* ಬಾಗಿಲು ಮುಚ್ಚಿದೆ ದೇಸಿ ಸೇರಿದಂತೆ ಖಾದಿ ಕೇಂದ್ರಗಳು
* ಕೆಲಸಗಾರರ ನೆರವಿಗೆ ವೋಚರ್ ಮಾರಾಟ ಮಾಡುತ್ತಿರುವ ದೇಸಿ
* ಈಗಾಲಾದರೂ ಪ್ರೋತ್ಸಹ ಧನ ನೀಡಿ ಖಾದಿ ಕೇಂದ್ರಗಳ ಕೈ ಹಿಡಿಯಲಿ ಸರ್ಕಾರ
ಬಸವರಾಜ ಹಿರೇಮಠ
ಧಾರವಾಡ(ಮೇ.27): ಆಕರ್ಷಕ ಬಣ್ಣ, ಡಿಸೈನ್ ಬಟ್ಟೆಗಳ ಎದುರು ನೈಸರ್ಗಿಕ ಬಣ್ಣ, ಕೈಮಗ್ಗದ ಖಾದಿ ಬಟ್ಟೆಗಳಿಗೆ ಮೊದಲೇ ಗ್ರಾಹಕರು ಕಡಿಮೆ. ಅಂತಹುದರಲ್ಲಿ ಪದೇ ಪದೇ ಎದುರಾಗುತ್ತಿರುವ ಲಾಕಡೌನ್ ಖಾದಿ ಉದ್ಯಮಕ್ಕೆ ಭಾರೀ ಆರ್ಥಿಕ ಪೆಟ್ಟು ನೀಡುತ್ತಿದೆ.
undefined
ಗ್ರಾಮೀಣರ, ಬಡವರ ಜೀವನೋಪಾಯ ಕಟ್ಟುವ ಉದ್ಯಮಗಳು ಈಗಾಗಲೇ ಸಂಕಷ್ಟದಲ್ಲಿವೆ. ಸರ್ಕಾರಗಳ ಪ್ರೋತ್ಸಾಹ ಇಲ್ಲದೇ ಇದ್ದರೂ ಕೈಮಗ್ಗದ ಬಟ್ಟೆಗಳನ್ನು ನೇಯ್ದು, ಹೊಲಿದು ಗ್ರಾಮೀಣರ ಬದುಕನ್ನು ಕಟ್ಟುವ ಕೇಂದ್ರಗಳು ಮಾತ್ರ ಆರ್ಥಿಕ ಸಂಕಷ್ಟದಲ್ಲಿವೆ. ಧಾರವಾಡ ಜಿಲ್ಲೆಯಲ್ಲಿ ದೇಸಿ ಅಂಗಡಿ ಸೇರಿದಂತೆ ಎಂಟು ಖಾದಿ ಉದ್ಯಮಗಳಿವೆ. ಪ್ರಸನ್ ಅವರ ನೇತೃತ್ವದ ಚರಕ ಸಂಘ ಹಾಗೂ ದೇಸಿ ಟ್ರಸ್ವ್ ಅಡಿಯಲ್ಲಿರುವ ದೇಸಿ ಅಂಗಡಿ ಹೊರತುಪಡಿಸಿ ಜಿಲ್ಲೆಯಲ್ಲಿ ಏಳು ಖಾದಿ ಉತ್ಪಾದನಾ ಕೇಂದ್ರಗಳಿವೆ. ಕಳೆದ ಏ. 21ರಿಂದ ಲಾಕಡೌನ್ ಹಿನ್ನೆಲೆಯಲ್ಲಿ ಬಾಗಿಲು ಮುಚ್ಚಿರುವ ಈ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಸಂಬಳಕ್ಕೂ ಇದೀಗ ಕುತ್ತು ಬಂದಿದೆ.
