ಬೆಂಗಳೂರು ಮೆಟ್ರೋದ ಹಸಿರು ಮಾರ್ಗದಲ್ಲಿ ನಾಗಸಂದ್ರ-ಮಾದಾವರ ವಿಸ್ತರಣೆಯಲ್ಲಿ ಟ್ರಯಲ್ ರನ್ ಆರಂಭವಾಗಿದೆ. ಈ ತಿಂಗಳಿನಲ್ಲಿ ಸುರಕ್ಷತಾ ತಪಾಸಣೆ ನಡೆದು, ಅಕ್ಟೋಬರ್‌ನಲ್ಲಿ ಸಾರ್ವಜನಿಕರ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.
ಬೆಂಗಳೂರು (ಆ.18): ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಂತಸ ಸುದ್ದಿಯೊಂದು ಹೊರಬಿದ್ದಿದೆ. ಬೆಂಗಳೂರು ಮೆಟ್ರೋ ರೈಲು ನಿಗಮವು ನಾಗಸಂದ್ರ-ಮಾದಾವರ ತನಕ ಇನ್ನು ಕೆಲವೇ ದಿನಗಳಲ್ಲಿ ಮೆಟ್ರೋ ಓಡಾಟ ನಡೆಸಲಿದೆ. ಅದರ ಪೂರ್ವಭಾವಿಯಾಗಿ ರೀಚ್- 3C ವಿಸ್ತೃತ ಮೆಟ್ರೋ ಹಸಿರು ಮಾರ್ಗದಲ್ಲಿ ಟ್ರಯಲ್ ರನ್ ಆರಂಭವಾಗಿದೆ. ಭಾನುವಾರ ಬಿಎಂಆರ್‌ಸಿಎಲ್ ಟ್ರಯಲ್ ರನ್ ಆರಂಭಿಸಿದೆ.
ಬೆಂಗಳೂರು ಮೆಟ್ರೋ ರೈಲು ನಿಗಮವು ಹಸಿರು ಮಾರ್ಗದ ವಿಸ್ತರಿತ ಭಾಗ ನಾಗಸಂದ್ರ- ಮಾದಾವರದಲ್ಲಿ (3.7 ಕಿ.ಮೀ.) ಪ್ರಾಯೋಗಿಕ ರೈಲು ಸಂಚಾರವನ್ನು ಈ ತಿಂಗಳ ಮೊದಲವಾರ ನಡೆಸಲಿದೆ ಎಂದು ವರದಿಯಾಗಿತ್ತು. ಆದರೆ ಮೂರನೇ ವಾರ ಟ್ರಯಲ್ ರನ್ ಆರಂಭಿಸಿದೆ. ಸುಮಾರು 298 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಮಾರ್ಗದಲ್ಲಿ ಒಂದು ತಿಂಗಳ ಕಾಲ ಪ್ರಾಯೋಗಿಕ ಸಂಚಾರ ನಡೆಯಲಿದೆ.
116 ದೇಶಗಳಿಗೆ ವ್ಯಾಪಿಸಿದ ಮಂಕಿಪಾಕ್ಸ್ ವೈರಸ್, ಭಾರತಕ್ಕೆ ಆತಂಕ, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ!
ಸೆಪ್ಟೆಂಬರ್ ಮೂರನೇ ವಾರದೊಳಗೆ ಮೆಟ್ರೋ ರೈಲು ಸುರಕ್ಷತಾ ಆಯುಕ್ತರನ್ನು ತಪಾಸಣೆಗೆ ಆಹ್ವಾನಿಸಲು ಸಿದ್ಧತೆ ನಡೆದಿದೆ. ಮಂಜುನಾಥನಗರ, ಚಿಕ್ಕಬಿದರಕಲ್ಲು, ಮಾದಾವರ ನಿಲ್ದಾಣ ಈ ಮಾರ್ಗದಲ್ಲಿದ್ದು, ಅಕ್ಟೋಬರ್ ತಿಂಗಳಲ್ಲಿ ಸಾರ್ವಜನಿಕರ ಓಡಾಟ ಆರಂಭವಾಗುವ ನಿರೀಕ್ಷೆ ಇದೆ.
