ರೈತರಿಗೆ ತಮ್ಮ ಗದ್ದೆ, ಹೊಲಗಳಿಗೆ ಹೋಗಿ ಬರಲು ಹಾಗೂ ಅವರು ವಾಸಿಸಿರುವ ವ್ಯಾಪ್ತಿಯಲ್ಲಿ ಓಡಾಡಲು ಹಸಿರು ಪಾಸ್ ನೀಡಲು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಚಿಕ್ಕಮಗಳೂರು(ಏ.11): ರೈತರಿಗೆ ತಮ್ಮ ಗದ್ದೆ, ಹೊಲಗಳಿಗೆ ಹೋಗಿ ಬರಲು ಹಾಗೂ ಅವರು ವಾಸಿಸಿರುವ ವ್ಯಾಪ್ತಿಯಲ್ಲಿ ಓಡಾಡಲು ಹಸಿರು ಪಾಸ್ ನೀಡಲು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಪಂ ಸಭಾಂಗಣದಲ್ಲಿ ನಡೆದ ರೈತರಿಗೆ ಹಾಗೂ ಕೃಷಿ ವಲಯ ಎದುರಿಸುತ್ತಿರುವ ಸಮಸ್ಯೆ ಹಾಗೂ ಅದಕ್ಕೆ ಸರ್ಕಾರ ಕೈಗೊಂಡಿರುವ ಪರಿಹಾರ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರು ತಮ್ಮ ಹೊಲ, ಗದ್ದೆ ಒಂದು ಕಡೆ ಹೊಂದಿದ್ದು, ಮತ್ತೊಂದು ಕಡೆ ವಾಸವಾಗಿರುವ ಹಿನ್ನೆಲೆಯಲ್ಲಿ ಅವರಿಗೆ ಓಡಾಡಲು ತೊಂದರೆಯಾಗುತ್ತಿದೆ ಎಂದು ಶಾಸಕರು ತಿಳಿಸಿದಾಗ, ಹಸಿರು ಪಾಸ್ ನೀಡಲು ಸೂಚಿಸಲಾಯಿತು.
ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ರೈತನ ಮನೆ ಹಾಗೂ ವಾಸ ಕಡೂರಿನಲ್ಲಿದ್ದರೆ, ಸಮೀಪದ ಹಳ್ಳಿಯಲ್ಲಿ ಆತನ ಜಮೀನು ಇರುತ್ತದೆ. ಅಲ್ಲಿಗೆ ಹೋಗಿ ಬರಲು ಹಾಗೂ ಅಲ್ಲಿಂದ ತನ್ನ ಉತ್ಪನ್ನಗಳನ್ನು ತರಲು ಪಾಸ್ ಇಲ್ಲದೆ ಸಮಸ್ಯೆಯಾಗುತ್ತಿದೆ ಎಂದಾಗ, ಇದಕ್ಕೆ ಶಾಸಕ ಡಿ.ಎಸ್.ಸುರೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ದನಿಗೂಡಿಸಿದರು.
ವೈದ್ಯ ಸಿಬ್ಬಂದಿಗೆ ಡಬಲ್ ವೇತನ ನೀಡಲು ಸರ್ಕಾರ ನಿರ್ಧಾರ!
