ನೆರೆ ನೋವು ಮರೆತು ಹುತ್ತರಿ ಖುಷಿ ಕಂಡ ರೈತ​ರು

By Kannadaprabha NewsFirst Published Dec 14, 2019, 8:22 AM IST
Highlights

ಕಳೆದ ಎರಡು ವರ್ಷ ಕೊಡಗು ನೆರೆ ಹಾವಳಿಯಿಂದ ತತ್ತರಿಸಿದ್ದರೂ, ಭತ್ತದ ಮಡಿಗಳಲ್ಲಿ ಪ್ರವಾಹ ನಿಂತು ರೈತಾಪಿ ವರ್ಗ ಸಾಕಷ್ಟು ನಷ್ಟ ಅನುಭವಿಸಿದ್ದರೂ ಇದೀಗ ಹುತ್ತರಿ ಸಂಭ್ರಮದಲ್ಲಿ ತಮಗಾದ ಕಷ್ಟ-ನಷ್ಟವನ್ನು ಮರೆಯಲು ಪ್ರಯತ್ನಿಸಿದ್ದಾರೆ. ಈ ಬಾರಿ ಕೃಷಿಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಹಬ್ಬದ ಆಚರಣೆಗೆ ಕೊರತೆ ಇರಲಿಲ್ಲ.

ಮಡಿಕೇರಿ(ಡಿ.14): ಕಳೆದ ಎರಡು ವರ್ಷ ಕೊಡಗು ನೆರೆ ಹಾವಳಿಯಿಂದ ತತ್ತರಿಸಿದ್ದರೂ, ಭತ್ತದ ಮಡಿಗಳಲ್ಲಿ ಪ್ರವಾಹ ನಿಂತು ರೈತಾಪಿ ವರ್ಗ ಸಾಕಷ್ಟು ನಷ್ಟ ಅನುಭವಿಸಿದ್ದರೂ ಇದೀಗ ಹುತ್ತರಿ ಸಂಭ್ರಮದಲ್ಲಿ ತಮಗಾದ ಕಷ್ಟ-ನಷ್ಟವನ್ನು ಮರೆಯಲು ಪ್ರಯತ್ನಿಸಿದ್ದಾರೆ. ದಕ್ಷಿಣ ಕೊಡಗಿನಾದ್ಯಂತ ಮನೆ ಮನೆಗಳಲ್ಲಿ ಹುತ್ತರಿ ಸಂಭ್ರಮ ಕಂಡು ಬಂದರೆ, ಸಾವು ನೋವು ಸಂಭವಿಸಿದ ಮನೆಯಲ್ಲಿ ಸೂತಕದ ಛಾಯೆ ಹಿನ್ನೆಲೆ ಹುತ್ತರಿ ಆಚರಣೆಗೆ ವಿರಾಮವಿತ್ತು.

ಹಲವು ಮನೆಗಳಲ್ಲಿ ಹುತ್ತರಿ ಎಂದರೆ ‘ಹೊಸ ಭತ್ತ​ದಿಂದ ಬೇರ್ಪಡಿಸಿದ ಹೊಸಾ ಅಕ್ಕಿಯ ಪಾಯಸ’. ಹುತ್ತರಿ ಗೆಣಸು, ಸಿಹಿ ಗೆಣಸು, ತಂಬಿಟ್ಟು ಇತ್ಯಾದಿ ತಿಂಡಿಗಳು ಮಾಮೂಲು. ಮನೆಯ ಬಾಗಿಲಿಗೆ ತಳಿರು ತೋರಣ, ಭತ್ತದ ಮಾಲೆಯನ್ನು ಕಟ್ಟುವ ಮೂಲಕ ಸಂಭ್ರಮಾಚರಣೆ ಮಾಡಲಾಗುತ್ತದೆ.

