ಬಾರದ ಮಳೆ, ಬೆಳೆ ಉಳಿಸಿಕೊಳ್ಳಲು ಶಿಗ್ಗಾವಿ ರೈತರು ಟ್ಯಾಂಕರ್‌ ಮೊರೆ!

By Kannadaprabha NewsFirst Published Jul 1, 2023, 6:54 AM IST
Highlights

ಮುಂಗಾರು ಮಳೆ ವಿಳಂಬದಿಂದ ಅಲ್ಪಸ್ವಲ್ಪ ಮಳೆಗೆ ಬಿತ್ತಿದ ಬೆಳೆ ಒಣಗಲು ಆರಂಭಿಸಿವೆ. ಅವುಗಳನ್ನು ಉಳಿಸಿಕೊಳ್ಳಲು ಅನ್ನದಾತರು ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದು ಹಗಲು-ರಾತ್ರಿ ಶ್ರಮಪಡುತ್ತಿದ್ದಾರೆ.

ಬಸವರಾಜ ಹಿರೇಮಠ

 ಶಿಗ್ಗಾಂವಿ (ಜು.1) :  ಮುಂಗಾರು ಮಳೆ ವಿಳಂಬದಿಂದ ಅಲ್ಪಸ್ವಲ್ಪ ಮಳೆಗೆ ಬಿತ್ತಿದ ಬೆಳೆ ಒಣಗಲು ಆರಂಭಿಸಿವೆ. ಅವುಗಳನ್ನು ಉಳಿಸಿಕೊಳ್ಳಲು ಅನ್ನದಾತರು ಟ್ಯಾಂಕರ್‌ ನೀರಿನ ಮೊರೆ ಹೋಗಿದ್ದು ಹಗಲು-ರಾತ್ರಿ ಶ್ರಮಪಡುತ್ತಿದ್ದಾರೆ.

ತಾಲೂಕಿನ ಚಿಕ್ಕಮಲ್ಲೂರು ಗ್ರಾಮದ ರೈತರು ಒಣಗುತ್ತಿರುವ ಶೇಂಗಾ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಹೊಲದಲ್ಲಿ ತಾತ್ಕಾಲಿಕವಾಗಿ ತಾಡಪತ್ರಿಯಿಂದ ಹೊಂಡ ನಿರ್ಮಿಸಿಕೊಂಡು ಟ್ಯಾಂಕರ್‌ ಮೂಲಕ ನೀರು ಸಂಗ್ರಹಿಸುತ್ತಿದ್ದಾರೆ. ಆ ನೀರನ್ನು ಆಯಿಲ್‌ ಎಂಜಿನ್‌ ಮಷಿನ್‌ ಸಹಾಯದಿಂದ ಸ್ಟ್ರಿಂಕ್ಲರ್‌ ಮೂಲಕ ಬೆಳೆಗಳಿಗೆ ನೀರು ಉಣಿಸುತ್ತಿದ್ದಾರೆ.

ಈ ಊರಲ್ಲಿ ಕುಡಿಯಲು ಜನಕ್ಕೂ ನೀರಿಲ್ಲ; ಜಾನುವಾರುಗಳಿಗೂ ಇಲ್ಲ!

ಕಮರುತ್ತಿವೆ ಬೆಳೆ:

ಜೂನ್‌ ಮೊದಲ ವಾರದೇ ರಾಜ್ಯಕ್ಕೆ ಮುಂಗಾರು ಪ್ರವೇಶಿಸಿದ್ದರೂ ತಾಲೂಕಿನಲ್ಲಿ ಈ ವರೆಗೂ ಹದಭರಿತ ಮಳೆಯಾಗಿಲ್ಲ. ಅಲ್ಪ ಸುರಿದ ಮಳೆಗೆ ಬಿತ್ತನೆ ಮಾಡಿದ್ದ ರೈತರು ತೇವಾಂಶ ಕೊರತೆಯಿಂದ ಮಣ್ಣಿನಲ್ಲಿಯೇ ಬತ್ತ, ರಾಗಿ, ಜೋಳ, ಗೋವಿನಜೋಳ ಕಮರುತ್ತಿವೆ. ಸಾಲ ಮಾಡಿ ಬಿತ್ತನೆ ಬೀಜ, ಗೊಬ್ಬರ ಖರೀದಿಸಿ ಭೂ ತಾಯಿಯ ಮಡಿಲಿಗೆ ಹಾಕಿದ್ದ ರೈತರು ಇದೀಗ ಅವುಗಳನ್ನು ಉಳಿಸಿಕೊಳ್ಳಲು ಮತ್ತೆ ಸಾಲ ಮಾಡುತ್ತಿದ್ದಾರೆ. ನೂರಾರು ರುಪಾಯಿ ವ್ಯಯಿಸಿ ಖಾಸಗಿಯವರಿಂದ ಟ್ಯಾಂಕರ್‌ ನೀರು ಪಡೆದುಕೊಳ್ಳುತ್ತಿದ್ದಾರೆ.

