ವರದಿ : ಸೋಮರಡ್ಡಿ ಅಳವಂಡಿ
ಕೊಪ್ಪಳ (ಸೆ.01): ಜಪಾನ್ ದೇಶದಲ್ಲಿ ಒಬ್ಬ ವಿದ್ಯಾರ್ಥಿಗಾಗಿ ನಿತ್ಯವೂ ಒಂದು ರೈಲನ್ನೇ ಓಡಿಸಲಾಗುತ್ತಿತ್ತು. ಆದರೆ ವಿಪರ್ಯಾಸವೆಂದರೆ, ನಮ್ಮಲ್ಲಿ ನೂರಾರು ವಿದ್ಯಾರ್ಥಿಗಳಿದ್ದರೂ ಶಾಲೆಗೆ ಹೋಗಲು ಬಸ್ಸಿಲ್ಲದೆ ಅವರು ಜೆಸಿಬಿ ಹತ್ತುತ್ತಿದ್ದಾರೆ!
ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದಲ್ಲಿ 8ನೇ ತರಗತಿವರೆಗೂ ಶಾಲೆ ಇದೆ. ಹೀಗಾಗಿ, 9, 10ನೇ ತರಗತಿ ವಿದ್ಯಾರ್ಥಿಗಳು ಐದು ಕಿ.ಮೀ. ದೂರದಲ್ಲಿರುವ ಹ್ಯಾಟಿ ಗ್ರಾಮಕ್ಕೆ ಹೋಗಬೇಕು. ಬಸ್ ಇಲ್ಲದ ಕಾರಣ ವಿದ್ಯಾರ್ಥಿಗಳು ಆಟೋ ಸೇರಿ ಬೇರೆ ಬೇರೆ ವಾಹನದಲ್ಲಿ ಹೋಗಬೇಕಾಗುತ್ತದೆ. ಆದರೆ ಈ ವಾಹನಗಳ ಪ್ರಯಾಣಕ್ಕೆ 20-30 ರು. ನೀಡಬೇಕು. ಬಡ ಮಕ್ಕಳಿಗೆ ಪ್ರತಿ ದಿನ ಇಷ್ಟೊಂದು ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಇದರಿಂದ ಸಿಕ್ಕ ಸಿಕ್ಕ ವಾಹನ ಹತ್ತಿ ಮಕ್ಕಳು ಶಾಲೆಗೆ ಹೋಗುತ್ತಾರೆ. ಮಂಗಳವಾರ ಬೇರೆ ವಾಹನ ಸಿಗದೆ ಕೆಲ ವಿದ್ಯಾರ್ಥಿಗಳು ಜೆಸಿಬಿ ಹತ್ತಿದ್ದಾರೆ.
ಸೆ. 6ರಿಂದ 6-8ನೇ ತರಗತಿಗಳು ಆರಂಭ: ವೇಳಾಪಟ್ಟಿ, ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ
ಬಸ್‌ಗಳು ಸಂಚಾರ ಬಂದ್- ನಿತ್ಯವೂ ವಿದ್ಯಾರ್ಥಿನಿಯರು ಸೇರಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಐದು ಕಿ.ಮೀ. ದೂರದ ಹ್ಯಾಟಿ ಗ್ರಾಮದ ಶಾಲೆಗೆ ಹೋಗುತ್ತಾರೆ. ಕೋವಿಡ್‌ಗಿಂತ ಮೊದಲು ಇಲ್ಲಿ ಬಸ್ ಸೌಲಭ್ಯ ಇತ್ತು. ಇದೀಗ ಬಸ್ ಓಡಿಸುತ್ತಿಲ್ಲ. ಬಸ್‌ಗಳನ್ನು ಕೇವಲ ಆದಾಯ ಬರುವ ಮಾರ್ಗಗಳಲ್ಲಿ ಮಾತ್ರ ಓಡಿಸಲಾಗುತ್ತದೆ. ಹಳ್ಳಿಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಬಸ್‌ಗಳ ಓಡಾಟ ವಿರಳವಾಗಿದೆ. ಇದರಿಂದ ಮಕ್ಕಳಿಗೆ ‘ಪಾದಯಾತ್ರೆ’ ಅನಿವಾರ‍್ಯ ಎಂಬಂತಾಗಿದೆ. ಈ ರೀತಿ ಮಂಗಳವಾರ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗುತ್ತಿದ್ದನ್ನು ಕಂಡ ಜೆಸಿಬಿ ಚಾಲಕ ಕರುಣೆಯಿಂದ ಅವರನ್ನು ಜೆಸಿಬಿ ಬಕೆಟ್‌ನಲ್ಲಿ ಕೂರಿಸಿಕೊಂಡು ಹೋಗಿದ್ದಾನೆ.
ಇದು ನಿಜಕ್ಕೂ ಅಪಾಯಕಾರಿ, ಸ್ವಲ್ಪ ಹೆಚ್ಚುಕಡಿಮೆ ಆದರೂ ಅನಾಹುತ ಆಗುವ ಸಾಧ್ಯತೆ ಇರುತ್ತದೆ. ಆದರೂ 5 ಕಿ.ಮೀ. ಪಾದಯಾತ್ರೆಯಿಂದ ಬೇಸತ್ತು ವಿದ್ಯಾರ್ಥಿಗಳು ಈ ಸಾಹಸಕ್ಕೆ ಸೈ ಅಂದಿದ್ದಾರೆ. ಈಗಾಗಲೇ 9ರಿಂದ 12ನೇ ತರಗತಿವರೆಗೂ ಶಾಲೆ-ಕಾಲೇಜುಗಳನ್ನು ಪ್ರಾರಂಭಿಸಿರುವ ಸರ್ಕಾರ ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ಹೇಗೆ ಬರಬೇಕು ಎನ್ನುವ ಬಗ್ಗೆ ಯೋಜಿಸಿಯೇ ಇಲ್ಲ ಎಂಬ ಆಕ್ರೋಶ ವಿದ್ಯಾರ್ಥಿಗಳದ್ದು.
ನಮಗೆ ನಿತ್ಯವೂ ಶಾಲೆಗೆ ಹೋಗುವುದಕ್ಕೆ ಬಸ್ಸೇ ಇಲ್ಲ. ಹೀಗಾಗಿ ನಿತ್ಯವೂ ನಡೆದುಕೊಂಡು ಹೋಗುತ್ತೇವೆ. ಮಂಗಳವಾರ ನಮ್ಮೂರಿನ ಜೆಸಿಬಿ ತೆರಳುತ್ತಿದ್ದರಿಂದ ಅದರಲ್ಲಿಯೇ ಹೋಗಿದ್ದೇವೆ.
-ಹರೀಶ್ 9ನೇ ತರಗತಿ ವಿದ್ಯಾರ್ಥಿ ಮುದ್ದಾಬಳ್ಳಿ ಗ್ರಾಮ
ನಮ್ಮ ಗೋಳು ಯಾರಿಗೆ ಹೇಳಬೇಕು ಸರ್, ಕೋವಿಡ್ ಬಂದಿದ್ದರಿಂದ ಬಂದಾದ ಬಸ್ ಸಂಚಾರ ಮತ್ತೆ ಪ್ರಾರಂಭವಾಗಿಲ್ಲ. ಈ ನಡುವೆ ಶಾಲೆಯನ್ನು ಪ್ರಾರಂಭಿಸಲಾಗಿದೆ. ಹೀಗಾಗಿ, ದಾರಿಯಲ್ಲಿ ಜೆಸಿಬಿ, ಆಟೋ ಸೇರಿದಂತೆ ಯಾವುದು ಸಿಕ್ಕರೂ ಹತ್ತಿ ಶಾಲೆ ತಲುಪುತ್ತೇವೆಎ.
-ತೌಸೀನ್ 9ನೇ ತರಗತಿ ವಿದ್ಯಾರ್ಥಿ ಮುದ್ದಾಬಳ್ಳಿ