ಗಂಗಾವತಿ: ಬೀದಿ ಬದಿ ವ್ಯಾಪಾರಿಗಳು ಸಮಿತಿಗೆ ಚುನಾವಣೆ, 21ಕ್ಕೆ ಮತದಾನ

ಮನೆಯ ಹಿರಿಯರು, ಮಕ್ಕಳು ಹಾಗೂ ಕುಟುಂಬ ಸಮೇತರಾಗಿ ಮನೆಯ ದೇವರ ಸಾನ್ನಿಧ್ಯದಲ್ಲಿ ‘ತಳಿಯತಕ್ಕಿ ಬೊಳಕ್‌’ ನೊಂದಿಗೆ ಇಬ್ಬದಿಯೂ ಕದಿರನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ. ವರ್ಷಪೂರ್ತಿ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಐಶ್ವರ್ಯ ವೃದ್ಧಿಗೆ ಹಿರಿಯರು ಪ್ರಾರ್ಥಿಸುತ್ತಾರೆ.

ತಮ್ಮಿಂದೇನಾದರೂ ಲೋಪವಾಗಿದ್ದಲ್ಲಿ ದೇವರಲ್ಲಿ ಕ್ಷಮೆಯಾಚನೆ ಮಾಡುತ್ತಾರೆ. ಭತ್ತದ ಕಣ, ಗುರುಕಾರೋಣರ ಸ್ಥಳಕ್ಕೂ ತೆರಳಿ ಪೂಜೆ ಸಲ್ಲಿಸಲಾಗುತ್ತದೆ. ಮಕ್ಕಳು, ಕಾರ್ಮಿಕರು, ನೆಂಟರು ಸೇರಿ ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ. ವರ್ಷಪೂರ್ತಿ ಭತ್ತದ ಮಡಿಗಳು, ತೋಟದಲ್ಲಿ ದುಡಿದವರಿಗೆ ಹಣ, ಅಕ್ಕಿ, ಪಟಾಕಿ, ಬಟ್ಟೆ, ಜತೆಗೆ ಮಾಂಸ ಮತ್ತು ಮದ್ಯವನ್ನೂ ಉಡುಗೊರೆ ರೂಪದಲ್ಲಿ ಹಲವು ರೈತರು ನೀಡುತ್ತಾ ಬಂದಿದ್ದಾರೆ.

ಉಡುಪಿ: ದೌರ್ಜನ್ಯಕ್ಕೊಳಗಾದ ಮಹಿಳೆಯರಿಗಾಗಿ 'ಸಖಿ'

ಈ ಬಾರಿ ಜಲಪ್ರಳಯದಿಂದ ಭತ್ತದ ಉತ್ಪಾದನೆಯಲ್ಲಿಯೂ ತೀವ್ರ ಇಳಿಮುಖವಾಗಿದೆ. ಗದ್ದೆಯನ್ನು ಪಾಳುಬಿಟ್ಟಹಲವು ಕೃಷಿಕರು ದೇವಸ್ಥಾನ ಅಥವಾ ತಮ್ಮ ಸ್ನೇಹಿತರ, ಬಂಧುಗಳ ಮನೆಗೆ ತೆರಳಿ ಕದಿರು ತಂದು ಹುತ್ತರಿ ಹಬ್ಬ ಆಚರಿಸುವುದೂ ಕಂಡು ಬಂದಿದೆ.

ಮನೆಗೆ ಕದಿರು ತಂದ ಯಜಮಾನನ ಕಾಲು ತೊಳೆದು, ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು, ಕುಡಿಯಲು ಹಾಲು ನೀಡಿ ಮನೆಯ ಒಳಕ್ಕೆ ಬರಮಾಡಿಕೊಳ್ಳಲಾಗುತ್ತದೆ. ಕೈಲ್‌ ಮುಹೂರ್ತದಂತೆ ಇಲ್ಲಿಯೂ ಕತ್ತಿ, ಕೋವಿ, ಭತ್ತದ ಕೊಯ್ಲಿಗೆ ಉಪಯೋಗಿಸುವ ಕುಡುಗೋಲು ಇತ್ಯಾದಿ ಇಟ್ಟು ಪೂಜೆ ಸಲ್ಲಿಸಲಾಗುತ್ತದೆ.

