ಮುಳಿಹಿತ್ಲು ಎಂಬಲ್ಲಿನ ಹುಲಿವೇಷ ತಂಡದ ಕುಣಿತದ ವೇಳೆ ಹುಲಿವೇಷಧಾರಿಯೊಬ್ಬ ರಿವರ್ಸ್ ಪಲ್ಟಿ ಹೊಡೆಯುತ್ತಿದ್ದರು. ಈ ವೇಳೆ ಆಯ ತಪ್ಪಿ ತಲೆ ನೆಲಕ್ಕೆ ಬಡಿದು ದುರ್ಘಟನೆ ಸಂಭವಿಸಿದೆ. ತಲೆ ನೆಲಕ್ಕೆ ಬಡಿದು ಕತ್ತು ಉಳುಕಿದ ಪರಿಣಾಮ ಹುಲಿವೇಷಧಾರಿಗೆ ಗಾಯವಾಗಿದೆ.
ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು
ಮಂಗಳೂರು(ಅ.24): ಹುಲಿವೇಷ ಕುಣಿತದ ವೇಳೆ ಹುಲಿವೇಷಧಾರಿಯೊಬ್ಬ ಆಯ ತಪ್ಪಿ ಬಿದ್ದು ಗಾಯಗೊಂಡ ಘಟನೆ ಮಂಗಳೂರಿನ ಮಂಗಳಾದೇವಿ ದೇವಸ್ಥಾನದ ವಠಾರದಲ್ಲಿ ನಡೆದಿದೆ.
ದೇವರ ಎದುರು ಹುಲಿವೇಷ ಧರಿಸಿ ಪ್ರದರ್ಶನದ ವೇಳೆ ಘಟನೆ ನಡೆದಿದ್ದು, ಮುಳಿಹಿತ್ಲು ಎಂಬಲ್ಲಿನ ಹುಲಿವೇಷ ತಂಡದ ಕುಣಿತದ ವೇಳೆ ದುರ್ಘಟನೆ ನಡೆದಿದೆ. ಹುಲಿವೇಷಧಾರಿಯೊಬ್ಬರು ಕಸರತ್ತು ಪ್ರದರ್ಶನದ ವೇಳೆ ರಿವರ್ಸ್ ಪಲ್ಟಿ ಹೊಡೆಯುತ್ತಿದ್ದರು. ಈ ವೇಳೆ ಆಯ ತಪ್ಪಿ ತಲೆ ನೆಲಕ್ಕೆ ಬಡಿದು ಅನಾಹುತ ನಡೆದಿದೆ. ತಲೆ ನೆಲಕ್ಕೆ ಬಡಿದು ಕತ್ತು ಉಳುಕಿದ ಪರಿಣಾಮ ಹುಲಿವೇಷಧಾರಿಗೆ ಗಾಯವಾಗಿದ್ದು, ತಕ್ಷಣ ಆಸ್ಪತ್ರೆಗೆ ದಾಖಲಿಸಿ ಹುಲಿವೇಷಧಾರಿ ಯುವಕನಿಗೆ ಚಿಕಿತ್ಸೆ ನೀಡಲಾಗಿದೆ. ಸದ್ಯ ಸಣ್ಣ ಗಾಯಗಳೊಂದಿಗೆ ಅಪಾಯದಿಂದ ಯುವಕ ಪಾರಾಗಿದ್ದಾನೆ. ನಿರಂತರ ಅಭ್ಯಾಸದ ಜೊತೆಗೆ ಹಲವು ವರ್ಷಗಳಿಂದ ಹುಲಿವೇಷ ಕಸರತ್ತು ನಡೆಸಲಾಗುತ್ತದೆ. ಹರಕೆಯ ಕಾರಣಕ್ಕೆ ಮಂಗಳಾದೇವಿ ದೇವರ ಎದುರು ಕಸರತ್ತು ನಡೆಸುವುದು ಹಾಗೂ ನವರಾತ್ರಿ ಹಿನ್ನೆಲೆ ಹುಲಿವೇಷ ಧರಿಸಿ ಕುಣಿತ ಮತ್ತು ಕಸರತ್ತು ಪ್ರದರ್ಶಿಸುವ ಸಂಪ್ರದಾಯ ಇದೆ.
