ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ 2ಎ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಜ.27ರಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬಲಿಜ ಸಂಕಲ್ಪ ಯಾತ್ರೆಯೊಂದಿಗೆ ಪ್ರತಿಭಟನೆ ನಡೆಸಲು ಆಯೋಜಿಸಿರುವ ಕಾರ್ಯಕ್ರಮಕ್ಕೆ ಜಿಲ್ಲೆಯ ಬಲಿಜ ಬಾಂಧವರು ಆಗಮಿಸುವಂತೆ ಬೆಂಗಳೂರು, ಚಾಮರಾಜಪೇಟೆ ಕರ್ನಾಟಕ ಪ್ರದೇಶ ಬಲಿಜ ಸಂಘದ ಅಧ್ಯಕ್ಷ ಪೆರಿಕಾಲ್ ಸುಂದರಮ್ ಕರೆ ನೀಡಿದ್ದಾರೆ
ಕೊರಟಗೆರೆ : ಬಲಿಜ ಸಮುದಾಯಕ್ಕೆ ಪೂರ್ಣ ಪ್ರಮಾಣದಲ್ಲಿ 2ಎ ಮೀಸಲಾತಿ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಜ.27ರಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬಲಿಜ ಸಂಕಲ್ಪ ಯಾತ್ರೆಯೊಂದಿಗೆ ಪ್ರತಿಭಟನೆ ನಡೆಸಲು ಆಯೋಜಿಸಿರುವ ಕಾರ್ಯಕ್ರಮಕ್ಕೆ ಜಿಲ್ಲೆಯ ಬಲಿಜ ಬಾಂಧವರು ಆಗಮಿಸುವಂತೆ ಬೆಂಗಳೂರು, ಚಾಮರಾಜಪೇಟೆ ಕರ್ನಾಟಕ ಪ್ರದೇಶ ಬಲಿಜ ಸಂಘದ ಅಧ್ಯಕ್ಷ ಪೆರಿಕಾಲ್ ಸುಂದರಮ್ ಕರೆ ನೀಡಿದ್ದಾರೆ.
ತುಮಕೂರು ನಗರದ ಬಲಿಜ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತುಮಕೂರು ಜಿಲ್ಲೆ ಬಲಿಜ ಸಂಘ ಸೇರಿದಂತೆ ಎಲ್ಲಾ ತಾಲೂಕು ಬಲಿಜ ಸಂಘಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಯಾವುದೇ ಆಯೋಗದ ಶಿಫಾರಸು ಇಲ್ಲದೇ 1994 ರಲ್ಲಿ 2ಎ ಯಿಂದ 3ಎ ಪ್ರವರ್ಗಕ್ಕೆ ಸೇರಿಸಲಾಗಿದ್ದು ಇದರಿಂದ ಬಲಿಜ ಸಮುದಾಯ ಅತ್ಯಂತ ಹೀನ ಪರಿಸ್ಥಿತಿಗೆ ತಲುಪಲು ಕಾರಣವಾಗಿದೆ. ಸತತ ಹೋರಾಟದ ಫಲವಾಗಿ ಕೇವಲ ವಿದ್ಯಾಭ್ಯಾಸಕ್ಕಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಮಾತ್ರ 2ಎ ಮೀಸಲಾತಿ ಸೌಲಭ್ಯವನ್ನು ನೀಡಲಾಗಿದೆ. ಪೂರ್ಣ ಪ್ರಮಾಣದ 2ಎ ಮೀಸಲಾತಿಗಾಗಿ ಹಲವಾರು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಕಾರಣ ಬಲಿಜ ಸಮುದಾಯ ಸರ್ಕಾರಿ ಉದ್ಯೋಗ ಮತ್ತು ರಾಜಕೀಯ ಮೀಸಲಾತಿಯಿಂದ ವಂಚಿತವಾಗಿದೆ. ಬಲಿಜ ಜನಾಂಗಕ್ಕೆ ಆದ ಅನ್ಯಾಯಕ್ಕೆ ನ್ಯಾಯ ಪಡೆಯುವ ದೃಷ್ಟಿಯಿಂದ ಜ.27ರಂದು ಫ್ರೀಡಂಪಾರ್ಕ್ನಲ್ಲಿ ಬಲಿಜ ಸಂಕಲ್ಪಯಾತ್ರೆಯೊಂದಿಗೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಒತ್ತಾಯ ಮಾಡಲು ತೀರ್ಮಾನಿಸಿದ್ದು ರಾಜ್ಯದ ಎಲ್ಲಾ ತಾಲೂಕುಗಳಿಂದ ಬಲಿಜ ಜನಾಂಗ ಆಗಮಿಸುವಂತೆ ಮನವಿ ಮಾಡಿದರು.
