ಇಲ್ಲಿದೆ ಗಾಂಧೀಜಿ ದೇವಾಲಯ, ಮಹಾತ್ಮನ ಮಾತಿಗೆ ಕೋಣ ಬಲಿ ಬಂದ್

By Web DeskFirst Published Oct 2, 2018, 8:04 PM IST
Highlights

ಮಹಾತ್ಮ ಗಾಂಧೀಜಿ ಉತ್ತರ ಕನ್ನಡ ಜಿಲ್ಲೆಗೂ ಭೇಟಿ ನೀಡಿದ್ದರು. ಅನೇಕ ಹೋರಾಟಗಳಲ್ಲಿ ಭಾಗಿಯಾಗಿದ್ದರು. ಉತ್ತರ ಕನ್ನಡದಲ್ಲಿ ಮಹಾತ್ಮನ ಹೆಜ್ಜೆ ಗುರುತುಗಳು ಹೇಗಿತ್ತು? 

ವಸಂತಕುಮಾರ್, ಕತಗಾಲ
ಶಿರಸಿ/ಕಾರವಾರ[ಅ.2] 
 ಸಿದ್ದಾಪುರದಲ್ಲಿ ಹರಿಜನ ಮಹಿಳೆ ದೇವಿಯನ್ನು ಎಲ್ಲ ಸಮಾಜವರೂ ಸೇರಿ ಹೊತ್ತುಕೊಂಡು ಮೆರವಣಿಗೆಯಲ್ಲಿ ಎದುರಿಗೆ ತಂದಾಗ ದೇವಿಯ ಕತೆಯಲ್ಲಿ ಕೇಳಿದ್ದ ಅವರು ಎದ್ದು ನಿಂತು ದೇವಿಗೆ ಸತ್ಕರಿಸುತ್ತಾರೆ. ಜತೆಗೆ ನಿನ್ನಂತಹ ಪ್ರಾಮಾಣಿಕರು ಇರುವುದರಿಂದಲೆ ದೇಶ ಸುರಕ್ಷಿತವಾಗಿದೆ ಎಂದು ಹೇಳುತ್ತಾರೆ. ಅವರು ಬೇರಾರೂ ಇಲ್ಲ. ಮಹಾತ್ಮಾ ಗಾಂಧೀಜಿ. 

ಹರಿಜನ ಮಹಿಳೆಗೆ ಸನ್ಮಾನ: ಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡು ಕಾರಾಗೃಹಕ್ಕೆ ಹೋಗುವಾಗ ಬಂಗಾರದ ಆಭರಣಗಳನ್ನು ಮಡಕೆಯಲ್ಲಿ ತುಂಬಿ ತೋಟದಲ್ಲಿ ಹುಗಿದು ಹೋದರು. ಮಳೆನೀರು ಹರಿದುಬಂದು ಮಡಕೆ ಕಾಣುತ್ತಿತ್ತು. ಅವರ ಮನೆಗೆಲಸಕ್ಕೆ ಬರುತ್ತಿದ್ದ ದೇವಿ ಮಡಕೆಯನ್ನು ನೋಡಿದಾಗ ಭರ್ತಿಯಾಗಿ ಬಂಗಾರದ ಆಭರಣಗಳಿತ್ತು. ಮನೆಗೆ ಕೊಂಡೊಯ್ದು ಇಟ್ಟರೆ ಮದ್ಯವ್ಯಸನಿ ಪತಿ ಏನಾದರೂ ಮಾಡಿದರೆ ಎಂದು ಪತಿ ಇಲ್ಲದಿರುವಾಗ ಮನೆಯಲ್ಲಿ ಹೊಂಡ ತೆಗೆದು ಹೂತಿಟ್ಟಳು. ಕಾರಾಗೃಹದಿಂದ ಹೆಗಡೆ ಕುಟುಂಬ ಮರಳಿದಾಗ ದೇವಿ ಜೋಪಾನವಾಗಿ ಮಡಕೆಯನ್ನು ಕೊಂಡೊಯ್ದು ಕೊಟ್ಟರು. ಈ ವಿಷಯ ಕೇಳಿದ ಗಾಂಧೀಜಿ ದೇವಿಯನ್ನು ಕರೆತರುವಂತೆ ಸೂಚಿಸಿದಾಗ ಸಂಭ್ರಮದಿಂದ ಊರವರು ಹೊತ್ತು ತಂದರು. ಹರಿಜನ ಮಹಿಳೆಗೆ ಗಾಂಧೀಜಿ ಮಾಡಿದ ಸತ್ಕಾರ ಇಡಿ ಜಿಲ್ಲೆಯಲ್ಲಿ ಬದಲಾವಣೆಯ ಗಾಳಿ ಬೀಸುವಂತಾಯಿತು.

