ಈ ಬಾರಿ ಮಳೆಯಿಲ್ಲದೆ ತೀವ್ರ ಬರ ಆವರಿಸಿದ್ದರಿಂದ ತಾಪಮಾನ ಅಧಿಕವಾಗಿದ್ದು, ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಿದೆ. ಬೇಡಿಕೆಗೆ ತಕ್ಕಂತೆ ಮಡಿಕೆ ತಯಾರಿಸಲಾಗದೇ ನೆರೆಯ ಮಹಾರಾಷ್ಟ್ರದಿಂದ ಸಿದ್ಧವಾಗಿರುವ ಮಡಿಕೆಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.
ಅಣ್ಣಾಸಾಬ ತೆಲಸಂಗ
ಅಥಣಿ(ಮಾ.14): ಆಧುನಿಕ ಜೀವನಶೈಲಿಯ ಭರಾಟೆಯಲ್ಲಿ ಮಣ್ಣಿನ ಮಡಿಕೆಗಳು ಕಣ್ಮರೆಯಾಗಿ ಸ್ಟೀಲ್, ಅಲ್ಯೂಮಿನಿಯಂ, ಪ್ಲಾಸ್ಟಿಕ್, ಫೈಬರ್ ಪಾತ್ರೆಗಳು ಮಾರುಕಟ್ಟೆ ಆವರಿಸಿವೆ. ಮಣ್ಣಿನ ಮಡಿಕೆಗೆ ಬೇಡಿಕೆ ಕುಸಿದು ಈ ಕಸಬು ನಂಬಿ ಬದುಕುತ್ತಿದ್ದ ಕುಂಬಾರರಲ್ಲಿ ಚಿಂತೆ ಆವರಿಸಿತ್ತು. ಆದರೆ, ಈ ವರ್ಷ ಮಳೆಯ ಕೊರತೆಯಿಂದ ತಾಪಮಾನ ಹೆಚ್ಚಿದ್ದು, ಬಿಸಿಲಿನ ತಾಪಕ್ಕೆ ಬಸವಳಿದಿರುವ ಜನತೆ ಮಡಿಕೆ ಮೊರೆ ಹೋಗಿದ್ದಾರೆ. ಬಡವರ ಫ್ರಿಡ್ಜ್‌ಗಳು ಎಂದೇ ಕರೆಯಲ್ಪಡುವ ಮಣ್ಣಿನ ಮಡಿಕೆಯ ವ್ಯಾಪಾರದಲ್ಲಿ ಚೇತರಿಕೆ ಕಂಡು ಬಂದಿದ್ದು, ಕುಂಬಾರರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಮೂರು ವರ್ಷಗಳಿಂದ ಒಂದಿಲ್ಲೊಂದು ರೀತಿಯಲ್ಲಿ ಸಮಸ್ಯೆ ಎದುರಿಸುತ್ತಿದ್ದರು. ಕೊರೋನಾ ಮಹಾಮಾರಿ ಹಾಗೂ ಬೇಸಿಗೆ ಸಮಯದಲ್ಲಿ ಅಕಾಲಿಕ ಮಳೆಯಿಂದ ಮಣ್ಣಿನ ಮಡಿಕೆಗೆ ಬೇಡಿಕೆ ಇಲ್ಲದೆ ಕುಂಬಾರರು ನಷ್ಟದಲ್ಲಿ ಜೀವನ ಸಾಗಿಸುತ್ತಿದ್ದರು. ಕುಲಕಸಬು ನಂಬಿ ಅನೇಕ ಕುಟುಂಬಗಳು ಬೇರೆ ಕೆಲಸದತ್ತ ಮುಖ ಮಾಡಿದ್ದವು.
ಮೋದಿ ಬಗ್ಗೆ ಚಿಕ್ಕೋಡಿ ಜನ ಹೇಳೋದೇನು..? ಕಾಂಗ್ರೆಸ್ ಗ್ಯಾರಂಟಿ ಯೋಜನೆ ವರ್ಕೌಟ್ ಆಗಿದ್ಯಾ..?
