ಬೆಂಗ್ಳೂರಿನ 8 ಆಸ್ಪತ್ರೆಗಳಲ್ಲಿ ಕೊರೋನಾ ಲಸಿಕೆ

By Kannadaprabha News  |  First Published Jan 16, 2021, 7:55 AM IST

ಪ್ರತಿ ಆಸ್ಪತ್ರೆಯಲ್ಲೂ ನಿತ್ಯ 100 ಮಂದಿಗೆ ಲಸಿಕೆ ಹಾಕಲು ಸಿದ್ಧತೆ| ಬೆಂಗಳೂರಿನಲ್ಲಿ 1.05 ಲಕ್ಷ ಕೋವಿಶೀಲ್ಡ್‌ ಲಸಿಕೆ ಸಂಗ್ರಹ| ನೋಂದಾಯಿತರ ಮೊಬೈಲ್‌ಗೆ ಒಟಿಪಿ ಬಾರದಿದ್ದರೆ ಗುರುತಿನ ಚೀಟಿ ಪರಿಶೀಲಿಸಿ ಲಸಿಕೆ ನೀಡಲು ವ್ಯವಸ್ಥೆ: ಆಯುಕ್ತ| 


ಬೆಂಗಳೂರು(ಜ.16): ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ ವಿಕ್ಟೋರಿಯಾ ಆಸ್ಪತ್ರೆ, ಕೆ.ಸಿ.ಜನರಲ್‌ ಆಸ್ಪತ್ರೆ, ಸಿ.ವಿ.ರಾಮನ್‌ ನಗರದ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಒಟ್ಟು ಎಂಟು ಆಸ್ಪತ್ರೆಗಳಲ್ಲಿ ಶನಿವಾರ (ಜ.16) ಮೊದಲ ಹಂತದಲ್ಲಿ ಕೋವಿಡ್‌ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ತಿಳಿಸಿದ್ದಾರೆ.

"

Latest Videos

undefined

ಶುಕ್ರವಾರ ಇಂದಿರಾನಗರದ ಸಿ.ವಿ.ರಾಮನ್‌ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ಕೊಟ್ಟು ಲಸಿಕೆ ನೀಡಲು ಮಾಡಿಕೊಂಡಿರುವ ಸಿದ್ಧತೆಗಳನ್ನು ಅವರು ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜ.16ರಂದು ಬೆಳಗ್ಗೆ 10.30ಕ್ಕೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ಪಾಲಿಕೆ ವ್ಯಾಪ್ತಿಯ ವಿಕ್ಟೋರಿಯಾ ಆಸ್ಪತ್ರೆ, ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆ, ಸಿ.ವಿ.ರಾಮನ್‌ನಗರ ಮತ್ತು ಜಯನಗರದ ಸಾರ್ವಜನಿಕ ಆಸ್ಪತ್ರೆ, ಸೇಂಟ್‌ಜಾನ್ಸ್‌ ವೈದ್ಯಕೀಯ ಕಾಲೇಜು, ಮಲ್ಲಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರ, ಈಸ್ಟ್‌ ಪಾಯಿಂಟ್‌ ವೈದ್ಯಕೀಯ ಕಾಲೇಜು, ಯಲಹಂಕದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಲಾ 100 ಮಂದಿಗೆ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

