ಡಾ. ಡಿ. ನಂಜುಂಡಪ್ಪ ವರದಿಯನ್ವಯ ಅಗತ್ಯ ಅನುದಾನ ಹಂಚಿಕೆ ಮಾಡದಿರುವುದು ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ನೀಡಬೇಕಿದ್ದ ಅನುದಾನ ನೀಡದಿರುವುದು ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಪೆಟ್ಟು ನೀಡಿದೆ.
ಬಳ್ಳಾರಿ(ಆ.28): ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವಂತೆ ಡಾ. ಡಿ.ಎಂ. ನಂಜುಂಡಪ್ಪ ವರದಿಯನ್ವಯ ವಿವಿಧ ಇಲಾಖೆಗಳಿಗೆ ಅನುದಾನ ನೀಡಬೇಕು. ಪ್ರಾದೇಶಿಕ ಅಸಮಾನತೆ ತೊಡೆದು ಹಾಕಲು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ .3 ಸಾವಿರ ಕೋಟಿ ವಿಶೇಷ ಅನುದಾನ ಹಂಚಿಕೆ ಮಾಡಬೇಕು ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷ ಡಾ. ರಜಾಕ್ ಉಸ್ತಾದ್ ಹಾಗೂ ಜಿಲ್ಲಾಧ್ಯಕ್ಷ ಸಿರಿಗೇರಿ ಪನ್ನರಾಜ್ ಒತ್ತಾಯಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ .3 ಸಾವಿರ ಕೋಟಿ ಅನುದಾನ ನೀಡುವುದಾಗಿ ಘೋಷಿಸಲಾಗಿದೆ. ಇದರಲ್ಲಿ .1500 ಕೋಟಿ ಅನುದಾನ ಮೈಕ್ರೋ ಯೋಜನೆಗೆ ಹಾಗೂ ಉನ್ನುಳಿದ .1500 ಕೋಟಿ ಅನುದಾನವನ್ನು ಈ ಭಾಗದ ಶಿಕ್ಷಣ, ಉದ್ಯೋಗ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಬಳಸಲಾಗುವುದು ಎಂದು ಸರ್ಕಾರ ಹೇಳಿದೆ. ಅಲ್ಲದೆ, ಬಜೆಟ್‌ನಲ್ಲಿ ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನದ ವಿಶೇಷ ಯೋಜನೆಗೆ .3 ಸಾವಿರ ಕೋಟಿ ಮೀಸಲಿಟ್ಟಿದೆ. ಕರ್ನಾಟಕ ಸರ್ಕಾರ ರಾಜ್ಯದ ಬಜೆಟ್‌ನಲ್ಲಿ ಮೀಸಲಿಟ್ಟಿರುವ ಅನುದಾನವನ್ನು ವಲಯವಾರು ಹಂಚಿಕೆ ಮಾಡುವಾಗ ವಿಶೇಷ ಅಭಿವೃದ್ಧಿ ಯೋಜನೆಯ .1 ಸಾವಿರ ಕೋಟಿ ಅನುದಾನವನ್ನು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ವರ್ಗಾಯಿಸಿ, ಬಜೆಟ್‌ನಲ್ಲಿ ಹೇಳಿರುವಂತೆ ಮಂಡಳಿಗೆ .3 ಸಾವಿರ ಕೋಟಿ ಬದಲಾಗಿ ಬರೀ .2 ಸಾವಿರ ಕೋಟಿ ಅನುದಾನವನ್ನು ಹಂಚಿಕೆ ಮಾಡಲಾಗಿದೆ. ಆದರೆ, ವಿಶೇಷ ಅಭಿವೃದ್ಧಿ ಯೋಜನೆಯ 3 ಸಾವಿರ ಕೋಟಿ ಅನುದಾನದಲ್ಲಿ .1200 ಕೋಟಿ ಕಲ್ಯಾಣ ಕರ್ನಾಟಕದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಬಳಕೆ ಮಾಡಬೇಕಿದೆ. ಆದರೆ, ಆ ಅನುದಾನವನ್ನು ಮಂಡಳಿಗೆ ವರ್ಗಾವಣೆ ಮಾಡಿರುವುದರಿಂದ ಸರ್ಕಾರವು ಮಂಡಳಿಗೂ ವಂಚಿಸಿದೆ. ಅಲ್ಲದೆ, ವಿಶೇಷ ಅಭಿವೃದ್ಧಿ ಯೋಜನೆಯ ಮೂಲ ಉದ್ದೇಶಕ್ಕೂ ಅನ್ಯಾಯ ಎಸಗಿದೆ ಎಂದು ದೂರಿದರು.