ತುಮಕೂರು ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ಆಡಿಟರ್ ಅಂಜಿನಪ್ಪ ಮಾತನಾಡಿದರು.
ಪೂರ್ವಭಾವಿ ಸಭೆಯಲ್ಲಿ ಕರ್ನಾಟಕ ಪ್ರದೇಶ ಬಲಿಜ ಸಂಘದ ನಿರ್ದೇಶಕರಾದ ವೆಂಕಟಾಚಲಪತಿ, ಸತೀಶ್, ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಆರ್.ಪ್ರಕಾಶ್, ಜಿಲ್ಲಾ ನಿದೇರ್ಶಕ ಕೊರಟಗೆರೆ ಕೆ.ಎಲ್.ಆನಂದ್, ಮಹಿಳಾ ಸಂಘದ ಅಧ್ಯಕ್ಷ ಗೀತಾ, ಕ್ಯಾತಂದ್ರ ರವಿಕುಮಾರ್, ಅಮರನಾರಾಯಣ ಪತ್ತಿನ ಅಧ್ಯಕ್ಷ ಮಂಜುನಾಥ್, ಎಸ್.ಪಿ.ಶಿವಕುಮಾರ್, ಪಾವಗಡ ತಾಲೂಕು ಬಲಿಜ ಸಂಘದ ಅಧ್ಯಕ್ಷ ಗುರಪ್ಪ, ಕಾರ್ಯದರ್ಶಿ ಶ್ರೀನಿವಾಸ್, ಕೊರಟಗೆರೆ ತಾಲೂಕು ಬಲಿಜ ಸಂಘದ ಅಧ್ಯಕ್ಷ ಎನ್.ಪದ್ಮನಾಭ್, ಕೆ.ವಿ. ಪುರುಷೋತ್ತಮ್, ಕಾರ್ಯದರ್ಶಿ ನವೀನ್‌ಕುಮಾರ್, ತಿಪಟೂರು ತಾಲೂಕಿನ ಅಧ್ಯಕ್ಷ ಲಕ್ಷ್ಮೀನಾರಾಣ್, ಅನಿಲ್, ಪ್ರಭಾಕರ್ ಸೇರಿದಂತೆ ವಿವಿಧ ತಾಲೂಕುಗಳ ಅಧ್ಯಕ್ಷರು, ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.
ಮನವಿಗೆ ಸ್ಪಂದಿಸದಿದ್ದರೆ ಹೋರಾಟ: ಜಗದೀಶ್
ಕರ್ನಾಟಕ ಪ್ರದೇಶ ಬಲಿಜ ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಮಾತನಾಡಿ, ರಾಜ್ಯದಲ್ಲಿ ಪ್ರಬಲ ಸಮುದಾಯಗಳಿಗೆ ಸರ್ಕಾರ ಎಬಿಸಿಡಿ ಎಂಬ ಹೊಸ ಮೀಸಲಾತಿಯ ಸೌಲಭ್ಯವನ್ನು ಕಲ್ಪಿಸಲು ಹೊರಟಿದೆ. ಆದರೆ ಹಿಂದುಳಿದ, ದನಿಯಿಲ್ಲದ ಬಲಿಜ ಜನಾಂಗದ ಕೂಗಿಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಬಲಿಜ ಸಮುದಾಯ 54 ವಿಧಾನಸಭಾ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಮೀಸಲಾತಿಯಲ್ಲಿ ಅನ್ಯಾಯವಾಗಿರುವ ಬಲಿಜ ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡುವಂತೆ ಜ.27ರಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸುತ್ತಿದ್ದು ಸರ್ಕಾರ ನಮ್ಮ ಮನವಿಗೆ ಮಾನ್ಯತೆ ನೀಡದೆ ಇದ್ದರೆ ಮುಂದಿನ ದಿನಗಳಲ್ಲಿ ಮೀಸಲಾತಿ ಕೊಡುವವರೆಗೂ ಉಗ್ರ ಹೋರಾಟದೊಂದಿಗೆ ಪ್ರತಿಭಟನೆ ನಡೆಸಲಾಗುವುದು. ಬಲಿಜ ಸಮುದಾಯವರು ಪ್ರತಿಭಟನೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.