ವರದಿ : ಎನ್.ಗಿರೀಶ್, ಬೀರೂರು
ಬೀರೂರು (ಡಿ.23): ನವೆಂಬರ್ ತಿಂಗಳಿನಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ (Rain) ಕೊಯ್ಲಿಗೆ ಬಂದ ರಾಗಿ ಬೆಳೆ ನೆಲಕಚ್ಚಿದೆ. ಪರಿಣಾಮ ಉಳಿದ ರಾಗಿ ಬೆಳೆಯನ್ನಾದರೂ ಉಳಿಸಿಕೊಳ್ಳಲೆಂಬ ಉದ್ದೇಶದಿಂದ ಬೆಳೆ ಕೊಯ್ಲು ಯಂತ್ರಗಳ ಮೊರೆಹೋಗಿದ್ದಾರೆ. ಬಯಲು ಸೀಮೆಯಾದ್ಯಂತ ಈಗ ಈ ರಾಗಿ (Millets) ಕೊಯ್ಲು ಯಂತ್ರಗಳಿಗೆ ಬೇಡಿಕೆ ಶುರುವಾಗಿದೆ. 3 ತಿಂಗಳಿನಲ್ಲಿ ಫಸಲಿಗೆ ಬರುವ ರಾಗಿಯನ್ನು ಇನ್ನೇನು ಕೊಯ್ದು ಮನೆಗೆ ಸಾಗಿಸಬೇಕೆಂಬ ಹಂತದಲ್ಲಿ ಜಿಲ್ಲಾದ್ಯಂತ ಅಕಾಲಿ ಮಳೆ (Rain) ಸುರಿಯಿತು. ಹೋಬಳಿಯಾದ್ಯಂತ ಕೆಲ ಜಮೀನುಗಳಲ್ಲಿ ನೀರು ನಿಂತು ಶೀತ ವಾತಾವರಣ ನಿರ್ಮಾವಾದರೆ, ಮತ್ತೊಂದೆಡೆ ರಾಗಿ ಬೆಳೆ ನೆಲಕಚ್ಚಿತ್ತು.
ಡಿಸೆಂಬರ್ ಆರಂಭದಲ್ಲಿ ರೈತರು (Farmers) ರಾಗಿ ಕಟಾವು ಮಾಡಲು ಮುಂದಾಗಿದ್ದರು. ಮಳೆ ಹೊಡೆತಕ್ಕೆ ನೆಲ ಕಚ್ಚಿದ್ದ ರಾಗಿಯನ್ನು ಕೊಯ್ಯಲು ಆಳುಗಳು 1 ಅಕ್ಕಡೆಗೆ 1500 ನಿಗದಿ ಮಾಡುತ್ತಿದ್ದು, ಬೆಳೆ ಬೆಳೆದ ರೈತರಿಗೆ ದುಬಾರಿಯಾಗಿದ್ದರು. ಆಳುಗಳು ಸರಿಯಾದ ಸಮಯಕ್ಕೆ ಸಿಗುತ್ತಿರಲಿಲ್ಲ. ಈ ಸಮಯಕ್ಕೆ ಸುಮಾರು 50-60 ತಮಿಳುನಾಡು, ಬಳ್ಳಾರಿ ಮೂಲದ ರಾಗಿ ಕೊಯ್ಯುವ ಯಂತ್ರಗಳು ಬಯಲುಸೀಮೆಗೆ ಕಾಲಿಟ್ಟಿದ್ದವು. ರೈತರು ಬೆಳೆ ಕಟಾವು ಮಾಡಲು ಆಳು ಸಿಗದ ಪರಿಣಾಮ ಯಂತ್ರಗಳ ಮೊರೆ ಹೋಗುತ್ತಿದ್ದುದನ್ನು ಕಂಡ ಯಂತ್ರಗಳ (Machines) ಮಾಲೀಕರು ಮೊದಲು ಕಡಿಮೆ ಬೆಲೆಗೆ ಬೆಳೆ ಕಟಾವು ಮಾಡಿಕೊಡುತ್ತಿದ್ದರು. ಬಯಲುಸೀಮೆಯಲ್ಲಿ ಮಳೆಯ ಆರ್ಭಟ ಏರಿಳಿತ ಕಂಡಾಗ ತಲ್ಲಣಗೊಂಡವರು ರಾಗಿ ಕಟಾವು ಮಾಡಿಸಲು ರಾಗಿ ಕಟಾವು ಯಂತ್ರಗಳ ಸೌಲಭ್ಯ ಪಡೆಯಲು ಮಾಲೀಕರಿಗೆ ಮುಗಿಬಿದ್ದರು.
