ಸೂಫಿಸಂತ ಬಂದೇನವಾಜರ 450 ವರ್ಷ ಹಳೆಯ ವರ್ಣಚಿತ್ರ ಫಿಲಡೆಲ್ಫಿಯಾ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿದೆ| ಸೂಫಿ ಸಂತ ಗೆಸುದರಾಜ್ ಅವರ ಚಿತ್ರ ಹಂಚಿಕೊಂಡ ನಾಣ್ಯ ಸಂಗ್ರಹಕಾರ ಮೊಹಮ್ಮದ್ ಶೋಯೆಬ್ ಖಾಜಿ|ವರ್ಣಚಿತ್ರದ ಎಡಭಾಗದಲ್ಲಿ ಪರ್ಷಿಯನ್ ನಾಸ್ಕ್ ಲಿಪಿಯಲ್ಲಿ ‘ಸಯ್ಯದ್ ಮಹಮ್ಮದ್ ಗೆಸುದರಾಜ್’ಎಂದು ಬರೆಯಲಾಗಿದೆ|
ಶೇಷಮೂರ್ತಿ ಅವಧಾನಿ
ಕಲಬುರಗಿ(ಫೆ.21): ಕಲಬುರಗಿ ಭಾಗ ಕಂಡ ಬಹಮನಿ ಅರಸರ ಕಾಲದ ಖ್ಯಾತ ಸೂಫಿಸಂತ ಖ್ವಾಜಾ ಬಂದಾನವಾಜ್‌ಗೆ ಸುದರಾಜ್ ಎಂದೇ ಜನಪ್ರಿಯರಾಗಿದ್ದ ಸಂತ ಸಯ್ಯದ್ ಶಾಹ ಮಹಮ್ಮದ್ ಹುಸೇನಿ ಅವರ ಅಪರೂಪದ ವರ್ಣಚಿತ್ರ (ಪೋಟ್ರೇಟ್) ಯುನೈಟೆಡ್ ಸ್ಟೇಟ್ಸ್‌ನ ಫಿಲಡೆಲ್ಫಿಯಾ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ಪತ್ತೆಯಾಗಿದೆ.
ಯುನೈಟೆಡ್ ಸ್ಟೇಟ್ಸ್‌ನ ಫಿಲಡೆಲ್ಫಿಯಾ ಮ್ಯೂಸಿಯಂ ಆಫ್ ಆರ್ಟ್ ಪುಟದಲ್ಲಿರುವ ಸೂಫಿ ಸಂತ ಗೆಸುದರಾಜ್ ಅವರ ಚಿತ್ರವನ್ನು ನಾಣ್ಯ ಸಂಗ್ರಹಕಾರ ಮೊಹಮ್ಮದ್ ಶೋಯೆಬ್ ಖಾಜಿ ಹಂಚಿಕೊಂಡಿದ್ದಾರೆ. ಫಿಲಡೆಲ್ಫಿಯಾ ವಸ್ತು ಸಂಗ್ರಹಾಲಯದಲ್ಲಿ ಈ ಮೂಲ ವರ್ಣಚಿತ್ರದ ಸಂಗ್ರಹದಲ್ಲಿದೆ. ವಸ್ತು ಸಂಗ್ರಹಾಲಯಗಳ ಪುಟದ ಸಂಕ್ಷೀಪ್ತ ವಿವರಣೆಯಲ್ಲಿ ಈ ವರ್ಣಚಿತ್ರವನ್ನು 1657-58 ರಲ್ಲಿ ಮಿಯಾನ್ ನುಸ್ರತಿ ಬರೆದ ಗುಲಶನ್-ಎ-ಇಶ್ಕ್ (ರೋಸ್ ಗಾರ್ಡ್‌ನ್ ಆಫ್ ಲವ್) ಎಂಬ ಹಸ್ತಪ್ರತಿಯಲ್ಲಿ ಕಾಣಬಹುದು. ಇವರು ಬಿಜಾಪುರದ ಎರಡನೇ ಸುಲ್ತಾನ್ ಅಲಿ ಆದಿಲ್ ಶಾಹರ ಆಸ್ಥಾನ ಕವಿ. ಹಸ್ತಪ್ರತಿ ಮಾಲೀಕತ್ವ ಮೂಲತಃ ಫಿಲಿಪ್ ಎಸ್. ಕಾಲಿನ್ಸ್ ಅವರು ಹೊಂದಿದ್ದು, ಇದನ್ನು ತಮ್ಮ ಪತಿಯ ನೆನಪಿಗಾಗಿ ಫಿಲಡೆಲ್ಫಿಯಾ ಮ್ಯೂಸಿಯಂಗೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಸ್ತಪ್ರತಿಯಲ್ಲಿ 97 ವರ್ಣಚಿತ್ರಗಳಿವೆ. ಇವು ಗ್ಯಾಲರಿ 328, ಏಷ್ಯನ್ ಆರ್ಟ್ ವಿಭಾಗ, 3ನೆ ಮಹಡಿಯಲ್ಲಿ (ಶಾಹ ಗ್ಯಾಲರಿ) ಪ್ರದರ್ಶನದಲ್ಲಿವೆ. ಈ ಸೂಫಿ ಸಂತನ ಅಪರೂಪದ ಚಿತ್ರವನ್ನು ವರ್ಣಗಳಲ್ಲಿ ಸೆರೆ ಹಿಡಿದಿರುವ ಚಿತ್ರಕಾರನ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಸಂಶೋಧನೆ ಅವಶ್ಯಕತೆಯಿದೆ ಎಂದು ಕಲಬುರಗಿ ನಿವಾಸಿ ಬಿದ್ರಿ ಕಲೆ ಸಂಶೋಧಕ, ಉ- ಕ ಇಂಡೋ - ಇಸ್ಲಾಮಿಕ್ ಕಲೆಯ ಅಧ್ಯಯನ ಮಾಡುತ್ತಿರುವ ರಹೇಮಾನ್ ಪಟೇಲ್ ಅಭಿಪ್ರಾಯಪಟ್ಟಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಳೆದ ಕೆಲವು ವರ್ಷಗಳಿಂದ ಬಹಮನಿ ಅರಸರ ಆಳ್ವಿಕೆ ಅವಧಿ ಕಲಾಕೃತಿಗಳನ್ನು ಹುಡುಕುತಿದ್ದೆ. ಆದಿಲ್ ಶಾಹಿ, ನಿಜಾಮ್ ಶಾಹಿ ಮತ್ತು ಅಸಫ್ ಜಾಹಿ ಅವಧಿ ಹಲವಾರು ವರ್ಣಚಿತ್ರ ನಾವು ಇಂದಿನವರೆಗೂ ದಖನಿ ಚಿಕಣಿ ಶೈಲಿಯ ರೂಪದಲ್ಲಿ ಕಾಣಬಹುದು. ಆದರೆ ಬಹಮನಿ ಸುಲ್ತಾನ್‌ರ ಭಾವಚಿತ್ರಗಳು ಇನ್ನೂವರೆಗೂ ಬೆಳಕಿಗೆ ಬಂದಿಲ್ಲ. ಇದೀಗ ಬಹಮನಿ ಆಳ್ವಿಕೆಯಲ್ಲಿ ಕಲಬುರಗಿಯಲ್ಲೇ ತಮ್ಮ ಬದುಕಿನ ಕೊನೆಯ ದಿನಗಳನ್ನು ಕಳೆದಂತಹ ಖ್ಯಾತ ಸೂಫಿಸಂತ ಗೆಸುದರಾಜ್ ಅವರ ಅಪರೂಪದ ವರ್ಣಚಿತ್ರ ಮಹತ್ವದಾಗಿದೆ ಎಂದಿದ್ದಾರೆ. ಅಮೆರಿಕದ ಫಿಲಡೆಲ್ಫಿಯಾ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ದೊರಕಿರುವ ಗುಲ್ಶನ್ -ಎ- ಇಶ್ಕ್ ಹಸ್ತಪ್ರತಿಯಲ್ಲಿನ ಸಯ್ಯದ್ ಮಹಮ್ಮದ್ ಗೆಸುದರಾಜರ ಅಪರೂಪದ ವರ್ಣಚಿತ್ರ. ಕಲಬುರಗಿಯಲ್ಲಿರುವ 600 ವರ್ಷಗಳಷ್ಟು ಹಳೆಯದಾದಂತಹ ಖ್ವಾಜಾ ಬಂದೇನವಾಜರ ದರ್ಗಾ.
