ಕುರಿ ವಿವಿಧ ಸೊಪ್ಪು, ತೊಪ್ಪಲು ತಿನ್ನುವುದರಿಂದ ಅದರಲ್ಲಿನ ಆಯುರ್ವೇದ ಔಷಧೀಯ ಗುಣ ಮತ್ತು ಅಗತ್ಯ ಪೋಷಕಾಂಶ, ಹೆಚ್ಚಿನ ಸಾರ-ಸಾಂಧ್ರತೆ ಈ ಕುರಿ ಹಿಕ್ಕೆ ಗೊಬ್ಬರದ ಮೂಲಕ ಬೆಳೆಗಳಿಗೆ ಲಭ್ಯವಾಗುತ್ತದೆ. ಈ ಗೊಬ್ಬರ ಬಳಕೆಯಿಂದ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಬರುತ್ತದೆ ಎಂಬ ನಂಬಿಕೆ ರೈತರದ್ದಾಗಿದೆ.
ಲಕ್ಷ್ಮಣ ಹಿರೇಕುರಬರ
ತಾಂಬಾ(ಜು.20): ಭೂಮಿಯ ಫಲವತ್ತತೆ ಹೆಚ್ಚಿಸುವ ಕುರಿ ಹಿಕ್ಕಿ ಗೊಬ್ಬರಕ್ಕೆ ಈಗ ಭಾರಿ ಬೇಡಿಕೆ ಬಂದಿದೆ. ವಾಣಿಜ್ಯ ಬೆಳೆ ಬೆಳೆಯುವ ರೈತರು ರಾಸಾಯನಿಕ ಗೊಬ್ಬರ ಬಿಟ್ಟು ಕುರಿ ಹಿಕ್ಕೆ ಗೊಬ್ಬರಕ್ಕೆ ಮೊರೆ ಹೋಗುತ್ತಿದ್ದಾರೆ. ಕುರಿ ಹಿಕ್ಕಿ ಗೊಬ್ಬರಕ್ಕೆ ಹೇಳಿದಷ್ಟುಹಣ ಕೊಟ್ಟು ಖರೀದಿಸತೊಡಗಿದ್ದಾರೆ.
ಮುಖ್ಯವಾಗಿ ದ್ರಾಕ್ಷಿ, ನಿಂಬೆ, ದಾಳಿಂಬೆ ಬೆಳೆಗಾರರು ಗಿಡದಲ್ಲಿ ಹೆಚ್ಚಿನ ಹೂ ಬೀಡಬೇಕಾದರೆ ರಾಸಾಯನಿಕ ಗೊಬ್ಬರಕ್ಕಿಂತ ಕುರಿ ಹಿಕ್ಕಿ ಗೊಬ್ಬರ ಬಳಕೆಯೇ ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದಾರೆ. ಕುರಿಗಳು ಅಡವಿಯಲ್ಲಿ ನಾನಾ ತರಹದ ಗಿಡಗಳ ಎಲೆ, ಚಿಗುರು ತಿನ್ನುತ್ತವೆ. ಕುರಿ ಹಾಲಿನಲ್ಲಿ ಔಷಧೀಯ ಗುಣ ಹಾಗೂ ಪೌಷ್ಟಿಕಾಂಶ ಇರುವಂತೆ ಅದರ ಹಿಕ್ಕಿಯಲ್ಲೂ ಅಧಿಕ ಸಾರ, ಸತ್ವ ಇರುತ್ತದೆ ಎನ್ನುತ್ತಾರೆ ಕೃಷಿಕರು.
ಕಾಂಗ್ರೆಸ್ ಮಹಾಘಟಬಂಧನ್ ಕಳ್ಳರ ಕೂಟ: ಕೂಚಬಾಳ
ಕುರಿ ವಿವಿಧ ಸೊಪ್ಪು, ತೊಪ್ಪಲು ತಿನ್ನುವುದರಿಂದ ಅದರಲ್ಲಿನ ಆಯುರ್ವೇದ ಔಷಧೀಯ ಗುಣ ಮತ್ತು ಅಗತ್ಯ ಪೋಷಕಾಂಶ, ಹೆಚ್ಚಿನ ಸಾರ-ಸಾಂಧ್ರತೆ ಈ ಕುರಿ ಹಿಕ್ಕೆ ಗೊಬ್ಬರದ ಮೂಲಕ ಬೆಳೆಗಳಿಗೆ ಲಭ್ಯವಾಗುತ್ತದೆ. ಈ ಗೊಬ್ಬರ ಬಳಕೆಯಿಂದ ಬೆಳೆಗಳಲ್ಲಿ ಹೆಚ್ಚಿನ ಇಳುವರಿ ಬರುತ್ತದೆ ಎಂಬ ನಂಬಿಕೆ ರೈತರದ್ದಾಗಿದೆ.
