ಹಾವೇರಿ: ಕೊರೋನಾ ನಡುವೆ ಸಂತ್ರಸ್ತರ ಗೋಳು ಕೇಳೋರಿಲ್ಲ, ಮಳೆ ಬಂದರೆ ನೆರೆ ಸಂತ್ರಸ್ತರಿಗೆ ನಡುಕ..!

By Kannadaprabha NewsFirst Published Jun 3, 2020, 8:54 AM IST
Highlights

ಕಳೆದ ವರ್ಷ ನೆರೆಗೆ ಸಿಲುಕಿ ಬಿದ್ದ ಮನೆ ಇನ್ನೂ ಪೂರ್ಣಗೊಂಡಿಲ್ಲ| ಸರ್ಕಾರದಿಂದ ಮೊದಲ ಕಂತಿನ ಪರಿಹಾರವಷ್ಟೇ ಬಿಡುಗಡೆ| ಪ್ರವಾಹದ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿದ್ದವು| ಮತ್ತೆ ಕಳೆದ ವರ್ಷದ ನೆರೆ ಪರಿಸ್ಥಿತಿ ಎದುರಾದರೆ ಎಂಬ ಆತಂಕ ಶುರು|

ನಾರಾಯಣ ಹೆಗಡೆ

ಹಾವೇರಿ(ಜೂ.03):  ಮಳೆಗಾಲ ಬರುತ್ತಿದ್ದಂತೆ ಜಿಲ್ಲೆಯ ನದಿ ತೀರದ ಜನರಲ್ಲಿ ನಡುಕ ಶುರುವಾಗುತ್ತಿದೆ. ಕಳೆದ ವರ್ಷದ ನೆರೆಯಲ್ಲಿ ಮನೆ ಕಳೆದುಕೊಂಡ ಸಂತ್ರಸ್ತರು ಇನ್ನೂ ಸೂರಿಲ್ಲದೇ ವಾಸಿಸುತ್ತಿದ್ದಾರೆ. ಕೊರೋನಾ ಮಹಾಮಾರಿಯಿಂದಾಗಿ ನೆರೆ ಸಂತ್ರಸ್ತರ ಸಂಕಷ್ಟ ಕೇಳುವವರೇ ಇಲ್ಲವಾಗಿದ್ದಾರೆ.

ಕಳೆದ ವರ್ಷದ ಆಗಸ್ಟ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಪ್ರವಾಹ ಬಂದು ಜಿಲ್ಲೆಯಲ್ಲಿ 363 ಮನೆಗಳು ಸಂಪೂರ್ಣ ಬಿದ್ದುಹೋಗಿದ್ದವು. 5789 ಮನೆಗಳು ಅರ್ಧದಷ್ಟುಹಾನಿಯಾಗಿದ್ದರೆ, 16747 ಮನೆಗಳು ಭಾಗಶಃ ಹಾನಿಯಾಗಿದ್ದವು. ಗ್ರಾಮೀಣ ಹಾಗೂ ನಗರ ಪ್ರದೇಶ ಸೇರಿದಂತೆ ನೆರೆಯಿಂದ 22,899 ಮನೆಗಳಿಗೆ ಹಾನಿಯಾಗಿತ್ತು. ವರದಾ, ತುಂಗಭದ್ರಾ, ಧರ್ಮಾ ಹಾಗೂ ಕುಮದ್ವತಿ ತೀರದ ಹತ್ತಾರು ಸಾವಿರ ಕುಟುಂಬಗಳು ನೆರೆಯಿಂದ ಬೀದಿಪಾಲಾಗಿದ್ದವು. ಬಳಿಕ ಮನೆ ಕಟ್ಟಿಕೊಳ್ಳಲು ಸರ್ಕಾರ ನೆರವು ಘೋಷಿಸಿತ್ತು. ಅನೇಕ ಕುಟುಂಬಗಳು ಮತ್ತೆ ಮುಂಗಾರು ಶುರುವಾಗುವುದರ ಒಳಗಾಗಿ ಸೂರು ಮಾಡಿಕೊಳ್ಳಬೇಕೆಂಬ ಸಂತ್ರಸ್ತರ ಕನಸು ಈಡೇರಲೇ ಇಲ್ಲ. ಸರ್ಕಾರದಿಂದ ಬರಬೇಕಾದ ಪರಿಹಾರ ವಿಳಂಬ, ಕೊರೋನಾ ಲಾಕ್‌ಡೌನ್‌ ಕಾರಣದಿಂದ ಮನೆ ನಿರ್ಮಾಣ ಸಾಧ್ಯವಾಗಿಲ್ಲ. ಈಗ ಮತ್ತೆ ಮಳೆಗಾಲ ಶುರುವಾಗುತ್ತಿದೆ. ಮುಂದೇನು ಮಾಡಬೇಕು ಎಂಬುದು ತೋಚದೇ ಸಂತ್ರಸ್ತ ಕುಟುಂಬಗಳು ಅತಂತ್ರ ಸ್ಥಿತಿಯಲ್ಲಿ ಸಿಲುಕಿಕೊಂಡಿವೆ.

