ಕೊಡಗಿನಲ್ಲಿ ವ್ಯಕ್ತಿಯೋರ್ವ ಶಾಲಾ ಶಿಕ್ಷಕಿಯೋರ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಕೊಡಗು [ಜೂ,14] : ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಶಿಕ್ಷಕಿಯೋರ್ವರನ್ನು ಗುಂಡಿಕ್ಕಿ ಹತ್ಯೆ ಮಾಡಿ, ವ್ಯಕ್ತಿಯೋರ್ವ ತಾನು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಬಾಳೆಲೆಯ ಲಯನ್ಸ್ ಶಾಲಾ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ (45) ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆಗೈಯ್ಯಲಾಗಿದೆ. ಅಲ್ಲದೇ ಶಿಕ್ಷಕಿ ಹತ್ಯೆ ಮಾಡಿದ ಬಳಿಕ ಬಲ್ಯಮುಂಡೂರು ಗ್ರಾಮದ ಮಾಚಿಮಾಡ ಜಗದೀಶ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಳೆಲೆ ಉಪ ಪೊಲೀಸ್ ಠಾಣೆ ಮುಂಭಾಗದಲ್ಲಿಯೇ ಈ ದುರ್ಘಟನೆ ನಡೆದಿದೆ.
ಆಶಾ ಕಾವೇರಮ್ಮ ಮೇಲೆ ಕಣ್ಣು ಹಾಕಿದ್ದ ಮಾಚಿಮಾಡ ಜಗದೀಶ್ ಎರಡು ವರ್ಷಗಳಿಂದ ಇದೇ ವಿಚಾರಕ್ಕೆ ಇಬ್ಬರ ನಡುವೆ ಜಗಳವಾಗ್ತಿತ್ತು. ಪತಿ ಇಲ್ಲದ ಆಶಾ ಟೀಚರ್ ಮೇಲೆ ಪತ್ನಿ ಇಲ್ಲದ ಜಗದೀಶ್ ಪ್ರೀತಿಸುತ್ತಿದ್ದು, ಇದನ್ನು ತಿರಸ್ಕರಿಸಿದ್ದಕ್ಕೆ ಇಂದು ಮುಂಜಾನೆ ಟೀಚರ್ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ.
ಶಿಕ್ಷಕಿ ಮೇಲೆ ಗುಂಡು ಹಾರಿಸುವಾಗ ವಿದ್ಯಾರ್ಥಿ ಹಾಗೂ ಇನ್ನೋರ್ವ ವ್ಯಕ್ತಿ ರಕ್ಷಣೆಗೆ ಮುಂದಾಗಿದ್ದು, ಇಬ್ಬರಿಗೂ ಗುಂಡು ತಗುಲಿ ಗಾಯಗೊಂಡಿದ್ದಾರೆ. ಗಾಯಗೊಂಡಿದ್ದ ಬಾಳೆಲೆ ವಿಜಯ ಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ದಿನೇಶ್ ಹಾಗೂ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಸ್ಥಳಕ್ಕೆ ಬಾಳೆಲೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.