ಶಿಕಾರಿಪುರ ತಾಲೂಕಿನಾದ್ಯಂತ ಧಾರಾಕಾರ ಮಳೆ

By Kannadaprabha News  |  First Published Aug 7, 2019, 8:00 AM IST

ಶಿವಮೊಗ್ಗದ ಶಿಕಾರಿಪುರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಅಂಜನಾಪುರ ಜಲಾಶಯ ಭರ್ತಿಯಾಗಿದೆ. ಇದರ ಜೊತೆಗೇ ಬಹುತೇಕ ಕೆರೆ ಕಟ್ಟೆ, ಜಲಾಶಯ ತುಂಬಿ ಹಲವೆಡೆ ಮನೆ, ಶಾಲೆ ಕುಸಿದು ಆತಂಕ ಸೃಷ್ಟಿಸಿದೆ. ಸೋಮವಾರ ಬೆಳಗ್ಗೆ 9ರಿಂದ ಮಂಗಳವಾರ ಬೆಳಗ್ಗೆವರೆಗೆ ಅತಿಹೆಚ್ಚು 109ಮಿ.ಮೀ ಮಳೆ ಸುರಿದಿದ್ದು, ಹಿರೇಜಂಬೂರಿನಲ್ಲಿ 106 ಮಿ.ಮೀ, ಅಮಟೆಕೊಪ್ಪದಲ್ಲಿ 104ಮಿ.ಮೀ. ಮಳೆಯಾಗಿದೆ.


ಶಿಕಾರಿಪುರ(ಆ.07): ತಾಲೂಕಿನಾದ್ಯಂತ ಕಳೆದ ಎರಡು ದಿನದಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಸಹಸ್ರಾರು ಎಕರೆ ಜಮೀನಿಗೆ ನೀರುಣಿಸುವ ರೈತರ ಜೀವನಾಡಿ ಅಂಜನಾಪುರ ಜಲಾಶಯ ಭರ್ತಿಯಾಗಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದ ಜತೆಗೆ ಬಹುತೇಕ ಕೆರೆ ಕಟ್ಟೆ, ಜಲಾಶಯ ತುಂಬಿ ಹಲವೆಡೆ ಮನೆ, ಶಾಲೆ ಕುಸಿದು ಆತಂಕ ಸೃಷ್ಟಿಸಿದೆ.

ತಾಲೂಕಿನ ಬಿಳಿಕಿ ಗ್ರಾಮ ವ್ಯಾಪ್ತಿಯಲ್ಲಿ ಸೋಮವಾರ ಬೆಳಗ್ಗೆ 9ರಿಂದ ಮಂಗಳವಾರ ಬೆಳಗ್ಗೆವರೆಗೆ ಅತಿಹೆಚ್ಚು 109ಮಿ.ಮೀ ಮಳೆ ಸುರಿದಿದ್ದು, ಹಿರೇಜಂಬೂರಿನಲ್ಲಿ 106 ಮಿ.ಮೀ, ಅಮಟೆಕೊಪ್ಪದಲ್ಲಿ 104ಮಿ.ಮೀ. ಮಳೆಯಾಗಿದೆ. ಕಪ್ಪನಹಳ್ಳಿ, ಜಕ್ಕಿನಕೊಪ್ಪ, ಹೊಸೂರು, ಕಾಗಿನಲ್ಲಿ, ಕಲ್ಮನೆ ಗ್ರಾಮ ವ್ಯಾಪ್ತಿಯಲ್ಲಿ 52 ಮಿ.ಮೀ ಮಳೆಯಾಗಿದೆ. ಈಸೂರು ಗ್ರಾಮದಲ್ಲಿ 39.5 ಮಿ.ಮೀ ಅತಿಕಡಿಮೆ ಮಳೆಯಾಗಿರುವ ವರದಿಯಾಗಿದೆ.

Tap to resize

Latest Videos

ಹಲವೆಡೆ ಬೆಳೆಹಾನಿ:

ತಾಲೂಕಿನ ಹುಲುಗಿನಕೊಪ್ಪ, ಮಾಡ್ರವಳ್ಳಿ, ಅಡಗಂಟಿ, ಜಕ್ಕಿನಕೊಪ್ಪ, ಹಳೆ ಕಣಿಯಾ, ಕೆಂಗಟ್ಟೆ, ಹಳೆಮುತ್ತಿಗೆ, ರಾಗಿಕೊಪ್ಪತಾಂಡ, ಚುರ್ಚಿಗುಂಡಿ, ಶಂಕ್ರಿಕೊಪ್ಪ, ಕೊರಟಿಗೆರೆ, ಶಿರಾಳಕೊಪ್ಪ ದಾಸರ ಕಾಲೋನಿ, ನೆಹರೂ ಕಾಲೋನಿಯಲ್ಲಿ ತಲಾ ಒಂದು ಮನೆ ಕುಸಿತಕ್ಕೆ ಒಳಗಾಗಿವೆ. ಗಾಮದಲ್ಲಿ 2, ತರಲಘಟ್ಟ3, ಬಿದರಕೊಪ್ಪ 3 ಮನೆಗಳು ಕುಸಿದಿದ್ದು, ಜನತೆ ಸಮಸ್ಯೆಗೆ ಒಳಗಾಗಿದ್ದಾರೆ. ತಾಲೂಕಿನ ಮುಡಬಸಿದ್ದಾಪುರ, ಕಲ್ಮನೆ ಗ್ರಾಮದಲ್ಲಿ ಭತ್ತದ ನಾಟಿ ಹಾಳಾಗಿದೆ. ತಿಮ್ಲಾಪುರ ಗ್ರಾಮದ ವಡ್ಡನಕೆರೆ ತುಂಬಿ ಬೆಳೆಹಾನಿ ಸಂಭವಿಸಿದೆ. ಶಿವಾಜಿ ಕಣಿಯ ಅರಕೇರೆ ಸೇತುವೆ ಕುಸಿದಿದೆ.

