ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಗ್ಗನಹಳ್ಳ ಗ್ರಾಮಕ್ಕೆ ಇಂದಿಗೂ ಓಡಾಡೋಕೆ ರಸ್ತೆ ಸಂಪರ್ಕವಿಲ್ಲ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಜೂ.05): ನಮ್ಮ ಭಾರತ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಮಲೆನಾಡು ಜಿಲ್ಲೆಯಾದ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕಗ್ಗನಹಳ್ಳ ಗ್ರಾಮಕ್ಕೆ ಇಂದಿಗೂ ಓಡಾಡೋಕೆ ರಸ್ತೆ ಇಲ್ಲ. ಸ್ವಾತಂತ್ರ್ಯ ಬಂದಾಗಿನಿಂದಲೂ ಇವರಿಗೆ ದೋಣಿ ಬಿಟ್ಟರೆ ಬದುಕೇ ಇಲ್ಲ. ಮಳೆಗಾಲದಲ್ಲಿ ದೋಣಿ- ಬೇಸಿಗೆಯಲ್ಲಿ ಸಂಕವೇ ಇವರಿಗೆ ಜೀವಾಳವಾಗಿದೆ. ಇನ್ನು ಸರ್ಕಾರಕ್ಕೆ ರಸ್ತೆಗಾಗಿ ಬೇಡಿಕೊಳ್ಳದ ರೀತಿ, ಮಾಡದ ಮನವಿ ಎರಡೂ ಉಳಿದಿಲ್ಲ. ಆದರೂ ಏನೂ ಪ್ರಯೋಜನವಾಗಿಲ್ಲ.
undefined
ಧುಮ್ಮಿಕ್ಕಿ ಹರಿಯುವ ಭದ್ರಾ ನದಿಗೆ ಕಾಲುಸಂಕ ನಿರ್ಮಾಣ: ಭದ್ರಾ ನದಿಗೆ ಕಾಲು ಸಂಕ. ತಡೆಗೋಡೆಯೂ ಇಲ್ಲ. ಜೀವಕ್ಕೆ ಗ್ಯಾರಂಟಿಯೂ ಇಲ್ಲ. ಮನೆಯಿಂದ ಹೊರಬಂದವರು ಮನೆಗೆ ಹೋದ ಮೇಲೆ ಬಂದರೂ ಅಂತ ಗ್ಯಾರಂಟಿ. ಸ್ವಾತಂತ್ರ್ಯ ಬಂದಾಗಿನಿಂದಲೂ ಇವ್ರ ಬದುಕೇ ಹೀಗೆ. ಇದು ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕಗ್ಗನಹಳ್ಳ ಗ್ರಾಮದ ಕಥೆ-ವ್ಯಥೆ. ಇವ್ರಿಗೆ ಮಳೆಗಾದಲ್ಲಿ ದೋಣಿಯೇ ಗತಿ. ಬೇಸಿಗೆ ಕಾಲದಲ್ಲಿ ಕಾಲು ಸಂಕವೇ ಬದುಕಿನ ಊರುಗೋಲು. ಇನ್ನು ಸತ್ತವರನ್ನು ಅಂತ್ಯ ಸಂಸ್ಕಾರ ಮಾಡುವುದಕ್ಕೆ, ಬಾಣಂತಿಯನ್ನ ಆಸ್ಪತ್ರೆಗೆ ಕೊಂಡೊಯ್ಯೋದಕ್ಕೆ, ಮಕ್ಕಳು ಶಾಲೆಗೆ ಹೋಗೋದಕ್ಕೂ ಪ್ರತಿಯೊಂದಕ್ಕೂ ಇವ್ರಿಗೆ ಮಳೆಗಾಲದಲ್ಲಿ ದೋಣಿ, ಬೇಸಿಗೆಯಲ್ಲಿ ಈ ಕಾಲುಸಂಕ ಆಸರೆಯಾಗುತ್ತವೆ.
