ಅರಣ್ಯ ಕೃಷಿ ಮಾಡಿ ಲಕ್ಷ ಲಕ್ಷ ಗಳಿಸಿದ ಲಕ್ಷೀಕಾಂತ!

By Web DeskFirst Published Sep 24, 2019, 1:45 PM IST
Highlights

ಕೃಷಿ ಜಮೀನು ಒಂಥರಾ ಪ್ರಯೋಗಶಾಲೆ. ಅಲ್ಲಿ ಬದಲಾವಣೆಗಳು ನಿರಂತರವಾಗಿ ಆಗುತ್ತಲೇ ಇರಬೇಕು. ಹಾಗಿದ್ದರೆ ರೈತನಿಗೆ ನಿರಾಳ. ಇಲ್ಲವಾದರೆ ಕಷ್ಟ. ಬಿಸಿಲೂರು ಕಲಬುರಗಿಯ ಹಾಗರಗಾ ರೈತ ಲಕ್ಷ್ಮೇಕಾಂತ ಅವರು ಅರಣ್ಯ ಕೃಷಿ ಮಾಡಿ ಗೆದ್ದಿದ್ದಾರೆ. ಅವರ ಕೃಷಿ ವಿವರ ಇಲ್ಲಿದೆ.

ಶೇಷಮೂರ್ತಿ ಅವಧಾನಿ, ಕಲಬುರಗಿ

ಕಲಬುರಗಿಯ ಹಾಗರಗಾದ ರೈತ ಲಕ್ಷ್ಮೇಕಾಂತ ಅವರು ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಕರ್ಕ್ ಆಗಿದ್ದಾರೆ. ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ. ಆದರೆ ಹಿರಿಯರಿಂದ ಬಂದ ಮೂರೂವರೆ ಎಕರೆ ಜಮೀನು ಪಾಳು ಬಿದ್ದಿತ್ತು. ಅದಕ್ಕೆ ಬಂಡವಾಳ ಹಾಕಿದರೆ ಹಣ ವಾಪಾಸ್‌ ಬರದಿದ್ದರೆ ಎಂಬ ಚಿಂತೆ. ಕೊನೆಗೆ ಧೈರ್ಯ ಮಾಡಿ ಕೃಷಿಗೆ ಇಳಿದೇ ಬಿಟ್ಟರು. ತನ್ನ ಜಮೀನಿನಲ್ಲಿ ನಿಸರ್ಗಕ್ಕೆ ಹತ್ತಿರವಾದ ಸಾವಯವ ಕೃಷಿಯನ್ನೇ ಮಾಡಬೇಕು ಅನ್ನುವುದು ಇವರ ಕನಸು.

ಗುಡ್ಡಗಾಡಿನ ಕಲ್ಲುಮಣ್ಣು ಮಿಶ್ರಿತ ಜಮೀನಿನಲ್ಲಿ ಮರ ಬೆಳೆಸುವುದು ಸುಲಭದ ಮಾತಲ್ಲ. ಮೊದಲಿಗೆ ಕಾಂಪೋಸ್ಟ್‌, ಎರೆಹುಳು ಮತ್ತು ಹಸಿರೆಲೆ ಗೊಬ್ಬರಗಳಿಂದ, ಜೀವಾಮೃತ ಮತ್ತು ಸೂಕ್ಷ್ಮ ಜೀವಾಣುವಿರುವ ವೇಸ್ಟ್‌ ಡಿ- ಕಾಂಪೋಸ್ಟ್‌ನಿಂದ ಭೂಮಿಯ ಫಲವತ್ತತೆ ಹೆಚ್ಚಿಸಿದರು. ಮಣ್ಣನ್ನು ಸಡಿಲುಗೊಳಿಸಿ, ತಲಾ ಒಂದು ಮೀಟರ್‌ ಅಗಲ ಮತ್ತು ಆಳದ ಗುಂಡಿಗಳಲ್ಲಿ ಶೇ.60ರಷ್ಟುಕೆಂಪು ಮಣ್ಣು, ತಲಾ ಶೇ.20ರಷ್ಟುಕಾಂಪೋಸ್ಟ್‌, ಬೇವಿನ ಹಿಂಡಿಯನ್ನು ಹಾಕಿ ವಿವಿಧ ಗಂಧ ಚಂದನಗಳೇ ಮೊದಲಾದ ಸಸಿಗಳನ್ನು ನಾಟಿ ಮಾಡಿದರು. ಶ್ರೀಗಂಧದ 850 ಸಸಿಗಳನ್ನು ಸಾಲಿನಿಂದ ಸಾಲಿಗೆ 16 ಅಡಿ ಮತ್ತು ಗಿಡದಿಂದ ಗಿಡಕ್ಕೆ 10 ಅಡಿ ಅಂತರದಲ್ಲಿ ನಾಟಿ ಮಾಡಿದರು.