ತಮಿಳುನಾಡು (Tamilnadu) ಮತ್ತು ಬಳ್ಳಾರಿ (Bellary) ಮೂಲದಿಂದ ಬಂದ ರಾಗಿ ಕೊಯ್ಯುವ ಯಂತ್ರಗಳ ಮಾಲೀಕರಿಗೆ ರಾಗಿ ಬೆಳೆದ ರೈತರ ಪರಿಚಯವಿರದ ಕಾರಣ ಸ್ಥಳೀಯರನ್ನು ಮೆಸ್ತ್ರಿಯಾನ್ನಾಗಿಸಿಕೊಂಡು ಜಮೀನುಗಳನ್ನು (Farm Land) ಹುಡುಕಿಕೊಟ್ಟರೆ, ಎಕರೆಗೆ ಇಂತಿಷ್ಟು ಕಮಿಷನ್ ಕೊಡಲಾಗುತ್ತಿತ್ತು. ಆರಂಭದಲ್ಲಿ ಗಂಟೆಗೆ 3000 ಮಾಡಿದ್ದ ದಲ್ಲಾಳಿಗಳು ಕೊಯ್ಲಿನ ಬೇಡಿಕೆ ಹೆಚ್ಚಿದ ಕಾರಣ ಗಂಟೆಗೆ 4ರಿಂದ 4500 ರು. ನಿಗದಿಪಡಿಸಿದ್ದಾರೆ.
ಕೇದಿಗೆರೆ ರೈತ ಬಸವರಾಜು ಹೇಳುವಂತೆ, 2 ಎಕರೆ ರಾಗಿ ಬಿತ್ತನೆ ಮಾಡಿ, ಬೀಜ, ಗೊಬ್ಬರ, ಬೇಸಾಯ ಮಾಡಿ, ಉತ್ತಮ ಬೆಳೆ ಬೆಳೆಯಲು 20 ಸಾವಿರ ರು. ಖರ್ಚು ಬರುತ್ತದೆ. ಬೆಳೆ ಕಟಾವು ಮಾಡಲು ರಾಗಿ ಯಂತ್ರಕ್ಕೆ 2 ಎಕರೆ ಕಟಾವು ಮಾಡಲು 4 ಸಾವಿರದಂತೆ ನಿಗದಿಪಡಿಸಿ, 4 ಗಂಟೆಗೆ ಮುಗಿಸಿ ಸುಮಾರು 12 ಸಾವಿರವನ್ನು ಅವರಿಗೆ ಕೊಡಬೇಕು. ಅನಿವಾರ್ಯ ಎಂದು ಯಂತ್ರಗಳ ಮೊರೆ ಹೋದರೆ ಬಿತ್ತನೆಗಿಂತ ಕೊಯ್ಲಿಗೆ ಹೆಚ್ಚು ಖರ್ಚು ಬರುತ್ತಿದೆ. ಇನ್ನೆಲ್ಲಿ ರೈತರು ಬದುಕುವುದು? ಸರ್ಕಾರ ರೈತರ ನೆರವಿಗೆ ಧಾವಿಸಿ, ದಲ್ಲಾಳಿಗಳ ವಿರುದ್ಧ ಕ್ರಮ ಜರುಗಿಸಬೇಕು ಎನ್ನುತ್ತಾರೆ.
ಬೇರೆ ಜಿಲ್ಲೆಯ ಜಿಲ್ಲಾಧಿಕಾರಿಗಳು (DC) ರಾಗಿ ಕೊಯ್ಲಿಗೆ ರೈತರ ಆರ್ಥಿಕತೆಗೆ ಹೊರೆ ಆಗದಂತೆ ರಾಗಿ ಕಟಾವು ಮಾಡುವ ಯಂತ್ರಕ್ಕೆ ಗಂಟೆಗೆ 2700 ರು. ನಿಗದಿಪಡಿಸಿ, ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಾನೂನು ಜಾರಿಗೊಳಿಸಿ ರೈತರಿಗೆ ಸಹಾಯ ಮಾಡಿದ್ದಾರೆ. ಅದೇ ರೀತಿ ನಮ್ಮ ಜಿಲ್ಲೆಯಲ್ಲೂ ಆದೇಶ ಹೊರಡಿಸಿದರೆ ಬಡರೈತರಿಗೆ ಅನುಕೂಲ ಎನ್ನುತ್ತಾರೆ ಬೀರೂರಿನ ರೈತ ನಾಗರಾಜು.
ಇನ್ನು ರೈತ (Farmer) ಮಹಿಳೆ ಕಮಲಮ್ಮನ ಗೋಳು ಹೀಗಿದೆ. ಈ ಹಿಂದೆ ಎಕರೆಗೆ 10 ಚೀಲ ಬೆಳೆಯುತ್ತಿದ್ದೆವು. ಆದರೆ, ಮಳೆ ಅಭಾವಕ್ಕೆ ಯಂತ್ರಗಳ ಮೊರೆಹೋಗಿ ರಾಗಿ ಕಟಾವು ಮಾಡಿಸಿದರೆ, ಯಂತ್ರಗಳ ಮೂಲಕ ರಾಗಿ ಬೆಳೆ ಕಟಾವು ಸಂದರ್ಭದಲ್ಲಿಯೇ ಅರ್ಧ ರಾಗಿ ಜಮೀನಿನಲ್ಲಿಯೇ ಉದುರಿಬಿಡುತ್ತವೆ. ಜೊತೆಗೆ ಹುಲ್ಲನ್ನಾದರೂ ಮಾರಿ ಲಾಭ ಮಾಡಿಕೊಳ್ಳೋಣ ಎಂದರೆ ಹುಲ್ಲು ಸಹ ಪುಡಿಯಾಗುತ್ತದೆ ಎನ್ನುತ್ತಾರೆ.