ಹುನಗುಂದ: ಮರೋಳ ಹನಿ ನೀರಾವರಿ ಯೋಜನೆಯಲ್ಲಿ ಅವ್ಯವಹಾರ, ತನಿಖೆಗೆ ಆದೇಶ

By Kannadaprabha News  |  First Published Jan 24, 2020, 10:52 AM IST

ಕಳಪೆ ಕಾಮಗಾರಿ ತನಿಖೆ ನಡೆಸಲು ಆದೇಶ| 15 ದಿನಗಳೊಳಗಾಗಿ ವರದಿ ಸಲ್ಲಿಸಲು ಸರ್ಕಾರದ ಆದೇಶ|ಕಳಪೆ ಕುರಿತು ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿತ್ತು| ಏಷ್ಯಾ ಖಂಡದ ದೊಡ್ಡ ಮರೋಳ ಹನಿ ನೀರಾವರಿ ಯೋಜನೆ| ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನಲ್ಲಿರುವ ಮರೋಳ ಗ್ರಾಮ|


ಮಲ್ಲಿಕಾರ್ಜುನ ದರಗಾದ

ಹುನಗುಂದ(ಜ.24): ಹನಿ ನೀರಾವರಿ ಮೂಲಕ ಸುಮಾರು 65 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಹುನಗುಂದ ತಾಲೂಕಿನ ಮರೋಳ ಏತ ನೀರಾವರಿ ಯೋಜನೆಯ ಎರಡನೇ ಹಂತದ ಹನಿ ನೀರಾವರಿ ಯೋಜನೆ ಭಾರತಕ್ಕಷ್ಟೇ ಅಲ್ಲ ಇಡೀ ಏಷ್ಯಾ ಖಂಡಕ್ಕೆ ದೊಡ್ಡ ಹನಿ ನೀರಾವರಿ ಯೋಜನೆ. ಇದರ ಮಾದರಿಯನ್ನೇ ಇತರೆ ನೀರಾವರಿ ಯೋಜನೆಗೆ ಬಳಸಿಕೊಳ್ಳುವ ಚಿಂತನೆಯಲ್ಲಿ ರಾಜ್ಯ ಸರ್ಕಾರ ಇರುವಾಗಲೇ ಈ ಯೋಜನೆ ಕಾಮಗಾರಿ ಗುಣಮಟ್ಟದ ಕುರಿತು ತನಿಖೆ ನಡೆಸುವಂತೆ ಸರ್ಕಾರ ಆದೇಶ ಹೊರಡಿಸಿರುವುದು ಯೋಜನೆಯ ಕಾಮಗಾರಿಯಲ್ಲಿ ಕಳಪೆ ಗುಣಮಟ್ಟವಾಗಿದೆ ಎಂಬ ಸಾರ್ವಜನಿಕರ ಆರೋಪಕ್ಕೆ ಪುಷ್ಟಿ ಸಿಕ್ಕಿದೆ.

Latest Videos

ಹೌದು! ಮರೋಳ ಏತ ನೀರಾವರಿ ಯೋಜನೆಯ ಎರಡನೇ ಹಂತದ ಹನಿ ನೀರಾವರಿ ಯೋಜನೆಯ ಕಾಮಗಾರಿ ಗುಣಮಟ್ಟದ ಕುರಿತು ತನಿಖೆ ನಡೆಸಿ 15 ದಿನಗಳಲ್ಲಿ ವರದಿ ನೀಡುವಂತೆ ಜಲಸಂಪನ್ಮೂಲ ಇಲಾಖೆ ಸರ್ಕಾರದ ತಾಂತ್ರಿಕ ಅಧೀನ ಕಾರ್ಯದರ್ಶಿ ಬಿ. ಹರಿನಾರಾಯಣ 2019 ಅಕ್ಟೋಬರ್‌ 15 ರಂದು ಜಲಸಂಪನ್ಮೂಲ ಇಲಾಖೆ ವಿಚಕ್ಷಣಾ ದಳದ ಪೊಲೀಸ್‌ ಮಹಾನಿರೀಕ್ಷಕರಿಗೆ ಆದೇಶ ಮಾಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸರ್ಕಾರದ ಆದೇಶದ ಪ್ರತಿಯೊಂದಿಗೆ ಕೃಷ್ಣಾ ಭಾಗ್ಯ ಜಲನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ವಿಚಕ್ಷಣಾ ದಳದ ಪೊಲೀಸ್‌ ಮಹಾನಿರೀಕ್ಷಕರು, ಮರೋಳ ಏತ ನೀರಾವರಿ ಎರಡನೇ ಹಂತದ ಹನಿ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಸೂಚಿಸಿದ ನಮೂನೆಗಳಲ್ಲಿ ಭರ್ತಿ ಮಾಡಿ ವಿವರಗಳನ್ನು ಸಲ್ಲಿಸಲು ಹಾಗೂ ಸದರಿ ವಿಷಯಕ್ಕೆ ಸಂಬಂಧಿಸಿದ ಸಂಪೂರ್ಣ ವಿವರ ಮತ್ತು ದಾಖಲಾತಿಗಳನ್ನು ಪಡೆದು ದೃಢೀಕರಣದೊಂದಿಗೆ ಹಾರ್ಡ್‌ ಹಾಗೂ ಸಾಪ್ಟ್‌ ಕಾಫಿ ಎರಡರಲ್ಲೂ ತಮ್ಮ ಅಭಿಪ್ರಾಯದೊಂದಿಗೆ ಸಲ್ಲಿಸಲು 2019 ನವೆಂಬರ್‌ 4 ರಂದು ಸೂಚಿಸಿದ್ದಾರೆ.