ದೇಸಿ ಸ್ಥಿತಿ:
ರಾಜ್ಯದಲ್ಲಿ ಧಾರವಾಡ, ಹುಬ್ಬಳ್ಳಿ ಸೇರಿದಂತೆ ದೇಸಿ ಎಂಟು ಅಂಗಡಿಗಳನ್ನು ಹೊಂದಿದೆ. ಸುಮಾರು 70 ಜನರು ಮಾರಾಟ ಮಾಡುವ ಅಂಗಡಿಗಳಲ್ಲಿ ಹಾಗೂ 800 ಜನರು ಉತ್ಪಾದನಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು ಇವೆಲ್ಲರೂ ಲಾಕ್‌ಡೌನ ಹಿನ್ನೆಲೆಯಲ್ಲಿ ಮತ್ತೆ ಅತಂತ್ರರಾಗಿದ್ದಾರೆ. ಕನಿಷ್ಠ ಪಕ್ಷ ಅಂಗಡಿ ಸಿಬ್ಬಂದಿಗೆ ಸಂಬಳವನ್ನಾದರೂ ನಿರ್ವಹಿಸಲು ದೇಸಿ ಟ್ರಸ್ವ್ ತನ್ನ ಗ್ರಾಹಕರಿಗೆ ಮನವಿ ಮಾಡಿದೆ. ದಾನ ಬೇಡ ಬಟ್ಟೆಕೊಳ್ಳಿ ಎಂಬ ಕಲ್ಪನೆಯಲ್ಲಿ ವೋಚರ್ ಸಿದ್ಧಪಡಿಸಲಾಗಿದೆ. ಕಳೆದ ಬಾರಿಯ ಲಾಕ್‌ಡೌನ ಸಮಯದಲ್ಲಿ ಈ ಯೋಜನೆ ಯಶಸ್ವಿಯಾಗಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಮೇ 5ರಿಂದ ಜೂನ್ 5ರವರೆಗೆ ಗ್ರಾಹಕರಿಗೆ ವೋಚರ್ ಖರೀದಿ ಮಾಡಲು ಯೋಜನೆ ಪ್ರಕಟಿಸಿದೆ. ಕನಿಷ್ಠ ರು. 500 ಮೌಲ್ಯದ ವೋಚರ್‌ನ್ನು ಗ್ರಾಹಕರು ಆನಲೈನ್ ಮೂಲಕ ಖರೀದಿಸಬೇಕು. ಲಾಕ್‌ಡೌನ್ ನಂತರದಲ್ಲಿ ಅಂಗಡಿ ಆರಂಭವಾದಾಗ ಆ ಮೊತ್ತದ ಬಟ್ಟೆಗಳನ್ನು ಖರೀದಿಸುವುದು ಈ ಯೋಜನೆ. ಈ ಯೋಜನೆ ಪಡೆದವರಿಗೆ ದೇಸಿ ಅಂಗಡಿಯಲ್ಲಿ ಶೇ. 10ರಷ್ಟುರಿಯಾಯ್ತಿ ದೊರೆಯಲಿದೆ. ಈ ಮೂಲಕವಾದರೂ ಖಾದಿ ಕೇಂದ್ರಗಳನ್ನು ಹಾಗೂ ಅಲ್ಲಿನ ಕೆಲಸಗಾರರನ್ನು ಉಳಿಸುವ ಕಾರ್ಯ ದೇಸಿ ಮಾಡುತ್ತಿದೆ. ಈ ಬಗ್ಗೆ ಮಾಹಿತಿ ಪಡೆಯಲು ಮೊ. 7411120862 ಸಂಪರ್ಕಿಸಬಹುದು.
ಕೊರೋನಾ ಸೋಂಕಿಗಿಂತ ಭಯದಿಂದ ಸತ್ತವರೇ ಹೆಚ್ಚು!
ಖಾದಿ ಕೇಂದ್ರಗಳ ಸ್ಥಿತಿ ಅಯೋಮಯ:
ದೇಸಿ ಅಂಗಡಿಯ ಸಂಕಷ್ಟಒಂದೆಡೆಯಾದರೆ ಜಿಲ್ಲೆಯಲ್ಲಿರುವ ಖಾದಿ ಉತ್ಪಾದನಾ ಕೇಂದ್ರಗಳ ಸ್ಥಿತಿ ಅಯೋಮಯ. ಹುಬ್ಬಳ್ಳಿಯ ಬೆಂಗೇರಿ ಖಾದಿ ಫೆಡರೇಷನ್, ಕರ್ನಾಟಕ ಗ್ರಾಮೋದ್ಯೋಗ ಸಂಯುಕ್ತ ಸಂಘ, ಧಾರವಾಡ ತಾಲೂಕು ಗರಗ ಕ್ಷೇತ್ರೀಯ ಸೇವಾ ಸಂಘ, ಉಪ್ಪಿನ ಬೆಟಗೇರಿಯ ಖಾದಿ ನೇಕಾರ ಸಹಕಾರಿ ಸಂಘ, ಹೆಬ್ಬಳ್ಳಿಯ ತಾಲೂಕು ಕ್ಷೇತ್ರೀಯ ಸೇವಾ ಸಂಘ, ಧಾರವಾಡ ತಾಲೂಕು ಸೇವಾ ಸಂಘಗಳು ತೀವ್ರ ಆರ್ಥಿಕ ಸಂಕಷ್ಟದಲ್ಲಿವೆ. ಈ ಪೈಕಿ ಗರಗ ಹಾಗೂ ಬೆಂಗೇರಿಯಲ್ಲಿ ರಾಷ್ಟ್ರಧ್ವಜ ಜೊತೆಗೆ ಖಾದಿ ಬಟ್ಟೆಗಳು ಸಹ ಸಿದ್ಧವಾಗುತ್ತವೆ. ಒಂದೊಂದು ಸಂಘದಲ್ಲಿ 100ಕ್ಕೂ ಹೆಚ್ಚು ಜನರು ಸೇವೆ ಸಲ್ಲಿಸುತ್ತಿದ್ದು ಅವರೆಲ್ಲರೂ ಅತಂತ್ರರಾಗಿದ್ದಾರೆ. ಉತ್ಪಾದನಾ ಕೇಂದ್ರಗಳಲ್ಲದೇ ಮಾರಾಟ ಕೇಂದ್ರಗಳು ಬಂದ್ ಆಗಿದ್ದು ಉತ್ಪಾದನೆಯಾದ ಬಟ್ಟೆಗಳನ್ನು ಕೊಳ್ಳಲು ಗ್ರಾಹಕರಿಲ್ಲದೇ ಪರದಾಡುವಂತಾಗಿದೆ.