ಹಳದಿ ಮಾರ್ಗ ಯಾವಾಗ ಆರಂಭ:
ಇನ್ನು ಬಹುನಿರೀಕ್ಷಿತ ಆರ್.ವಿ.ರಸ್ತೆ - ಬೊಮ್ಮಸಂದ್ರ (19.15 ಕಿ.ಮೀ.) ಸಂಪರ್ಕಿಸುವ ಹಳದಿ ಮಾರ್ಗದಲ್ಲಿ ಡಿಸೆಂಬರ್‌ನಿಂದ ಮೆಟ್ರೋ ರೈಲಿನ ಸಂಚಾರ ಆರಂಭವಾಗುವುದು ಬಹುತೇಕ ನಿಶ್ಚಿತ. ಈ ಮಾರ್ಗಕ್ಕಾಗಿ ಸದ್ಯ ಒಂದು ರೈಲಿದ್ದು, ಇನ್ನೆರಡು ತಿಂಗಳಲ್ಲಿ ಎರಡು ಸೆಟ್ ರೈಲುಗಳು ಸೇರ್ಪಡೆ ಆಗುವ ನಿರೀಕ್ಷೆಯಿದೆ.
ಇನ್ಫೋಸಿಸ್, ಬಯೋಕಾನ್‌ನಂತಹ ಕಂಪನಿಗಳಿರುವ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಗೆ ಮೆಟ್ರೋ ಸಂಪರ್ಕ ಕಲ್ಪಿಸುವ ಮಾರ್ಗ ಇದಾಗಿದ್ದು, ಈಚೆಗಷ್ಟೇ ಡಬಲ್ ಡೆಕ್ಕರ್ ಫ್ಲೈಓವರ್‌ನಲ್ಲಿ ವಾಹನಗಳ ಓಡಾಟಕ್ಕೆ ಚಾಲನೆ ಸಿಕ್ಕಿದೆ. ಇದೇ ವೇಳೆ ವರ್ಷಾಂತ್ಯಕ್ಕೆ ಈ ಮಾರ್ಗದಲ್ಲಿ ಕಾರ್ಯಾಚರಣೆ ಆರಂಭಿಸುವುದಾಗಿ ಬೆಂಗಳೂರು ಮೆಟ್ರೋ ರೈಲು ನಿಗಮವು ತಿಳಿಸಿದೆ.
ಕರ್ನಾಟಕದಲ್ಲಿ ಜೀಕಾ ವೈರಸ್ ಭೀತಿ: 7 ಪ್ರಕರಣಗಳು ಪತ್ತೆ, ಎಚ್ಚರಿಕೆ ಕೊಟ್ಟ ಆರೋಗ್ಯ ಇಲಾಖೆ!
ಒಟ್ಟಾರೆ ಎಂಟು ರೈಲುಗಳಿಂದ ಹಳದಿ ಮಾರ್ಗ ಪ್ರಾರಂಭಿಸಲು ಬಿಎಂಆರ್‌ಸಿಎಲ್ ಚಿಂತನೆ ನಡೆಸಿದೆ. ಪ್ರಸ್ತುತ ಕಳೆದ ಫೆಬ್ರವರಿಯಲ್ಲಿ ಚೀನಾದ ಸಿಆರ್‌ಆರ್‌ಸಿ ಪೂರೈಸಿರುವ ಸಿಬಿಟಿಸಿ (ಕಮ್ಯೂನಿಕೇಶನ್ ಬೇಸ್ಡ್ ಟ್ರೈನ್ ಕಂಟ್ರೋಲ್) ತಂತ್ರಜ್ಞಾನ ಆಧಾರಿತ ಚಾಲಕ ರಹಿತ ರೈಲು ಪ್ರತಿದಿನ ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆಸುತ್ತಿದೆ. ಸಿಗ್ನಲಿಂಗ್, ವಿದ್ಯುತ್ ಪೂರೈಕೆ, ರೈಲಿನ ಸಾಮಾನ್ಯ ವೇಗ, ತಿರುವಿನ ವೇಗ, ಬ್ರೇಕ್ ವ್ಯವಸ್ಥೆ, ನಿಲುಗಡೆ ಸೇರಿ ಹಲವು ವಿಧಾನಗಳ ತಪಾಸಣೆಯನ್ನು ನಡೆಸಲಾಗುತ್ತಿದೆ.