ಮಡಿಕೇರಿ ದಸರಾ ಜನೋತ್ಸವಕ್ಕೆ ವಿದ್ಯುಕ್ತ ಚಾಲನೆ

By Kannadaprabha News  |  First Published Sep 30, 2019, 9:06 AM IST

ಮಡಿಕೇರಿ ದಸರಾ ಜನೋತ್ಸವಕ್ಕೆ ಸಮಭ್ರಮದ ಚಾಲನೆ ದೊರೆತಿದೆ. ಸೋಮವಾರದಿಂದ ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ಕಂಡುಬರಲಿದೆ. ನಗರದ ಪಂಪಿನಕೆರೆಯ ಬಳಿ ಕರಗಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ 9 ದಿನಗಳ ಕಾಲ ನಡೆಯಲಿರುವ ದಸರಾ ಜನೋತ್ಸವ ಶುಭಾರಂಭಗೊಂಡಿತು.


ಮಡಿಕೇರಿ(ಸೆ.30): ಮಡಿಕೇರಿ ನಗರದ ಪ್ರಮುಖ ನಾಲ್ಕು ಶಕ್ತಿ ದೇವತೆಗಳ ಕರಗಗಳು ನಗರದಲ್ಲಿ ಸಂಚಾರ ಆರಂಭಿಸುವ ಮೂಲಕ ಐತಿಹಾಸಿಕ ಮಡಿಕೇರಿ ದಸರಾ ಜನೋತ್ಸವಕ್ಕೆ ಭಾನುವಾರ ವಿಧ್ಯುಕ್ತ ಚಾಲನೆ ದೊರೆಯಿತು.

ಸೋಮವಾರದಿಂದ ಮಡಿಕೇರಿಯ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಾಂಸ್ಕೃತಿಕ ವೈಭವ ಕಂಡುಬರಲಿದೆ. ನಗರದ ಪಂಪಿನಕೆರೆಯ ಬಳಿ ಕರಗಗಳಿಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸುವ ಮೂಲಕ 9 ದಿನಗಳ ಕಾಲ ನಡೆಯಲಿರುವ ದಸರಾ ಜನೋತ್ಸವ ಶುಭಾರಂಭಗೊಂಡಿತು.

Tap to resize

Latest Videos

ಮಂಗಳೂರು ದಸರಾಕ್ಕೆ ವೈಭವದ ಚಾಲನೆ

ನಗರದ ನಾಲ್ಕು ಶಕ್ತಿದೇವತೆಗಳಲ್ಲಿ ಹಿರಿಯಕ್ಕಳೆನಿಸಿರುವ ಕುಂದುರುಮೊಟ್ಟೆಶ್ರೀ ಚೌಟಿ ಮಾರಿಯಮ್ಮ, ಗೌಳಿಬೀದಿಯ ಶ್ರೀ ಕಂಚಿ ಕಾಮಾಕ್ಷಿ, ಪವರ್‌ಹೌಸ್‌ ಬಳಿಯ ದಂಡಿನ ಮಾರಿಯಮ್ಮ ಹಾಗೂ ಪೆನ್ಶನ್‌ಲೇನ್‌ ಬಳಿಯ ಕೋಟೆ ಮಾರಿಯಮ್ಮ ದೇವಾಲಯಗಳಿಂದ ಹೊರಡುವ 4 ಶಕ್ತಿ ದೇವತೆಗಳ ಕರಗಗಳಿಗೆ ಇಲ್ಲಿನ ಪಂಪಿನ ಕರೆ ಬಳಿ ದಸರಾ ಸಮಿತಿ ವತಿಯಿಂದ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸುವ ಮೂಲಕ ಮಡಿಕೇರಿ ದಸರಾ ಉತ್ಸವಕ್ಕೆ ಚಾಲನೆ ನೀಡುವುದು ಹಿಂದಿನಿಂದಲೂ ಬಂದಿರುವ ಸಂಪ್ರದಾಯ. ಶಕ್ತಿ ದೇವತೆಗಳ ಕರಗಗಳು ಹೊರಡುವ ಅರ್ಧ ಗಂಟೆ ಮುನ್ನ ಮಳೆ ಜಿನುಗಿತು. ಶ್ರೀ ಕಂಚಿಕಾಮಾಕ್ಷಿಯಮ್ಮ ದೇವಾಲಯದ ಮಹಿಳಾ ಸದಸ್ಯರು ಈ ಬಾರಿ ಕಳಶÜಗಳೊಂದಿಗೆ ನಾಲ್ಕು ಶಕ್ತಿ ದೇವತೆಗಳ ಕರಗಗಳನ್ನು ಬರಮಾಡಿಕೊಂಡರು.