ಈ ಎಲ್ಲ ಖಾದಿ ಉತ್ಪಾದನಾ ಕೇಂದ್ರಗಳಿಗೆ ಕಳೆದ ಐದು ವರ್ಷಗಳಿಂದ ಸರ್ಕಾರದಿಂದ ಬರಬೇಕಾದ ರು. 110 ಕೋಟಿ ಪ್ರೋತ್ಸಾಹಧನ ಬಂದಿಲ್ಲ. ಹೀಗಾಗಿ ಬ್ಯಾಂಕ್ ಸಾಲದ ಹೊರೆ ತಾಳಲಾರದೆ ಉಪ್ಪಿನಬೆಟಗೇರಿಯ ಕೇಂದ್ರ ತಾತ್ಕಾಲಿಕವಾಗಿ ಕೀಲಿ ಹಾಕಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯಕ್ಕೆ ಹಿತವಾದ ಖಾದಿ ಬಟ್ಟೆಗಳನ್ನು ಉತ್ಪಾದಿಸುವ ಈ ಕೇಂದ್ರಗಳ ಪುನಶ್ಚೇತನಕ್ಕೆ ಸರ್ಕಾರ ಚಿಂತನೆ ಮಾಡಬೇಕಿದೆ. ಅದರಲ್ಲೂ ಪ್ರಸ್ತುತ ಲಾಕಡೌನ್ ಹಿನ್ನೆಲೆಯಲ್ಲಿ ಖಾದಿ ಕೇಂದ್ರಗಳು ತುಂಬಾ ನಷ್ಟದಲ್ಲಿದ್ದೂ ಸರ್ಕಾರ ಕೂಡಲೇ ಈ ಕೇಂದ್ರಗಳಿಗೆ ಪರಿಹಾರ ಒದಗಿಸಬೇಕಿದೆ ಎನ್ನುವುದು ಖಾದಿ ಕೇಂದ್ರಗಳ ಆಗ್ರಹ.
ಧಾರವಾಡ ಸೇರಿದಂತೆ ರಾಜ್ಯದಲ್ಲಿ ಎಂಟು ದೇಸಿ ಅಂಗಡಿಗಳಿದ್ದು ಬಟ್ಟೆತಯಾರಿಸುವವರು, ಮಾರಾಟಗಾರರು ಲಾಕ್‌ಡೌನ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ವೋಚರ್ ಯೋಜನೆಯನ್ನು ಕಳೆದ ಲಾಕಡೌನ್ ಸಮಯದಲ್ಲಿ ಮಾಡಲಾಗಿದ್ದು ಯಶಸ್ವಿಯಾಗಿತ್ತು. ಆದರೆ, ಈ ಬಾರಿ ಅಷ್ಟೊಂದು ಸ್ಪಂದನೆ ಸಿಗುತ್ತಿಲ್ಲ ಎಂಬ ಬೇಸರವಿದೆ. ದೇಸಿ ಗ್ರಾಹಕರು ಮುಂದೆ ಬಂದು ವೋಚರ್ ಪಡೆಯುವ ಮೂಲಕ ದೇಸಿ ಉತ್ಪಾದನೆಗೆ ಬೆಂಬಲ ನೀಡಬೇಕಿದೆ ಎಂದು ಧಾರವಾಡ ದೇಸಿ ಶಾಖಾ ವ್ಯವಸ್ಥಾಪಕಿ ಸುನಂದಾ ಭಟ್ ತಿಳಿಸಿದ್ದಾರೆ.