ಜಿಲ್ಲೆಯ ಯಾವುದೇ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಕೊಳವೆಬಾವಿ ಕೊರೆದು ನೀರು ಪೂರೈಸಬೇಕು, ಬರ ನಿರ್ವಹಣೆಯನ್ನು ಅಧಿಕಾರಿಗಳು ಸಮರ್ಥವಾಗಿ ನಿರ್ವಹಿಸಬೇಕು. ಯಾವುದೇ ಇಲಾಖೆಯ ಅಧಿಕಾರಿಗಳಿಂದ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಎಚ್ಚರಿಕೆ ನೀಡಿದರು.
ತುಮಕೂರು : ಜಿಲ್ಲೆಯ ಯಾವುದೇ ಜನವಸತಿ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ತಕ್ಷಣವೇ ಕೊಳವೆಬಾವಿ ಕೊರೆದು ನೀರು ಪೂರೈಸಬೇಕು, ಬರ ನಿರ್ವಹಣೆಯನ್ನು ಅಧಿಕಾರಿಗಳು ಸಮರ್ಥವಾಗಿ ನಿರ್ವಹಿಸಬೇಕು. ಯಾವುದೇ ಇಲಾಖೆಯ ಅಧಿಕಾರಿಗಳಿಂದ ಬರ ನಿರ್ವಹಣೆಗೆ ಸಂಬಂಧಿಸಿದಂತೆ ಕರ್ತವ್ಯ ಲೋಪ ಕಂಡುಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಎಚ್ಚರಿಕೆ ನೀಡಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಾ, ಯಾವುದೇ ತೊಂದರೆಯಾಗದಂತೆ ತಹಸೀಲ್ದಾರ್, ಎಇಇ, ಇಒ ನಿಗಾವಹಿಸಬೇಕು. ಜಿಲ್ಲೆಗೆ ಕುಡಿಯುವ ನೀರಿನ ಪೂರೈಕೆ ಸಂಬಂಧ ಕೈಗೊಳ್ಳಲಾಗಿರುವ ಕ್ರಮಗಳಿಗೆ ಸಂಬಂಧಿಸಿದಂತೆ ಇನ್ನೊಂದು ವಾರದೊಳಗಾಗಿ ತಮಗೆ ವರದಿ ಸಲ್ಲಿಸಬೇಕು ಎಂದು ಸೂಚಿಸಿದ ಅವರು, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಬರ ನಿರ್ವಹಣೆಗೆ ಸಂಬಂಧಿಸಿದಂತೆ ಮೇಲುಸ್ತುವಾರಿಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳಬೇಕು ಎಂದು ಸೂಚಿಸಿದರು.
undefined
ಕುಡಿಯುವ ನೀರಿಗೆ ಹಾಗೂ ಗೆ ಸಂಬಂಧಿಸಿದಂತೆ ಆಯಾ ತಾಲೂಕಿನ ಶಾಸಕರ ನೇತೃತ್ವದ ಟಾರ್ಸ್ಕಫೋರ್ಸ್ ಸಮಿತಿ ಸಲ್ಲಿಸುವ ವರದಿಯನ್ನು ಇನ್ನು ಮುಂದೆ ನೇರವಾಗಿ ತಹಶೀಲ್ದಾರ್‌ಗಳು ಜಿಲ್ಲಾಧಿಕಾರಿಗಳ ಅನುಮೋದನೆಗೆ ಸಲ್ಲಿಸಬೇಕು. ತದ ನಂತರ ಟಾರ್ಸ್ಕಫೋರ್ಸ್ ಸಮಿತಿಯ ನಡಾವಳಿಯನುಸಾರ ಸಹಾಯಕ ಕಾರ್ಯಪಾಲಕ ಅಭಿಯಂತರರು ಅಂದಾಜು ಪಟ್ಟಿ ಸಿದ್ಧಪಡಿಸಿ ಗ್ರಾ.ಕು.ನೀ.ಮತ್ತು ನೈ.ಇಲಾಖೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಸೂಚಿಸಿದರು.
ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಪ್ರತಿ ತಾಲೂಕಿಗೆ ಈಗಾಗಲೇ 25 ಲಕ್ಷ ರು. ಬಿಡುಗಡೆಯಾಗಿದ್ದು, ಎಸ್.ಡಿ.ಆರ್.ಎಫ್. ಮೊತ್ತವೂ ಸೇರಿದಂತೆ ತಹಸೀಲ್ದಾರ್ ಖಾತೆಯಲ್ಲಿ ಕುಡಿಯುವ ನೀರು ಪೂರೈಕೆಗೆ ಒಟ್ಟು 50 ಲಕ್ಷ ರು. ಲಭ್ಯವಿರುತ್ತದೆ. ಕುಡಿಯುವ ನೀರು ಹಾಗೂ ಬರ ನಿರ್ವಹಣೆಗೆ ಮತ್ತಷ್ಟು ಪ್ರಸ್ತಾವನೆಗಳು ಬಂದಲ್ಲಿ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ 1.80ಲಕ್ಷ ಮಿನಿ ಮೇವಿನ ಬೀಜದ ಕಿಟ್‌ಗಳನ್ನು ವಿತರಣೆ ಮಾಡಿರುವುದರಿಂದ ರೈತರು ಹಸಿರು ಮೇವನ್ನು ಬೆಳೆದಿದ್ದು, ಸಧ್ಯದ ಪರಿಸ್ಥಿತಿಯಲ್ಲಿ ಮುಂದಿನ ಕೆಲವು ವಾರಗಳಿಗೆ ಜಿಲ್ಲೆಯಲ್ಲಿ ಮೇವಿಗೆ ತೊಂದರೆ ಇಲ್ಲ. ಮುಂದಿನ ದಿನಗಳಲ್ಲಿ ಸಿಎಸ್‌ಆರ್ ಅನುದಾನದಲ್ಲಿ ಮತ್ತಷ್ಟು ಮೇವಿನ ಕಿಟ್‌ಗಳನ್ನು ರೈತರಿಗೆ ವಿತರಿಸಿ ಮೇವು ಬೆಳೆಯುವ ಸಂಬಂಧ ಕ್ರಮ ಕೈಗೊಳ್ಳುವಂತೆ ಪಶು ಸಂಗೋಪನಾ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮ ಪಂಚಾಯತಿ ವತಿಯಿಂದ ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ಊರಿನ ಯಾವುದಾದರೂ ಒಂದು ಭಾಗದಲ್ಲಿ ನೀರಿನ ತೊಟ್ಟಿಗಳನ್ನು ಕಟ್ಟಿ ಜಾನುವಾರುಗಳಿಗೆ ನೀರು ಪೂರೈಸುವಂತೆ ಸೂಚಿಸಿದ ಸಚಿವರು, ಅರಣ್ಯ ಇಲಾಖೆ ವತಿಯಿಂದ ವನ್ಯ ಜೀವಿಗಳಿಗೆ ಕುಡಿಯುವ ನೀರಿಗಾಗಿ ಚೆಕ್‌ಡ್ಯಾಂಗಳನ್ನು ನಿರ್ಮಿಸುವಂತೆ ಸೂಚಿಸಿದರು.