ಸವಣೂರು: ಸೋಂಕಿತರು ಗುಣಮುಖ, ಸೀಲ್‌ಡೌನ್‌ ತೆರವಿಗೆ ಆಗ್ರಹಿಸಿ ಪ್ರತಿಭಟನೆ

ಪೂರ್ಣಗೊಂಡಿದ್ದು ಎರಡೇ ಮನೆ:

ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸಲು ರಾಜ್ಯ ಸರ್ಕಾರ ಆರಂಭದಲ್ಲಿ ಉತ್ಸಾಹ ತೋರಿಸಿತ್ತು. ಮುಖ್ಯಮಂತ್ರಿ ಯಡಿಯೂರಪ್ಪ, ಸಚಿವರೆಲ್ಲ ಸಂತ್ರಸ್ತರಿಗೆ ಆದಷ್ಟುಬೇಗ ಸೂರು ಕಲ್ಪಿಸುವ ಭರವಸೆ ನೀಡಿದ್ದರು. ಈ ಮಧ್ಯೆ ಪೂರ್ಣ ಹಾನಿಗೊಳಗಾದ ಮನೆ ಫಲಾನುಭವಿಗಳನ್ನು ಎ ವರ್ಗದಲ್ಲಿ ಗುರುತಿಸುವಲ್ಲಿ ಅಧಿಕಾರಿಗಳು ತಾರತಮ್ಯ ಮಾಡಿರುವ ಆರೋಪ ಕೇಳಿಬಂದಿತ್ತು. ಅದರಲ್ಲೂ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಜಿಲ್ಲೆಯಲ್ಲಿ ಭಾರೀ ಅವ್ಯವಹಾರ ಬೆಳಕಿಗೆ ಬಂದಿತ್ತು. ಅವ್ಯವಹಾರದಲ್ಲಿ ಶಾಮೀಲಾದ ಆರೋಪದಲ್ಲಿ 13 ಗ್ರಾಮ ಲೆಕ್ಕಾಧಿಕಾರಿಗಳನ್ನು ಅಮಾನತುಗೊಳಿಸಲಾಗಿತ್ತು. ಆ ಬಳಿಕ ಅಧಿಕಾರಿ ವರ್ಗದಲ್ಲೂ ಸಂತ್ರಸ್ತರ ವಿಷಯದಲ್ಲಿ ನಿರುತ್ಸಾಹ ಕಂಡುಬಂತು. ಇದರ ಫಲವಾಗಿ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸಂಪೂರ್ಣವಾಗಿ ಬಿದ್ದಿದ್ದ ಎ ವರ್ಗಕ್ಕೆ ಸೇರಿದ 303 ಹಾಗೂ ನಗರ ಪ್ರದೇಶದ 60 ಸೇರಿದಂತೆ 363 ಮನೆಗಳ ಪೈಕಿ ಪೂರ್ಣ ಜಿಪಿಎಸ್‌ ಆಗಿರುವ ಮನೆಗಳ ಸಂಖ್ಯೆ ಕೇವಲ 2 ಮಾತ್ರ. ಅದರಲ್ಲೂ ನಗರ ಪ್ರದೇಶದಲ್ಲಿ ಒಂದೇ ಒಂದು ಮನೆಯೂ ಪೂರ್ಣಗೊಂಡಿಲ್ಲ. ಪೂರ್ಣ ಹಾನಿಗೀಡಾದ ಮನೆಗಳಿಗೆ ಆರಂಭಿಕವಾಗಿ 1 ಲಕ್ಷಗಳಂತೆ 2.92 ಕೋಟಿ, ತಳಪಾಯ ಪೂರ್ಣಗೊಂಡ 214 ಮನೆಗಳಿಗೆ ತಲಾ 1 ಲಕ್ಷದಂತೆ 1.98 ಕೋಟಿ ಹಾಗೂ ಗೋಡೆ ಹಂತಕ್ಕೆ ಬಂದ 94 ಮನೆಗಳಿಗೆ ತಲಾ 80 ಸಾವಿರದಂತೆ 75 ಲಕ್ಷ ಬಿಡುಗಡೆಯಾಗಿದೆ. ಅದಾದ ಬಳಿಕ ಸರ್ಕಾರದಿಂದ ಹಣ ಬಾರದ್ದರಿಂದ ಅನೇಕ ಕುಟುಂಬಗಳ ಮನೆ ಪೂರ್ಣಗೊಂಡಿಲ್ಲ. ಲಾಕ್‌ಡೌನ್‌ ವೇಳೆ ಮರಳು, ಕಾರ್ಮಿಕರು ಸಿಗದ್ದರಿಂದ ಮತ್ತಷ್ಟುವಿಳಂಬವಾಗಿ ಸಮಸ್ಯೆಯಾಗಿದೆ. ನಗರ ಪ್ರದೇಶದ ಎ ವರ್ಗದ ಮನೆಗಳಿಗೆ ಇದುವರೆಗೆ 1.13 ಕೋಟಿ ಬಿಡುಗಡೆಯಾಗಿದೆ. ಪೂರ್ಣ ಹಾನಿಗೊಂಡ ಮನೆಗಳಿಗೆ ಸರ್ಕಾರ ತಲಾ 5 ಲಕ್ಷ ನೀಡುವುದಾಗಿ ಘೋಷಿಸಿದೆ. ಆದರೆ ಜಿಲ್ಲೆಗೆ ಈ ವರೆಗೆ ಸುಮಾರು  6 ಕೋಟಿ ಬಂದಿದ್ದು, ಇನ್ನೂ 12 ಕೋಟಿ ಬರಬೇಕಿದೆ.

22,899 ಮನೆ ಹಾನಿ:

ಜಿಲ್ಲೆಯಲ್ಲಿ ನೆರೆಯಿಂದ 5,789 ಮನೆಗಳು ಅರ್ಧದಷ್ಟುಹಾನಿಯಾಗಿದ್ದು, ಇವನ್ನೆಲ್ಲ ಬಿ ವರ್ಗಕ್ಕೆ ಸೇರಿಸಲಾಗಿದೆ. ಭಾಗಶಃ ಹಾನಿಯಾಗಿರುವ ಇಂತಹ ಮನೆಗಳನ್ನು ಕೆಡವದೇ ದುರಸ್ತಿ ಮಾಡಿಸಿಕೊಳ್ಳಲು ಸರ್ಕಾರ 3 ಲಕ್ಷ ಪರಿಹಾರವನ್ನು ಘೋಷಿಸಿದೆ. ಆದರೆ, ಆರಂಭಿಕವಾಗಿ ನೀಡಿದ  50 ಸಾವಿರ ಪರಿಹಾರ ಬಿಟ್ಟರೆ ನಂತರ ಸಂತ್ರಸ್ತರಿಗೆ ಯಾವ ಹಣವೂ ಬಂದಿಲ್ಲ. ಇನ್ನು 16,747 ಮನೆಗಳು ಸಿ ವರ್ಗಕ್ಕೆ ಅಂದರೆ, ಅಲ್ಪಸ್ವಲ್ಪ ಹಾನಿಗೀಡಾದ ವರ್ಗಕ್ಕೆ ಸೇರಿದೆ. ಇಂತಹ ಮನೆಗಳಿಗೆ ಸರ್ಕಾರ 50 ಸಾವಿರ ಪರಿಹಾರ ಘೋಷಿಸಿತ್ತು. ಒಟ್ಟಾರೆ ಜಿಲ್ಲೆಯಲ್ಲಿ ನೆರೆಯಿಂದಾಗಿ 22 ಸಾವಿರಕ್ಕೂ ಹೆಚ್ಚು ಮನೆಗಳು ಹಾನಿಯಾಗಿದ್ದವು.