ಹೆಚ್ಚು ಬೇಡಿಕೆ; ಅಧಿಕ ಬೆಲೆ:
ಹಿಗಾಗಿ, ಕುರಿಗಾಹಿಗಳ ಹಿಂದೆ ಬಿದ್ದ ರೈತರು ಕುರಿ ಹಿಕ್ಕಿ ಗೊಬ್ಬರ ಖರೀದಿಸಲು ನಾ ಮುಂದು ತಾ ಮುಂದು ಎಂದು ಪೈಪೋಟಿವೊಡ್ಡುತ್ತಿದ್ದಾರೆ. ಆದರೆ, ಬೇಡಿಕೆಗೆ ತಕ್ಕಷ್ಟುಗೊಬ್ಬರ ಲಭ್ಯವಾಗದಿದ್ದರಿಂದ ಕುರಿ ಹಿಕ್ಕಿ ಗೊಬ್ಬರದ ಬೆಲೆ ಪ್ರತಿ ವರ್ಷ ಏರುತ್ತಲೇ ಇದೆ. ಮೊದಲು .500, . 1000 ರೂಪಾಯಿಗೆ ಸಿಗುತ್ತಿದ್ದ ಒಂದು ಟ್ರ್ಯಾಕ್ಟರ್ ಗೊಬ್ಬರ ಈಗ ಕನಿಷ್ಠ . 6000 ತಲುಪಿದೆ. ಬೆಲೆ ದುಪ್ಪಟ್ಟಾದರೂ ಕುರಿ ಹಿಕ್ಕಿ ಗೊಬ್ಬರ ಕೊಳ್ಳುವವರ ಸಂಖ್ಯೆ ಹೆಚ್ಚುತ್ತಲೇ ಇದೆ.
ಮುಂಗಡ ಬುಕಿಂಗ್, ಹಣ ನೀಡಿಕೆ:
ಈಗ ಅಡ್ವಾನ್ಸ್ ಬುಕಿಂಗ್ ವ್ಯವಸ್ಥೆ ಚಾಲ್ತಿಯಲ್ಲಿದೆ. ಮುಂಗಡ ಬೇಡಿಕೆ ಸಲ್ಲಿಕೆ, ಹಣ ಪಾವತಿ ಕುರಿ ಗೊಬ್ಬರವನ್ನೂ ಬಿಟ್ಟಿಲ್ಲ. ಪ್ರಮುಖ ವಾಣಿಜ್ಯ ಬೆಳೆಗಾರರು ಕುರಿಗಾಹಿಗಳಿಗೆ ಮೊದಲೇ ಹಣ ನೀಡಿ ಗೊಬ್ಬರ ದಾಸ್ತಾನಿಡುವಂತೆ ಮೊರೆ ಇಡುತ್ತಿದ್ದಾರೆ. ತೋಟಗಾರಿಕೆ ಬೆಳೆಗಾರರು ಒಂದು ವರ್ಷದ ಮೊದಲೇ ತಮಗೆ ಬೇಕಾಗುವಷ್ಟುಕುರಿ ಗೊಬ್ಬರಕ್ಕೆ ಬೇಡಿಕೆ ಇಟ್ಟು ಸಹಸ್ರಾರು ರೂಪಾಯಿ ಸಹ ಕೈಗಿಟ್ಟು ಮುಂಗಡ ಬುಕ್ ಮಾಡುತ್ತಿದ್ದಾರೆ. ಹೀಗಾಗಿ ಈ ಭಾಗದ ಕುರಿಗಾಹಿಗಳು ಫುಲ್ ಖುಷ್ ಆಗಿದ್ದಾರೆ.