ಹೋರಾಟಕ್ಕೆ ಸ್ಫೂರ್ತಿ: 1934ರಲ್ಲಿ ಗಾಂಧೀಜಿ ಉತ್ತರ ಕನ್ನಡಕ್ಕೆ ಭೇಟಿ ನೀಡಿದ್ದರು. ಕಾರವಾರಕ್ಕೆ ಆಗಮಿಸಿದ್ದ ಅವರು ರಾಮಕೃಷ್ಣ ಆಶ್ರಮ ರಸ್ತೆಯಲ್ಲಿರುವ ಹಳದೀಪುರಕರ ನಿವಾಸದಲ್ಲಿ ಒಂದು ರಾತ್ರಿ ವಾಸ್ತವ್ಯ ಮಾಡಿದ್ದರು. ಕಾರವಾರದ ಪ್ರಮುಖರೊಂದಿಗೆ ಹೋರಾಟದ ರೂಪುರೇಷೆ ಬಗ್ಗೆ ಮಾತುಕತೆ ನಡೆಸಿದ್ದರು. ಜತೆಗೆ ಹಿಂದು ಹೈಸ್ಕೂಲ್ ಮೈದಾನದಲ್ಲಿ ಬಹಿರಂಗ ಸಭೆಯನ್ನು ನಡೆಸಿ ಸ್ವಾತಂತ್ರ್ಯ ಹೋರಾಟಕ್ಕೆ ಹುರಿದುಂಬಿಸಿದ್ದರು. ಗಾಂಧೀಜಿ ಕಾರವಾರಕ್ಕೆ ಆಗಮಿಸಿದ್ದಾಗ ನೀಡಿದ ಸ್ಮರಣಿಕೆ ಇನ್ನೂ ಹಳದೀಪುರಕರ ಅವರ ಮನೆಯಲ್ಲಿ ಜತನದಿಂದ ಇಡಲಾಗಿದೆ. 

ಅಂಕೋಲಾದಲ್ಲಿ ಸಂದೇಶ: ಗಾಂಧೀಜಿ ನೀಡಿದ ಸಂದೇಶದಿಂದ ಅಂಕೋಲೆಯಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರವಾಗಿತ್ತು. ಗಾಂಧೀಜಿ ಕಾರವಾರದಿಂದ ಅಂಕೋಲೆಗೆ ಬಂದು ಮೈದಾನದಲ್ಲಿ ಸಭೆ ನಡೆಸಿದಾಗ ಅಂಕೋಲೆಯ ಹೋರಾಟಗಾರರು ಸಂಭ್ರಮಿಸಿದರು. ನಂತರ ಆ ಮೈದಾನಕ್ಕೆ ಗಾಂಧಿ ಮೈದಾನ ಎಂದೆ ಹೆಸರಾಯಿತು. ವಂದಿಗೆಯ ಹರಿಜನಕೇರಿಯಲ್ಲಿ ಸುಕ್ರು ಮಾಸ್ತರ ಎನ್ನುವವರು ಶಾಲೆ ತೆರೆದಿರುವ ಸುದ್ದಿ ತಿಳಿದು ಗಾಂಧೀಜಿ ಆ ಶಾಲೆಗೆ ಹೋಗಿ ಅಲ್ಲಿ ನ ಸಂದರ್ಶಕರ ಪುಸ್ತಕದಲ್ಲಿ ಕನ್ನಡ ಭಾಷೆಯಲ್ಲಿ ಎಂ.ಕೆ.ಗಾಂಧಿ ಎಂದು ಸಹಿ ಮಾಡಿದ ಅಚ್ಚರಿಯ ಸಂಗತಿಯನ್ನು ಸಾಹಿತಿ ವಿ.ಜೆ.ನಾಯಕ ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಗಾಂಧೀಜಿ ಬಂದ ಮೇಲೆ ಅಂಕೋಲಾದ ಹೋರಾಟ ಇನ್ನಷ್ಟು ಉಗ್ರರೂಪ ತಳೆಯಿತು. ಕರ್ನಾಟಕದ ಬಾರ್ಡೋಲಿ ಎಂದು ಅಂಕೋಲಾ ಹೆಸರಾಯಿತು.

