ಬೆಂಗಳೂರು (ಜು.13): ಒತ್ತೊತ್ತಾಗಿ ಮರಗಳನ್ನು ಬೆಳೆಸುವ ಮಿಯಾವಾಕಿ ಅರಣ್ಯ ಯೋಜನೆ ಜಾರಿಗೊಳಿಸಲು ಈ ಹಿಂದೆ ಗುರುತಿಸಲಾಗಿದ್ದ ಜಾಗಗಳು ಸೂಕ್ತವಾಗಿಲ್ಲದ ಕಾರಣ ಹೊಸ ಜಾಗವನ್ನು ಬೆಂಗಳೂರು ಮೆಟ್ರೋ ನಿಗಮ ಹುಡುಕಾಡುತ್ತಿದೆ.
ಇಸ್ಕಾನ್ ದೇಗುಲದ ಸಮೀಪದ ಜಾಗ ಮತ್ತು ಪೀಣ್ಯ ಡಿಪೋದ ಬಳಿಯಿದ್ದ ಜಾಗ ತುಂಬಾ ಕಿರಿದಾಗಿರುವ ಕಾರಣ ಮೊದಲ ಮಿಯಾವಾಕಿ ಅರಣ್ಯ ಅಲ್ಲಿ ಬೆಳೆಸುವುದು ಸರಿಯಲ್ಲ ಎಂದು ಮೆಟ್ರೋ ನಿಗಮ ನಿರ್ಧರಿಸಿದೆ. ಏರೋಸ್ಪೆಸ್ ಪಾರ್ಕ್ನಲ್ಲಿ 4 ಎಕರೆ ಜಾಗ ಅಂತಿಮಗೊಳಿಸಲಾಗಿತ್ತು. ಆದರೆ ಇತ್ತೀಚೆಗೆ ಬಂದ ಭಾರಿ ಮಳೆಯ ಸಂದರ್ಭದಲ್ಲಿ ಈ ಜಾಗದಲ್ಲಿ ನೀರು ನಿಂತಿತ್ತು. ನೀರು ನಿಲ್ಲುವ ಜಾಗ ಮಿಯಾವಾಕಿ ಅರಣ್ಯಕ್ಕೆ ಸೂಕ್ತವಲ್ಲ ಎಂದು ತಜ್ಞರು ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಹೊಸ ಜಾಗವನ್ನು ಹುಡುಕುವ ಅನಿವಾರ್ಯತೆ ಏರ್ಪಟ್ಟಿದೆ.
ಏರೋಸ್ಪೆಸ್ ಪಾರ್ಕ್ನಲ್ಲಿ ಗುರುತಿಸಿದ್ದ ಜಾಗದಲ್ಲಿ ಮಿಯಾವಾಕಿ ಅರಣ್ಯ ಬೆಳೆಸಲು ಸಾಧ್ಯವಿಲ್ಲ. ಆದ್ದರಿಂದ ಅಲ್ಲಿ ಸಾಮಾನ್ಯ ಅರಣ್ಯೀಕರಣ ಯೋಜನೆ ಜಾರಿಗೊಳಿಸುತ್ತೇವೆ. ಮಿಯಾವಾಕಿ ಅರಣ್ಯಕ್ಕೆ ಹೊಸ ಜಾಗ ಹುಡುಕುತ್ತಿದ್ದೇವೆ. ಈ ತಿಂಗಳ ಕೊನೆಯೊಳಗೆ ಜಾಗ ಅಂತಿಮಗೊಳಿಸುತ್ತೇವೆ ಎಂದು ಮೆಟ್ರೋ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ದಿವ್ಯಾ ಹೊಸೂರು ತಿಳಿಸಿದ್ದಾರೆ.
ಇಸ್ಕಾನ್ ದೇವಾಲಯ ಮತ್ತು ಪೀಣ್ಯ ಡಿಪೋದ ಬಳಿ ಜಾಗ ಗುರುತಿಸಲಾಗಿದೆ. ಆದರೆ ಅಲ್ಲಿ ಅರ್ಧದಿಂದ ಒಂದು ಎಕರೆ ಜಾಗವಿದೆ. ಹಾಗಾಗಿ ನಾವು ಹೆಚ್ಚು ವಿಶಾಲ ಜಾಗದಲ್ಲಿ ಯೋಜನೆ ಕೈಗೊಳ್ಳುವ ಉದ್ದೇಶ ಹೊಂದಿದ್ದೇವೆ. ಏರೋಸ್ಪೆಸ್ ಪಾರ್ಕ್ನಲ್ಲಿ ನಾಲ್ಕು ಎಕರೆ ಜಾಗದಲ್ಲಿ 30 ಸಾವಿರ ಗಿಡ ನೆಡುವ ಯೋಜನೆ ರೂಪಿಸಿದ್ದೇವು. ಈಗ ಇಷ್ಟುವಿಶಾಲವಾದ ಪರ್ಯಾಯ ಜಾಗ ಹುಡುಕುತ್ತಿದ್ದೇವೆ ಎಂದು ದಿವ್ಯಾ ಹೊಸೂರು ಹೇಳುತ್ತಾರೆ.