ಈ ಹಿನ್ನಲೆಯಲ್ಲಿ ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಂದ ಯೋಜನೆಯ ಕಾಮಗಾರಿ ಗುಣಮಟ್ಟದ ಪರಿಶೀಲನೆ ಹಾಗೂ ದಾಖಲೆ ಸಂಗ್ರಹದ ಕಾರ್ಯ ವೇಗದಲ್ಲಿ ನಡೆದಿದ್ದು, ಸುಮಾರು 7 ಸಾವಿರ ಪುಟಗಳ ದಾಖಲೆ ಸಂಗ್ರಹ ಈಗಾಗಲೇ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಏನಿದು ಯೋಜನೆ:

ಮರೋಳ ಏತ ನೀರಾವರಿಗೆ 2ನೇ ಹಂತದದಲ್ಲಿ ಹಂಚಿಕೆಯಾದ ನೀರನ್ನು ಹನಿ ನೀರಾವರಿ ಮೂಲಕ ಬಳಕೆ ಮಾಡಿದರೆ, ದುಪ್ಪಟು ಪ್ರದೇಶಕ್ಕೆ ನೀರಾವರಿ ಸೌಲಬ್ಯ ಕೊಡಬಹುದೆಂಬ ಉದ್ದೇಶದಿಂದ 786 ಕೋಟಿ ಮೊತ್ತದ ಹನಿ ನೀರಾವರಿ ಯೋಜನೆಗೆ 2012ರಲ್ಲಿ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿತು. ಟೆಂಡರ್‌ ಪ್ರಕ್ರಿಯೇ ಮುಗಿದು 2013ರಲ್ಲಿ ಕಾಮಗಾರಿ ಆರಂಭಗೊಂಡಿತು. ಇಸ್ರೇಲ್‌ ಮಾದರಿಯ ಈ ಯೋಜನೆ ಇಡೀ ಏಷ್ಯಾ ಖಂಡಕ್ಕೆ ಮಾದರಿ ಎಂದು ಸರ್ಕಾರ ಹೇಳಿತ್ತು.

ಯೋಜನೆ ಕಾಮಗಾರಿ ಗುತ್ತಿಗೆ ಪಡೆದ ಜೈನ್‌ ಹಾಗೂ ಮೇಘಾ ಕಂಪನಿಗಳು ಆಧುನಿಕ ಮಾದರಿಯ ಕಾಮಗಾರಿ ಆರಂಭಿಸಿದಾಗ ರೈತರ ಕನಸುಗಳು ಚಿಗರೊಡದವು. ಕಾಮಗಾರಿ ಪೂರ್ಣಗೊಂಡು 2018 ಜನವರಿ 28 ರಂದು ಲೋಕಾಪರ್ಣೆಯೂಗೊಂಡಿದೆ. ಆದರೆ, ಇದುವರೆಗೂ ರೈತರ ಭೂಮಿಗೆ ಈ ಯೋಜನೆಯ ನೀರು ಮಾತ್ರ ಸಮರ್ಪಕವಾಗಿ ಹರಿಯುತ್ತಿಲ್ಲ. ಯೋಜನೆಯ ಕಾಮಗಾರಿ ಗುಣಮಟ್ಟದ ಕುರಿತು ಸಾರ್ವಜನಿಕರು ಮತ್ತು ರೈತರಿಂದ ಅಪಸ್ವರಗಳು ಕೇಳಿ ಬಂದಿದ್ದವು.