ಮಾರಿ ದೇವಿಗೆ ಕೋಣ ಬಲಿ ನಿಲ್ಲಿಸಿದ ಗಾಂಧಿ: ಅಂಕೋಲಾದಿಂದ ಬನವಾಸಿಗೆ ತೆರಳುವಾಗ ಗಾಂಧೀಜಿ ಶಿರಸಿಯ ಶೇಷಗಿರಿ ಕೇಶವೈನ್ ಅವರ ಬಂಗಲೆಯಲ್ಲಿ ತಂಗಿದ್ದರು. ಹಳೆಬಸ್ ನಿಲ್ದಾಣ ಪಕ್ಕದ ಬಿಡಕಿ ಬೈಲಿನಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿ ಸ್ವಾತಂತ್ರ್ಯ ಸಂಗ್ರಾಮ ಚುರುಕುಗೊಳಿಸಲು ಕರೆ ನೀಡಿದರು. 

ಆಗ ಮಾರಿಕಾಂಬಾ ಜಾತ್ರೆಯಲ್ಲಿ ಕೋಣ ಬಲಿ ಕೊಡುವ ಸಂಪ್ರದಾಯದ ಬಗ್ಗೆ ತಿಳಿದ ಗಾಂಧೀಜಿ ಈ ಬಾರಿಯಿಂದಲೆ ಕೋಣ ಬಲಿಯನ್ನು ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ತಾವು ದೇವಾಲಯ ಪ್ರವೇಶಿಸುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದರು. ಈ ಬಗ್ಗೆ ಶಿರಸಿಯ ಪ್ರಮುಖರಲ್ಲಿ ವಾದ-ವಿವಾದವೂ ನಡೆಯಿತು. ಅಂತಿಮವಾಗಿ ಗಾಂಧೀಜಿ ಮಾತೆ ಗೆದ್ದಿತು. ಕೋಣ ಬಲಿ ಸ್ಥಗಿತಗೊಂಡಿತು.

ಇಲ್ಲಿದೆ ಗಾಂಧೀಜಿ ದೇವಾಲಯ
ಅಂಕೋಲಾ ಸ್ವಾತಂತ್ರ್ಯ ಹೋರಾಟಗಾರರ ಬೀಡು. ಕರಬಂದಿ ಚಳವಳಿಯ ಪ್ರಮುಖ ದಾಸಗೋಡ ರಾಮ ನಾಯಕ ಗಾಂಧೀಜಿ ಅವರಿಂದ ಪ್ರಭಾವಿತರಾಗಿದ್ದರು. ಗಾಂಧೀಜಿ ಅವರು ಬಂದಾಗ ಮಾತನ್ನೂ ಆಡಿದ್ದರು. ತಮ್ಮದೆ ಜಾಗದಲ್ಲಿ 1959 ರಲ್ಲಿ ಗಾಂಧೀಜಿ ದೇವಾಲಯ ನಿರ್ಮಿಸಿದರು. ಮೂರ್ತಿಯನ್ನೂ ತಂದು ಸ್ಥಾಪಿಸಿದರು. ಇಲ್ಲಿ ಪ್ರತಿ ವರ್ಷ ಆ.15  ಹಾಗೂ ಜ.26 ರಂದು ಧ್ವಜಾರೋಹಣ ನೆರವೇರುತ್ತದೆ. ಗಾಂಧಿ ಜಯಂತಿಯಂದು ಗಾಂಧಿ ಪ್ರತಿಮೆಗೆ ಹಾರಹಾಕಿ ಸಿಹಿ ಹಂಚಲಾಗುತ್ತದೆ.

click me!