ಏರ್‌ಪೋರ್ಚ್‌ನ ಟರ್ಮಿನಲ್-2 ಪಕ್ಕ ಜಮೀನು ನೋಡಿದ್ದೇವೆ. ಕರ್ನಾಟಕ ಕೈಗಾರಿಕ ಪ್ರದೇಶ ಅಭಿವೃದ್ಧಿ ನಿಗಮ (ಕೆಐಎಡಿಬಿ) ಮೆಟ್ರೋ ನಿಗಮಕ್ಕೆ ನೀಡಿರುವ ಜಾಗಗಳನ್ನು ಪರಿಶೀಲಿಸುತ್ತಿದ್ದೇವೆ. ಹಾಗೆಯೇ ಹೊಸ ಮೆಟ್ರೋ ಡಿಪೋಗಳ ಬಳಿ ಜಮೀನು ಇದೆಯೇ, ಹೊಸ ನಿಲ್ದಾಣಗಳ ಬಳಿ ಮಿಯಾವಾಕಿ ಅರಣ್ಯ ಬೆಳೆಯಲು ಸೂಕ್ತ ಜಾಗ ಇದೆಯೇ ಎಂಬುದರ ಸಮೀಕ್ಷೆ ನಡೆಸಿದ್ದೇವೆ. ಆದರೆ ಜಾಗ ಇನ್ನೂ ಅಂತಿಮಗೊಳಿಸಲಾಗಿಲ್ಲ. ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಲ್ಲಿ ಜಾಗ ಅಖೈರುಗೊಳಿಸಿ ಮಿಯಾವಾಕಿ ಅರಣ್ಯ ಬೆಳೆಸುತ್ತೇವೆ ಎಂದು ಅವರು ಹೇಳುತ್ತಾರೆ.
ಜಪಾನ್‌ನ ಜೀವಶಾಸ್ತ್ರಜ್ಞ ಅಕಿರಾ ಮಿಯಾವಾಕಿ ಅವರು ಅತ್ಯಂತ ಕಡಿಮೆ ಜಾಗದಲ್ಲಿ ಸ್ಥಳೀಯ ಪ್ರಬೇಧಕ್ಕೆ ಸೇರಿದ್ದ ನೂರಾರು ಸಸಿಗಳನ್ನು ನೆಟ್ಟು ಅರಣ್ಯವನ್ನಾಗಿ ರೂಪಿಸುವ ಪರಿಕಲ್ಪನೆ ಜಾರಿಗೆ ತಂದಿದ್ದರು. ಈ ಮಾದರಿಯಲ್ಲಿ ಒತ್ತೊತ್ತಾಗಿ ಗಿಡಗಳನ್ನು ಬೆಳೆಸುವ ಕಾರಣದಿಂದ ಒಂದು ಎಕರೆ ಜಾಗದಲ್ಲಿ ಸಾವಿರಾರು ಗಿಡಗಳು ಬೆಳೆಯುತ್ತವೆ. ಉಳಿದ ಅರಣ್ಯೀಕರಣ ಯೋಜನೆಗಳಿಗೆ ಹೋಲಿಸಿದರೆ ಸಸಿಗಳು ವೇಗವಾಗಿ ಬೆಳೆಯುತ್ತವೆ. ಮಾವು, ಹಲಸು ಸೇರಿದಂತೆ ಹೂ ಬಿಡುವ, ಹಣ್ಣು ನೀಡುವ ಗಿಡಗಳನ್ನು ಬೆಳೆಸಿ ತನ್ಮೂಲಕ ಪಕ್ಷಿಗಳು, ಚಿಟ್ಟೆಗಳಿಗೆ ಆಶ್ರಯ ತಾಣವಾಗಿ ಮಾರ್ಪಾಡಿಸುವುದು ಮೆಟ್ರೋದ ಉದ್ದೇಶವಾಗಿದೆ.
