ಉತ್ತರ ಭಾರತದ ರೈತರನ್ನು ಹೈರಾಣಾಗಿಸಿದ್ದ ಮಿಡತೆಗಳು ಇದೀಗ ಕಾಫಿನಾಡು ಚಿಕ್ಕಮಗಳೂರಿಗೆ ಲಗ್ಗೆಯಿಟ್ಟವಾ ಎನ್ನುವ ಅನುಮಾನ ಶುರುವಾಗಿದೆ. ಇದರ ಜತೆಗೆ ಅಡಕೆ ಬೆಳೆಗಾರರ ಮೊಗದಲ್ಲಿ ಕಾರ್ಮೋಡ ಕವಿದಿದೆ. ಮಿಡತೆಗೂ ಅಡಕೆ ಬೆಳೆಗಾರರಿಗೂ ಏನು ಸಂಬಂಧ ಅಂತೀರಾ? ಈ ಸ್ಟೋರಿ ನೋಡಿ ನಿಮಗೇ ಅರ್ಥವಾಗುತ್ತೆ...
ಚಿಕ್ಕಮಗಳೂರು: ಉತ್ತರ ಭಾರತದ ರಾಜಸ್ಥಾನದ ರೈತರ ನಿದ್ದೆಗೆಡಿಸಿರುವ ಮಿಡತೆಗಳು ಕಾಫಿನಾಡಿಗೂ ಲಗ್ಗೆ ಇಟ್ಟವಾ?!
ಈ ರೀತಿಯ ಆತಂಕಕ್ಕೆ ಕಾರಣ, ಜಿಲ್ಲೆಯ ಶೃಂಗೇರಿ ತಾಲೂಕಿನ ತೆಕ್ಕೂರು ಸಮೀಪದಲ್ಲಿರುವ ಕೊಚ್ಚವಳ್ಳಿ ಗ್ರಾಮದ ಅಶೋಕ್ ಎಂಬವರಿಗೆ ಸೇರಿರುವ ಸುಮಾರು ಒಂದೂವರೆ ಎಕರೆ ಅಡಕೆ ತೋಟದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಮಿಡತೆಗಳು ಕಳೆದೊಂದು ದಿನದ ಹಿಂದೆ ಬಂದು ಠಿಕಾಣಿ ಹೂಡಿವೆ. ಇದು, ಬರೀ ಕಾಫಿಯ ನಾಡು ಮಾತ್ರವಲ್ಲ, ಅಡಕೆ ಪ್ರಮುಖ ಬೆಳೆಯಾಗಿರುವ ನೆರೆಹೊರೆ ಜಿಲ್ಲೆಯವರು ಆತಂಕಪಡುವ ವಿಷಯವೂ ಆಗಿದೆ.
ಕಳೆದ 5 ದಶಕಗಳಿಂದ ಹಳದಿ ಎಲೆರೋಗದಿಂದ ಅಡಕೆ ತೋಟಗಳು ತತ್ತರಿಸಿವೆ. ನಿರ್ವಹಣೆ ಕಷ್ಟವಾಗಿದ್ದರಿಂದ ಹಲವು ಮಂದಿ ತೋಟ ಹಾಗೂ ಅದರೊಳಗೆ ಮಾಡಿಕೊಂಡಿದ್ದ ಮನೆಗಳನ್ನು ಬಿಟ್ಟು ವಲಸೆ ಹೋಗಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯನ್ನು ಎದುರಿಸಿ ಕೆಲವು ಮಂದಿ ತೋಟಗಳನ್ನು ನಿರ್ವಹಣೆ ಮಾಡಿಕೊಂಡು ಇಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಸಂದರ್ಭ ಮಿಡತೆಗಳು ಅಡಕೆ ತೋಟಗಳ ಮೇಲೆ ಲಗ್ಗೆ ಇಟ್ಟಿರುವುದು ಆತಂಕ ಇಮ್ಮಡಿಗೊಳಿಸಿದೆ.