ನಾಲ್ಕು ತಿಂಗಳಲ್ಲೇ ಒಂದೆಕರೆಯ ಕಲ್ಲಂಗಡಿ 2ಲಕ್ಷ ರೂ. ಆದಾಯ ನೀಡಿದೆಯೆಂದರೆ ಇಂತಹ ಬೆಳೆ ಬೇರೊಂದಿಲ್ಲ. ಹದಿನೈದು ವರ್ಷಗಳ ಬಳಿಕ ಶ್ರೀಗಂಧದ ಮರಗಳಿಂದ ಆದಾಯ ನಿರೀಕ್ಷಿಸಿದ್ದೇನೆ. ಪರಿಶುದ್ಧ ಗಾಳಿ, ಆಹಾರ ಮತ್ತು ಶ್ರಮಿಕ ಜೀವನದ ಮಹತ್ವ ಹೇಳುತ್ತಾ, ಜೈವಿಕ-ಸಾವಯವ ಆಹಾರಧಾನ್ಯಗಳಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬೇಕು. ರಾಸಾಯನಿಕ ಮುಕ್ತ ಆಹಾರ ಬೆಳೆದು ಜನರಿಗೆ ಪೂರೈಸುವುದೇ ನನ್ನ ಕನಸು.- ಲಕ್ಷ್ಮೇಕಾಂತ ಹಿಬಾರೆ, ಕೃಷಿಕ

ಆ ಗಿಡಗಳಲ್ಲಿ ಜೀವಕೂಡಿದಾಗ ಶ್ರೀಗಂಧ ಮತ್ತು ರಕ್ತಚಂದನ ಸಾಲುಗಳ ಮಧ್ಯದಲ್ಲಿ ತೊಗರಿ ಬೆಳೆದರು. ಬಳಿಕ ಅಂತರ ಬೆಳೆಯಾಗಿ ಎಲೆಕೋಸು, ಚೆಂಡು ಮತ್ತು ಸೇವಂತಿಗೆ ಹೂವಿನ ಗಿಡಗಳನ್ನು, ಪ್ಲಾಸ್ಟಿಕ್‌ ಹೊದಿಕೆಯನ್ನು ಬಳಸಿ ಆಶ್ರಯ ಸಸ್ಯಗಳಾಗಿ ಬದನೆ, ನುಗ್ಗೆ, ಪೇರಲ, ಕಲ್ಲಂಗಡಿ, ನೇರಳೆಯನ್ನು ಬೆಳೆಸಿದ್ದಾರೆ. ಇವುಗಳೆಲ್ಲ ಪರಾವಲಂಬಿಯಾಗಿರುವ ಶ್ರೀಗಂಧದ ಸಸಿಗಳಿಗೆ ಆಶ್ರಯ, ಉತ್ತಮ ಆಹಾರವಾಗಿವೆಯಲ್ಲದೆ, ಹೆಚ್ಚು ತೇವಾಂಶ ಸಂರಕ್ಷಣೆಗೂ ಸಹಕಾರಿಯಾಗಿವೆ.

ಸದ್ಯಕ್ಕೀಗ ಇವರ ಹೊಲದಲ್ಲಿ ಶ್ರೀಗಂಧ, ರತ್ನಚಂದನ, ನುಗ್ಗೆ, ಲಿಂಬೆ, ನೆಲ್ಲಿಕಾಯಿ, ನೇರಳೆ, ಮಹಾಗಣಿ, ಹೆಬ್ಬೇವು, ಮೋಸಂಬಿ, ಪೇರಲ... ಹೀಗೆ ತರಹೇವಾರಿ ಗಿಡಗಳಿವೆ.

