ಜೂನ್‌ನಲ್ಲಿ ಶೇ. 70ರಷ್ಟುಮಳೆ ಕೊರತೆ; ಕೃಷಿ ಚಟುವಟಿಕೆಗೆ ಭಾರೀ ಹೊಡೆತ

By Kannadaprabha News  |  First Published Jun 18, 2023, 12:52 PM IST

ಮುಂಗಾರು ಹಂಗಾಮು ಆರಂಭವಾಗಿ ರೈತರು ಬಿಡುವಿಲ್ಲದ ಕೃಷಿ ಕಾರ್ಯದಲ್ಲಿ ತೊಡಗಬೇಕಿದ್ದ ಈ ದಿನದಲ್ಲಿ ಮುಗಿಲ ಕಡೆ ಮುಖ ಮಾಡಿ ಕಾಯುವ ಪರಿಸ್ಥಿತಿ ಎದುರಾಗಿದೆ. ಜೂನ್‌ ತಿಂಗಳ ಮೊದಲಾರ್ಧದ ತನಕ ಶೇ. 70ರಷ್ಟುಮಳೆ ಅಭಾವವಾಗಿದೆ. ಮಳೆ ಬರುವ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೆಳೆ ಕಮರುತ್ತಿದ್ದು, ಮುಂದೇನು ಎಂಬ ಚಿಂತೆ ರೈತರನ್ನು ಕಾಡತೊಡಗಿದೆ.


ನಾರಾಯಣ ಹೆಗಡೆ

ಹಾವೇರಿ (ಜೂ.18) :  ಮುಂಗಾರು ಹಂಗಾಮು ಆರಂಭವಾಗಿ ರೈತರು ಬಿಡುವಿಲ್ಲದ ಕೃಷಿ ಕಾರ್ಯದಲ್ಲಿ ತೊಡಗಬೇಕಿದ್ದ ಈ ದಿನದಲ್ಲಿ ಮುಗಿಲ ಕಡೆ ಮುಖ ಮಾಡಿ ಕಾಯುವ ಪರಿಸ್ಥಿತಿ ಎದುರಾಗಿದೆ. ಜೂನ್‌ ತಿಂಗಳ ಮೊದಲಾರ್ಧದ ತನಕ ಶೇ. 70ರಷ್ಟುಮಳೆ ಅಭಾವವಾಗಿದೆ. ಮಳೆ ಬರುವ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಬೆಳೆ ಕಮರುತ್ತಿದ್ದು, ಮುಂದೇನು ಎಂಬ ಚಿಂತೆ ರೈತರನ್ನು ಕಾಡತೊಡಗಿದೆ.

Tap to resize

Latest Videos

ಕಳೆದ ಮೂರು ನಾಲ್ಕು ವರ್ಷಗಳಿಂದ ಅತಿವೃಷ್ಟಿಯಿಂದ ಕಂಗೆಟ್ಟಿದ್ದ ಜಿಲ್ಲೆಯಲ್ಲಿ ಮುಂಗಾರು ಆರಂಭದಲ್ಲೇ ಬರದ ಛಾಯೆ ಆವರಿಸಿದೆ. ಮೇ ತಿಂಗಳಲ್ಲೇ ಬಿತ್ತನೆಗೆ ಹೊಲಗದ್ದೆ ಸಿದ್ಧ ಮಾಡಿಕೊಂಡಿದ್ದ ರೈತರು ಈಗ ಮುಗಿಲಿನತ್ತ ಮುಖ ಮಾಡಿ ಕೂತಿದ್ದಾರೆ. ಮೇ ತಿಂಗಳಲ್ಲಿ ಮುಂಗಾರು ಪೂರ್ವ ಮಳೆಯೂ ಈ ಸಲ ಚೆನ್ನಾಗಿ ಆಗಲಿಲ್ಲ. ಜೂನ್‌ ಮೊದಲ ವಾರದ ಬಳಿಕ ಹೇಗಿದ್ದರೂ ಮುಂಗಾರು ಪ್ರವೇಶವಾಗುತ್ತದೆ ಎಂಬುದು ವಾಡಿಕೆ. ಆದರೆ, ಈ ಸಲ ರೈತರ ನಿರೀಕ್ಷೆ ಹುಸಿಯಾಗಿದೆ. ಜೂನ್‌ ತಿಂಗಳಿನ ಮೂರು ವಾರ ಕಳೆಯುತ್ತ ಬಂದರೂ ಮಳೆ ಸುಳಿವಿಲ್ಲ. ಒಂದೆರಡು ದಿನಗಳಲ್ಲಿ ಮಳೆಯಾಗುವ ವಾತಾವರಣವೂ ಕಂಡುಬರುತ್ತಿಲ್ಲ. ಇದರಿಂದ ಕಂಗೆಟ್ಟರೈತರು ಬಂದಿದ್ದು ಬರಲಿ ಎಂಬ ಹುಂಬ ಧೈರ್ಯದಲ್ಲಿ ಬಿತ್ತನೆ ಮಾಡಿದ್ದಾರೆ. ಇನ್ನುಳಿದವರು ಬೀಜ, ಗೊಬ್ಬರ ದಾಸ್ತಾನಿಟ್ಟುಕೊಂಡು ಕಾಯುತ್ತಿದ್ದಾರೆ.