ಸ್ಥಳಾಂತರದ ಸುದ್ದಿಯೇ ಇಲ್ಲ:

ಪ್ರವಾಹದ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಗ್ರಾಮಗಳು ಜಲಾವೃತಗೊಂಡಿದ್ದವು. ನೆರೆಪೀಡಿತ ಹಾವೇರಿ, ಸವಣೂರು ಮತ್ತು ಹಾನಗಲ್ಲ ತಾಲೂಕುಗಳ 19 ಗ್ರಾಮಗಳನ್ನು ಸ್ಥಳಾಂತರಿಸಬೇಕು ಎಂದು ಸರ್ಕಾರ ಗುರುತಿಸಿತ್ತು. ಅಲ್ಲದೇ ಒಟ್ಟು 19 ಗ್ರಾಮಗಳಲ್ಲಿ ನದಿಗೆ ಅಡ್ಡಲಾಗಿ ತಡೆಗೋಡೆ ನಿರ್ಮಿಸುವುದಾಗಿ ಹೇಳಿತ್ತು. ಆದರೆ, ಇದುವರೆಗೆ ಗ್ರಾಮಗಳ ಸ್ಥಳಾಂತರವಾಗಲಿ, ತಡೆಗೋಡೆ ನಿರ್ಮಾಣವಾಗಲಿ ಸುದ್ದಿಯೇ ಇಲ್ಲ. ಮತ್ತೆ ಕಳೆದ ವರ್ಷದ ನೆರೆ ಪರಿಸ್ಥಿತಿ ಎದುರಾದರೆ ಎಂಬ ಆತಂಕ ಶುರುವಾಗಿದೆ.

ಈ ಬಗ್ಗೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ್‌ ಅವರು, ಮನೆ ನಿರ್ಮಾಣದ ವಿವಿಧ ಹಂತಗಳು ಪೂರ್ಣಗೊಂಡು ಜಿಪಿಎಸ್‌ ಆದ ಬಳಿಕ ಸರ್ಕಾರದಿಂದ ನೇರವಾಗಿ ಫಲಾನುಭವಿಗಳಿಗೆ ಹಣ ಜಮಾ ಆಗುತ್ತದೆ. ಆದರೆ, ನಗರ ಪ್ರದೇಶದಲ್ಲಿ ಇದುವರೆಗೆ ಪೂರ್ಣ ಹಾನಿಯಾದ ಒಂದೂ ಮನೆ ನಿರ್ಮಾಣವಾಗಿಲ್ಲ. ಈ ಕುರಿತು ಮೂರು ನೋಟಿಸ್‌ ನೀಡಿ ಆಗಲೂ ನಿರ್ಮಾಣ ಕಾರ್ಯ ಆರಂಭಿಸದಿದ್ದರೆ ಅಂಥವರಿಗೆ ಮನೆ ಅಗತ್ಯವಿಲ್ಲ ಎಂದು ಪರಿಗಣಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. 
 

click me!