ಜಿಲ್ಲೆಯ ಮಲೆನಾಡು ಆಲೂರು, ಸಕಲೇಶಪುರ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ ನಿಯಂತ್ರಣ ಅಧ್ಯಯನಕ್ಕೆ ಉನ್ನತ ಮಟ್ಟದ ತಂಡ ಇಂದು ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿತು.
ವರದಿ: ಕೆ.ಎಂ. ಹರೀಶ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾಸನ
ಹಾಸನ (ನ.08): ಜಿಲ್ಲೆಯ ಮಲೆನಾಡು ಆಲೂರು, ಸಕಲೇಶಪುರ ಭಾಗದಲ್ಲಿ ಕಾಡಾನೆ ಹಾವಳಿ ಮಿತಿಮೀರಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ಹಾಸನ ಹಾಗೂ ಕೊಡಗು ಜಿಲ್ಲೆಯಲ್ಲಿ ಕಾಡಾನೆ ಮಾನವ ಸಂಘರ್ಷ ನಿಯಂತ್ರಣ ಅಧ್ಯಯನಕ್ಕೆ ಉನ್ನತ ಮಟ್ಟದ ತಂಡ ಇಂದು ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಭೇಟಿ ನೀಡಿ ಪರಿಶೀಲನೆ ನಡೆಸಿತು. ನಂತರ ಸಕಲೇಶಪುರ ತಾಲ್ಲೂಕಿನ, ಬಾಗೆ ಗ್ರಾಮದಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂತ್ರಸ್ಥ ಜನರು, ವಿವಿಧ ಸಂಘ ಸಂಸ್ಥೆಗಳ ಮುಖಂಡರ ಜೊತೆ ಸಭೆ ನಡೆಸಿದರು. ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಲೇಬೇಕೆಂದು ಒಕ್ಕೊರಲಿನಿಂದ ಒತ್ತಾಯ ಮಾಡಿದರು.
ಅಲ್ಲದೇ ಪರಿಸರವಾದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಎರಡು ದಶಕಗಳಿಂದಲೂ ಹಾಸನ ಜಿಲ್ಲೆಯ, ಸಕಲೇಶಪುರ, ಆಲೂರು ತಾಲ್ಲೂಕಿನ ಕಾಡಾನೆಗಳ ಸಮಸ್ಯೆಯಿದ್ದು, ಬೇಲೂರು, ಅರಕಲಗೂಡು ತಾಲ್ಲೂಕಿಗೂ ಇದು ವ್ಯಾಪಿಸಿದೆ. ಇದುವರೆಗೂ ಕಾಡಾನೆ ದಾಳಿಯಿಂದ ಜಿಲ್ಲೆಯಲ್ಲಿ 77 ಜನರು ಮೃತಪಟ್ಟಿದ್ದಾರೆ. ಒಂದು ಸಾವಿರ ಕೋಟಿಗೂ ಹೆಚ್ಚು ಪ್ರಮಾಣದ ಬೆಳೆ ಹಾನಿಯಾಗಿದೆ. 34 ಕಾಡಾನೆಗಳು ಗುಂಡೇಟು, ವಿದ್ಯುತ್ ಶಾಕ್‌ನಿಂದ ಸಾವನ್ನಪ್ಪಿವೆ. ಕಾಡಾನೆ ದಾಳಿಗೆ ಕಳೆದ ಒಂದು ವಾರದ ಹಿಂದೆ ಮನು ಎಂಬುವವರು ಮೃತಪಟ್ಟಿದ್ದರು. ಮೃತ ವ್ಯಕ್ತಿಯ ಶವವನ್ನು ಇಟ್ಟು ಅಹೋರಾತ್ರಿ ಪ್ರತಿಭಟನೆ ನಡೆಸಲಾಗಿತ್ತು.
ಕೆಆರ್‌ಎಸ್ ಬಳಿ ಚಿರತೆ ಮತ್ತೆ ಪ್ರತ್ಯಕ್ಷ: ಕಳೆದ 20 ದಿನಗಳಿಂದ ಐದಾರು ಬಾರಿ ಪ್ರತ್ಯಕ್ಷ
ಪ್ರತಿಭಟನೆಗೆ ಮಣಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅಧಿಕಾರಿಗಳ ತಂಡ ಕಳುಹಿಸಿ ಕೊಡುವುದಾಗಿ ಹೇಳಿದ್ದರು. ಸಿಎಂ ಸೂಚನೆಯಂತೆ ಇಂದಿನಿಂದ ಹಾಸನ, ಕೊಡಗು ಭಾಗದಲ್ಲಿ ಅಧ್ಯಯನಕ್ಕೆ ಅರಣ್ಯ ಇಲಾಖೆ ಪಿಸಿಸಿಎಫ್ ರಾಜ ಕಿಶೋರ್ ಸಿಂಗ್, ಹಿರಿಯ ಅಧಿಕಾರಿಗಳಾದ ರಂಗರಾವ್.ಜಿ.ವಿ., ಸಮನ್ವಯಾಧಿಕಾರಿ ಶಾಶ್ವತಿ ನಿಷ್ಠ, ಫ್ರೊ.ನಿಶಾಂತ್, ಸಿದ್ದರಾಮಪ್ಪ ಸೇರಿ ಎಂಟು ಜನರ ತಂಡ ವನ್ಯಜೀವಿ ಬಾಧಿತ ಪ್ರದೇಶಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿತು. ಇದೇ ವೇಳೆ ಸಕಲೇಶಪುರ ತಾಲ್ಲೂಕಿನ, ಬಾಗೆ ಗ್ರಾಮದಲ್ಲಿ ಅಧಿಕಾರಿಗಳು, ಬಾದಿತ ಪ್ರದೇಶದ ಜನರು, ವಿವಿಧ ಸಂಘ ಸಂಸ್ಥೆಗಳ ಮುಖಂಡರ ಜೊತೆ ಸಭೆ ನಡೆಸಿದರು.