Gruha Jyothi- ಕಾಂಗ್ರೆಸ್‌ನ ಉಚಿತ ವಿದ್ಯುತ್ ಜುಲೈನಿಂದ ಜಾರಿ: ಗೃಹಜ್ಯೋತಿಗೆ 10 ಷರತ್ತುಗಳು
ಸಣ್ಣ ಸೇತುವೆ ನಿರ್ಮಿಸಿಕೊಡಿ ಎಂದರೂ ನಿರ್ಲಕ್ಷ್ಯ: ಮಳೆಗಾದಲ್ಲಿ ಭದ್ರೆಯ ಒಡಲು ಭಯಂಕರ. ಆಗ ಈ ಸಂಕವೂ ಕೊಚ್ಚಿ ಹೋಗಿರುತ್ತೆ. ಬೇಸಿಗೆಯಲ್ಲಿ ಮತ್ತೆ ಕಟ್ಟಿಕೊಳ್ಳಬೇಕು. ಮಳೆಗಾಲದಲ್ಲಂತೂ ಒಂದೇ ಒಂದು ದಿನ ದೋಣಿ ಇಲ್ಲವಾದ್ರು ಇವ್ರಿಗೆ ಬದುಕೇ ಇಲ್ಲ. 50 ರಿಂದ 60 ಅಡಿ ಆಳದ ಭದ್ರಾ ನದಿ ಮೇಲೆ ಇವರು ಐದಾರು ದಶಕಗಳಿಂದ ತೇಲಿಕೊಂಡೇ ಬದುಕ್ತಿದ್ದಾರೆ. ಬೇರ್ಯಾವುದೇ ಸೌಲಭ್ಯ ಬೇಡ. ಒಬ್ಬಿಬ್ಬರು ಓಡಾಡುವಂತಹಾ ಒಂದು ತೂಗು ಸೇತುವೆಯನ್ನಾದ್ರು ನಿರ್ಮಿಸಿ ಕೊಡಿ ಎಂದು ಇವರು ದಶಕಗಳಿಂದ ಜನನಾಯಕರು ಹಾಗೂ ಅಧಿಕಾರಿಗಳಿಗೆ ಬೇಡಿಕೊಳ್ಳುತ್ತಿದ್ದಾರೆ. ಆದರೆ, ನೋ ಯೂಸ್. ಇಂತಹಾ ದುರ್ಗಮ ಸ್ಥಿತಿಯಲ್ಲಿ ನಾಲ್ಕೈದು ದಶಕಗಳಿಂದ ಬದುಕ್ತಿರೋ ಇವ್ರ ಬದುಕೇ ಒಂದು ಯಶೋಗಾಥೆ ಎನಿಸುವಂತಿದೆ.
ಮಕ್ಕಳು ತಿಂಗಳುಗಟ್ಟೆಲೆ ಶಾಲೆಗೆ ಹೋಗೋಕಾಗಲ್ಲ: ಮಳೆಗಾಲದಲ್ಲಿ ಈ ಗ್ರಾಮಕ್ಕೆ ದೋಣಿಯೇ ದೇವರು. ಬೇಸಿಗೆಯಲ್ಲಿ ಈ ಕಾಲುಸಂಕವೇ ಕಣ್ಣೆದುರಿಗಿನ ದೈವ. ಕಳಸದಲ್ಲಿ ವಾರ್ಷಿಕ ದಾಖಲೆ ಮಳೆ ಬೀಳುತ್ತೆ. ಮಳೆಗಾಲದಲ್ಲಂತೂ ಇವ್ರ ಸ್ಥಿತಿ ಹೇಳತೀರದು. ಅಂತಹಾ ಸಂದರ್ಭದಲ್ಲಿ ಮಕ್ಕಳು ತಿಂಗಳುಗಟ್ಟಲೆ ಶಾಲೆಗೆ ಹೋಗಲ್ಲ. ಕೆಲ ಮಕ್ಕಳು ಶಾಲೆಯನ್ನೇ ಬಿಟ್ಟಿದ್ದಾರೆ. ಮಳೆ-ಭದ್ರಾ ನದಿ ಹೆಚ್ಚಾಗಿದ್ರೆ ಮಳೆ ನಿಲ್ಲೋವರ್ಗೂ ಏನ್ ಮಾಡೋದಕ್ಕೂ ಆಗಲ್ಲ. ಆಕಡೆಯವ್ರು ಆಕಾಡೆಯೇ. ಈಕಡೆಯವ್ರು ಈಕಡೆಯೇ. ನಿಮಗೆ ಸೇತುವೆ ಮಾಡಿ ಕೊಡ್ತೀವಿ, ರಸ್ತೆ ಮಾಡಿ ಕೊಡ್ತೀವಿ ಅಂತ ಅಧಿಕಾರಿಗಳು-ಜನನಾಯಕರು ಬಂದಿದ್ದಾರೆ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಹೋಗಿದ್ದಾರೆ.
