ನಗರದಲ್ಲಿ ದಿನದ 24 ಗಂಟೆಯೂ ಹೋಟೆಲ್ ತೆರೆಯಲು ಅನುಮತಿ ನೀಡಬೇಕು. ಜತೆಗೆ ಹೋಟೆಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಬೇಕು ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಬೆಂಗಳೂರು (ಜು.09): ನಗರದಲ್ಲಿ ದಿನದ 24 ಗಂಟೆಯೂ ಹೋಟೆಲ್ ತೆರೆಯಲು ಅನುಮತಿ ನೀಡಬೇಕು. ಜತೆಗೆ ಹೋಟೆಲ್ ಉದ್ಯಮಕ್ಕೆ ಕೈಗಾರಿಕಾ ಸ್ಥಾನಮಾನ ನೀಡಬೇಕು ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘವು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಪರಿಶೀಲಿಸಿದ ಡಿ.ಕೆ.ಶಿವಕುಮಾರ್ ಅವರು, ಮುಂದಿನ ವಾರ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅಭಿಪ್ರಾಯ ತಿಳಿಸುವುದಾಗಿ ಭರವಸೆ ನೀಡಿದರು ಎನ್ನಲಾಗಿದೆ.
ಶನಿವಾರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಅಧ್ಯಕ್ಷತೆಯಲ್ಲಿ ಶಿವಕುಮಾರ್ ಅವರನ್ನು ಭೇಟಿಯಾದರು. ಈ ವೇಳೆ ಸುಗಮ ವ್ಯವಹಾರಕ್ಕೆ ಪೂರಕವಾಗಿ ಉದ್ದಿಮೆ ಪರವಾನಗಿ, ಎಫ್‌ಎಸ್‌ಎಸ್‌ಎಐ ಪ್ರಮಾಣಪತ್ರ ಮತ್ತು ಶಾಪ್ ಆ್ಯಂಡ್ ಎಸ್ಟಾಬ್ಲಿಶ್‌ಮೆಂಟ್ ಪರವಾನಗಿಗಳು ಜೀವಮಾನದಲ್ಲಿ ಒಂದು ಬಾರಿ ಮಾತ್ರ ತೆಗೆದುಕೊಳ್ಳಲು ನಿಯಮ ಮಾಡಬೇಕು. ಪ್ರತಿ ವರ್ಷ ನವೀಕರಣ ಮಾಡಬೇಕಾದರೆ ಸಮಸ್ಯೆಗಳಾಗುತ್ತಿವೆ ಎಂದು ಹೇಳಿದರು. ಹೋಟೆಲ್ ಉದ್ಯಮ ಬಹಳಷ್ಟುಅವಿದ್ಯಾವಂತರಿಗೆ ಉದ್ಯೋಗ ಕೊಡುತ್ತಿರುವ ಜತೆಗೆ ರೈತರು ಬೆಳೆಯುವ ಪದಾರ್ಥಗಳಿಗೆ ಹೆಚ್ಚಿನ ಬೆಲೆಗೆ ಖರೀದಿಸಿ ಪ್ರೋತ್ಸಾಹಿಸುತ್ತಿದೆ.
ಬೀದಿಬದಿ ವ್ಯಾಪಾರಿಗಳಿಗೇ ಕಂಟಕವಾದ ತರಕಾರಿ ಬೆಲೆ ಏರಿಕೆ: ಖರೀದಿಗೆ ಗ್ರಾಹಕರ ಹಿಂದೇಟು
ಹಾಗಾಗಿ ಹೋಟೆಲ್‌ಗಳನ್ನು 24/7 ಕಾರ್ಯನಿರ್ವಹಿಸಲು ಅವಕಾಶ ನೀಡಬೇಕು. ಇದರಿಂದ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಪೊಲೀಸರು, ವೈದ್ಯಕೀಯ ಸಿಬ್ಬಂದಿ, ಆಟೋ ಮತ್ತು ಟ್ಯಾಕ್ಸಿ ಚಾಲಕರು ಮತ್ತಿತರ ಅಗತ್ಯ ಸೇವೆಯಡಿ ಕಾರ್ಯ ನಿರ್ವಹಿಸುವವರಿಗೆ ಅನಕೂಲವಾಗಲಿದೆ ಎಂದು ಮನವಿ ಮಾಡಿದ್ದಾರೆ. ಈ ವೇಳೆ ಮಾಜಿ ಮೇಯರ್ ಸಂಪತ್‌ರಾಜ್, ಸಂಘದ ಉಪಾಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್, ಜಂಟಿ ಕಾರ್ಯದರ್ಶಿ ರಾಕೇಶ್, ಶಾಕೀರ್, ಎಚ್.ಎಸ್.ಪ್ರಭಾಕರ್, ಕೃಷ್ಣರಾಜು ಹಾಜರಿದ್ದರು.