ನಗರದ ದಾಸಪ್ಪ ಆಸ್ಪತ್ರೆಯ ದಾಸ್ತಾನು ಕೇಂದ್ರದಲ್ಲಿ 1.05 ಲಕ್ಷ ಕೋವಿಶೀಲ್ಡ್‌ ಲಸಿಕೆಗಳನ್ನು ಸಂಗ್ರಹಿಸಿಡಲಾಗಿದೆ. ಶನಿವಾರ ಬೆಳಗ್ಗೆ ಲಸಿಕೆ ನೀಡುವ ಎಂಟು ಕೇಂದ್ರಗಳಿಗೂ ವಿತರಿಸಲಾಗುವುದು. ಲಸಿಕೆ ಪಡೆಯುವ ಪ್ರತಿ ಫಲಾನುಭವಿಯೂ ಲಸಿಕೆ ನೀಡುವ ಕೇಂದ್ರಕ್ಕೆ ಬಂದಾಗ ಕೈಗಳಿಗೆ ಸ್ಯಾನಿಟೈಸರ್‌ ಹಾಕಲಾಗುವುದು. ನಂತರ ಥರ್ಮಲ್‌ ಸ್ಕಾ್ಯನ್‌ ಹಾಗೂ ಪಲ್ಸ್‌ ಆಕ್ಸಿಮೀಟರ್‌ ಮೂಲಕ ತಪಾಸಣೆ ನಡೆಸಲಾಗುವುದು. ಬಳಿಕ ಅವರು ಕಾಯುವ ಕೊಠಡಿಗೆ ಬರಲಿದ್ದಾರೆ ಎಂದರು.

ಕೊರೋನಾ ಲಸಿಕೆ ವಿತರಣೆ: ರಾಜ್ಯದಲ್ಲಿ ಎಲ್ಲೆಲ್ಲಿ ಸಿಗುತ್ತೆಂದು ಮಾಹಿತಿ ಕೊಟ್ಟ ಸುಧಾಕರ್

ನೋಂದಾಯಿತ ಸಿಬ್ಬಂದಿಗೆ ಲಸಿಕೆ:

ಲಸಿಕೆ ಪಡೆಯುವವರ ಮಾಹಿತಿಯನ್ನು ಕೋವಿನ್‌ ಪೋರ್ಟಲ್‌ನಲ್ಲಿ ದಾಖಲಿಸಲಾಗಿದ್ದು, ಕಂಪ್ಯೂಟರ್‌ನಲ್ಲಿ ಲಸಿಕೆ ಪಡೆಯುವ ಫಲಾನುಭವಿಯ ವಿವರಗಳನ್ನು ಸಿಬ್ಬಂದಿ ಪರಿಶೀಲನೆ ನಡೆಸಿ ಖಾತರಿಯಾದ ಬಳಿಕ ಮೊಬೈಲ್‌ ಸಂಖ್ಯೆ ನಮೂದಿಸಿ, ಮೊಬೈಲ್‌ಗೆ ಬರುವ ಒಟಿಪಿಯನ್ನು ಪೋರ್ಟಲ್‌ನಲ್ಲಿ ನಮೂದಿಸಿಕೊಂಡು ಲಸಿಕೆ ನೀಡುವ ಕೊಠಡಿಗೆ ಕಳುಹಿಸಲಿದ್ದಾರೆ. ಲಸಿಕೆ ನೀಡಿದ ಬಳಿಕ ಪರಿವೀಕ್ಷಣಾ ಕೊಠಡಿಯಲ್ಲಿ ಅರ್ಧ ಗಂಟೆ ವಿಶ್ರಾಂತಿ ಪಡೆಯಬೇಕು. ಈ ವೇಳೆ ಲಸಿಕೆ ನೀಡಿದವರಿಗೆ ಏನಾದರು ಆರೋಗ್ಯ ಸಮಸ್ಯೆಯಾದರೆ ಪರಿವೀಕ್ಷಣಾ ಕೊಠಡಿಯಲ್ಲೇ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