ಜಮೀನುಗಳಲ್ಲೂ ಕುರಿ ವಸತಿ:
ಅಲ್ಲದೇ, ರೈತರು ತಮ್ಮ ತಮ್ಮ ಜಮಿನುಗಳಲ್ಲಿ ರಾತ್ರಿ ಹೊತ್ತು ಕುರಿ ಹಿಂಡುಗಳನ್ನು ವಸತಿ ಇರಿಸಲೂ ಸಹ ಕುರಿಗಾಹಿಗಳಿಗೆ ಹಣ ನೀಡುತ್ತಿದ್ದಾರೆ. ಜೋಳ, ಗೋಧಿ ಕೊಟ್ಟು ರಾತ್ರಿಯಿಡಿ ಹೊಲದಲ್ಲಿ ಕುರಿ ಕಾವಲು ಮಾಡುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಇರುವ ಕುರಿಗಳ ಹಿಂಡು ಒಂದು ರಾತ್ರಿ ತಮ್ಮ ಹೊಲ, ಜಮೀನಲ್ಲಿ ತಂಗಿದರೆ ಸಾಕು ಮಣ್ಣು ಫಲವತ್ತತೆಯಾಗುತ್ತದೆ. ಕುರಿ ಹಾಕುವ ಹಿಕ್ಕಿ, ಮೂತ್ರ ಮಣ್ಣಿನಲ್ಲಿ ಬೆರೆತು ಗೊಬ್ಬರ ಕೊಟ್ಟಂತಾಗುತ್ತದೆ. ಬೆಳೆಯಲ್ಲಿ ಉತ್ತಮ ಇಳುವರಿ ಪಡೆಯಬಹುದು ಎಂಬುದು ರೈತರ ಲೆಕ್ಕಾಚಾರ.
ಶೆಡ್‌ಗಳಲ್ಲಿನ ಕುರಿ ಗೊಬ್ಬರದಲ್ಲಿ ಪೋಷಕಾಂಶ ಕಡಿಮೆ
ಕುರಿ ಹಿಕ್ಕಿಯಲ್ಲಿ ಅಧಿಕ ಪೋಷಕಾಂಶವಿರುತ್ತದೆ ನಿಜ. ಆದರೆ, ಹೊಲ, ಗದ್ದೆ, ಕಾಡು-ಮೇಡು, ಬಯಲು ಜಾಗೆಯಲ್ಲಿ ಓಡಾಡಿ ಮೇಯುವ ಆಡು, ಮೇಕೆ, ಕುರಿಗಳಿಂದ ಸಿಗುವ ಹಿಕ್ಕೆಯಲ್ಲಿ ಮಾತ್ರ ಅಧಿಕ ಸತ್ವವಿರುತ್ತದೆ. ಕಾರಣ ಇವು ಗುಡ್ಡ-ಬೆಟ್ಟಗಳಲ್ಲಿ ನೈಸರ್ಗಿಕವಾಗಿ ಸಿಗುವಂತಹ ವಿವಿಧ ಜಾತಿಯ ಸೊಪ್ಪುಗಳನ್ನು ತಿನ್ನುವುದರಿಂದ ಹಿಕ್ಕಿಯಲ್ಲಿ ಹೆಚ್ಚು ಸಾಂಧ್ರತೆ, ಔಷಧೀಯ ಗುಣ ಇರುತ್ತದೆ. ಆದರೆ, ಶೆಡ್‌ಗಳಲ್ಲಿ ಕಟ್ಟಿಸಾಕಾಣಿಕೆ ಮಾಡುವ ಕುರಿಗಳಿಂದ ಸಿಗುವ ಗೊಬ್ಬರದಲ್ಲಿ ಈ ಪ್ರಮಾಣದ ಪೋಷಕಾಂಶ ಲಭಿಸದು ಎನ್ನುತ್ತಾರೆ ಬಲ್ಲ ಬೆಳೆಗಾರರು. ಏಕೆಂದರೆ ಶೆಡ್‌ಗಳಲ್ಲಿ ಸಾಕಾಣಿಕೆ ಮಾಡುವ ಕುರಿಗಳಿಗೆ ಆಹಾರವಾಗಿ ಹಸಿ ಹುಲ್ಲು, ಮೆಕ್ಕೆಜೋಳದ ದಂಟು, ವಿವಿಧ ಕಾಳು ಕಡಿ ಹೊಟ್ಟು, ಹಿಂಡಿ ಮಾತ್ರ ನೀಡಲಾಗಿರುತ್ತದೆ. ಹಾಗಾಗಿ ಈ ಕುರಿಗಳ ಗೊಬ್ಬರದಲ್ಲಿ ಪೋಷಕಾಂಶ ಸ್ವಲ್ಪ ಕಡಿಮೆ ಇರುತ್ತದೆ. ಹಾಗಾಗಿ ಬೆಳೆಗಾರರು ಬಯಲು ಕುರಿ ಹಿಂಡಿನ ಗೊಬ್ಬರಕ್ಕೇ ಹೆಚ್ಚು ಹೆಚ್ಚು ಮುಗಿ ಬೀಳುತ್ತಿದ್ದಾರೆ.