ಒಂದು ಟ್ಯಾಂಕರ್‌ಗೆ . 400:

ಬಿತ್ತನೆ ಮಾಡಿದ ಖರ್ಚಿಕ್ಕಿಂತ ರೈತ ಬೆಳೆ ಉಳಿಸಿಕೊಳ್ಳಲು ಹೆಚ್ಚು ವ್ಯಯಿಸುತ್ತಿದ್ದಾನೆ. ಖಾಸಗಿ ಬೋರ್‌ವೆಲ್‌ಗಳು ಒಂದು ಟ್ಯಾಂಕರ್‌ಗೆ . 400 ನಿಗದಿ ಮಾಡಿದ್ದು ಒಂದು ಎಕರೆಗೆ ಕನಿಷ್ಠ 10 ಟ್ಯಾಂಕರ್‌ ನೀರು ಬೇಕಾಗಿದೆ. ಅಂದರೆ . 4000 ಖರ್ಚು ಮಾಡಬೇಕು. ಇದು ಒಂದು ವಾರಕ್ಕೆ ಮಾತ್ರ. ಇದರೊಂದಿಗೆ ಆಯಿಲ್‌ ಎಂಜಿನ್‌ ಮಶಿನ್‌ ಡೀಸೆಲ್‌ ಸೇರಿದಂತೆ ಒಂದು ಎಕರೆಗೆ ಕನಿಷ್ಠ ಐದಾರು ಸಾವಿರವನ್ನು ರೈತರು ವ್ಯಯಿಸಬೇಕು. ಟ್ಯಾಂಕರ್‌ ಇದ್ದವರು ಗ್ರಾಮದ ಕೆರೆಯಿಂದ ನೀರು ತಂದು ಬೆಳೆ ಉಳಿಸಿಕೊಳ್ಳುತ್ತಿದ್ದಾರೆ.

ಬಿತ್ತನೆ ಹಾಗೂ ಬೆಳೆ ಉಳಿಸಿಕೊಳ್ಳಲು ಮಾಡುತ್ತಿರುವ ವೆಚ್ಚ ಬೆಳೆ ಬೆಳೆದ ಬಳಿಕ ಬರುತ್ತದೆಯೇ ಎಂಬ ಆತಂಕವೂ ರೈತರನ್ನು ಕಾಡುತ್ತಿವೆ. ಹೀಗಾಗಿ ಕೆಲವರು ಬೆಳೆ ಉಳಿಸಿಕೊಳ್ಳುವ ಪ್ರಯತ್ನವನ್ನು ಮಾಡದೆ ಮಳೆಗಾಗಿ ಮುಗಿಲು ನೋಡುತ್ತಿದ್ದಾರೆ. ಈ ವಾರದಲ್ಲಿ ಮಳೆ ಆದರೆ ಬಿತ್ತಿದ ಬೆಳೆಗಳು ಉಳಿಯುತ್ತವೆ. ಇಲ್ಲವಾದರೆ ಮಳೆಯಾದ ಬಳಿಕ ಮತ್ತೊಮ್ಮೆ ಹರಗಿ ಬಿತ್ತನೆ ಮಾಡುವುದು ಅನಿವಾರ್ಯ.

ಇನ್ನೂ ಬಾರದ ಮುಂಗಾರು ಮಳೆ; ದೇವರ ಮೊರೆ ಹೋದ ಗ್ರಾಮಸ್ಥರು!

ಕೆರೆಗಳಿಂದ ಟ್ಯಾಂಕರ್‌ ಮೂಲಕ ನೀರು ತಂದು ರೈತರು ಬೆಳೆ ಉಳಿಸಿಕೊಳ್ಳುತ್ತಿದ್ದಾರೆ. ಇನ್ನೂ ನಾಲ್ಕೈದು ದಿನ ತಾಲೂಕಿನಲ್ಲಿ ಮಳೆ ಆಗುವ ಲಕ್ಷಣಗಳು ಇಲ್ಲ. ರೈತರು ಸಂಪೂರ್ಣವಾಗಿ ಭೂಮಿ ಹದವಾಗುವ ವರೆಗೂ ಬಿತ್ತನೆ ಮಾಡಬಾರದು.

ಸುರೇಶ ಬಾಬುರಾವ್‌ ದೀಕ್ಷಿತ್‌ ಕೃಷಿ ಸಹಾಯಕ ನಿರ್ದೇಶಕ ಶಿಗ್ಗಾಂವಿ

ಮಳೆ ಕೊರತೆಯಿಂದ ಬಿತ್ತಿದ ಬೆಳೆ ಕಮರುತ್ತಿವೆ. ಆದರಿಂದ ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲದಿದ್ದರೆ ತಾಲೂಕು ತಹಸೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು.

ಶಿ.ಶಿ. ತೆವರಿಮಠ ಅಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಶಿಗ್ಗಾಂವಿ ಘಟಕ

 

click me!