2ನೇ ಹಂತದಲ್ಲಿ ಲಸಿಕೆ ಪಡೆಯುವ ಫಲಾನುಭವಿಗಳು ಕೋವಿನ್‌ ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ನೋಂದಣಿ ಆದ ಬಳಿಕ ಲಸಿಕೆ ನೀಡುವ ದಿನ ಖಾತರಿಪಡಿಸಲಾಗುವುದು. ಅದರಂತೆ 2ನೇ ಹಂತದಲ್ಲಿ ಪಾಲಿಕೆಯ ಸಿಬ್ಬಂದಿ, ಪೊಲೀಸ್‌ ಇಲಾಖೆ ಸಿಬ್ಬಂದಿ, ಕಂದಾಯ ಇಲಾಖೆ ಸಿಬ್ಬಂದಿ, ಜಲಮಂಡಳಿ ಸಿಬ್ಬಂದಿ ಸೇರಿದಂತೆ ಕೋವಿಡ್‌ ವಾರಿಯರ್‌ಗಳಿಗೆ ಲಸಿಕೆ ನೀಡಲಾಗುತ್ತದೆ ಎಂದರು.

ಲಸಿಕೆ ಪಡೆಯುವ ಫಲಾನುಭವಿಗಳಿಗೆ ಒಟಿಪಿ ಬರಲು ನೆಟ್‌ವರ್ಕ್ ಸಮಸ್ಯೆ ಆಗದಂತೆ ಇಂಟರ್‌ನೆಟ್‌ ಸಂಪರ್ಕದ ವ್ಯವಸ್ಥೆ ಮಾಡಲಾಗಿದೆ. ಒಂದು ವೇಳೆ ನೆಟ್‌ವರ್ಕ್ ಸಮಸ್ಯೆಯಾದರೆ ಫಲಾನುಭವಿಗಳು ಕೋವಿನ್‌ ಪೋರ್ಟಲ್‌ನಲ್ಲಿ ದಾಖಲಿಸಿರುವ ಗುರುತಿನ ಚೀಟಿ ಪರಿಶೀಲಿಸಿ ಆಫ್‌ಲೈನ್‌ ಮೂಲಕ ದಾಖಲು ಮಾಡಿಕೊಂಡು ಲಸಿಕೆ ನೀಡಲಾಗುವುದು. ಬಳಿಕ ಆನ್‌ಲೈನ್‌ನಲ್ಲಿ ದಾಖಲು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಹೇಳಿದರು.

"

760 ಕೇಂದ್ರಗಳಲ್ಲಿ ಲಸಿಕೆ

ಸಿ.ವಿ.ರಾಮನ್‌ ಆಸ್ಪತ್ರೆಯಲ್ಲಿ 300 ಮಂದಿ ಫಲಾನುಭವಿಗಳಿದ್ದು, ಜ.16ರಂದು 100 ಮಂದಿಗೆ ಲಸಿಕೆ ನೀಡಲಾಗುತ್ತದೆ. ಜ.18ರಂದು 100 ಮಂದಿ, ಜ.19ರಂದು 100 ಮಂದಿಗೆ ಲಸಿಕೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಜನವರಿ 18ರಿಂದ ಪಾಲಿಕೆ ವ್ಯಾಪ್ತಿಯ ಎಲ್ಲಾ 760 ಕೇಂದ್ರಗಳಲ್ಲಿಯೂ ಲಸಿಕೆ ನೀಡಲಾಗುತ್ತದೆ. ಅದಕ್ಕೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆಯಾ ವಲಯದ ಜಂಟಿ ಆಯುಕ್ತರು ಲಸಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.

ಸಿ.ವಿ.ರಾಮನ್‌ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಪಾಲಿಕೆ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು, ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಪೂರ್ವ ವಲಯ ಜಂಟಿ ಆಯುಕ್ತೆ ಪಲ್ಲವಿ, ಮುಖ್ಯ ಆರೋಗ್ಯಾಧಿಕಾರಿ ಡಾ. ವಿಜೇಂದ್ರ, ಪೂರ್ವ ವಲಯ ಆಯೋಗ್ಯಾಧಿಕಾರಿ ಡಾ. ಸಿದ್ದಪ್ಪಾಜಿ ಸೇರಿದಂತೆ ಇತರರು ಉಪಸ್ಥಿತರಿದ್ದರು.
 

click me!