ಮೈಲಿಗೆ ಮೌಢ್ಯಕ್ಕೆ ಮಗು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಂತಿ ವಸಂತಾಳನ್ನು ಮತ್ತೆ ಮನೆಯೊಳಗೆ ಸೇರಿಸುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.
ತುಮಕೂರು: ಮೈಲಿಗೆ ಮೌಢ್ಯಕ್ಕೆ ಮಗು ಬಲಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಂತಿ ವಸಂತಾಳನ್ನು ಮತ್ತೆ ಮನೆಯೊಳಗೆ ಸೇರಿಸುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.
ಘಟನೆ ನಡೆದ ಹಿನ್ನೆಲೆಯಲ್ಲಿ ತುಮಕೂರು ತಾಲೂಕು ಮಲ್ಲೇನಹಳ್ಳಿ ಗ್ರಾಮಕ್ಕೆ ಆಗಮಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳು ಸಿದ್ದೇಶ್ ಕುಟುಂಬವನ್ನು ಮನವೊಲಿಸಿದ ಬಳಿಕ ಗುರುವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಬಾಣಂತಿಯನ್ನು ಶಾಸೊತ್ರೕಕ್ತವಾಗಿ ಮನೆ ಸೇರಿಸಲಾಯಿತು. ಗೊಲ್ಲ ಸಂಪ್ರದಾಯದಂತೆ ಆಕೆ ಇನ್ನು ಒಂದು ತಿಂಗಳ ಕಾಲ ಮನೆಯಿಂದ ಹೊರಗಡೆ ಗುಡಿಸಲಿನಲ್ಲಿ ಇರಬೇಕಾಗಿತ್ತು. ಆದರೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡಿದ್ದು ಗ್ರಾಮಕ್ಕೆ ಹಲವಾರು ಅಧಿಕಾರಿಗಳ ತಂಡ ಹೋಗಿ ಮನವೊಲಿಸಿದ ಬಳಿಕ ಮೌಢ್ಯ ಆಚರಣೆಯನ್ನು ಬದಿಗೊತ್ತಿ ಬಾಣಂತಿಯನ್ನು ಮನೆಯೊಳಗೆ ಕುಟುಂಬಸ್ಥರು ಬರ ಮಾಡಿಕೊಂಡರು.
undefined
ಮನೆಗೆ ಕಳುಹಿಸುವ ಮುನ್ನ ತುಮಕೂರು ತಾಲೂಕು ವೈದ್ಯಾಧಿಕಾರಿ ನೇತೃತ್ವದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವಸಂತಾಳ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಮನೆಗೆ ಕಳುಹಿಸಲಾಯಿತು.
ಈ ನಡುವೆ ಗ್ರಾಮಕ್ಕೆ ಭೇಟಿ ನೀಡಿದ ನ್ಯಾಯಾಧೀಶರಾದ ನೂರುನ್ನೀಸಾ ಅವರು ವಸಂತಾಳ ಆರೋಗ್ಯ ವಿಚಾರಿಸಿದರು. ಬಳಿಕ ನ್ಯಾಯಾಧೀಶರ ಸೂಚನೆ ಮೇರೆಗೆ ಆಕೆಯನ್ನು ತುಮಕೂರು ಜಿಲ್ಲಾಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಹಠ ಹಿಡಿದಿದ್ದ ಗ್ರಾಮಸ್ಥರು:
ಮಗು ಸಾವಾದರೂ ಬಾಣಂತಿಯನ್ನು ಹಟ್ಟಿಯೊಳಗೆ ಬಿಟ್ಟುಕೊಳ್ಳಲು ಗ್ರಾಮಸ್ಥರು ನಿರಾಕರಿಸಿದ್ದರು. ಬಳಿಕ ತಾಲೂಕು ಆಡಳಿತ ಗ್ರಾಮಸ್ಥರನ್ನು ಒಟ್ಟು ಗೂಡಿಸಿ ಚರ್ಚೆ ನಡೆಸಿ ಅವರ ಮನವೊಲಿಸಿದಾಗ ಮನೆಯೊಳಗೆ ಬಿಟ್ಟುಕೊಳ್ಳಲು ಒಪ್ಪಿಕೊಂಡರು.