ಸಂಭ್ರ​ಮಕ್ಕೆ ಕುಂದಿ​ಲ್ಲ:

ಈ ಬಾರಿ ಕೃಷಿಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೂ ಹಬ್ಬದ ಆಚರಣೆಗೆ ಕೊರತೆ ಇರಲಿಲ್ಲ. ಬೆಂಗಳೂರು ಸಮೀಪ ತಮಿಳುನಾಡು ಗಡಿಭಾಗ ಹೊಸೂ​ರಿಗೆ ತೆರಳಿ ಹಲವು ರೈತರು ಕಡಿಮೆ ದರಕ್ಕೆ ಪಟಾಕಿ ಖರೀದಿಸಿ ತಂದಿದ್ದು ಕಂಡು ಬಂತು. ಕೊಡಗಿನಿಂದ ಮೈಸೂರು, ಬೆಂಗಳೂರಿಗೆ ತೆರಳಿ ಹಲವರು ಪಟಾಕಿ ಖರೀದಿಸಿ ತರುವುದು ಇತ್ತೀಚೆಗಿನ ವರ್ಷದಲ್ಲಿ ಅಧಿಕವಾಗಿದೆ. ಜಿಲ್ಲೆಯ ಯೋಧರ ಕುಟುಂಬವೂ ವರ್ಷಕ್ಕೊಮ್ಮೆ ಹುತ್ತರಿ ಆಚರಣೆ ಸಂದರ್ಭ ಸೇರುತ್ತಾರೆ.

ಈ ಬಾರಿ ದ.ಕೊಡಗಿನ ಪೊನ್ನಂಪೇಟೆ, ಕುಂದ, ಹಳ್ಳಿಗಟ್ಟು, ಬಿ.ಶೆಟ್ಟಿಗೇರಿ, ಗೋಣಿಕೊಪ್ಪಲು, ಹಾತೂರು, ಅತ್ತೂರು, ಬಾಳೆಲೆ, ಕುಟ್ಟ, ಕಾನೂರು ವ್ಯಾಪ್ತಿಯಲ್ಲಿಯೂ ಅದ್ಧೂರಿ ಮನೆ ಮನೆ ಹುತ್ತರಿ ಆಚರಣೆಗಳಾ​ಗಿ​ವೆ.

ಹುಬ್ಬಳ್ಳಿ: ಶಾಲೆಯಲ್ಲಿ ಅವಘಡ, 28 ವಿದ್ಯಾರ್ಥಿನಿಯರು ಅಸ್ವಸ್ಥ

ಹುತ್ತರಿ ಆಚರಣೆ ಮುಖ್ಯವಾಗಿ ಮನೆ ಮಂದಿಯನ್ನೆಲ್ಲಾ ಒಂದು ಮಾಡುವ ಸಮಾರಂಭ. ದೂರದಲ್ಲಿರುವ ನನ್ನ ಮಕ್ಕಳು, ಸೊಸೆ, ಅಳಿಯ,ಮೊಮ್ಮಕ್ಕಳೊಂದಿಗೆ ಸಂತಸ ಹಂಚಿಕೊಳ್ಳಲು ಖುಷಿಯಾಗುತ್ತದೆ. ಕಷ್ಟ-ಸುಖ ಜೀವನದ ಅವಿಭಾಜ್ಯ ಅಂಗ. ಹಾಗಂತ ಹುತ್ತರಿ ಸಂಭ್ರಮವನ್ನು ಯಾರೂ ಕಳೆದುಕೊಳ್ಳಬಾರದು. ಹುತ್ತರಿ ಸಂದರ್ಭ ಆರೋಗ್ಯಪೂರ್ಣವಾದ ಆಹಾರವನ್ನೇ ಅಧಿಕವಾಗಿ ಸೇವಿಸಲಾಗುತ್ತದೆ. ಕುಟುಂಬದ ಇತ್ಯಾದಿ ವಿಚಾರಗಳ ಚರ್ಚೆ, ಸಮಸ್ಯೆ ಇತ್ಯರ್ಥಕ್ಕೂ ಸಂಭ್ರಮದ ಹುತ್ತರಿ ಆಚರಣೆ ಅಗತ್ಯ ಎಂದು ಮತ್ರಂಡ ಶಾರದಾ ಹೇಳಿದ್ದಾರೆ.

-ಮಂಜುನಾಥ್‌ ಟಿ.ಎ​ನ್‌.

click me!