ವಿವಿಧ ಬಗೆಯ ದಸರಾ:

ಮೈಸೂರು ದಸರಾದಂತೆ ಮಡಿಕೇರಿಯಲ್ಲೂ ಒಂಬತ್ತು ದಿನಗಳ ಕಾಲ ನಾನಾ ಬಗೆಯ ದಸರಾವನ್ನು ಆಚರಿಸಲಾಗುತ್ತದೆ. ಸೆ.30ರಿಂದ ಅ.8ರ ವರೆಗೆ ಮಡಿಕೇರಿ ಗಾಂಧಿ ಮೈದಾನದಲ್ಲಿ ಸಂಜೆ 6 ಗಂಟೆಯಿಂದ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಇದಕ್ಕಾಗಿ ಈಗಾಗಲೇ ಸುಸಜ್ಜಿತ ವೇದಿಕೆ ಸಜ್ಜಾಗಿದೆ. ಇದಲ್ಲದೆ ಅ.2ರಂದು ಮಕ್ಕಳ ದಸರಾ, ಅ.3ರಂದು ಜನಪದೋತ್ಸವ, ಅ.4ರಂದು ಕವಿಗೋಷ್ಠಿ, ಅ.5ರಂದು ಯುವ ದಸರಾ, ಅ.6ರಂದು ಮಹಿಳಾ ದಸರಾ, ವಿಜಯ ದಶಮಿಯ ಕೊನೆಯ ದಿನ ಸಂಗೀತ ರಸ ಮಂಜರಿ ನಡೆಯುತ್ತದೆ. ದಶಮಂಟಪಗಳ ಶೋಭಾಯಾತ್ರೆ ಕೊನೆಯಾಗುತ್ತಿದ್ದಂತೆಯೇ ಬನ್ನಿ ಮಂಟಪದಲ್ಲಿ ಬನ್ನಿ ಕಡಿಯುವ ಮೂಲಕ ಮಡಿಕೇರಿ ದಸರಾ ಉತ್ಸವಕ್ಕೆ ತೆರೆ ಬೀಳಲಿದೆ.

ಭಾವೈಕ್ಯತೆಯ ಉತ್ಸವ:

ಮಡಿಕೇರಿ ದಸರಾ ಒಂದರ್ಥದಲ್ಲಿ ಭಾವೈಕ್ಯತೆಯ ಉತ್ಸವವಾಗಿದೆ. ಇಲ್ಲಿ ದಶ ದೇವಾಲಯಗಳಿಂದ ಹೊರಡುವ ದಶ ಮಂಟಪಗಳ ನಿರ್ಮಾಣದಲ್ಲಿ ಹಿಂದೂಗಳು ಮಾತ್ರವಲ್ಲದೆ, ಮುಸ್ಲಿಂ, ಕ್ರೈಸ್ತ ಧರ್ಮೀಯರ ಕೊಡುಗೆಯೂ ಇದೆ. ಹಾಗೆಂದು ಇವರು ಸಂಬಳಕ್ಕಾಗಿ ದುಡಿಯುವವರಲ್ಲ. ಬಹುತೇಕ ಮಂಟಪ ಸಮಿತಿಗಳಲ್ಲಿ ಅನ್ಯ ಧರ್ಮೀಯರು ಸ್ವಯಂಸೇವಕರಾಗಿ ದುಡಿಯುತ್ತಾ ಕಲಾಕೃತಿಗಳ ನಿರ್ಮಾಣ, ಕಥೆಗೆ ಒಪ್ಪುವ ರೀತಿಯಲ್ಲಿ ಆ ಕಲಾಕೃತಿಗಳಿಗೆ ಚಲನವಲನ ಅಳವಡಿಸುವುದರಲ್ಲಿ ಇವರ ಪಾತ್ರವೇ ಮಹತ್ವದ್ದು. ಇದರಿಂದಾಗಿ ಮಡಿಕೇರಿ ದಸರಾ ನಿಜವಾದ ಅರ್ಥದಲ್ಲಿ ಜನೋತ್ಸವ.

