ಕಾಗೋಡು ಚಳವಳಿ ಎನ್ನುವುದು ರೈತರ ಹಾಗೂ ಭೂ ರಹಿತರ ಹೋರಾಟವಾಗಿತ್ತು. ಸ್ವಾತಂತ್ರ್ಯ ಹೋರಾಟವನ್ನು ಹೊರತುಪಡಿಸಿದರೆ ದೇಶದಲ್ಲಿನ ಪ್ರಮುಖ ಹೋರಾಟದ ಘಟ್ಟವೇ ಕಾಗೋಡು ಚಳವಳಿಯಾಗಿದೆ. ಈ ಚಳವಳಿಯ ನೆನಪು ಮತ್ತು ಇದರ ಅಂತಃಸತ್ವ ಎಲ್ಲ ಕಾಲಕ್ಕೂ ಅಗತ್ಯ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.07): ಭೂಮಿಯ ಕುರಿತ ಕಾನೂನುಗಳು ಬೇಕು. ಆದರೆ ಆ ಕಾನೂನುಗಳು ಜನ ಸಾಮಾನ್ಯರ ಪರವಾಗಿದ್ದು, ಜಮೀನಿನ ಮೇಲಿನ ಹಕ್ಕುಗಳ ಎಲ್ಲರಿಗೂ ಸಮಾನವಾಗಿ ಸಿಗುವಂತಾಗಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಹಾಗೂ ಶಿವಮೊಗ್ಗ ಕರ್ನಾಟಕ ಜಾನಪದ ಪರಿಷತ್ತು ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಎಚ್.ಗಣಪತಿಯಪ್ಪ ಹಾಗೂ ಕಾಗೋಡು ಚಳವಳಿಯ ನೆನಪು- ಭೂಮಿ ಈ ಹೊತ್ತಿನ ತಲ್ಲಣ ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ಸಾಗರದ ತಮ್ಮ ಮನೆಯಿಂದಲೇ ಕೊಳಗಕ್ಕೆ ಭತ್ತ ಸುರಿಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕಾಗೋಡು ಚಳವಳಿ ಎನ್ನುವುದು ರೈತರ ಹಾಗೂ ಭೂ ರಹಿತರ ಹೋರಾಟವಾಗಿತ್ತು. ಸ್ವಾತಂತ್ರ್ಯ ಹೋರಾಟವನ್ನು ಹೊರತುಪಡಿಸಿದರೆ ದೇಶದಲ್ಲಿನ ಪ್ರಮುಖ ಹೋರಾಟದ ಘಟ್ಟವೇ ಕಾಗೋಡು ಚಳವಳಿಯಾಗಿದೆ. ಈ ಚಳವಳಿಯ ನೆನಪು ಮತ್ತು ಇದರ ಅಂತಃಸತ್ವ ಎಲ್ಲ ಕಾಲಕ್ಕೂ ಅಗತ್ಯ ಎಂದು ವಿಶ್ಲೇಷಿಸಿದರು. ಇಂದು ಜನಪರವಾದ ವ್ಯಕ್ತಿ, ವ್ಯಕ್ತಿತ್ವ ಹಾಗೂ ಸರ್ಕಾರಗಳು ಬೇಕಾಗಿದೆ. ಸ್ವಾರ್ಥಕ್ಕಾಗಿ ಬದುಕುವ ಜನರು ಹೆಚ್ಚಾಗುತ್ತಿರುವುದು ವಿಷಾದನಿಯ ಸಂಗತಿ. ಸಮಾನತೆ ಎಂಬುದು ಸರ್ವರಿಗೂ ಸಮಾನವಾಗಿ ಸಿಗಬೇಕಾಗಿದೆ ಎಂದು ಹೇಳಿದರು.