ಬಂಟ್ವಾಳದಲ್ಲಿ ಗಮನ ಸೆಳೆಯುತ್ತಿದೆ ಮೈಸೂರು ಮೂಲದ ದಂಪತಿಯ ಬೊಂಬೆ ದಸರಾ
ದೇವಿಯ ಆಶೀರ್ವಾದ ಪಡೆಯಲು ಹುಲಿ ಕುಣಿತ!
ಹುಲಿವೇಷ ಹಾಕಿ ದೇವಿಯ ಮುಂದೆ ಕುಣಿದರೆ ದೇವಿಗೆ ಸಂತಸವಾಗುತ್ತದೆ ಹಾಗೂ ದೇವಿಯೂ ಪ್ರಸನ್ನಳಾಗಿ ಹರಸುತ್ತಾಳೆ ಎಂಬ ನಂಬಿಕೆ ಕರಾವಳಿಗರದ್ದು. ಆ ಕಾರಣಕ್ಕಾಗಿಯೇ ಪ್ರತಿ ವರ್ಷ ನೂರಾರು ಮಂದಿ ಹರಕೆ ಹೊತ್ತು ಹುಲಿವೇಷ ಹಾಕಿ ದೇವಿಯ ಮುಂದೆ ಕುಣಿಯುತ್ತಾರೆ. ಕೆಲವೊಂದು ಕಥೆಗಳ ಪ್ರಕಾರ, ಮಗುವೊಂದು ಅನಾರೋಗ್ಯಕ್ಕೀಡಾದಾಗ ತಾಯಿಯೊಬ್ಬಳು ಮಂಗಳಾದೇವಿ ದೇವಸ್ಥಾನಕ್ಕೆ ಬಂದು ದೇವಿಗೆ ಪ್ರಾರ್ಥನೆ ಸಲ್ಲಿಸುತ್ತಾಳೆ. ಮಗುವಿನ ಚರ್ಮದ ಕಾಯಿಲೆ ಹಾಗೂ ಮಗುವಿನ ಕಾಲು ಸರಿ ಮಾಡಿದರೆ ಮಗುವಿಗೆ ಹುಲಿ ವೇಷ ಹಾಕಿಸಿ ದೇವಸ್ಥಾನದ ಅಂಗಳದಲ್ಲಿ ಕುಣಿಸುತ್ತೇನೆ ಎಂದು ಹರಕೆ ಹೊತ್ತಳಂತೆ. ಇದಾದ ಕೆಲವೇ ದಿನಗಳಲ್ಲಿ ಮಗು ಸಂಪೂರ್ಣ ಗುಣಮುಖವಾಗಿದ್ದು, ಅ ಬಳಿಕ ಮಗುವಿಗೆ ಹುಲಿವೇಷ ಹಾಕಿಸಿ ಹರಕೆ ಸಂದಾಯ ಮಾಡಿದ್ದಾಳೆ ಎನ್ನುವುದು ಇತಿಹಾಸ.
ಆ ಬಳಿಕ ದೇವಿ ದೇವಸ್ಥಾನಗಳಲ್ಲಿ ಹುಲಿ ಹರಕೆ ಹೇಳುವವರ ಸಂಖ್ಯೆ ಹೆಚ್ಚಾಯಿತು ಎಂಬ ಮಾತು ತುಳುನಾಡಿನಲ್ಲಿ ಪ್ರಚಲಿತದಲ್ಲಿದೆ. ಅದರಂತೆ ಈಗಲೂ ಮಕ್ಕಳಿಗೆ ಅನಾರೋಗ್ಯವಾದರೆ ದೇವಿ ದೇವಸ್ಥಾನಗಳಿಗೆ ಈ ರೀತಿ ಹರಕೆ ಹೊತ್ತು ಸಲ್ಲಿಸುವ ಸಂಪ್ರದಾಯ ಬೆಳೆದು ಕೊಂಡು ಬಂದಿದೆ. ಅದೇ ಕಾರಣಕ್ಕೆ ಹುಲಿವೇಷ ಹಾಕಿದವರು ಮೊದಲು ದೇವಿಯ ದೇವಸ್ಥಾನದ ಮುಂದೆ ಕುಣಿದು ದೇವರ ಆಶೀರ್ವಾದ ಬೇಡುವುದು ಸಂಪ್ರದಾಯ.