ಕಳೆದ ಆರು ವರ್ಷಗಳಲ್ಲಿ 80.25 ಅಡಿಗೆ ಕುಸಿತ ಕಂಡ ಕೆಆರ್‌ಎಸ್ ಅಣೆಕಟ್ಟೆಯ ನೀರಿನ ಮಟ್ಟ. 2016ರಲ್ಲಿ 81.88 ಅಡಿ ಜಲಾಶಯದಲ್ಲಿ ನೀರು ಸಂಗ್ರಹ
ಮಂಡ್ಯ (ಮೇ.19): ಕಳೆದ ಆರು ವರ್ಷಗಳಿಗೆ ಹೋಲಿಸಿದರೆ ಕೃಷ್ಣರಾಜಸಾಗರ ಜಲಾಶಯದಲ್ಲಿ ನೀರಿನ ಸಂಗ್ರಹ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಹಾಲಿ ಜಲಾಶಯದಲ್ಲಿ 80.25 ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ. 2016ರಲ್ಲಿ ಇದೇ ದಿನ ಜಲಾಶಯದಲ್ಲಿ 81.88 ಅಡಿ ನೀರು ಸಂಗ್ರಹವಾಗಿತ್ತು.
ಹಿಂದಿನ ವರ್ಷ ನಿರೀಕ್ಷೆಯಂತೆ ಮುಂಗಾರು ಮಳೆಯಾಗದ ಕಾರಣ ಜಲಾಶಯ ಭರ್ತಿಯಾಗಲಿಲ್ಲ. ಮಳೆ ಕೊರತೆಯಿಂದ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 114 ಅಡಿ ತಲುಪುವುದಕ್ಕಷ್ಟೇ ಶಕ್ತವಾಯಿತು. ಸುಪ್ರೀಂಕೋರ್ಟ್, ಪ್ರಾಧಿಕಾರಗಳ ಆದೇಶಗಳಂತೆ ತಮಿಳುನಾಡಿಗೆ ನಿರಂತರವಾಗಿ ನೀರು ಹರಿಸಿದ್ದರಿಂದ ಜಲಾಶಯದಲ್ಲಿ ನೀರನ್ನು ಉಳಿಸಿಕೊಳ್ಳಲು ಕಷ್ಟಪಡುವಂತಾಯಿತು.
ಪ್ರಸ್ತುತ ಕೆಆರ್‌ಎಸ್ ಜಲಾಶಯದಲ್ಲಿ 80.25 ಅಡಿಯಷ್ಟು ನೀರು ಸಂಗ್ರಹವಾಗಿದ್ದು, ಅಣೆಕಟ್ಟೆಗೆ 1560 ಕ್ಯುಸೆಕ್‌ನಷ್ಟು ಒಳಹರಿವಿದ್ದರೆ 155 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 18 ಮೇ 2023ರಲ್ಲಿ 86.14 ಅಡಿ ನೀರಿದ್ದರೆ, 684 ಕ್ಯುಸೆಕ್ ಒಳಹರಿವು, 181 ಕ್ಯುಸೆಕ್ ಹೊರಹರಿವಿತ್ತು. 18 ಮೇ 2022ರಲ್ಲಿ ಅಣೆಕಟ್ಟೆಯಲ್ಲಿ 100.16 ಅಡಿ ನೀರು ಸಂಗ್ರಹವಾಗಿ ರೈತರು ಮತ್ತು ಸಾರ್ವಜನಿಕರಲ್ಲಿ ನಿರಾಳಭಾವ ಮೂಡಿಸಿತ್ತು. ಅಂದು ಜಲಾಶಯಕ್ಕೆ 2825 ಕ್ಯುಸೆಕ್ ಒಳಹರಿವು, 1437 ಕ್ಯುಸೆಕ್ ಹೊರಹರಿವಿತ್ತು. 18 ಮೇ 2021ರಲ್ಲಿ ಅಣೆಕಟ್ಟೆಯಲ್ಲಿ 87 ಅಡಿಯಷ್ಟು ನೀರಿದ್ದರೆ 675 ಕ್ಯುಸೆಕ್ ಒಳಹರಿವು, 3743 ಕ್ಯುಸೆಕ್ ಹೊರಹರಿವು ದಾಖಲಾಗಿತ್ತು. 18 ಮೇ 2020ರಲ್ಲಿ 65.18 ಅಡಿ ನೀರಿದ್ದು, 136 ಕ್ಯುಸೆಕ್ ಒಳಹರಿವು, 3856 ಕ್ಯುಸೆಕ್ ಹೊರಹರಿವಿತ್ತು. 18 ಮೇ 2016ರಲ್ಲಿ 81.88 ಅಡಿ ನೀರು ಸಂಗ್ರಹವಾಗಿ 142 ಕ್ಯುಸೆಕ್ ಒಳಹರಿವು, 351 ಕ್ಯುಸೆಕ್ ಹೊರಹರಿವು ದಾಖಲಾಗಿತ್ತು.
