ಕೊಡಗಿನ ಕಾಫಿ ಗಿಡಗಳಲ್ಲಿ Pit viper ಹಾವು ಹಾವಳಿ : ಕೊಯ್ಲು ವೇಳೆ ಎಚ್ಚರ

By Kannadaprabha News  |  First Published Dec 27, 2021, 3:50 PM IST
  • ಕೊಡಗಿನಲ್ಲಿ ಗುಳಿಮಂಡಲ ಹಾವುಗಳ ಆತಂಕ
  • ಕಾಫಿ ಕೊಯ್ಲು ವೇಳೆ ಎಚ್ಚರ ವಹಿಸಲು ತಜ್ಞರ ಸಲಹೆ
  • ಹಾವು ಕಡಿತದಿಂದ ಆರೋಗ್ಯ ಸಮಸ್ಯೆಗಳ ಸರಮಾಲೆ ಖಚಿತ
     

ವರದಿ :  ಮೋಹನ್‌ ರಾಜ್‌

  ಮಡಿಕೇರಿ (ಡಿ.27):  ಹಾವುಗಳಲ್ಲಿ (Snake) ಹಲವು ಪ್ರಭೇದಗಳಿವೆ. ಅವುಗಳಲ್ಲಿ ಪಶ್ಚಿಮ ಘಟ್ಟಮತ್ತದರ ತಪ್ಪಲು ಪ್ರದೇಶಗಳಲ್ಲಿ ಮಾತ್ರ ಕಂಡು ಬರುವ ಅಪರೂಪದ ಹಾವುಗಳಲ್ಲಿ (Snake) ವಿಷಪೂರಿತ ಮಲಬಾರ್‌ ಪಿಟ್‌ ವೈಪರ್‌ ಕೂಡಾ ಒಂದು.  ಇತ್ತೀಚೆಗೆ ಮಲಬಾರ್‌ ಪಿಟ್‌ ವೈಪರ್‌ ಕೊಡಗು (Kodagu) ಜಿಲ್ಲೆಯ ಕಾಫಿ (Coffee) ತೋಟಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕೊಡಗಿನಲ್ಲಿ ಇದು ಕಾಫಿ ಕೊಯ್ಲಿನ ಸಮಯ. ಈಗಾಗಲೆ ಕಾಫಿ ಕೊಯ್ಲು ಕಾರ್ಯ ಭರದಿಂದ ಸಾಗುತ್ತಿದ್ದು, ಜನ ಈ ಸಂದರ್ಭ ತಾಮುಂದು ನಾಮುಂದು ಎಂದು ಕೊಯ್ಲು ಕಾರ್ಯದಲ್ಲಿ ತೊಡಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಲಬಾರ್‌ ಪಿಟ್‌ ವೈಪರ್‌ ಅಧಿಕ ಸಂಖ್ಯೆಯಲ್ಲಿ ಕಂಡು ಬರುತ್ತಿರುವುದು ಕಾರ್ಮಿಕರಲ್ಲಿ ಭೀತಿಯನ್ನು ಉಂಟುಮಾಡಿದೆ.

Tap to resize

Latest Videos

ಗುಳಿ ಮಂಡಲ ಎಂದು ಕರೆಯಲಾಗುವ ಈ ಹಾವು ಇದೀಗ ಜಿಲ್ಲೆಯಲ್ಲಿ (Kodagu) ಹೆಚ್ಚಾಗಿ ಕಂಡುಬರುತ್ತಿದ್ದು, ಜಿಲ್ಲೆಯ ಜನ ಎಚ್ಚರದಿಂದ ಕೆಲಸ ಮಾಡಬೇಕಾಗಿದೆ ತಪ್ಪಿದಲ್ಲಿ ಹಾವು ಕಡಿತಕ್ಕೆ ಒಳಗಾಗಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಉರಗ ಪ್ರೇಮಿ ಸುರೇಶ್‌ ಪೂಜಾರಿ.