ಪಾಕಿಸ್ತಾನ ಹೆಸರಲ್ಲಿ ಅಂಕೋಲಾದಲ್ಲಿ ಪೋಸ್ಟರ್ ಪತ್ತೆ: ಜನತೆಗೆ ಬಾಂಬ್‌ನ ಆತಂಕ
ನದಿ ಬೇಡವೆಂದತೆ 10-12 ಕಿ.ಮೀ. ಕಾಡೊಳಗೆ ನಡೆಯಬೇಕು: ಇವ್ರಿಗೆ ಬೇರೆ ದಾರಿ ಇದ್ರು ಅದು 10-12 ಕಿ.ಮೀ. ಸಾಗಿ ಕಾಡೊಳಗೆ ಬರಬೇಕು. ಅದೂ ದುರ್ಗಮ ಹಾದಿ. ಅಲ್ಲಿ ಯಾರೋ ಓಡಾಡೋದಿಲ್ಲ. ಬಸ್ಗಳು ಬರೋದಿಲ್ಲ. ಆಟೋದವ್ರು ಹೇಳಿದ್ದೇ ರೇಟು. ಕೂಲಿ ಮಾಡೋ ಇವ್ರು ಬದುಕುವ ಅನಿವಾರ್ಯತೆಗೆ ಇಂದಿಗೂ ದೋಣಿ ಹಾಗೂ ಈ ಸಂಕವನ್ನೇ ನೆಚ್ಚಿಕೊಂಡಿದ್ದಾರೆ. ತೀರಾ ಅನಿವಾರ್ಯವಿದ್ದಾಗ ಎಸ್ಟೇಟಿನ ಕಾಲು ದಾರಿಯಲ್ಲಿ ಮುಖ್ಯ ರಸ್ತೆಗೆ ಬರುತ್ತಾರೆ. ಒಟ್ಟಾರೆ, ಇವ್ರ ಜೀವನವನ್ನ ಪದಗಳಲ್ಲಿ ವರ್ಣಿಸೋಕು ಆಗೋಲ್ಲ. ಇವ್ರಿಗೆ ಬೇಡೋದು, ಮನವಿ ಮಾಡೋದು ಬಿಟ್ರೆ ಬೇರೇನೂ ಗೊತ್ತಿಲ್ಲ. ಈಗ ಹೊಸ ಶಾಸಕರು ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿ ಪೂರ್ಣ ಬಹುಮತದ ಸ್ಪಷ್ಟ ಸರ್ಕಾರವಿದೆ. ಇನ್ನಾದ್ರು, ಸರ್ಕಾರ, ಜನನಾಯಕರು, ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಬಡಜನರಿಗೆ ಮೂಲಭೂತ ಸೌಲಭ್ಯವನ್ನ ಕಲ್ಪಿಸುತ್ತಾರ ಕಾದು ನೋಡಬೇಕು.