ಮರಳಿ ಮಣ್ಣಿಗೆ..! ಕೆಸರಗದ್ದೆಯಲ್ಲಿ ಯುವಕರ ದಂಡು, ಭತ್ತದ ಗದ್ದೇಲಿ ಫುಲ್ ಬ್ಯುಸಿ
ಮಾಜಿ ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ ಸಮಾಜವಾದಿ ಚಿಂತನೆಯ ನೆಲೆಯಾದ ಸಾಗರ ನೆಲದ ಕಾಗೋಡಿನಿಂದ ಆರಂಭವಾದ ಭೂಮಿಯ ಚಳವಳಿ ದೇಶದ ವಿವಿಧ ಭಾಗಗಳಲ್ಲಿ ಬೇರೆ ಬೇರೆ ಸ್ವರೂಪ ಪಡೆದುಕೊಂಡು ಭೂಮಿಗಾಗಿ ನಿರಂತರವಾಗಿ ಚಳವಳಿ ನಡೆದುಕೊಂಡು ಬರುತ್ತಿದೆ ಎಂದು ನುಡಿದರು.
ಆದರೆ ಇತ್ತೀಚಿನ ದಿನಗಳಲ್ಲಿ ಉಳ್ಳವರಿಗೆ ಸಿಗುವಂತಹ ಕಾನೂನುಗಳು ಬರುತ್ತಿರುವುದು ಬೇಸರದ ಸಂಗತಿ. ಮುಂದೊಂದು ದಿನ ಅಂಗೈ ಅಗಲ ಭೂಮಿ ಸಿಗದಂತಹ ಪರಿಸ್ಥಿತಿ ಬರುವುದರಲ್ಲಿ ಅನುಮಾನವಿಲ್ಲ. ನಗರೀಕರಣ ಹಾಗೂ ಕೈಗಾರಿಕೀಕರಣದ ಹೆಸರಿನಲ್ಲಿ ಕೃಷಿ ಭೂಮಿ ನಾಪತ್ತೆಯಾಗುತ್ತಿದೆ. ಇದರ ಜೊತೆಗೆ ಕೃಷಿ ಭೂಮಿ ಉಳ್ಳವರ ಪಾಲಾಗುವಂತಹ ಕಾನೂನು ರೂಪಿಸುತ್ತಿರುವುದು ದುರಂತದ ಸಂಗತಿ ಎಂದು ಅಭಿಪ್ರಾಯಿಸಿದರು.
ವಿಧಾನ ಪರಿಷತ್ತು ಮಾಜಿ ಸದಸ್ಯ ಆರ್.ಕೆ.ಸಿದ್ದರಾಮಣ್ಣ ಮಾತನಾಡಿ, ಕಾಗೋಡು ಚಳವಳಿ ಭೂಮಿಯ ಕುರಿತಾಗಿ ನಡೆದ ಮುಖ್ಯವಾದ ಚಳವಳಿಯಾಗಿದ್ದು, ಅದನ್ನು ನೆನೆಪು ಮಾಡಿಕೊಳ್ಳುವುದು ಅತಿ ಮುಖ್ಯವಾಗಿದೆ ಎಂದರು. ರೈತ ಮುಖಂಡ ಕೆ.ಟಿ.ಗಂಗಾಧರ, ಹೋರಾಟಗಾರ ರಾಜಪ್ಪ ಮಾಸ್ತರ್, ಚಿಂತಕ ರಾಜೇಂದ್ರ, ಲೇಖಕಿ ಅಂಬಿಕ ಬಿ.ಟಿ., ಸಾಗರದ ವಿ.ಟಿ.ಸ್ವಾಮಿ ಮೊದಲಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಗಾಯಕ ಸುಜಯ್ ಪ್ರಾರ್ಥಿಸಿದರು, ಉಮೇಶ್ ಹಿರೆನೆಲ್ಲೂರು ಸ್ವಾಗತ, ಪರಮೇಶ್ವರ ಕರೂರು ವಂದಿಸಿದರು. ಜೆಎನ್‌ಎನ್‌ಇ ಇಂಜಿನಿಯರಿಂಗ್ ಕಾಲೇಜಿನ ನೃಪತುಂಗ ತಾಂತ್ರಿಕ ಸಹಕಾರ ನೀಡಿದರು.