ಶಾಸಕರಿಂದ: ದೂರು

ಸಾರ್ವಜನಿಕರು ಮತ್ತು ರೈತರ ದೂರಿನ ಹಿನ್ನೆಲೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲರು ಯೋಜನೆಯ ಕಾಮಗಾರಿ ಗುಣಮಟ್ಟದ ಕುರಿತು ತನಿಖೆ ನಡೆಸುವಂತೆ 2019 ಅಕ್ಟೋಬರ್‌ 3 ರಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ಯೋಜನೆಯ ಕಾಮಗಾರಿ ನಿರ್ವಹಣೆಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಸೇರಿ ಬ್ರಹ್ಮಾಂಡ ಭ್ರಷ್ಟಾಚಾರ ವ್ಯಸಗಿ ಕಳಪೆ ಗುಣಮಟ್ಟದ ಕಾಮಗಾರಿ ನಿರ್ವಹಿಸಿದ್ದಾರೆ. 870 ಕೋಟಿ ಯೋಜನೆ ಕಾಮಗಾರಿಗೆ ವೆಚ್ಚವಾಗಿದ್ದರೂ, ಶೇ.20 ರಷ್ಟು ರೈತರ ಜಮಿನುಗಳಿಗೆ ನೀರು ತಲುಪಿಲ್ಲ. ಬರಗಾಲದಿಂದ ಬಳಲುತ್ತಿದ್ದ ರೈತರಿಗೆ ನೀರಾವರಿ ಸೌಲಬ್ಯ ಕಲ್ಪಿಸುವ ಉದ್ದೇಶದಿಂದ ಯೋಜನೆ ಜಾರಿ ತಂದಿದ್ದರೂ ಕಳಪೆ ಕಾಮಗಾರಿಯಿಂದ ಸರ್ಕಾರದ ಉದ್ದೇಶ ಈಡೇರಿಲ್ಲ. ಈ ಕಾರಣಕ್ಕೆ ಈ ಕುರಿತು ಸಮಗ್ರ ತನಿಖೆ ನಡೆಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದರ ಜೊತೆಗೆ ಗುತ್ತಿಗೆ ಸಂಸ್ಥೆಗಳನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಶಾಸಕರು ಪತ್ರದಲ್ಲಿ ಒತ್ತಾಯಿಸಿದ ಕಾರಣ ಸರ್ಕಾರ ತನಿಖೆಗೆ ಆದೇಶ ಮಾಡಿದೆ.

ಕಳಪೆ ಕಾಮಗಾರಿ ಬಗ್ಗೆ ಕನ್ನಡಪ್ರಭ ಸರಣಿ ವರದಿ ಪ್ರಕಟಿಸಿತ್ತು

ಈ ಯೋಜನೆಯ ಕಳಪೆ ಗುಣಮಟ್ಟ ಹಾಗೂ ಅಸಮರ್ಪಕ ನಿರ್ವಹಣೆ ಕುರಿತು 2018 ನವೆಂಬರ್‌ 17 ರಿಂದ 24ರವರೆಗೆ ಮಲಗಿದ ಮರೋಳ ಶೀರ್ಷಿಕೆಯಡಿ ‘ಕನ್ನಡಪ್ರಭ’ಸರಣಿ ವರದಿಯನ್ನು ಮಾಡಿತ್ತು. ತನಿಖೆ ನಡೆಸುತ್ತಿರುವ ಅಧಿಕಾರಿಗಳ ತಂಡ ಆ ಸರಣಿ ವರದಿಯ ಎಲ್ಲ ಪ್ರತಿಗಳನ್ನು ಸರ್ಕಾರಕ್ಕೆ ನೀಡುವ ದಾಖಲೆಗಳಲ್ಲಿ ಸಂಗ್ರಹಿಸಿದೆ.

ಈ ಬಗ್ಗೆ ಮಾತನಾಡಿದ ಆಲಮಟ್ಟಿ ಕೆಬಿಜಿಎನ್‌ಎಲ್‌ ಮುಖ್ಯ ಅಭಿಯಂತರರು ಆರ್‌.ಪಿ. ಕುಲಕರ್ಣಿ ಅವರು, ಮರೋಳ ಏತ ನೀರಾವರಿ ಯೋಜನೆಯ ಕಾಮಗಾರಿ ಗುಣಮಟ್ಟದ  ಕುರಿತು ಸರ್ಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಎಲ್ಲ ಕಾಮಗಾರಿಗಳ ಪರಿಶೀಲನೆ ಮತ್ತು ಸೂಚಿಸಿದ ನಮೂನೆಗಳಲ್ಲಿ ದಾಖಲೆ ಸಂಗ್ರಹಿಸುವ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ. ಬರುವ ಒಂದು ವಾರದೊಳಗಾಗಿ ವಿಚಕ್ಷಣಾ ದಳದ ಪೊಲೀಸ್‌ ಮಹಾನೀರಿಕ್ಷಕರಿಗೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. 
 

click me!