‘ಸಯ್ಯದ್ ಮಹಮ್ಮದ್ ಗೆಸುದರಾಜ್’
ವಸ್ತುಸಂಗ್ರಹಾಲಯದಲ್ಲಿ ದೊರಕಿದ ಕಲಾಕೃತಿ ವರ್ಣಚಿತ್ರ ಸೂಫಿ ಸಂತ ಬಂದೇನವಾಜರದ್ದೇ ಎಂದು ಗುರುತಿಸುವುದು ಕುತೂಹಲದ ಪ್ರಶ್ನೆಯಾಗಿತ್ತು. ಇತಿಹಾಸ ಸಂಶೋಧನೆ ನಂತರ ಇದನ್ನು ಕಂಡು ಹಿಡಿಯಲು ಸುಲಭವಾಯಿತು. ಇದೇ ವರ್ಣಚಿತ್ರದ ಎಡಭಾಗದಲ್ಲಿ ಪರ್ಷಿಯನ್ ನಾಸ್ಕ್ ಲಿಪಿಯಲ್ಲಿ ‘ಸಯ್ಯದ್ ಮಹಮ್ಮದ್ ಗೆಸುದರಾಜ್’ಎಂದು ಬರೆಯಲಾಗಿದೆ.
ವರ್ಣಚಿತ್ರ ನೈಸರ್ಗಿಕ ವರ್ಣ ದ್ರವ್ಯ ನೀರಿನ ಬಣ್ಣ, ಚಿನ್ನದ ಎಲೆ ಮತ್ತು ಕಾಗದದ ಮೇಲೆ ಶಾಯಿಯಿಂದ ಚಿತ್ರಿಸಲಾಗಿದೆ. ಶ್ವೇತ ವರ್ಣದ ಬಟ್ಟೆ ಮತ್ತು ತಲೆ ಮೇಲೆ ಹಸಿರು ಪೇಟ ಧರಿಸಿ, ಬಲಗೈಯಲ್ಲಿ ಪ್ರಾರ್ಥನಾ ಮಣಿಗಳ ಮಾಲೆ ಹಿಡಿದು ಕುಳಿತಿರುವ ಗೆಸುದರಾಜ್ ಅಪರೂಪದ ಶೈಲಿ ಭಾವಚಿತ್ರದಲ್ಲಿ ಕಾಣಬಹುದು. ಇದೇ ವರ್ಣಚಿತ್ರದಲ್ಲಿ ಸಂತರ ಎದುರಗಡೆ ಒಬ್ಬ ವ್ಯಕ್ತಿ ತನ್ನ ಮನವಿ ಹೇಳುತ್ತಿರುವುದು ಹಾಗೂ ಸಂತರ ಹಿಂದೆ ಸೇವಕನಿರುವ ಅಪರೂಪದ ಸನ್ನಿವೇಶ ಕಾಣಬಹುದು.