ಮಾರಣಾಂತಿಕ ಅಲ್ಲ:  ಈ ಹಾವಿನ ವಿಷ ಮನುಷ್ಯರಿಗೆ ಮಾರಣಾಂತಿಕವಾಗುವಷ್ಟುಅಪಾಯಕಾರಿ ಅಲ್ಲ. ಆದರೆ, ಅದು ಮಾಂಸಖಂಡಗಳ ಮೇಲೆ ದುಷ್ಪರಿಣಾಮ ಬೀರುವ ಗುಣ ಹೊಂದಿದೆ. ಆದ್ದರಿಂದ ಗರಿಷ್ಠ ಗಾತ್ರದ ಹಾವಿನ ಕಡಿತಕ್ಕೆ ಸರಿಯಾದ ಚಿಕಿತ್ಸೆ (Treatment) ಪಡೆಯದಿದ್ದರೆ ವಿಷ ಸೇರಿದ ಶರೀರದ ಭಾಗ ಕೊಳೆತ ಉದಾಹರಣೆಗಳಿವೆ. ಅಲ್ಲದೆ ಕಿಡ್ನಿ, ಹೃದಯ ಸಂಬಂಧಿ ಸಮಸ್ಯೆ, ಎದೆ ನೋವು ಅಂತ ಒಂದರ ಹಿಂದೆ ಒಂದರಂತೆ ನಾನಾ ಬಗೆಯ ಆರೋಗ್ಯ (Health) ಸಮಸ್ಯೆ ಎದುರಾಗುತ್ತದೆ. ಶೀಘ್ರವಾಗಿ ಗುಣಮುಖ ಆಗುವುದಿಲ್ಲ. ಆದುದ್ದರಿಂದ ಜನ ಜಾಗರೂಕತೆ ವಹಿಸಬೇಕು ಎಂಬುವುದು ತಜ್ಞರ ಸಲಹೆ.

ಕನ್ನಡದಲ್ಲಿ ಇದನ್ನು ಮಲಬಾರ್‌ ಗುಳಿಮಂಡಲ ಹಾವು, ತುಳು ಭಾಷೆಯಲ್ಲಿ ಮರಚಟ್ಟೆ, ಇಂಗ್ಲಿಷ್‌ನಲ್ಲಿ ಮಲಬಾರ್‌ ಪಿಟ್‌ ವೈಪರ್‌ ಎಂದು ಕರೆಯುತ್ತಾರೆ. ಗರಿಷ್ಠ 3 ಅಡಿ ಉದ್ದ ಬೆಳೆಯುವ ಈ ಹಾವುಗಳಲ್ಲಿ ಹೆಣ್ಣು ಹಾವು ದೊಡ್ಡದು. ತ್ರಿಕೋನಾಕೃತಿಯ ಚಪ್ಪಟೆಯಾಕಾರದ ತಲೆಯನ್ನು ಹೊಂದಿರುವ ಈ ಹಾವಿನ ಕಣ್ಣು ಮತ್ತು ಮೂಗಿನ ನಡುವೆ ಸೂಕ್ಷ್ಮ ಸಂವೇದಿಯಾದ ಜ್ಞಾನೇಂದ್ರಿಯ ಗುಳಿಗಳಿವೆ. ಆದ್ದರಿಂದ ಇದಕ್ಕೆ ಗುಳಿಮಂಡಲ ಹಾವು ಎಂಬ ಹೆಸರು ಬಂದಿದೆ. ರಾತ್ರಿ (Night) ಸಂಚಾರಿಯಾದ ಈ ಹಾವು ಗುಳಿಗಳ ಸಹಾಯದಿಂದ ಬಿಸಿ ರಕ್ತದ ಜೀವಿಯನ್ನು ಪತ್ತೆ ಹಚ್ಚಿ ಬೇಟೆ ಆಡಬಲ್ಲುದು. ಈ ಪ್ರಬೇಧದಲ್ಲಿ ಹಸಿರು, ಹಳದಿ ಅಲ್ಲದೆ ಹಲವಾರು ಶರೀರ ಬಣ್ಣದ ಹಾವುಗಳನ್ನು ಕಾಣಬಹುದು. ಮರದ ರೆಂಬೆ, ಕೊಂಬೆಗಳಲ್ಲಿ ಬಾಲದ ತುದಿಯನ್ನು ಸುತ್ತಿಕೊಂಡು ಮಲಗಿರುವ ಇವು ಮೇಲ್ನೋಟಕ್ಕೆ ಸಾಧು ಸ್ವಭಾವದ ಹಾವುಗಳಂತೆ ಕಂಡರೂ, ಕೆಣಕಿದರೆ ಬಾಲದ ತುದಿಯನ್ನು ವೇಗವಾಗಿ ಕಂಪಿಸುತ್ತಾ ಕಡಿಯುತ್ತವೆ.