ಶಾಸಕ ಟಿ.ಡಿ.ರಾಜೇಗೌಡ ಹಾಗೂ ಎಂ.ಪಿ.ಕುಮಾರಸ್ವಾಮಿ ಸಹ ಈ ಸಮಸ್ಯೆಗೆ ಪರಿಹಾರ ಹುಡುಕಬೇಕೆಂದು ಹೇಳಿದಾಗ, ಸಚಿವ ಬಿ.ಸಿ.ಪಾಟೀಲ್ ಹಾಗೂ ಸಚಿವ ಸಿ.ಟಿ.ರವಿ ಮಾತನಾಡಿ, ಇಡೀ ಜಿಲ್ಲೆಯಲ್ಲಿ ಓಡಾಡಲು ಹಸಿರು ಪಾಸ್ ನೀಡಲಾಗುವುದಿಲ್ಲ. ಹಾಗೆ ನೀಡಿದರೆ ಲಾಕ್‌ಡೌನ್‌ನ ಅರ್ಥವೇ ಮರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಅವರಿರುವ ಸ್ಥಳದಿಂದ ಹೊಲ, ಗದ್ದಗೆ ಓಡಾಡಲು ಮತ್ತು ಆ ವ್ಯಾಪ್ತಿಯಲ್ಲಿ ತುರ್ತು ಕೆಲಸಗಳಿರುವಾಗ ಮಾತ್ರ ಓಡಾಡುವಂತೆ ಹಸಿರು ಪಾಸ್ ನೀಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಕೃಷಿ ಚಟುವಟಿಕೆಗಳಿಗೆ ಕೊರೋನಾ ಹಿನ್ನೆಲೆ ಯಾವುದೇ ರೀತಿಯ ನಿರ್ಬಂಧ ಹೇರಿಲ್ಲ. ಗೊಬ್ಬರ, ಕೀಟನಾಶಕ, ಕೃಷಿ ಸಂಬಂಧಿತ ಯಂತ್ರಗಳ ಸಾಗಣೆ ಹಾಗೂ ಕೃಷಿಗೆ ಅಗತ್ಯ ಅಂಗಡಿಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ ಎಂದಾಗ, ಇದಕ್ಕೆ ಆಕ್ಷೇಪವೆತ್ತಿದ ಶಾಸಕ ಕುಮಾರಸ್ವಾಮಿ, ಕೃಷಿ ಕೆಲಸಕ್ಕೆ ಹೋಗಿ ಬರುವ ರೈತರ ವಾಹನಗಳನ್ನು ತಡೆದು ವಶಪಡಿಸಿ ಕೊಳ್ಳಲಾಗುತ್ತಿದೆ. ನಿತ್ಯ ಈ ದೂರುಗಳು ಬರುತ್ತಿವೆ. ಮಲೆನಾಡು ಭಾಗದಲ್ಲಿ ಕಾಳುಮೆಣಸು ಮಾರಾಟವಾಗಿಲ್ಲ. ಕಾಫಿ ದಾಸ್ತಾನು ಹಾಗೇ ಉಳಿದಿದೆ. ಈ ಬಗ್ಗೆ ಆಲೋಚಿಸ ಬೇಕೆಂದರು.
ದೇಶಾದ್ಯಂತ ಕೊರೋನಾ ದಾಳಿ ಮಾಡುತ್ತಿದೆ. ಅದನ್ನು ನಿಯಂತ್ರಿಸಲೆಂದೇ ಸರ್ಕಾರ ಲಾಕ್‌ಡೌನ್ ಘೋಷಿಸಿದೆ. ಈ ಪರಿಸ್ಥಿತಿಯಲ್ಲೂ ರುಚಿಯಾದ ಆಹಾರವನ್ನೇ ತಿನ್ನಬೇಕೆಂದು ಜನ ಬಯಸಬೇಕೇ ಎಂಬ ಪ್ರಶ್ನೆಯನ್ನು ಎತ್ತಿದ ಶಾಸಕ ಬೆಳ್ಳಿ ಪ್ರಕಾಶ್, ಬೆಳಗಿನ ವೇಳೆ ತರಕಾರಿ ಖರೀದಿಸಲು ಬಂದವರು ಕಾಲು ಕೆ.ಜಿ., ಅರ್ಧ ಕೆ.ಜಿ.ಬೇಕಾದ ತರಕಾರಿ ಆರಿಸಿಕೊಂಡು ಹೋಗುತ್ತಾರೆ. ಅದನ್ನು ನಿತ್ಯ ಖರೀದಿಸಲೇ ಬೇಕಾ ಎಂದು ಕೇಳಿ ಮನೆಯಲ್ಲಿ ಹೆಚ್ಚು ದಿನ ಬಾಳಿಕೆ ಬರುವ ಹುರುಳಿ ಸೇರಿ ಅನೇಕ ಕಾಳುಗಳಿರುತ್ತವೆ. ಅದನ್ನು ಬಳಸಿಕೊಂಡು ಅಡಿಗೆ ಮಾಡಿಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ಜನ ಸಹ ಕೆಲವು ನಿಗ್ರಹಗಳನ್ನು ಕಲಿತುಕೊಳ್ಳಬೇಕು. ಸದಾ ಮನೆಯಿಂದ ಹೊರಗೆ ಬರುವುದನ್ನು ಕಡಿಮೆ ಮಾಡಬೇಕು. ಅಂಬಲಿ, ಉಪ್ಪಿನಕಾಯಿಯಲ್ಲೂ ಹೊಟ್ಟೆತುಂಬಿಸಿಕೊಳ್ಳಬಹುದು. ರುಚಿ ಬಯಸುವ ಕಾಲ ಇದಲ್ಲ ಎಂದು ತಿಳಿಸಿದರು.
