ಆರ್ಥಿಕ ಹಿಂಜರಿತಕ್ಕೆ ಆಟೋ ಮೊಬೈಲ್ ಕ್ಷೇತ್ರ ಬಲಿಯಾಗಿದ್ದು, ಇದರ ಪರಿಣಾಮ ಶಿವಮೊಗ್ಗದ ಮೇಲೂ ಪರಿಣಾಮ ಬೀರುತ್ತಿದೆ ಎಂಬ ಆತಂಕದ ನಡುವೆಯೇ ಇದೀಗ ಮಲೆನಾಡಿನ ಆರ್ಥಿಕತೆಗೆ ಇತ್ತೀಚೆಗೆ ಬೆನ್ನುಲುಬಾಗಿ ನಿಲ್ಲುತ್ತಿದ್ದ ಗಾರ್ಮೆಂಟ್ ಉದ್ಯಮವೂ ಬಲಿಯಾಗುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿದೆ.
ಶಿವಮೊಗ್ಗ(ಸೆ.06): ಮಲೆನಾಡಿನ ಸಾವಿರಾರು ಮಹಿಳೆಯರ ಆರ್ಥಿಕತೆಗೆ ಒಂದಿಷ್ಟುಗಟ್ಟಿತನ ನೀಡಿದ್ದ ಗಾರ್ಮೆಂಟ್ ಉದ್ಯಮದಲ್ಲಿ ಕಂಡು ಬರುತ್ತಿರುವ ತಲ್ಲಣ ಸಾವಿರಾರು ಉದ್ಯೋಗಿಗಳಲ್ಲಿ ಆತಂಕ ಸೃಷ್ಟಿಸಿದೆ.
ಅದರಲ್ಲಿಯೂ ಮುಖ್ಯವಾಗಿ ಮಧ್ಯಮ, ಕೆಳ ಮಧ್ಯಮ ಮತ್ತು ಬಡ ವರ್ಗದ ಮಹಿಳೆಯರ ಪಾಲಿಗೆ ವರದಾನವಾಗಿದ್ದ ಗಾರ್ಮೆಂಟ್ ಕ್ಷೇತ್ರದಲ್ಲಿ ಕಳೆದೆರಡು ತಿಂಗಳಿಂದ ಯಾವುದೇ ಹೊಸ ನೇಮಕಾತಿ ಇಲ್ಲವಾಗಿದ್ದು, ಇದು ಆರಂಭದ ಸೂಚನೆ ಎಂದು ಸೂಚನೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.
ಸಾವಿರಾರು ಮಹಿಳೆಯರಿಗೆ ಉದ್ಯೋಗ ನೀಡಿದ ಗಾರ್ಮೆಂಟ್ಸ್:
ಆರು ವರ್ಷದ ಹಿಂದೆ ಶಿವಮೊಗ್ಗದಲ್ಲಿ ಶಾಹಿ ಗಾರ್ಮೆಂಟ್ ಉದ್ಯಮ ಆರಂಭಗೊಳ್ಳುವ ಮೂಲಕ ಮಲೆನಾಡಿನಲ್ಲಿ ಗಾರ್ಮೆಂಟ್ ಉದ್ಯಮದ ಹೊಸ ಶಾಖೆ ಆರಂಭಗೊಂಡಿತು. ಬೆನ್ನಲ್ಲೇ ಹಲವಾರು ಗಾರ್ಮೆಂಟ್ ಉದ್ಯಮಗಳು ಸ್ಥಾಪನೆಗೊಂಡು ಸಾವಿರಾರು ಮಹಿಳೆಯರು ಮತ್ತು ಯುವತಿಯರಿಗೆ ಇಲ್ಲಿ ಉದ್ಯೋಗ ಸಿಕ್ಕಿತ್ತು. ಮನೆ ಮನೆಗಳಲ್ಲಿ ಆರ್ಥಿಕತೆಯ ಚೇತರಿಕೆ ಕಾಣಿಸಿತ್ತು. ಎಲ್ಲ ಗಾರ್ಮೆಂಟ್ ಕಾರ್ಖಾನೆಗಳಲ್ಲಿ ನಿರಂತರವಾಗಿ ನೇಮಕಾತಿ ಪ್ರಕ್ರಿಯೆಗಳು ಇದ್ದೇ ಇರುತ್ತಿತ್ತು.