ದೇವರ ಹೆಸರಿನಲ್ಲಿ ಮೌಢ್ಯ
ತುಮಕೂರು : ಹೆರಿಗೆ ನಂತರ ಬಾಣಂತಿ ಜೊತೆಗೆ ಬೆಳ್ಳಾವಿ ಹೋಬಳಿ ಮಲ್ಲೇನಹಳ್ಳಿ ಊರಾಚೆ ಜಮೀನಿನ ಗುಡಿಸಲಿನಲ್ಲಿ ಇಡಲಾಗಿದ್ದ ನವಜಾತ ಶಿಶು ಅನಾರೋಗ್ಯದಿಂದ ಸಾವನ್ನಪ್ಪಿದ ಹಿನ್ನಲೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ. ನೂರುನ್ನೀಸ ಗುರುವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಗ್ರಾಮಸ್ಥರು ಹಾಗೂ ಸ್ಥಳೀಯ ಸರ್ಕಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಮೃತ ಮಗುವಿನ ಪೋಷಕರ ಅಹವಾಲು ಸ್ವೀಕರಿಸಿದರು, ಸಾರ್ವಜನಿಕರಿಂದ ಮಾಹಿತಿ ಕಲೆ ಹಾಕಿ, ಮಗು ಮೃತಪಟ್ಟನಂತರವೂ ಮೂರು ದಿನಗಳಿಂದ ಸುರಿಯುತ್ತಿರುವ ಜಡಿಯನ್ನು ಲೆಕ್ಕಿಸದೆ ತಾಯಿಯನ್ನು ಹಟ್ಟಿಯ ಒಳಗಡೆ ವಾಸ ಮಾಡಲು ಬಿಡದೆ ಊರಾಚೆಯ ಗುಡಿಸಲಿನಲ್ಲಿಯೇ ಒಂಟಿಯಾಗಿ ಇರಿಸಲಾಗಿರುವ ಮಾಹಿತಿ ಪಡೆದರು. ಗ್ರಾಮಸ್ಥರಿಗೆ ಕಾನೂನುಗಳ ತಿಳಿವಳಿಕೆ ನೀಡಿ, ಗುಡಿಸಲನ್ನು ಕೆಡವಿಸಿ, ಬಾಣಂತಿಗೆ ಸ್ಥಳೀಯ ವೈದ್ಯರಿಂದ ಚಿಕಿತ್ಸೆ ಕೊಡಿಸಿದ ನ್ಯಾಯಾಧೀಶರು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದರು.
ಆರೋಗ್ಯದ ಕಡೆ ಹೆಚ್ಚಿನ ನಿಗಾ ಅವಶ್ಯಕತೆ ಇರುವ ಬಾಣಂತಿ ಮತ್ತು ಮಗುವನ್ನು ಊರಾಚೆಯ ಗುಡಿಸಲಿನಲ್ಲಿಯೇ ಇರಿಸಿದ ವಿಚಾರ ಇಡೀ ನಾಗರಿಕ ಸಮಾಜ ತಲೆತಗ್ಗಿಸುವ ಪ್ರಕರಣವಾಗಿದೆ. ಋುತು ಚಕ್ರ ಹಾಗೂ ಬಾಣಂತಿ ಸಂದರ್ಭದಲ್ಲಿ ಹೆಣ್ಣು ಮಕ್ಕಳು ಅಗತ್ಯ ವಿಶ್ರಾಂತಿ ಪಡೆದು, ಪೌಷ್ಟಿಕಾಂಶಯುಕ್ತ ಆಹಾರ ಸೇವಿಸಿ ಆರೋಗ್ಯವಾಗಿರಲಿ ಎಂದು ಹಿರಿಯರು ಮಹಿಳೆಯರನ್ನು ಪ್ರತ್ಯೇಕವಾಗಿರಲಿ ಎಂದು ಆಚರಣೆ ತಂದಿದ್ದಾರೆ. ಇಂದು ಈ ಆಚರಣೆ ತನ್ನ ಮೂಲ ಉದ್ದೇಶ ಮರೆತು ಮಹಿಳೆ ಮತ್ತು ಮಕ್ಕಳ ಜೀವನಕ್ಕೆ ಮಾರಕವಾಗಿ ಮೌಢ್ಯತೆಯಿಂದ ಕೂಡಿದ ಅಸ್ಪೃಶ್ಯತೆಯ ಆಚರಣೆಯಾಗಿದೆ ಎಂದರು.