40,000 ಕೋಟಿ ರೂ. ಸರಕಿರುವ 4 ಲಕ್ಷ ಟ್ರಕ್‌ಗಳು ಅತಂತ್ರ!
ಶಾಸಕ ಡಿ.ಎಸ್.ಸುರೇಶ್ ಮಾತನಾಡಿ, ಬಯಲು ಭಾಗದಲ್ಲಿ ಕೆಲವೊಮ್ಮೆ ರೈತರು ನೀರು ಬಿಡಲು ರಾತ್ರಿ ವೇಳೆಯಲ್ಲೂ ಹೊಲ, ಗದ್ದೆಗಳಿಗೆ ಹೋಗಬೇಕಾಗುತ್ತದೆ. ಆದರೆ, ಅವರನ್ನು ಅಲ್ಲಿಗೆ ಹೋಗಲು ಬಿಡುವುದಿಲ್ಲ. ತೋಟ ಒಂದು ಕಡೆ, ಮನೆ ಒಂದು ಕಡೆ ಇರುವವರಿಗೆ ಸಮಸ್ಯೆಯಾಗುತ್ತಿದೆ ಎಂದಾಗ, ಅಂತಹ ಪ್ರಕರಣಗಳಲ್ಲಿ ಹಸಿರು ಪಾಸ್ ನೀಡುವ ಪ್ರಸ್ತಾಪ ಸಚಿವ ರವಿ ಅವರಿಂದ ಬಂತು. ಇದಕ್ಕೆ ಪೂರಕವಾಗಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ರೈತರು ಹಣ್ಣು, ಹೂವನ್ನು ತರಲು ಬಿಡಬೇಕು. ಅವುಗಳನ್ನು ಹೆಚ್ಚು ದಿನ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದಾಗ, ಸಚಿವ ರವಿ ಮಾತನಾಡಿ, ತರಕಾರಿ ಸಾಗಿಸಲು ನಿರ್ಬಂಧವಿಲ್ಲ. ಹೂವಿನ ಬಗ್ಗೆ ಪೂರ್ಣ ವರದಿಯನ್ನು ಅಧಿಕಾರಿಗಳಿಂದ ಸರ್ಕಾರ ಪಡೆದಿದೆ. ಸದ್ಯದಲ್ಲೇ ನಿರ್ದೇಶನ ನೀಡುತ್ತದೆ ಎಂದರು.
ಶಾಸಕ ಸುರೇಶ್ ಸಲಹೆ ನೀಡಿ, ತರಕಾರಿ ತರುವ ಗಾಡಿಯನ್ನು ಪೊಲೀಸರು ಬಿಡುತ್ತಾರೆ. ಆದರೆ, ಅದೇ ಗಾಡಿ ಹಿಂದಕ್ಕೆ ಹೋಗುವಾಗ ವಶಪಡಿಸಿಕೊಳ್ಳುತ್ತಾರೆ ಎಂದರು. ಇದಕ್ಕೆ ಉತ್ತರಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಜಿಲ್ಲೆಯಲ್ಲಿ ಖಾಲಿ ಹೋಗುತ್ತಿದ್ದ ಯಾವುದೇ ವಾಹನಗಳನ್ನು ವಶಪಡಿಸಿಕೊಂಡಿಲ್ಲ. ಎರಡು ಸರಕು ಸಾಗಣೆ ವಾಹನಗಳಲ್ಲಿ ಮಾತ್ರ ಜನ ತುಂಬಿದ್ದರಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದಾಗ, ಈ ಬಗ್ಗೆ ಪರಿಶೀಲಿಸಲು ಸಚಿವರು ತಿಳಿಸಿದರು. ವಿಪ ಉಪ ಸಭಾಪತಿ ಎಸ್.ಎಲ್.ಧರ್ಮೇಗೌಡ ಮಾತನಾಡಿದರು. ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ, ಉಪಾಧ್ಯಕ್ಷ ಜಿ.ಎನ್.ವಿಜಯಕುಮಾರ್, ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಪಂ ಸಿಇಒ ಪೂವಿತಾ ಉಪಸ್ಥಿತರಿದ್ದರು.