  ಕೊಡಗಿನಲ್ಲಿ ಇದು ಕಾಫಿ ಕೊಯ್ಲಿನ ಸಮಯವಾಗಿದ್ದು, ಕೊಯ್ಲು ಕಾರ್ಯ ಭರದಿಂದ ಸಾಗುತ್ತಿರುವ ಸಂದರ್ಭ ಜಿಲ್ಲೆಯ ಹಲವು ಕಾಫಿ ತೋಟದಲ್ಲಿ ಇತ್ತೀಚೆಗೆ ಮಲಬಾರ್‌ ಪಿಟ್‌ ವೈಪರ್‌ ಹೆಚ್ಚಾಗಿ ಕಂಡು ಬರುತ್ತಿರುವುದು ಆತಂಕ ಮೂಡಿಸಿದೆ. ಇದು ಸಾಮಾನ್ಯವಾಗಿ ಕಾಫಿ ಗಿಡಗಳಲ್ಲಿ ಹಾಗೂ ಮೆಣಸು ಬಳ್ಳಿಯಲ್ಲಿ ಕಾಣಿಸಿಕೊಳ್ಳುತ್ತದೆ. ನಮ್ಮ ತಂಡದ ಸದಸ್ಯರು ವಿವಿಧ ಕಡೆಗಳಲ್ಲಿ ಇಂತಹ ಹಾವುಗಳನ್ನು ಸೆರೆ ಹಿಡಿದು ಸುರಕ್ಷಿತವಾಗಿ ಅರಣ್ಯಕ್ಕೆ ಬಿಟ್ಟಿದ್ದಾರೆ. ಜನ ಎಚ್ಚರದಿಂದ ಕೆಲಸ ಮಾಡಿ. ವಿಷಪೂರಿತ ಈ ಹಾವು ಕಚ್ಚಿದಲ್ಲಿ ಚಿಕಿತ್ಸೆ ಕೊಡಿಸುವುದು ಕಷ್ಟ. ಆರೋಗ್ಯ ಸಮಸ್ಯೆಗಳ ಸರಮಾಲೆಯನ್ನೇ ಉಂಟುಮಾಡಬಲ್ಲದು. ಹಾವುಗಳನ್ನು ಕಂಡಲ್ಲಿ ಕೂಡಲೇ ಮಾಹಿತಿ ನೀಡಿ ಸಹಕರಿಸಿ. ನಾವು ಅವುಗಳನ್ನು ಸಂರಕ್ಷಿಸಿ ಅರಣ್ಯಕ್ಕೆ ಬಿಡುತ್ತೇವೆ. ಮೊಬೈಲ್‌ ನಂಬರ್‌ 8277131863 ಸಂಪರ್ಕಿಸಿ

-ಸುರೇಶ್‌ ಪೂಜಾರಿ, ಉರಗ ತಜ್ಞ.

click me!