ಕೈಕೊಟ್ಟ ಬೇರಿಂಗ್, ಹತ್ತೇ ವರ್ಷದಲ್ಲಿ ನಮ್ಮ ಮೆಟ್ರೋ ನಿಜ ಬಣ್ಣ ಬಯಲು
ವರ್ಷಾಂತ್ಯದೊಳಗೆ ವೈಟ್‌ಫೀಲ್ಡ್‌ಗೆ ಮೆಟ್ರೋ
ಐಟಿ ಬಿಟಿ ಕಂಪನಿಗಳು ಹೆಚ್ಚಿರುವ ವೈಟ್‌ಫೀಲ್ಡ್‌ಗೆ ಈ ವರ್ಷಾಂತ್ಯದೊಳಗೆ ಮೆಟ್ರೋ ಸೇವೆ ವಿಸ್ತರಣೆ ಆಗುವ ಸಾಧ್ಯತೆಯಿದೆ ಎಂದು ಬೆಂಗಳೂರು ಮೆಟ್ರೋ ನಿಗಮದ (ಬಿಎಂಆರ್‌ಸಿಎಲ್) ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಬೈಯ್ಯಪ್ಪನಹಳ್ಳಿ-ವೈಟ್‌ಫೀಲ್ಡ್ ಮಧ್ಯೆಯ 15.25 ಕಿ.ಮೀ. ಎಲಿವೇಟೆಡ್ ಮಾರ್ಗ ಹೊಂದಿದ್ದು, ಹಳಿ ಹಾಕುವ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಅದೇ ರೀತಿ ನಿಲ್ದಾಣಗಳ ನಿರ್ಮಾಣ ಚಟುವಟಿಕೆಗಳು ಬಿರುಸಿನಿಂದ ಸಾಗುತ್ತಿದೆ. ಹೆಚ್ಚಿನ ಕಾರ್ಮಿಕರನ್ನು ಬಳಸಿ ಅಂತಿಮ ಹಂತದ ಕಾಮಗಾರಿ ನಡೆಸಲಾಗುತ್ತಿದೆ ಮತ್ತು ಕಾಮಗಾರಿಗಳಿಗಿದ್ದ ಎಲ್ಲ ತಾಂತ್ರಿಕ, ಆಡಳಿತಾತ್ಮಕ ಅಡಚಣೆಗಳು ನಿವಾರಣೆ ಆಗಿರುವುದರಿಂದ ಡಿಸೆಂಬರ್ ಅಂತ್ಯದೊಳಗೆ ಸಾರ್ವಜನಿಕರಿಗೆ ಮೆಟ್ರೋ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ.
ಬೆನ್ನಿಗಾನಹಳ್ಳಿ, ಕೆ.ಆರ್.ಪುರ, ಮಹಾದೇವಪುರ, ಗರುಡಾಚಾರ್‌ಪಾಳ್ಯ, ಹೂಡಿ ಜಂಕ್ಷನ್, ಸೀತಾರಾಮಪಾಳ್ಯ, ಕುಂದಲಹಳ್ಳಿ, ನಲ್ಲೂರ್ ಹಳ್ಳಿ, ಸಾದರಮಂಗಲ, ಪಟ್ಟಂದೂರು ಅಗ್ರಹಾರ, ಕಾಡುಗೋಡಿ ಮತ್ತು ಚನ್ನಸಂದ್ರ ನಿಲ್ದಾಣಗಳು ಈ ಮಾರ್ಗದಲ್ಲಿ ಬರುತ್ತವೆ.
ಕೆಂಗೇರಿ ಮತ್ತು ಚಲ್ಲಘಟ್ಟಮಧ್ಯೆಯ 1.3 ಕಿಮೀ ಮಾರ್ಗದ ಕಾಮಗಾರಿ ಕೂಡ ಬಹುತೇಕ ಪೂರ್ಣಗೊಂಡಿದೆ. ಈ ಮಾರ್ಗ ಕೂಡ ವರ್ಷಾಂತ್ಯದೊಳಗೆ ಸೇವೆಗೆ ಲಭ್ಯವಾಗಲಿದ್ದು, ನೇರಳೆ ಮಾರ್ಗದ ಒಟ್ಟು ಉದ್ದ (ಚಲ್ಲಘಟ್ಟ-ವೈಟ್‌ಫೀಲ್ಡ್) 42.53 ಕಿ.ಮೀ. ಆಗಲಿದೆ. ಒಟ್ಟು 37 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿವೆ.