ಮಹಾತ್ಮ ಗಾಂಧಿ ದೇವಸ್ಥಾನ ಅನಾಥ!

By Kannadaprabha News  |  First Published Oct 2, 2018, 10:40 AM IST

ಬಲಸೆಟ್ಟಿಹಾಳ ಗ್ರಾಮದಲ್ಲಿ ನಿರ್ಮಿಸಿರುವ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧಿಯ ದೇವಸ್ಥಾನದ ಜೀರ್ಣೋದ್ಧಾರ ಯಾವಾಗ? 


ತಾಲೂಕಿನ ಬಲಸೆಟ್ಟಿಹಾಳ ಗ್ರಾಮದಲ್ಲಿ ನಿರ್ಮಿಸಿರುವ ಸ್ವಾತಂತ್ರ್ಯ ಹೋರಾಟಗಾರ ಮಹಾತ್ಮ ಗಾಂಧಿ ಅವರ ದೇವಸ್ಥಾನ ಅನಾಥವಾಗಿದ್ದು, ಅಧಿಕಾರಿ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಇನ್ನೂ ಜೀರ್ಣೋದ್ಧಾರವಾಗಿಲ್ಲ.

ರಾಜ್ಯದ ವಿವಿಧೆಡೆ ಗಾಂಧಿ ವೃತ್ತ, ಗಾಂಧಿ ಪುತ್ಥಳಿ, ಗಾಂಧಿ ನಗರಗಳೆಂದು ನಿರ್ಮಾಣ ಮಾಡಲಾಗಿದೆ. ಆದರೆ, ಬಲಸೆಟ್ಟಿ ಹಾಳ ಗ್ರಾಮದಲ್ಲಿ ಮಾತ್ರ ಗಾಂಧಿ ದೇವಸ್ಥಾನ ನಿರ್ಮಿಸಿರುವುದು ರಾಜ್ಯದ ಏಕೈಕ ಗಾಂಧಿ ದೇವಸ್ಥಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Tap to resize

Latest Videos

ಬಲಸೆಟ್ಟಿಹಾಳ ಗ್ರಾಮದಲ್ಲಿ ಪ್ರತಿ ವರ್ಷ ಅಭಿಮಾನಿಗಳು ಮತ್ತು ಭಕ್ತರು ದೇವಸ್ಥಾನದ ಬಾಗಿಲು ತೆರೆದು ಪೂಜೆ ಮಾಡಿ ಗಾಂಧಿ ಜಯಂತಿ ಆಚರಣೆ ಮಾಡಿ ಕೈತೊಳೆದುಕೊಂಡು ಬಿಡುತ್ತಾರೆ. ಇತ್ತ ಕಡೆ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಗಮನ ಹರಿಸಿಲ್ಲ.

ಮಹಾತ್ಮ ಗಾಂಧಿ ಅವರು ಭಾರತ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬ್ರಿಟಿಷರ ದಾಸ್ಯದಿಂದ ಮುಕ್ತಗೊಳಿಸಿರುವುದನ್ನು ಚಿಕ್ಕ ವಯಸ್ಸಿಯಲ್ಲಿಯೇ ಬಲಸೆಟ್ಟಿಹಾಳ ಗ್ರಾಮದ ದಿ. ಹಂಪಣ್ಣ ಸಾಹುಕಾರ ಅವರ ಮೇಲೆ ತುಂಬಾ ಪ್ರಭಾವ ಬೀರಿತ್ತು. ಭಾರತಕ್ಕೆ ಆಗಸ್ಟ್ 15,1947ರಲ್ಲಿ ಸ್ವಾತಂತ್ರ್ಯ ಸಿಕ್ಕರೂ ಸಹ ಹೈದ್ರಾಬಾದ್ ಕರ್ನಾಟಕದಲ್ಲಿ ರಜಾಕರ ಹಾವಳಿ ಇತ್ತು. ಆಗ ರಾಜನಕೋಳೂರಿನ ವೀರ ಸೇನಾನಿ ವಿರುಪಾಕ್ಷ ಗೌಡ, ಬ್ಯಾರಿಸ್ಟರ್ ರಾಜಾ ವೆಂಕಟಪ್ಪನಾಯಕ, ವೆಂಕನಗೌಡ ಪಾಟೀಲ್, ಕುಪ್ಪಿಯ ಹಣಂತ್ರಾಯಗೌಡ(ಕಾಂಗ್ರೆಸ್), ಹುಣಸಗಿ ಶೇಖರಯ್ಯ ಹಿರೇಮಠ ಸೇರಿದಂತೆ ಅನೇಕರು ಈ ಭಾಗದಲ್ಲಿ ರಜಕಾರರ ವಿರುದ್ಧ ಜನರನ್ನು ಎತ್ತಿಕಟ್ಟುವ ಕೆಲಸದಲ್ಲಿ ನಿರತರಾಗಿದ್ದರು. ಕೊನೆಗೆ ಸರ್ದಾರ ವಲ್ಲಭಬಾಯಿ ಪಟೇಲ್ ನಾಯಕತ್ವದಲ್ಲಿ ಸೆ. 17, 1948ರಲ್ಲಿ ಹೈದ್ರಾಬಾದ್ ಕರ್ನಾಟಕ ವಿಮೋಚನೆಯಾಗಿತ್ತು.

22ನೇ ವಯಸ್ಸಿನ ಗಾಂಧಿ ಅಭಿಮಾನಿ ಹಂಪಣ್ಣ ಸಾಹುಕಾರ ಅವರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮ ಗಾಂಧಿ ಮತ್ತು ಹೈದ್ರಾಬಾದ್ ಕರ್ನಾಟಕ ವಿಮೋಚನೆಗೊಳಿಸಿದ ಸರ್ದಾರ್ ವಲ್ಲಭಬಾಯಿ ಪಟೇಲ್‌ರ ಮೂರ್ತಿ ಸ್ಥಾಪಿಸುವ ಕನಸು ಹೊಂದಿದ್ದರು.

ಒಮ್ಮೆ ಕೊಡೇಕಲ್ ಬಸವಣ್ಣನ ದೇವಸ್ಥಾನದ ಹೊತ್ತಿಗೆಗಳು ಕಳುವಾಗಿದ್ದವು. ಆಗ ಅದನ್ನು ಯಾರೋ ಈ ಗ್ರಾಮದ ಕಟ್ಟೆಯ ಮೇಲೆ ಇಟ್ಟು ಹೊದರಂತೆ. ಯಾರು ಕಳುವು ಮಾಡಿದ್ದನೋ  ಅವನಿಗೆ ದೃಷ್ಟಿಯೇ ಹೊರಟು ಹೋಯಿತಂತೆ
ಎಂಬುದು ಸದ್ಯ ದಂತ ಕಥೆ. ಈ ಕಟ್ಟೆ ದೈವಿ ಕಟ್ಟೆಯಾಗಿದೆ. ಇದನ್ನು ಇಡೀ ರಾಷ್ಟ್ರವೇ ನೆನಪಿಡುವಂತೆ ಮಾಡಬೇಕು ಎನ್ನುವ ಸಂಕಲ್ಪ ಹಂಪಣ್ಣ ಸಾಹುಕಾರ ಅವರದು ಅಗಿತ್ತು. ಅನಂತರ ಹಂಪಣ್ಣ ಸಾಹುಕಾರ ಅವರು ಊರಿನ ನಾಶಿ ಮುದ್ದಪ್ಪ, ರುದ್ರಣ್ಣ ಸಾಹುಕಾರ ಹಾಗೂ ಅವರ ತಂಡ ಆಗಿನ ಕಾಲದಲ್ಲಿ ಶ್ರೇಷ್ಠ ಶಿಲ್ಪ ಕಲಾಕಾರರಾದ ಸಿದ್ದಣ್ಣ ಸಿರವಾಳ ಅವರಿಂದ ಕೆತ್ತನೆ ಮಾಡಿಸಿ ಗಾಂಧೀಜಿ ಅವರ ಚಿತಾಭಸ್ಮ ತಂದು
1948ರಲ್ಲಿ ಗಾಂಧೀಜಿ ಪುತ್ಥಳಿ ಪ್ರತಿಷ್ಠಾಪಿಸಿಯೇ ಬಿಟ್ಟರು. ಅನೇಕ ಕಾರ್ಯಕ್ರಮಗಳನ್ನು ಹಲವು ವರ್ಷಗಳ ಕಾಲ ನಡೆಸುತ್ತಾ ಬಂದಿದ್ದರು.

ದೇವಸ್ಥಾನ ಜೀರ್ಣೋದ್ಧಾರ ಮಾಡಿಸಿ ಅಲ್ಲಿ ಸ್ಮಾರಕ ಭವನ ನಿರ್ಮಿಸಬೇಕೆಂಬ ಆಸೆ ಹೊಂದಿದ್ದ ಹಂಗಣ್ಣ ಸಾಹುಕಾರ 1995ರಲ್ಲಿ ನಿಧನರಾದ ಬಳಿಕ ಅವರ ಸುಪುತ್ರ ಬಸವರಾಜ ಸಾಹುಕಾರ ಅವರು ಪ್ರತಿ ಅಮಾವಾಸ್ಯೆ ಮತ್ತು ಹುಣ್ಣುಮೆ ಮತ್ತು ಗಾಂಧಿ ಜಯಂತಿಗಳಂದು ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ತದ ನಂತರ ಒಮ್ಮೆ ಪುತ್ಥಳಿಯನ್ನು ಯಾರೋ ಕಳ್ಳರು ಕದ್ದು ಒಯ್ದ ಘಟನೆಯು ನಡೆಯಿತು. ಸ್ವಲ್ಪ ದಿನಗಳ ನಂತರ ಮತ್ತೆ ಸಮೀಪದ ಕೆರೆಯಲ್ಲಿ ಸಿಕ್ಕಿತು ಪುನಃ ಅದನ್ನು ದೇವಸ್ಥಾನದಲ್ಲಿ ಇರಿಸಲಾಗಿದೆ. ಆದರೆ, ದೇವಸ್ಥಾನ ಸ್ಥಾಪಿಸಿ ಹಂಪಣ್ಣ ಸಾಹುಕಾರ ಅವರ ಕನಸಿನಂತೆ ಗಾಂಧಿ ದೇವಸ್ಥಾನ ಜೀಣೋದ್ಧಾರವಾಗಿಲ್ಲ, ಅಲ್ಲಿ ಗಾಂಧಿ ಸ್ಮಾರಕ
ಭವನ ನಿರ್ಮಿಸಿಲ್ಲ ಎಂದು ಗಾಂಧಿ ಅಭಿಮಾನಿಗಳಾದ ನಿವೃತ್ತ ಶಿಕ್ಷಕ ಅಯ್ಯಣ್ಣ ಹಿರೇಮಠ, ತಿಪ್ಪಣ್ಣ ಸರಾಯಿಗಾರ ಅವರು ಕನ್ನಡಪ್ರಭ ಎದುರು ತಮ್ಮ ನೋವು ತೋಡಿಕೊಂಡಿದ್ದಾರೆ.

click me!