undefined
ಬಳ್ಳಾರಿಯಲ್ಲಿ ಮಳೆ ಅವಾಂತರ: ನೀರಿನಲ್ಲಿ ತೇಲುತ್ತಿರೋ ಗಣೇಶ ಮೂರ್ತಿಗಳು
ಡಾ. ಡಿ.ಎಂ. ನಂಜುಡಪ್ಪ ವರದಿಯ ಅನುಷ್ಠಾನ ವಿಚಾರದಲ್ಲಿ ಈವರೆಗಿನ ಎಲ್ಲ ಸರ್ಕಾರಗಳು ಬದ್ಧತೆಯಿಂದ ಕಾರ್ಯನಿರ್ವಹಿಸಿಲ್ಲ. ಹೀಗಾಗಿ, ರಾಜ್ಯದಲ್ಲಿನ 39ರಷ್ಟಿದ್ದ ಅತ್ಯಂತ ಹಿಂದುಳಿದ ತಾಲೂಕುಗಳ ಸಂಖ್ಯೆ 40ಕ್ಕೆ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ 21 ರಷ್ಟಿದ್ದ ಅತ್ಯಂತ ಹಿಂದುಳಿದ ತಾಲೂಕುಗಳ ಸಂಖ್ಯೆ 24ಕ್ಕೇರಿದೆ. ಸಿಎಂಡಿಆರ್ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.
ಡಾ. ಡಿ.ಎಂ. ನಂಜುಡಪ್ಪ ವರದಿಯಲ್ಲಿ ರಾಜ್ಯದ 175 ತಾಲೂಕುಗಳಲ್ಲಿ 61 ತಾಲೂಕುಗಳು ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ತಾಲೂಕುಗಳು ಎಂದು ಗುರುತಿಸಲಾಗಿದೆ. 5 ವರ್ಷಗಳಲ್ಲಿ ವರದಿಯ ಅನುಷ್ಠಾನದ ಬಳಿಕ ಈ ಸಂಖ್ಯೆ 66ಕ್ಕೇರಿದೆ. ಅಂದರೆ ಇದೇ ವೇಗದಲ್ಲಿ ಹಿಂದುಳಿದ ತಾಲೂಕುಗಳ ಅಭಿವೃದ್ಧಿ ಮಾಡಿದಲ್ಲಿ ಇನ್ನೂ ಒಂದು ಶತಮಾನವಾದರೂ ಪ್ರಾದೇಶಿಕ ಅಸಮಾನತೆಯನ್ನು ಸರಿಪಡಿಸಲು ಸಾಧ್ಯವಾಗುವುದಿಲ್ಲ. ಕಲ್ಯಾಣ ಕರ್ನಾಟಕ ಭಾಗದ ಜನಪ್ರತಿನಿಧಿಗಳ ನಿರ್ಲಕ್ಷ್ಯ ಹಾಗೂ ಬದ್ಧತೆಯ ಕೊರತೆಯಿಂದಾಗಿಯೇ ಹಿಂದುಳಿದ ತಾಲೂಕುಗಳು ಅಭಿವೃದ್ಧಿ ಕಾಣದೆ ಸೊರಗುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಡಾ. ಡಿ. ನಂಜುಂಡಪ್ಪ ವರದಿಯನ್ವಯ ಅಗತ್ಯ ಅನುದಾನ ಹಂಚಿಕೆ ಮಾಡದಿರುವುದು ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ ನೀಡಬೇಕಿದ್ದ ಅನುದಾನ ನೀಡದಿರುವುದು ಈ ಭಾಗದ ಅಭಿವೃದ್ಧಿಗೆ ಸಾಕಷ್ಟು ಪೆಟ್ಟು ನೀಡಿದೆ. ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ತಮಗೆ ಬರಬೇಕಾದ ಅಭಿವೃದ್ಧಿ ಅನುದಾನ ಎಷ್ಟುಎಂಬುದನ್ನು ಅರಿತು ಈ ಭಾಗದ ಪ್ರಗತಿದಾಯಿಕ ಕೆಲಸಗಳಿಗೆ ತೊಡಗಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂಬಂಧ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಹೈದ್ರಾಬಾದ್ ಕರ್ನಾಟಕ ಹೋರಾಟ ಸಮಿತಿ ಮಾಡಲಿದೆ ಎಂದು ತಿಳಿಸಿದರು. ಸಮಿತಿಯ ಸದಸ್ಯರಾದ ರಿಜ್ವಾನ್, ಟಿ.ಜಿ.ವಿಠಲ್, ಎ.ಮಾನಯ್ಯ, ಅಲ್ಲೀಪರು ಶ್ರೀನಿವಾಸ ರೆಡ್ಡಿ, ರವಿಕುಮಾರ್, ಓಬಳೇಶ್ ಸುದ್ದಿಗೋಷ್ಠಿಯಲ್ಲಿದ್ದರು.