ವಿಜಯಪುರ: ಲೋಕಾಯುಕ್ತ ಡಿವೈಎಸ್ಪಿ ಹೃದಯಘಾತದಿಂದ ಸಾವು
ದ್ರಾಕ್ಷಿ, ಪೇರಲ, ಬಾಳೆ ಹೀಗೆ ಯಾವುದೇ ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳಿಗೆ ರಾಸಾಯನಿಕ ಮತ್ತು ತಿಪ್ಪೇ ಗೊಬ್ಬರಕ್ಕಿಂತ ಕುರಿ ಹಿಕ್ಕಿ ಗೊಬ್ಬರ ಉಪಯೋಗಿಸುವುದೇ ಉತ್ತಮ. ನಾನು ಪ್ರತಿ ವರ್ಷ ದ್ರಾಕ್ಷಿ ಬೆಳೆಗೆ ಇದನ್ನೇ ಹಾಕಿ ಎಕರೆಗೆ 3 ರಿಂದ 5ಟನ್‌ವರೆಗೆ ಒಣ ದ್ರಾಕ್ಷಿ ಇಳುವರಿ ಪಡೆದಿದ್ದೇನೆ ಎಂದು ವಾಡೆ ದ್ರಾಕ್ಷಿ ಬೆಳೆಗಾರ ಸತೀಶ ಅಡವಿ ಹೇಳಿದ್ದಾರೆ.
ಕುರಿಗಳ ಹಿಂಡು ಸಾಕಾಣಿಕೆ ಇತ್ತೀಚಿನ ದಿನಗಳಲ್ಲಿ ಕಷ್ಟದ ಕಾಯಕವಾಗಿದೆ. ಈಚೆಗೆ ಮಳೆ ಕಮ್ಮಿಯಾಗುತ್ತಿದ್ದು, ಇನ್ನೊಂದೆಡೆ ಹಳ್ಳ ಕೊಳ್ಳದ ಬದಿ ಹಾಗೂ ಬೀಳು ಬಿದ್ದ ಜಾಗೆಗಳು ತೋಟಗಳಾಗಿ ಮಾರ್ಪಟ್ಟಿವೆ. ಇದರಿಂದಾಗಿ ಕುರಿ ಮೇಯಿಸಲು ಸ್ಥಳವಿಲ್ಲದಂತಾಗಿದೆ. ಈಗ ಕುರಿ ಹಿಕ್ಕಿ ಗೊಬ್ಬರಕ್ಕೆ ಉತ್ತಮ ಬೆಲೆ ಇರುವುದರಿಂದ ನಮಗೆ ಸ್ವಲ್ಪ ಅನುಕೂಲವಾಗಿದೆ. ಎಲ್ಲೆಲ್ಲೋ ಹೋಗಿ ಕುರಿ ಮೇಯಿಸಿಕೊಂಡು ಬರುತ್ತಿದ್ದೇವೆ ಎಂದು ಅಥರ್ಗಾ ಕುರಿಗಾಹಿ ಕುಲಪ್ಪಾ ಪೂಜಾರಿ ತಿಳಿಸಿದ್ದಾರೆ.