ಸರ್ಕಾರಿ ಶಾಲೆಗಳಲ್ಲಿ ಹೆಣ್ಣು ಮಕ್ಕಳಿಗೆ ಪ್ರಥಮ ಆದ್ಯತೆ ಮೇರೆಗೆ ಶೌಚಾಲಯಗಳನ್ನು ನಿರ್ಮಿಸುವಂತೆ ಸೂಚಿಸಿದ ಸಚಿವರು, ಯಾವುದೇ ಸಂದರ್ಭದಲ್ಲೂ ಶಾಲಾ ಮಕ್ಕಳನ್ನು ಶೌಚಾಲಯ ಶುಚಿತ್ವ ಕಾರ್ಯಕ್ಕೆ ಬಳಸಿಕೊಳ್ಳಬಾರದು. ಜಿಲ್ಲೆಯಲ್ಲಿ ಈ ಕುರಿತಂತೆ ಯಾವುದೇ ದೂರು ಬರಬಾರದು. ಈ ಕುರಿತಂತೆ ಶಿಕ್ಷಕರಿಗೆ ಡಿಡಿಪಿಐಗಳು ಸೂಚನೆ ನೀಡಬೇಕು. ಮಕ್ಕಳ ಕೈಯಲ್ಲಿ ಶೌಚಾಲಯ ಶುಚಿಗೊಳಿಸಿರುವ ಕುರಿತಂತೆ ಯಾವುದೇ ದೂರು ಬಂದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ, ಎಸ್.ಡಿ.ಎಂ.ಸಿ. ಅಧ್ಯಕ್ಷ ಹಾಗೂ ಡಿಡಿಪಿಐಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿನ ಕುಡಿಯುವ ನೀರಿನ ಬಗ್ಗೆ ಮಾಹಿತಿ ನೀಡಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಕಾರ್ಯನಿರ್ವಾಹಕ ಅಭಿಯಂತರ ರವೀಶ್ ಅವರು, ಜಿಲ್ಲೆಯ 10 ತಾಲ್ಲೂಕುಗಳ ತುರ್ತು ಕುಡಿಯುವ ನೀರಿನ ಕಾಮಗಾರಿಗಳಿಗಾಗಿ ಸರ್ಕಾರವು ಜುಲೈ 2023 ರಲ್ಲಿ 100 ಲಕ್ಷ ರು.ಗಳನ್ನು ಮಂಜೂರು ಮಾಡಿರುತ್ತದೆ. ಸದರಿ ಅನುದಾನದಡಿ ಈಗಾಗಲೇ 36 ಜನವಸತಿಗಳಿಗೆ ಹೊಸ ಕೊಳವೆಬಾವಿ ಕೊರೆಯಲು 96 ಲಕ್ಷಗಳಿಗೆ ಮಂಜೂರಾತಿ ನೀಡಲಾಗಿರುತ್ತದೆ ಮತ್ತು ಬರಪೀಡಿತ ತಾಲೂಕುಗಳಲ್ಲಿ ತುರ್ತು ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಲು ಎಲ್ಲಾ 10 ತಾಲೂಕುಗಳಿಗೆ ತಲಾ 25ಲಕ್ಷ ರು.ಗಳನ್ನು ಇಲ್ಲಿಯವರೆಗೆ ಮಂಜೂರು ಮಾಡಲಾಗಿರುತ್ತದೆ. ಇಲ್ಲಿವರೆಗೆ ಸಮಸ್ಯಾತ್ಮಕ 72 ಗ್ರಾಮಗಳಲ್ಲಿ ಒಟ್ಟು 48 ಹೊಸ ಕೊಳವೆಬಾವಿಗಳು, 6 ಜನವಸತಿಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, 14 ಜನವಸತಿಗಳಿಗೆ ಖಾಸಗಿ ಕೊಳವೆ ಬಾವಿಯಿಂದ ಮತ್ತು 2 ಜನವಸತಿಗಳಿಗೆ ಪಕ್ಕದ ಜನವಸತಿಗಳಿಂದ ನೀರಿನ ಸಮಸ್ಯೆ ಬಗೆಹರಿಸಲಾಗಿರುತ್ತದೆ ಎಂದು ವಿವರಿಸಿದರು.
ಸಭೆಯಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್, ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಶಾಸಕರಾದ ಜಿ.ಬಿ. ಜ್ಯೋತಿಗಣೇಶ್, ತಿಪ್ಪೇಸ್ವಾಮಿ, ಸುರೇಶ್ ಗೌಡ, ಎಂ.ಟಿ. ಕೃಷ್ಣಪ್ಪ, ಸಿ.ಟಿ. ಸುರೇಶ್ ಬಾಬು, ವೆಂಕಟೇಶ್, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಪಂ ಸಿಇಒ ಜಿ.ಪ್ರಭು, ಪಾಲಿಕೆ ಆಯುಕ್ತೆ ಅಶ್ವಿಜ, ಎಸ್ಪಿ ಅಶೋಕ್ ಮುಂತಾದವರು ಹಾಜರಿದ್ದರು.