ಪಟ್ಟಣದ ಗಬ್ಬೂರು ಪ್ರದೇಶದ ವೀರನಗೌಡ, ಬಸವಣ್ಯೆಪ್ಪಗೌಡರಿಗೆ ಸಂಬಂದಿಸಿದ ನಾಲ್ಕು ಮನೆಗೆ ನೀರು ನುಗ್ಗಿದ್ದು, ಪೂರ್ಣ ರಾತ್ರಿ ನಿದ್ರೆಯಿಲ್ಲದೆ ಕಾಲಕಳೆದಿದ್ದಾರೆ. ಪುರಸಭೆ ಸದಸ್ಯ ಮಹೇಶ್‌ ಹುಲ್ಮಾರ್‌, ಮುಖ್ಯಾಧಿಕಾರಿ ಸುರೇಶ್‌, ಕೆಶಿಪ್‌ ಅಧಿಕಾರಿಗಳು ಆಗಮಿಸಿ ಜೆಸಿಬಿ ಮೂಲಕ ನೀರನ್ನು ಸ್ಥಳದಿಂದ ಸಾಗಿಸಲು ವ್ಯವಸ್ಥೆ ಕೈಗೊಂಡ ನಂತರ ಸಮಸ್ಯೆ ಪರಿಹಾರವಾಗಿದೆ.

ಮಹಾಮಳೆ: ಅರ್ಧ ಕರ್ನಾಟಕಕ್ಕೆ ಜಲಸಂಕಷ್ಟ!

ಅಂಜನಾಪುರ ಜಲಾಶಯ ಭರ್ತಿ:

ಅಂಜನಾಪುರ ಜಲಾಶಯ ಮಂಗಳವಾರ ಮಧ್ಯಾಹ್ನದ ವೇಳೆಯಲ್ಲಿ ಭರ್ತಿಯಾಗಿ ಪ್ರಸಿದ್ಧ ಗೋಡ್‌ಬೋಲೆ ಗೇಟ್‌ನಿಂದ ನೀರು ದುಮ್ಮಿಕ್ಕುತ್ತಿದ್ದು, ನೋಡುಗರ ಕಣ್ಮನ ಸೆಳೆಯುತ್ತಿದೆ. ಸ್ಥಳೀಯರು, ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಧಾವಿಸಿ ರುದ್ರರಮಣೀಯ ದೃಶ್ಯದ ಸೊಬಗನ್ನು ಸವಿಯುತ್ತಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೈತರಿಗೆ ಸಲಹೆ:

ಕಳೆದ ಎರಡು ದಿನಗಳಿಂದ ಸತತ ಮಳೆ ಆಗುತ್ತಿರುವುದರಿಂದ ತಾಲೂಕಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿರುವ ರೈತರು ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಕೃಷಿ ಇಲಾಖೆ ಮನವಿ ಮಾಡಿದೆ. ಜಮೀನಿನಲ್ಲಿ ನೀರು ನಿಲ್ಲದಂತೆ ಕಾಲುವೆ ತೋಡಿ ನೀರನ್ನು ಹೊರ ಕಳುಹಿಸುವ ಪ್ರಯತ್ನ ಮಾಡಬೇಕು. ಮೆಕ್ಕೆಜೋಳದಲ್ಲಿ ಸತತ 5-6ದಿನ ನೀರು ನಿಂತಲ್ಲಿ ತೆನೆ ಕಟ್ಟುವುದಿಲ್ಲ. ಮಳೆ ನಿಂತ ನಂತರ ಎರಡನೆ ಗೊಬ್ಬರ ನೀಡದ ರೈತರು ಗಿಡದ ಸುತ್ತಮುತ್ತ ಯೂರಿಯಾ ಗೊಬ್ಬರ ಹಾಕಿ ಮಣ್ಣಿನಿಂದ ಏರಿಸಬೇಕು. ನೀರಿನಲ್ಲಿ ಕರಗುವ 19:19:19 ಗೊಬ್ಬರ ಲೀಟರ್‌ ನೀರಿಗೆ 3-4ಗ್ರಾಂ ಬೆರೆಸಿ ಎಕರೆಗೆ 200ಲೀಟರ್‌ನಷ್ಟುಸಿಂಪಡಿಸುವಂತೆ ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ಕಿರಣ್‌ಕುಮಾರ್‌ ತಿಳಿಸಿದ್ದಾರೆ.

click me!