೂರ್ಣ ಹಬ್ಬಿದ ರೀತಿಯಲ್ಲಿ ವರದಿ ಮಾಡುತ್ತಿರುವುದರಿಂದ ಸಾರ್ವಜನಿಕರು ಭಯಭೀತರಾಗುತ್ತಾರೆ. ಮಾಧ್ಯಮದವರು ಆ್ಯಕ್ಟಿವ್ ಪ್ರಕರಣಗಳನ್ನಷ್ಟೇ ಹೇಳಬೇಕು ಎಂದರಲ್ಲದೆ, ಕೊರೋನಾ ಸೋಂಕು ಸಾಮಾಜಿಕ ಪಿಡುಗಲ್ಲ. ಸೋಂಕಿತರನ್ನು ಕಳಂಕಿತರಂತೆ ನೋಡುವುದು ಸರಿಯಲ್ಲ. ಜ್ವರ, ಕೆಮ್ಮಿನಂತೆ ಇದೊಂದು ಕಾಯಿಲೆ ಎಂದು ತಿಳಿಸಿದರು.