ವಿದ್ಯುತ್ ತಿದ್ದುಪಡಿ ಮಸೂದೆಗೆ ಎಂಜಿನಿಯರ್ಸ್ ಸಂಘ ವಿರೋಧ: ಕೇಂದ್ರ ಸರ್ಕಾರವು ಸಂಸತ್‌ನಲ್ಲಿ ಮಂಡಿಸಲು ಉದ್ದೇಶಿಸಿರುವ ವಿದ್ಯುತ್ ತಿದ್ದುಪಡಿ ಮಸೂದೆ-2022 ವಿಧೇಯಕವು ರೈತ, ಗ್ರಾಹಕ ವಿರೋಧಿಯಾಗಿದ್ದು ಯಾವುದೇ ಕಾರಣಕ್ಕೂ ಇದನ್ನು ಮಂಡಿಸಬಾರದು ಎಂದು ಒತ್ತಾಯಿಸಲು ಅಖಿಲ ಭಾರತ ವಿದ್ಯುತ್ ಎಂಜಿನಿಯರ್‌ಗಳ ಒಕ್ಕೂಟವು ನಿರ್ಧಾರ ಮಾಡಿದೆ. ಬೆಂಗಳೂರಿನಲ್ಲಿ ನಡೆದ ಅಖಿಲ ಭಾರತ ವಿದ್ಯುತ್ ಎಂಜಿನಿಯರ್‌ಗಳ ಒಕ್ಕೂಟದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ನಿರ್ಧಾರ ಮಾಡಿದ್ದು, ವಿದ್ಯುತ್ ತಿದ್ದುಪಡಿ ಮಸೂದೆಯನ್ನು ತರಾತುರಿಯಲ್ಲಿ ಮಂಡಿಸಬಾರದು. ಮಂಡನೆ ಮಾಡುವುದಾದರೆ ಸಂಬಂಧಪಟ್ಟಜನಸಾಮಾನ್ಯರು, ರೈತರು, ಪಾಲುದಾರರು, ವಿದ್ಯುತ್ ಎಂಜಿನಿಯರ್‌ಗಳ ಜತೆ ಸಮಾಲೋಚನೆ ನಡೆಸಬೇಕು ಎಂದು ಆಗ್ರಹಿಸಿದೆ.
ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಕಾಯ್ದೆಯಿಂದ ಗ್ರಾಹಕರು ಮತ್ತು ವಿದ್ಯುತ್ ವಲಯದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಭಾರೀ ಅನ್ಯಾಯವಾಗಲಿದೆ. ರೈತ ಸಮುದಾಯಕ್ಕೂ ಸರಿಪಡಿಸಲಾಗದಂತಹ ಪೆಟ್ಟು ಬೀಳಲಿದೆ. ಹೀಗಾಗಿ ಮಸೂದೆಯನ್ನು ಸಂಸತ್ತಿನ ವಿದ್ಯುತ್ ವ್ಯವಹಾರಗಳ ಸ್ಥಾಯಿ ಸಮಿತಿಯ ಪರಿಶೀಲನೆಗೆ ಒಳಪಡಿಸಬೇಕು. ಸ್ಥಾಯಿ ಸಮಿತಿ ಎಲ್ಲಾ ಪಾಲುದಾರರ ಜೊತೆ ವ್ಯಾಪಕ ಸಮಾಲೋಚನೆ ನಡೆಸಿ ಬಳಿಕ ತಿದ್ದುಪಡಿ ಮಾಡಿ ಮಂಡಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಎಐಪಿಎಫ್‌ನ ಅಧ್ಯಕ್ಷ ಶೈಲೇಂದ್ರ ದುಬೆ, ರೈತರೊಂದಿಗೆ ಚರ್ಚಿಸಿದ ಬಳಿಕವಷ್ಟೇ ಮಸೂದೆ ಮಂಡಿಸುವುದಾಗಿ ಕೇಂದ್ರ ಸರ್ಕಾರ ಕಿಸಾನ್ ಮೋರ್ಚಾಗೆ ಪತ್ರ ಬರೆದಿದೆ. ಆದರೆ ಸಂಪುಟದಲ್ಲಿ ಮಸೂದೆ ಮಂಡನೆಗೆ ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದೆ.
ಕಳೆದು ಹೋದ ಪಾಸ್‌ಪೋರ್ಟ್ ಮತ್ತೆ ಪಡೆಯಲು ಎಫ್‌ಐಆರ್ ಕಾಪಿ ಕಡ್ಡಾಯ: ಹೈಕೋರ್ಟ್
ಕೇಂದ್ರದ ಈ ನಡೆ ಆತಂಕಕಾರಿಯಾಗಿದೆ. ಹೊಸ ಮಸೂದೆಯಿಂದ ಸಬ್ಸಿಡಿ ರದ್ದಾಗಲಿದ್ದು, ಎಲ್ಲಾ ವೆಚ್ಚವನ್ನೂ ಗ್ರಾಹಕರೇ ಭರಿಸಬೇಕಾಗುತ್ತದೆ. ರೈತರು ಪ್ರತಿ ತಿಂಗಳು ಕೃಷಿ ಪಂಪ್‌ಸೆಟ್‌ಗೆ 10 ರಿಂದ 12 ಸಾವಿರ ರು. ಬಿಲ್ ಪಾವತಿಸುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ಪ್ರಧಾನ ಕಾರ್ಯದರ್ಶಿ ಪಿ. ರತ್ನಾಕರ ರಾವ್, ವಿದ್ಯುತ್ ಗ್ರಾಹಕರು ಹಾಗೂ ಎಂಜಿನಿಯರ್‌ಗಳ ಜತೆ ಸಮಾಲೋಚನೆ ನಡೆಸಬೇಕು. ನೂತನ ಕಾಯ್ದೆಯಿಂದ ದೇಶಾದ್ಯಂತ ಇರುವ ಒಂದು ಲಕ್ಷಕ್ಕೂ ಅಧಿಕ ವಿದ್ಯುತ್ ಎಂಜಿನಿಯರ್‌ಗಳಿಗೆ ತೊಂದರೆಯಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರವೇ ಹೊಣೆಯಾಗಲಿದೆ ಎಂದು ಎಚ್ಚರಿಸಿದರು.