ಧರೆಯಲ್ಲಿ ದೇವಲೋಕ ಸೃಷ್ಟಿ:

ಮೈಸೂರು ದಸರಾದಲ್ಲಿ ಆನೆ ಅಂಬಾರಿಗಳ ಮೆರವಣಿಗೆಯ ವೈಭವವಾದರೆ, ಮಡಿಕೇರಿ ದಸರಾದಲ್ಲಿ ದಶಮಂಟಪಗ ಶೋಭಾಯಾತ್ರೆಯದ್ದೇ ಆಕರ್ಷಣೆ. ಮೈಸೂರಿನಲ್ಲಿ ಹಗಲು ದಸರಾ ನಡೆದರೆ, ಮಡಿಕೇರಿಯಲ್ಲಿ ರಾತ್ರಿ ಅಲಂಕೃತ ಮಂಟಪಗಳ ಶೋಭಾಯಾತ್ರೆ ಆರಂಭವಾಗುತ್ತದೆ. ಲೋಕಕಲ್ಯಾಣಕ್ಕಾಗಿ ದೇವತೆಗಳನ್ನು ಒಲಿಸಿಕೊಳ್ಳಲು ತಪವನ್ನಾಚರಿಸಿ ಋುಷಿಮುನಿಗಳು, ಅವರ ತಪವನ್ನು ಕೆಡಿಸಲು ಪ್ರಯತ್ನಿಸುವ ಅಸುರರು, ಅಸುರರ ಸಂಹಾರಕ್ಕಾಗಿ ವಿವಿಧ ಅವತಾರವೆತ್ತಿ ಬರುವ ದೇವಾನುದೇವತೆಗಳು ಈ ದಶ ಮಂಟಪಗಳಲ್ಲಿ ವಿರಾಜಮಾನರಾಗುತ್ತಾರೆ. ಮಂಜಿನ ನಗರಿ ಮಡಿಕೇರಿಯಲ್ಲಿ ವಿಜಯ ದಶಮಿಯ ರಾತ್ರಿ ಒಂದರ್ಥದಲ್ಲಿ ದೇವ ಲೋಕವೇ ಧರೆಗಿಳಿದ ಅನುಭವವಾಗುತ್ತದೆ. ಕಣ್ಣು ಕೋರೈಸುವ, ಝಗಮಗಿಸುವ ವಿದ್ಯುತ್‌ ದೀಪದ ಅಲಂಕಾರ, ಘರ್ಜಿಸುವ ಹುಲಿ, ಸಿಂಹಗಳು, ರಕ್ಕಸರ ಅಟ್ಟಹಾಸ, ದೇವಾನುದೇವತೆಗಳ ಹೂಂಕಾರ ಇತ್ಯಾದಿಗಳು ನೆರೆಯುವ ಲಕ್ಷಾಂತರ ಪ್ರೇಕ್ಷಕರ ಮನ ರಂಜಿಸುತ್ತವೆ.

ಗಣ್ಯರು ಭಾಗಿ:

ನಗರದ ನಾಲ್ಕು ಶಕ್ತಿ ದೇವತೆಗಳ ಕರಗ ಉತ್ಸವದ ಪೂಜಾ ಕಾರ್ಯಕ್ರಮದಲ್ಲಿ ಶಾಸಕ ಕೆ. ಜಿ. ಬೋಪಯ್ಯ, ಅಪ್ಪಚ್ಚು ರಂಜನ್‌, ಎಂಎಲ್ಸಿ ಸುನಿಲ್‌ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಅನೀಸ್‌ ಕಣ್ಮಣಿ ಜಾಯ್‌, ಪೊಲೀಸ್‌ ವರಿಷ್ಠಾಧಿಕಾರಿ ಸುಮನ್‌ ಸೇರಿದಂತೆ ದಸರಾ ಸಮಿತಿ ಪ್ರಮುಖರು ಭಾಗವಹಿಸಿದ್ದರು. ನಗರದ ರಸ್ತೆಯ ಉದ್ದಕ್ಕೂ ಮನೆಗಳ ಮುಂದೆ ರಂಗೋಲಿ ಹಾಕಿ ಕರಗಕ್ಕೆ ಸ್ವಾಗತಿಸಲಾಯಿತು.

ಕೊಡಗಲ್ಲಿ ದುಬೈ ವ್ಯಕ್ತಿಗೆ ಹನಿಟ್ರ್ಯಾಪ್

click me!