ಸಭೆಯಲ್ಲಿ ಮೃತ ಕುಟುಂಬಕ್ಕೆ ಪರಿಹಾರ ಹೆಚ್ಚಿಸಿ, ಸರ್ಕಾರಿ ಉದ್ಯೋಗ ಕೊಡುವಂತೆ ಒತ್ತಾಯಿಸಿದರು. ಇದೇ ವೇಳೆ ಪರಿಸರವಾದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಾಡಾನೆ ಹಿಡಿಯಲು ಅಡ್ಡಿಪಡಿಸಿದರೆ ಮೆಟ್ನಲಿ ಹೊಡಿತಿವಿ ಎಂದು ಬೆಕ್ಕನಹಳ್ಳಿ ನಾಗರಾಜ್ ಹರಿಹಾಯ್ದರು. ಕಾಡಾನೆ ಸ್ಥಳಾಂತರಿಸುವುದೇ ಶಾಶ್ವತ ಪರಿಹಾರ ಎಂದು ಅಧಿಕಾರಿಗಳು ವರದಿ ಸಲ್ಲಿಸಬೇಕು ಇಲ್ಲವಾದಲ್ಲಿ ನನ್ನ ಬಳಿ ಡಬಲ್ ಬ್ಯಾರೆಲ್‌ಗನ್ ಇದೆ, ನಾನು ತೋಟಕ್ಕೆ ಹೋದಾಗ ದಾಳಿ ಮಾಡಲು ಬಂದರೆ ಕಾಡಾನೆಗಳನ್ನು ಗುಂಡು ಹಾರಿಸಿ ಸಾಯಿಸುತ್ತೇವೆ. ನೀವು ನನ್ನನ್ನ ಅರೆಸ್ಟ್ ಮಾಡಿ ಬೇಕಾದ್ರೆ ಎಂದು ಮಾಜಿ ಶಾಸಕ ಎಚ್.ಎಂ.ವಿಶ್ವನಾಥ್ ಕಿಡಿಕಾರಿದರು. ಸಭೆಯಲ್ಲಿ ಎಲ್ಲರ ಅಭಿಪ್ರಾಯ, ಸಲಹೆ ಹಾಗೂ ಮನವಿ ಸ್ವೀಕರಿಸಿ ಮಾತನಾಡಿದ ಪಿಸಿಸಿಎಫ್ ರಾಜ್ ಕಿಶೋರ್ ಸಿಂಗ್ ಮೂರು ದಿನಗಳ ಕಾಲ ಹಾಸನ, ಕೊಡಗು ಭಾಗದಲ್ಲಿ ಅಧ್ಯಯನ ಮಾಡಲಿದ್ದೇವೆ.
ನಾಡದೋಣಿಗಳಿಗೆ ಪೂರೈಕೆಯಾಗದ ಸೀಮೆಎಣ್ಣೆ: ಚುನಾವಣೆ ವೇಳೆ ನೋಡಿಕೊಳ್ಳುತ್ತೇವೆಂದ ಮೀನುಗಾರರು
ಈ ಭಾಗದಲ್ಲಿ ಕಾಡಾನೆಗಳ ಹಾವಳಿ ಜಾಸ್ತಿಯಾಗಿರುವುದು ಮನದಟ್ಟಾಗಿದೆ. ಕಾಡಾನೆಗಳ ದಾಳಿಯಿಂದ ಮನುಷ್ಯನ ಪ್ರಾಣ ಹಾನಿ ತಪ್ಪಿಸುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಬೇಕಾದ ಕ್ರಮಕೈಗೊಳ್ಳಲು ಸರ್ಕಾರಕ್ಕೆ ವರದಿ ಸಲ್ಲಿಸುತ್ತೇವೆ ಎಂದರು. ಇದಕ್ಕೆ ಒಪ್ಪದ ಸ್ಥಳೀಯರು ನೀವು ಕಾಡಾನೆ ಸ್ಥಳಾಂತರ ಮಾಡುವುದು ಒಂದೇ ಪರಿಹಾರ ಎಂದು ವರದಿ ನೀಡಬೇಕೆಂದು ಮನವಿ ಮಾಡಿದರು. ಮಲೆನಾಡು ಭಾಗದ ಜನ ನೆಮ್ಮದಿಯಿಂದ ಬದುಕಬೇಕಾದರೆ ಕಾಡಾನೆಗಳ ಸ್ಥಳಾಂತರ ಒಂದೇ ಪರಿಹಾರ ಮಾರ್ಗ ಎಂಬುದು ಸಂತ್ರಸ್ಥರು,ಹೋರಾಟಗಾರರ ಅಭಿಪ್ರಾಯ. ಅಧಿಕಾರಿಗಳು ಸಲ್ಲಿಸುವ ವರದಿ ಮೇಲೆ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಅಧಿಕಾರಿಗಳ ವರದಿಯತ್ತ ಮಲೆನಾಡ ಜನರ ಚಿತ್ತ ಇದೆ.