ಹೊಲದ ಬದುವಿನಲ್ಲಿಯೂ 100 ಲಿಂಬೆ ಗಿಡಗಳನ್ನು ಬೆಳೆಸಿದ್ದಾರೆ. ಈಗ ಒಂದು ವರ್ಷದ ಗಿಡಗಳಾಗಿವೆ. ಗಂಗಾಕಲ್ಯಾಣದ ಕೊಳವೆಬಾವಿಯಿಂದ ಪ್ರತಿ ಎಂಟು ಅಡಿಗೆ ಹನಿ ನೀರಾವರಿ ಪೈಪು ಅಳವಡಿದ್ದಾರೆ. ಪ್ಲಾಸ್ಟಿಕ್‌ ಮಲ್ಚಿಂಗ್‌ ಶೀಟ್‌ ಉಪಯೋಗಿಸಿ 8-10 ದಿನಗಳಿಗೊಮ್ಮೆ ನಿಂಬೆಗಿಡಗಳಿಗೆ ನೀರು ಪೂರೈಸುತ್ತಿದ್ದಾರೆ. ಜೊತೆಗೆ ಕೃಷಿ ತ್ಯಾಜ್ಯದಿಂದ ವರ್ಷಕ್ಕೆ 20 ಚೀಲ ಎರೆಹುಳು ಗೊಬ್ಬರ ಉತ್ಪಾದಿಸುತ್ತಿದ್ದಾರೆ. ಜೈವಿಕ ಕೀಟ ನಿಯಂತ್ರಣ ಪದ್ಧತಿ ಅನುಷ್ಠಾನಕ್ಕೆ ತಂದಿದ್ದಾರೆ.

ಜಮೀನಿನ ಸಮರ್ಪಕ ಬಳಕೆಗಾಗಿ ಕೃಷಿ ಯಂತ್ರೋಪಕರಣಗಳನ್ನು, ಕೀಟ-ರೋಗಗಳ ಹತೋಟಿಗೆ ಸಾವಯವ ಔಷಧಿಗಳನ್ನು, ಹಳದಿ ಅಂಟು ಮತ್ತು ಮೋಹಕ ಬಲೆಗಳನ್ನು, ಜೈವಿಕ ನಿಯಂತ್ರಣಕ್ಕಾಗಿ ಗುಲಗಂಜಿ ಕೀಟಗಳನ್ನು ಉಪಯೋಗಿಸುತ್ತಿರುವುದರಿಂದ ಎಲ್ಲ ಮರಗಳು ಹುಲುಸಾಗಿ ಮತ್ತು ಸಮೃದ್ಧವಾಗಿ ಬೆಳೆಯುತ್ತಿವೆ.

ಇವೆಲ್ಲ ಆದಾಯ ಮೂಲ

ಎಲೆಕೋಸಿನಿಂದ 50,000 ರು, ಚೆಂಡು-ಸೇವಂತಿಗೆ ಹೂವಿನಿಂದ 25,000 ರು ಆದಾಯ ಬರುತ್ತಿದೆ. ಸದ್ಯಕ್ಕೆ ಪ್ಲಾಸ್ಟಿಕ್‌ ಹೊದಿಕೆಯಲ್ಲಿ ಬದನೆ, ಪೇರಲ, ನುಗ್ಗೆ ಬೆಳೆಗಳಿದ್ದು, ಮಾರಾಟಕ್ಕೆ ಸಿದ್ಧವಾಗಿವೆ. ಕಲ್ಲಂಗಡಿಯನ್ನು ಫೆಬ್ರುವರಿಯ ಅಂತ್ಯದಲ್ಲಿ ನಾಟಿ ಮಾಡಿ ಈವರೆಗೆ ಎಕರೆಗೆ 36 ಟನ್‌ ಇಳುವರಿ ಪಡೆದು ಸುಮಾರು 2 ಲಕ್ಷ ರೂ. ಲಾಭ ಪಡೆದಿದ್ದಾರೆ. ನುಗ್ಗೆಯ ಕಾಯಿ-ಎಲೆಗಳನ್ನು, ಪೇರಲ ಹಣ್ಣುಗಳನ್ನು, ಮೆಂತ್ಯ, ಪಾಲಕ, ಕೊತ್ತಂಬರಿ ಸೊಪ್ಪುಗಳನ್ನು ಮತ್ತು ಹಬ್ಬ ಹರಿದಿನಗಳಲ್ಲಿ ಚೆಂಡು- ಸೇವಂತಿಗೆ ಹೂಗಳ ಮಾರಾಟದಿಂದಲೂ ಲಾಭ ಗಳಿಸುತ್ತಿದ್ದಾರೆ.

ಹೆಚ್ಚಿನ ಮಾಹಿತಿಗೆ ಲಕ್ಷ್ಮೇಕಾಂತ ಹಿಬಾರೆ ಅವರ ಸಂಪರ್ಕ ಸಂಖ್ಯೆ 9886108951.

click me!