ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ| ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ ಪತಿ| ಬೆಳಗಾವಿಯಲ್ಲಿ ನಡೆದ ಘಟನೆ| ದಂಪತಿಗೆ ಕಳೆದ ಆರು ತಿಂಗಳ ಹಿಂದೆಯಷ್ಟೇ ಎರಡನೇ ಮಗುವಾಗಿತ್ತು|
ಬೆಳಗಾವಿ[ಫೆ.15]: ಕ್ಷುಲ್ಲಕ ಕಾರಣಕ್ಕೆ ಮನಸ್ತಾಪ ಉಂಟಾಗಿ ಪತಿಯೇ ತನ್ನ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ಶುಕ್ರವಾರ ಬೆಳಕಿಗೆ ಬಂದಿದೆ.
ಕಲಬುರಗಿ ಮೂಲದ ಬೆಳಗಾವಿ ವಿಜಯನಗರದಲ್ಲಿ ವಾಸಿಸುತ್ತಿದ್ದ ಕವಿತಾ ಪೀಸೆ (30) ಹತ್ಯೆಯಾದವಳು. ಈಕೆಯ ಪತಿ ವಿಜಯಪುರ ಜಿಲ್ಲೆಯ ತಾಳಿಕೋಟೆ ಮೂಲದ ಪರಶುರಾಮ ಪೀಸೆ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕಲಬುರಗಿಯ ಕವಿತಾಳನ್ನು ಎಂಟು ವರ್ಷಗಳ ಹಿಂದೆ ವಿಜಯಪುರ ಜಿಲ್ಲೆ ತಾಳಿಕೋಟೆ ಮೂಲದ ಪರಶುರಾಮ ಪೀಸೆ ಎಂಬುವವನ ಜೊತೆ ವಿವಾಹ ಮಾಡಿಕೊಡಲಾಗಿತ್ತು. ಬೆಳಗಾವಿಯ ಪ್ರತಿಷ್ಠಿತ ಬ್ಯಾಂಕ್‌ನಲ್ಲಿ ಕ್ಲರ್ಕ್ ಆಗಿ ಸೇವೆ ಸಲ್ಲಿಸುತ್ತಿದ್ದ ಪರಶುರಾಮ ಬೆಳಗಾವಿ ಹೊರವಲಯ ವಿಜಯನಗರದಲ್ಲಿ ವಾಸವಾಗಿದ್ದ. ಈಗಾಗಲೇ ಒಂದು ಹೆಣ್ಣು ಮಗುವಿರುವ ಈತನಿಗೆ ಕಳೆದ ಆರು ತಿಂಗಳ ಹಿಂದೆಯಷ್ಟೇ ಎರಡನೇ ಮಗುವಾಗಿತ್ತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಫೆ.17ರಂದು ಎರಡನೇ ಹೆಣ್ಣು ಮಗಳಿಗೆ ಶ್ರೀ ಕ್ಷೇತ್ರ ಸವದತ್ತಿ ಯಲ್ಲಮ್ಮ ಸನ್ನಿಧಿಯಲ್ಲಿ ಜವಳ ತೆಗೆಯಲು ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲ ಸಂಬಂಧಿಕರಿಗೆ ಕರೆ ಮಾಡಿ ಆಹ್ವಾನ ನೀಡಿದ್ದರು. ಆದರೆ ದುರಾದೃಷ್ಟ ಎಂಬಂತೆ ಗುರುವಾರ ಸಂಜೆ ವೇಳೆ ಪತಿ ಪತ್ನಿಯ ಮಧ್ಯೆ ಗಲಾಟೆ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿ ಪತ್ನಿಯನ್ನು ಕತ್ತು ಹಿಸುಕಿ ಪತಿ ಕೊಲೆ ಮಾಡಿದ್ದಾನೆ. ಬಳಿಕ ಕವಿತಾಳ ಪೋಷಕರಿಗೆ ಕರೆ ಮಾಡಿ ನಿಮ್ಮ ಮಗಳು ಹಲವು ಮಾತ್ರೆಗಳನ್ನು ನುಂಗಿ ಮಲಗಿಬಿಟ್ಟಿದ್ದಾಳೆ ಏಳುತ್ತಿಲ್ಲ ಎಂದು ಕಥೆ ಹೇಳಿದ್ದಾನೆ. ಬಳಿಕ ಆಕೆಯನ್ನು ಆ್ಯಂಬುಲೆನ್ಸ್ ಮೂಲಕ ನಗರ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.
ನಂತರ ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಮತ್ತೊಂದು ಕಥೆ ಕಟ್ಟಿದ್ದಾನೆ. ಬೆಳಗಾವಿಗೆ ಬಂದ ಕವಿತಾ ಪೋಷಕರು ಪರಶುರಾಮನನ್ನು ವಿಚಾರಿಸಿದ್ದಾರೆ. ಈ ವೇಳೆ ಪರಶುರಾಮ ಮೊದಲು ಹೇಳಿದ್ದಕ್ಕೂ, ಎದುರಿಗೆ ಹೇಳುವುದಕ್ಕೂ ವ್ಯತ್ಯಾಸವಾಗಿದೆ. ನಂತರ ಪೋಷಕರು ನಗರದ ಕ್ಯಾಂಪ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನನ್ವಯ ಪೊಲೀಸರು ಪತಿ ಪರಶುರಾಮನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹತ್ಯೆ ವಿಚಾರ ಹೊರಬಿದ್ದಿದೆ. ಈ ಕುರಿತು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.