ದಿಢೀರನೆ ಏರಿದ ಬಾಳೆಕಾಯಿ ದರ; ಶ್ರಾವಣ ಮಾಸಕ್ಕೂ ಮುನ್ನ ಏರಿಕೆ ಬಿಸಿ!

ಶೇ. 70ರಷ್ಟುಮಳೆ ಕೊರತೆ:

ಜೂನ್‌ ಆರಂಭದಿಂದ ಇಲ್ಲಿಯವರೆಗೆ 53.2 ಮಿಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ, ಇಲ್ಲಿವರೆಗೆ ಬಿದ್ದಿರುವುದು 16.2 ಮಿಮೀ ಮಳೆ ಮಾತ್ರ. ಅಂದರೆ, ಈ ತಿಂಗಳಲ್ಲಿ ಶೇ. 69.5ರಷ್ಟುಮಳೆ ಕೊರತೆಯಾಗಿದೆ. ಹಿರೇಕೆರೂರಿನಲ್ಲಿ ಶೇ. 90, ರಟ್ಟೀಹಳ್ಳಿ ಶೇ. 87, ಬ್ಯಾಡಗಿ ಮತ್ತು ರಾಣಿಬೆನ್ನೂರಿನಲ್ಲಿ ಶೇ. 82ರಷ್ಟುಮಳೆ ಕೊರತೆಯಾಗಿದೆ. ಬಿದ್ದ ಅಲ್ಪಸ್ವಲ್ಪ ಮಳೆಯೂ ಎಲ್ಲ ಕಡೆ ಸಮಾನವಾಗಿ ವ್ಯಾಪಿಸಿಲ್ಲ. ಕಳೆದ ಒಂದು ವಾರದಲ್ಲಿ ಬೀಳಬೇಕಿದ್ದ ವಾಡಿಕೆ ಮಳೆಗಿಂತ ಶೇ. 83ರಷ್ಟುಕೊರತೆಯಾಗಿದೆ. ಮಾಚ್‌ರ್‍ನಿಂದ ಮೇ ಅಂತ್ಯದವರೆಗೆ ಆಗುತ್ತಿದ್ದ ಮುಂಗಾರು ಪೂರ್ವ ವಾಡಿಕೆ ಮಳೆ ಪ್ರಮಾಣಕ್ಕಿಂತ ಶೇ. 30ರಷ್ಟುಅಭಾವವಾಗಿದೆ.

ಬಿತ್ತನೆ ಮಾಡಿದವರು ಕಂಗಾಲು:

ಜೂನ್‌ ಮೊದಲ ವಾರ ಮಳೆಯಾಗದಿದ್ದರೂ ನಂತರ ಆಗಬಹುದು ಎಂಬ ನಿರೀಕ್ಷೆಯಲ್ಲಿ ಕೆಲವು ರೈತರು ಬಿತ್ತನೆ ಮಾಡಿದ್ದರು. ಸೋಯಾಬಿನ್‌, ಮೆಕ್ಕೆಜೋಳ ಬಿತ್ತನೆ ಮಾಡಿ ಮಳೆ ನಿರೀಕ್ಷೆಯಲ್ಲಿದ್ದರು. ಇಂದು, ನಾಳೆ ಎಂದು ಕಾಯುತ್ತ ಕುಳಿತಿದ್ದ ರೈತರು ಈಗ ಕಂಗಾಲಾಗಿದ್ದಾರೆ. ಅಲ್ಪಸ್ವಲ್ಪ ತೇವಾಂಶವಿದ್ದ ಕಡೆ ಬೀಜ ಮೊಳಕೆಯೊಡೆದಿದ್ದು, ಈಗ ಬಿಸಿಲಿಗೆ ಕಮರಲು ಶುರುವಾಗಿದೆ. ಇನ್ನು ಕೆಲವು ಕಡೆ ಬಿತ್ತನೆ ಮಾಡಿದ ಬೀಜ ಚಿಗುರಲೇ ಇಲ್ಲ. ನೀರಾವರಿ ಸೌಲಭ್ಯ ಮಾಡಿಕೊಂಡಿರುವ ಕೆಲ ರೈತರು ಸ್ಟ್ರಿಂಕ್ಲರ್‌ ಹಚ್ಚಿ ಬೆಳೆ ಕಾಪಾಡಿಕೊಳ್ಳುತ್ತಿದ್ದರೆ, ಬಡ ಅತಿಸಣ್ಣ ರೈತರು ಬಿತ್ತನೆಗೆ ಖರ್ಚು ಮಾಡಿಕೊಂಡು ಈಗ ಖಾಲಿ ಕೈಯಲ್ಲಿ ಕೂತಿದ್ದಾರೆ. ಬಿತ್ತನೆಗೆ ಅವಸರ ಮಾಡದಂತೆ ಕೃಷಿ ಇಲಾಖೆ ನಿರಂತರವಾಗಿ ರೈತರಿಗೆ ಮಾಹಿತಿ ನೀಡುವ ಕೆಲಸ ಮಾಡುತ್ತ ಬಂದಿದೆ. ಇದರಿಂದ ಬಹುತೇಕ ರೈತರು ಇನ್ನೂ ಬಿತ್ತನೆ ಮಾಡಿಲ್ಲ. ಬೀಜ, ಗೊಬ್ಬರ ದಾಸ್ತಾನು ಮಾಡಿಕೊಂಡು ಕಾಯುತ್ತಿದ್ದಾರೆ.