ಫಸ್ಟ್ ಟೈಂ:
ಅಡಕೆ ಮರದಲ್ಲಿ ಮಿಡತೆಗಳು ಕಂಡು ಬಂದಿರುವುದು ಇದೇ ಪ್ರಥಮ. ರಾಜ್ಯದ ಬೇರೆ ಯಾವುದೇ ಭಾಗದಲ್ಲೂ ಅಡಕೆ ತೋಟಗಳಲ್ಲಿ ಈ ರೀತಿಯ ಮಿಡತೆಗಳು ಕಂಡುಬಂದಿರಲಿಲ್ಲ. ಏಕಕಾಲದಲ್ಲಿ ಸುಮಾರು ಒಂದೂವರೆ ಎಕರೆ ಸುತ್ತಳತೆಯಲ್ಲಿ ಅಡಕೆ ಗರಿಗಳ ಮೇಲೆ ಕುಳಿತುಕೊಂಡಿವೆ. ಇದೇ ತೋಟಗಳಲ್ಲಿ ಇತರೆ ಬೆಳೆ ಇದ್ದರೂ ಅವುಗಳನ್ನು ಮುಟ್ಟುವುದಿಲ್ಲ. ಇದರಿಂದ ಆಸುಪಾಸಿನ ಅಡಕೆ ತೋಟಗಳ ಮಾಲೀಕರಲ್ಲೂ ಆತಂಕ ಎದುರಾಗಿದೆ.
ಮಿಡತೆಗಳ ಈ ಮಹಾ ಪಯಣ ಮಾರಕ; ತಡೆಗಟ್ಟಬಹುದೇ?
ಆತಂಕಕ್ಕೆ ಕಾರಣ:
ಈ ಮಿಡತೆಯ ಜೀವಿತ ಅವಧಿ 4 ರಿಂದ 5 ವಾರಗಳು. ಒಂದು ಪ್ರದೇಶದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಬಂದು ಕುಳಿತಿರುವ ಮಿಡತೆಗಳು ಆಸುಪಾಸಿನ ತೋಟಗಳ ಮೇಲೆ ದಾಳಿ ಮಾಡುವ ಸಾಧ್ಯತೆ ಇದೆ. ಮರದಲ್ಲಿನ ಗರಿಗಳನ್ನು ಮಿಡತೆ ತಿಂದು ಹಾಕಿದರೆ, ಅಡಕೆ ಬೆಳವಣಿಗೆಗೆ ಬೇಕಾದ ಸತ್ವ ಕಡಿಮೆಯಾಗಿ ಅವುಗಳು ಬಹಳ ಬೇಗ ಉದುರುತ್ತವೆ. ಇದರಿಂದ ಇಳುವರಿ ಕಡಿಮೆಯಾಗಲಿದೆ.
ಉತ್ತರ ಭಾರತದಲ್ಲಿ ಕಂಡುಬಂದಿರುವ ಮರುಭೂಮಿ ಲೋಕಸ್ಟ್ ಮಿಡತೆಗಳು ಅಲ್ಲ. ಇದು, ಕಾಫಿ ಲೋಕಸ್ಟ್. ಅಂದರೆ, ಸಾಧಾರಣ ಮಿಡತೆ ಗುಂಪಿಗೆ ಸೇರಿದ್ದಾಗಿದೆ. ನಿರ್ದಿಷ್ಟಬೆಳೆಗಳ ಮೇಲೆ ದಾಳಿ ಮಾಡುತ್ತದೆ. ಇವುಗಳನ್ನು ನಿಯಂತ್ರಣ ಮಾಡಬಹುದು. ಮಿಡತೆ ಕಂಡುಬಂದಿರುವ ತೋಟದ ಮಾಲೀಕರು ಮಾತ್ರವಲ್ಲ, ಆಸುಪಾಸಿನ ತೋಟದವರು ಸಹ ಸಾಮೂಹಿಕವಾಗಿ ಕ್ವಿನಾಲ್‌ಪಾಸ್ 25 ಇ.ಸಿ., 2 ಮಿಲಿ ಲೀಟರ್ ನೀರಿನೊಂದಿಗೆ ಸಿಂಪಡಿಸುವುದರಿಂದ ಮಿಡತೆಗಳ ಬಾಧೆ ಹತೋಟಿ ತರಬಹುದು. - ಸಂಜಯ್, ಉಪ ನಿರ್ದೇಶಕ, ತೋಟಗಾರಿಕೆ ಇಲಾಖೆ