ಆರು ವರ್ಷಗಳಿಂದ ಬೇಸಿಗೆಯಲ್ಲೂ ಜಲಾಶಯದಲ್ಲಿ ಉತ್ತಮ ನೀರಿನಮಟ್ಟ ಕಾಯ್ದುಕೊಂಡಿದ್ದ ಕೆಆರ್‌ಎಸ್ ಈ ವರ್ಷ ಕಳಾಹೀನ ಸ್ಥಿತಿ ತಲುಪಿದೆ. ಜಲಾಶಯದಲ್ಲಿ 10.867 ಟಿಎಂಸಿ ಅಡಿಯಷ್ಟು ನೀರು ಮಾತ್ರ ಸಂಗ್ರಹವಾಗಿದೆ. ಕುಡಿಯುವುದಕ್ಕೆ ಸಾಕಾಗುವಷ್ಟು ನೀರು ಮಾತ್ರ ಜಲಾಶಯದಲ್ಲಿ ಸಂಗ್ರಹವಾಗಿದೆ.
2016 ರಿಂದ 2022ರವರೆಗೆ ಪೂರ್ವ ಮುಂಗಾರು ಉತ್ತಮವಾಗಿತ್ತು. ಆ ಸಮಯದಲ್ಲಿ ಜಲಾಶಯದ ನೀರಿನ ಮಟ್ಟವೂ ಸಮಾಧಾನಕರವಾಗಿತ್ತು. ಈ ಬಾರಿ ಅಣೆಕಟ್ಟೆಯಲ್ಲಿ 80.25 ಅಡಿಯಷ್ಟು ಮಾತ್ರ ನೀರಿದೆ. ಈ ಬಾರಿಯ ಬೇಸಿಗೆಯಲ್ಲಿ ಕಂಡೂ ಕೇಳರಿಯದಷ್ಟು ರಣಬಿಸಿಲು ಹಾಗೂ ಉಷ್ಣಹವೆಯಿಂದ ಭೂಮಿಯ ತಾಪವೂ ಹೆಚ್ಚಿದೆ. ಇದರಿಂದ ಕೇರಳ, ಕೊಡಗು ಭಾಗದಲ್ಲಿ ಹೆಚ್ಚು ಮಳೆಯಾದರೂ ಭೂಮಿ ಹೆಚ್ಚಾಗಿ ನೀರನ್ನು ಹೀರಿಕೊಳ್ಳುತ್ತಿರುವುದರಿಂದ ಒಳಹರಿವಿನಲ್ಲಿ ಏರಿಕೆಯಾಗದಂತಾಗಿದೆ. ಇದು ರೈತರ ನಿರಾಸೆಗೂ ಕಾರಣವಾಗಿದೆ.
ಕಳೆದೊಂದು ವಾರದಿಂದ ಪೂರ್ವ ಮುಂಗಾರು ಚುರುಕುಗೊಂಡಿರುವುದರಿಂದ ರೈತರು ಭೂಮಿಯನ್ನು ಉಳುಮೆ ಮಾಡುವ ಮೂಲಕ ಬಿತ್ತನೆಗೆ ಹದಗೊಳಿಸುತ್ತಿದ್ದಾರೆ. ಕೆರೆ-ಕಟ್ಟೆಗಳು ಖಾಲಿಯಾಗಿದ್ದರಿಂದ ಬಹುತೇಕ ರೈತರು ಕೆರೆಯ ಮಣ್ಣನ್ನು ಜಮೀನುಗಳಿಗೆ ಸಾಗಿಸಿಕೊಂಡು ಕೃಷಿ ಚಟುವಟಿಕೆಗೆ ಚುರುಕು ನೀಡುವುದಕ್ಕೆ ಸಿದ್ಧರಾಗಿದ್ದಾರೆ. ಹಲವರು ಹೊಸದಾಗಿ ಕೊಳವೆ ಬಾವಿಗಳನ್ನು ತೆಗೆಸುವುದರೊಂದಿಗೆ ಬೆಳೆಗೆ ನೀರಿನ ಸೌಕರ್ಯವನ್ನೂ ಮಾಡಿಕೊಳ್ಳುತ್ತಿದ್ದಾರೆ. ಈ ಬಾರಿಯ ಮುಂಗಾರು ಮಳೆಯ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡು ಕೃಷಿಯಲ್ಲಿ ತೊಡಗಿಕೊಳ್ಳುವುದಕ್ಕೆ ಉತ್ಸುಕಾಗಿದ್ದಾರೆ. ಉತ್ತಮ ಮಳೆ, ಅಣೆಕಟ್ಟೆ ಭರ್ತಿಯಾಗುವುದು, ನಾಲೆಗಳಿಗೆ ನೀರು ಬಿಡುಗಡೆಯಾಗುವ ದಿನಗಳಿಗಾಗಿ ಎದುರುನೋಡುತ್ತಿದ್ದಾರೆ.