ಅದೇ ರೀತಿಯಾಗಿ ಪಕ್ಕದಲ್ಲಿ ಕಂಡು ಬರುವ ಪುಸ್ತಕಗಳು ಮತ್ತು ಪಾತ್ರೆಗಳು, ಗುಮ್ಮಟ ಮತ್ತು ಮಿನಾರ್‌ಗಳೊಂದಿಗೆ ಮೂರು ಕಮಾನು ಕಟ್ಟಡ, ಮೋಡ ಕವಿದ ವಾತಾವರಣ, ಕೆಳಭಾಗದಲ್ಲಿ ಸುಂದರ ಹೂವು ಬಳ್ಳಿ ರಚಿಸಲ್ಪಟ್ಟಿರುವುದು ವರ್ಣಚಿತ್ರದಲ್ಲಿ ನೋಡಬಹುದು. ಧಾರ್ಮಿಕ ಸಾಮರಸ್ಯ ಖ್ವಾಜಾ ಬಂದೇನವಾಜರ ಭಾವಚಿತ್ರ ಪತ್ತೆಯಾಗಿರುವುದು ಇತಿಹಾಸಕಾರರು, ಸಂಶೋಧಕರ ಪಾಲಿಗೆ ಬಹುದೊಡ್ಡ ಸುದ್ದಿ. ದಖನಿ ಚಿಕಣಿ ಕಲೆಯಲ್ಲಿರುವ ಈ ಕಲಾಕೃತಿ (ಡೆಕ್ಕನ್ ಮಿನಿಯೇಚರ್ ಪೇಂಟಿಂಗ್) ಸೂಫಿ ಸಂತನ ಬದುಕಿನ ಮೇಲೆ ಹೊಸ ಬೆಳಕು ಚೆಲ್ಲುವ ಸಾಧ್ಯತೆಗಳಿವೆ. ಖ್ವಾಜಾ ಬಂದೇನವಾಜರು ಕಲಬುರಗಿಯಲ್ಲಿ 22 ವರ್ಷ ಇದ್ದು ಇಲ್ಲೇ ಕೊನೆಯುಸಿರು ಎಳೆದವರು. ಇವರು ತಮ್ಮ ಬದುಕಿನ 105ನೇ ವರ್ಷದಲ್ಲಿ ಸಮಾಧಿಯಾದವರು. ಬದುಕಿರುವವರೆಗೂ ಧಾರ್ಮಿಕ ಸಾಮರಸ್ಯ ಈ ಭಾಗದಲ್ಲಿ ಮೂಡಿಸುವಲ್ಲಿಗೆ ಸುದ ರಾಜ್‌ರ ಕೊಡುಗೆ ಅಪಾರ.
ಈ ಹಸ್ತಪ್ರತಿಯಲ್ಲಿ ಬಹಮನಿ ಸುಲ್ತಾನ್‌ರಿಗೆ ಸಂಬಂಧಪಟ್ಟ ಇನ್ನೂ ಕಾಣದೇ ಇರುವ ಭಾವಚಿತ್ರಗಳಿವೆ ಎಂಬುದನ್ನು ಗುರುತಿಸುವ ಕಾರ್ಯ ಆಗಬೇಕು. ಈ ಮೇಲೆ ಹೇಳಿದ ವಿಷಯ ಕುರಿತು ಮಾತನಾಡಿದ್ದು, ಹೇಳಿದ್ದು ಅಪೂರ್ಣವಾಗಿರಬಹುದು. ಆದರೆ ಸೂಫಿಯ ದಖನಿ ಚಿಕಣಿ ವರ್ಣಚಿತ್ರವನ್ನು ಬಿಡಿಸಿದ ಕಲಾಕಾರನ್ನು ಗುರುತಿಸುವುದು ಒಂದು ಅಧ್ಯಯನ ನಡೆಸುವುದು ತೀರಾ ಅವಶ್ಯಕ. ಈ ಕೆಲಸ ತುರ್ತಾಗಿ ಆಗಬೇಕು ಎಂದು ಕಲಬುರಗಿ ಇಂಡೋ - ಇಸ್ಲಾಮಿಕ್ ಕಲೆಯ ಸಂಶೋಧಕರು ಡಾ. ರೆಹಮಾನ್ ಪಟೇಲ್ ಬಿದ್ರಿ ಹೇಳಿದ್ದಾರೆ.