ಅಥಣಿ ಪಟ್ಟಣದ ಜೋಡಿ ಕೆರೆಗಳ ಹತ್ತಿರ ವಾಸವಾಗಿರುವ 6 ಕುಂಬಾರಿಕೆ ಕುಟುಂಬಗಳಿವೆ. ಅನೇಕ ತಲೆಮಾರುಗಳಿಂದ ಹದವಾದ ಮಣ್ಣನ್ನು ತಂದು ಮಡಿಕೆಗಳನ್ನು ತಯಾರಿಸಿ ಮಾರಾಟ ಮಾಡುವುದು ಇವರ ನಿತ್ಯ ಕಸಬು. ದಿನಪೂರ್ತಿ ಬಿಸಿಲಿಗೆ ಬೆಂದು, ಕೈಗೆ ಬಂದ ಅಷ್ಟೋ ಇಷ್ಟು ಹಣದಿಂದ ನೆಮ್ಮದಿಯ ಜೀವನ ಸಾಗಿಸುತ್ತಿದ್ದಾರೆ. ಆದರೆ, ಕೊರೋನಾ, ಅಕಾಲಿಕ ಮಳೆಯಿಂದ ಕೆಲ ವರ್ಷಗಳಿಂದ ಅವರ ಬದುಕು ಹಳಿತಪ್ಪಿದ ರೈಲಿನಂತಾಗಿತ್ತು. ಈ ಬಾರಿ ಮಳೆಯಿಲ್ಲದೆ ತೀವ್ರ ಬರ ಆವರಿಸಿದ್ದರಿಂದ ತಾಪಮಾನ ಅಧಿಕವಾಗಿದ್ದು, ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಿದೆ. ಬೇಡಿಕೆಗೆ ತಕ್ಕಂತೆ ಮಡಿಕೆ ತಯಾರಿಸಲಾಗದೇ ನೆರೆಯ ಮಹಾರಾಷ್ಟ್ರದಿಂದ ಸಿದ್ಧವಾಗಿರುವ ಮಡಿಕೆಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ.
₹100 ರಿಂದ ₹ 800 ದರ:
ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ದರವೂ ಹೆಚ್ಚಾಗಿದೆ. ಮಡಿಕೆಗಳಿಗೆ ಏನಿಲ್ಲವೆಂದರೂ ₹100 ರಿಂದ ₹ 800 ದರ ಇದೆ. ಕಪ್ಪು ಬಣ್ಣದ ಮಡಿಕೆ ಹಾಗೂ ಕಂದು ಬಣ್ಣದ ಮಡಿಕೆಗಳಿಗೆ ಪ್ರತ್ಯೇಕ ದರವೂ ಇದೆ. ಬಹುತೇಕ ಜನರು ಕಂದು ಬಣ್ಣದ ಮಡಿಕೆ ಕೊಳ್ಳಲು ಆಸಕ್ತಿ ತೋರುತ್ತಿದ್ದು, ಕುಂಬಾರರೂ ಕಂದು ಬಣ್ಣದ ಮಡಿಕೆಗಳನ್ನೇ ಹೆಚ್ಚಾಗಿ ನೆರೆಯ ಮಹಾರಾಷ್ಟ್ರದಿಂದ ತರಿಸಿಕೊಂಡು ಮಾರಾಟ ಮಾಡುತ್ತಿದ್ದಾರೆ. ಮಡಿಕೆಗಳ ಜೊತೆಗೆ ಮಣ್ಣಿನಿಂದ ತಯಾರಿಸಿದ ನೀರಿನ ಬಾಟಲ್‌ಗಳು, ಹೊಗೆರಹಿತ ಒಲೆಗಳು, ಮಣ್ಣಿನ ಗಡಿಗೆಗಳು, ಕುಳ್ಳಿ, ಹರವಿ, ಪರಿಯಣ, ಹಣತೆ ಮುಂತಾದ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಈಗ ಬೇಸಿಗೆ ಬರುತ್ತಿದ್ದಂತೆಯೇ ಮಣ್ಣಿನ ಮಡಿಕೆಗಳಿಗೆ ಬೇಡಿಕೆ ಹೆಚ್ಚಿದೆ. ನಿತ್ಯ ನೂರಾರು ಮಡಿಕೆಗಳು ವ್ಯಾಪಾರವಾಗುತ್ತಿವೆ.
ಪ್ರತಿ ವರ್ಷಕ್ಕಿಂತ ಈ ಬಾರಿ ಬಿಸಿಲಿನ ತಾಪ ಹೆಚ್ಚಿಗೆ ಇರುವುದರಿಂದ ಜನರು ತಣ್ಣನೆಯ ನೀರು, ತಂಪು ಪಾನೀಯ ಕುಡಿಯಲು ಬಯಸುವುದು ಸಹಜ. ಬಡವರಿಗೆ ಫ್ರಿಡ್ಜ್ ಕೊಳ್ಳುವ ಶಕ್ತಿ ಇರಲ್ಲ, ಶ್ರೀಮಂತರಲ್ಲಿ ಹಲವರು ಫ್ರಿಡ್ಜ್ ಇದ್ದರೂ ಬೇಸಿಗೆ ಕಾಲದಲ್ಲಿ ಆರೋಗ್ಯದ ದೃಷ್ಟಿಯಿಂದ ಮಣ್ಣಿನ ಮಡಿಕೆ ಬಳಸುತ್ತಾರೆ. ಹೀಗಾಗಿ ಮಣ್ಣಿನ ಮಡಿಕೆಗಳಿಗೆ ಈ ಬಾರಿ ಹೆಚ್ಚಿನ ಬೇಡಿಕೆ ಬಂದಿದೆ ಎಂದು ಅಥಣಿ ಮಡಿಕೆ ವ್ಯಾಪಾರಿ ಬಸಲಿಂಗಪ್ಪ ಕುಂಬಾರ ತಿಳಿಸಿದ್ದಾರೆ.