ಬೀಜ, ಗೊಬ್ಬರ ವಿತರಣೆ:

ಜಿಲ್ಲೆಗೆ ಮುಂಗಾರು ಹಂಗಾಮಿಗಾಗಿ 42 ಸಾವಿರ ಮೆ. ಟನ್‌ ಯೂರಿಯಾ, 23 ಸಾವಿರ ಟನ್‌ ಡಿಎಪಿ, 11 ಸಾವಿರ ಮೆ.ಟನ್‌ ಕಾಂಪ್ಲೆಕ್ಸ್‌, ಎಂಒಪಿ, ಎಸ್‌ಎಸ್‌ಪಿ ಸೇರಿದಂತೆ 88514 ಮೆ.ಟನ್‌ ರಸಗೊಬ್ಬರ ಪೂರೈಕೆಯಾಗಿದೆ. ಇದರಲ್ಲಿ 50355 ಮೆ.ಟನ್‌ ರಸಗೊಬ್ಬರ ವಿತರಿಸಿದ್ದು 38159 ಟನ್‌ ಗೊಬ್ಬರ ದಾಸ್ತಾನಿದೆ. ಮೆಕ್ಕೆಜೋಳ, ಸೋಯಾಬಿನ್‌, ಶೇಂಗಾ ಸೇರಿದಂತೆ 13539 ಕ್ವಿಂಟಲ್‌ ಬಿತ್ತನೆ ಬೀಜ ಪೂರೈಕೆಯಾಗಿದ್ದು, ರೈತರಿಗೆ ಈಗಾಗಲೇ 6587 ಕ್ವಿಂಟಲ್‌ ವಿತರಣೆ ಮಾಡಲಾಗಿದೆ. ಭೂಮಿ ಹದಮಾಡಿಟ್ಟುಕೊಂಡು ಕೃಷಿ ಚಟುವಟಿಕೆಗೆ ಸಿದ್ಧರಾಗಿರುವ ರೈತರಿಗೆ ಮಳೆ ಕೈಕೊಟ್ಟಿರುವುದು ನಿರಾಸೆ ಮೂಡಿಸಿದೆ. ನಾಲ್ಕಾರು ದಿನಗಳಲ್ಲಿ ಮಳೆಯಾಗದಿದ್ದರೆ ಆಹಾರ ಧಾನ್ಯ ಉತ್ಪಾದನೆ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆಯಿದೆ.

ಬೇಡಿಕೆ ಇಳಿಕೆ: ಕೋಲಾರದ ಟೊಮೊಟೊ ಬೆಳಗಾರರಿಗೆ ಆತಂಕ.!

ಮುಂಗಾರು ಮಳೆ ಕೈಕೊಟ್ಟಿರುವುದು ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ರೈತರು ಬಿತ್ತನೆಗೆ ಅವಸರ ಮಾಡಬಾರದು ಎಂದು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ವಾತಾವರಣ ನೋಡಿಕೊಂಡು ಬಿತ್ತನೆ ಮಾಡಬೇಕು. ಇನ್ನು ಕೆಲವು ದಿನಗಳಲ್ಲಿ ಮಳೆಯಾಗದಿದ್ದರೆ ಸಮಸ್ಯೆಯಾಗಲಿದೆ.

ಚೇತನಾ ಪಾಟೀಲ, ಜಂಟಿ ಕೃಷಿ ನಿರ್ದೇಶಕಿ

click me!