70 ಅಡಿಗಿಂತಲೂ ಕಡಿಮೆ ಮಟ್ಟ: ಕಳೆದ 20 ವರ್ಷಗಳ ಪೈಕಿ 4 ವರ್ಷಗಳಲ್ಲಿ ಮೇ ತಿಂಗಳ 18ರಂದು ಜಲಾಶಯದ ನೀರಿನ ಮಟ್ಟ 70 ಅಡಿಗಳಿಗಿಂತಲೂ ಕೆಳಮಟ್ಟಕ್ಕೆ ಕುಸಿದಿತ್ತು. 2007 ಮೇ 18ರಂದು ಅಣೆಕಟ್ಟೆಯ ನೀರಿನ ಮಟ್ಟ 68.75 ಅಡಿ ಇದ್ದು, 153 ಕ್ಯುಸೆಕ್ ಒಳಹರಿವು, 254 ಕ್ಯುಸೆಕ್ ಹೊರಹರಿವು ದಾಖಲಾಗಿ ಅಣೆಕಟ್ಟೆಯಲ್ಲಿ 6.636 ಟಿಎಂಸಿ ಅಡಿ ನೀರು ದಾಖಲಾಗಿತ್ತು. ಅದಾದ ಬಳಿಕ 2013ರ ಮೇ 18ರಂದು ಜಲಾಶಯದಲ್ಲಿ 64.57 ಅಡಿ ನೀರು ದಾಖಲಾಗಿದ್ದು, 856 ಕ್ಯುಸೆಕ್ ಒಳಹರಿವು, 767 ಕ್ಯುಸೆಕ್ ಹೊರಹರಿವಿದ್ದು, 5.470 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. 2017ರ ಮೇ 18ರಲ್ಲಿ 66.40 ಅಡಿ ನೀರಿದ್ದು, 183 ಕ್ಯುಸೆಕ್ ಒಳಹರಿವು, 862 ಕ್ಯುಸೆಕ್ ಹೊರಹರಿವಿನೊಂದಿಗೆ 6.835 ಟಿಎಂಸಿ ಅಡಿ ನೀರಿದ್ದರೆ, 2018ರ ಮೇ 18ರಲ್ಲಿ 66.52 ಅಡಿ ನೀರು ದಾಖಲಾಗಿ 343 ಕ್ಯುಸೆಕ್ ಒಳಹರಿವು, 650 ಕ್ಯುಸೆಕ್ ಹೊರಹರಿವಿನೊಂದಿಗೆ 6.872 ಟಿಎಂಸಿ ನೀರು ಸಂಗ್ರಹವಾಗಿತ್ತು.
100ರ ಗಡಿ ದಾಟಿದ್ದು 2 ವರ್ಷ ಮಾತ್ರ: ಕಳೆದ ಎರಡು ದಶಕದಲ್ಲಿ ಎರಡು ವರ್ಷ ಮಾತ್ರ ಮುಂಗಾರು ಆರಂಭಕ್ಕೆ ಮುನ್ನವೇ ಜಲಾಶಯ 100 ಅಡಿಯ ಗಡಿ ದಾಟಿದ್ದು ವಿಶೇಷ. 2004ರ ಮೇ 18ರಂದು ಅಣೆಕಟ್ಟೆಯಲ್ಲಿ 104.51 ಅಡಿ ನೀರು ದಾಖಲಾಗಿದ್ದು, 153 ಕ್ಯುಸೆಕ್ ಒಳಹರಿವು, 2462 ಕ್ಯುಸೆಕ್ ಹೊರಹರಿವಿದ್ದು, ಜಲಾಶಯದಲ್ಲಿ 26.556 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. 2022ರ ಮೇ 18ರಂದು ಅಣೆಕಟ್ಟೆಯಲ್ಲಿ 100.16 ಅಡಿ ನೀರು ಶೇಖರಣೆಯಾಗಿ, 2825 ಕ್ಯುಸೆಕ್ ಒಳಹರಿವು, 1437 ಕ್ಯುಸೆಕ್ ಹೊರಹರಿವಿದ್ದು 22.636 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.