ನೇಮಕಾತಿ ಸ್ಥಗಿತ:
ಆದರೆ ಕಳೆದ ಎರಡು ತಿಂಗಳಿಂದ ಬಹುತೇಕ ಯಾವುದೇ ಗಾರ್ಮೆಂಟ್ ಘಟಕಗಳಲ್ಲಿ ಕಾರ್ಮಿಕರ ಹೊಸ ನೇಮಕಾತಿ ಪ್ರಕ್ರಿಯೆ ನಿಂತು ಹೋಗಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟುಕಠಿಣವಾಗುವ ಸಾಧ್ಯತೆ ಇದ್ದು, ಹಾಲಿ ಉದ್ಯೋಗದಲ್ಲಿ ಇರುವವರನ್ನೂ ಕೆಲಸದಿಂದ ತೆಗೆದು ಹಾಕಬಹುದು ಎನ್ನಲಾಗುತ್ತಿದೆ.
ವೆಚ್ಚ ಕಡಿತಕ್ಕೆ ಮುಂದಾದ ಆಡಳಿತ ಮಂಡಳಿ:
ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಸಮಸ್ಯೆ ಎದುರಿಸುವ ನಿಟ್ಟಿನಲ್ಲಿ ವೆಚ್ಚ ಕಡಿತಕ್ಕೆ ಗಾರ್ಮೆಂಟ್ ಕ್ಷೇತ್ರದ ಆಡಳಿತ ಮಂಡಳಿ ಮುಂದಾಗಿದ್ದು, ಆಡಳಿತಾತ್ಮಕ ವೆಚ್ಚವೂ ಸೇರಿದಂತೆ ಕೆಲವೊಂದು ಅನಗತ್ಯ ವೆಚ್ಚಗಳಿಗೆ ಈಗಾಗಲೇ ಕಡಿವಾಣ ಹಾಕಿವೆ.
ವಿಸ್ತರಣೆಯೂ ಇಲ್ಲ:
ಇನ್ನು ಒಂದೆಡೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿದ್ದರೆ ಇನ್ನೊಂದೆಡೆ ಘಟಕ ವಿಸ್ತರಣೆ ಹಾಗೂ ಹೊಸ ಘಟಕಗಳ ಆರಂಭಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ. ಬ್ಯಾಂಕ್ ಮತ್ತಿತರ ಕಡೆಗಳಿಂದ ಸಾಲ ಪಡೆದು ಹೊಸದಾಗಿ ಘಟಕಗಳನ್ನು ಆರಂಭಿಸಿದರೂ ನಿರೀಕ್ಷಿತ ಮಟ್ಟಕ್ಕೆ ಬೇಡಿಕೆ ಸಿಗುತ್ತದೆ ಎಂಬ ಯಾವುದೇ ನಂಬಿಕೆ ಇಲ್ಲ.
ಶಿವಮೊಗ್ಗ: ಗಾಂಧಿ ಪಾರ್ಕ್‌ನಲ್ಲಿ ಹೆಣ್ಮಕ್ಳ 'ಎಣ್ಣೆ ಪಾರ್ಟಿ'
ಇಂತಹ ಪರಿಸ್ಥಿತಿಯಲ್ಲಿ ಹೊಸದಾಗಿ ಘಟಕ ಆರಂಭಿಸಿದರೆ ಲಾಭಕ್ಕಿಂತ ನಷ್ಟವೇ ಹೆಚ್ಚು. ಹಾಗಾಗಿ ಇರುವ ಘಟಕಗಳನ್ನೇ ಸಮರ್ಪಕವಾಗಿ ನಡೆಸಿದರೆ ಅದೇ ದೊಡ್ಡ ಸಾಧನೆ ಎಂಬ ಮಾತು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಶಿವಮೊಗ್ಗ ಜಿಲ್ಲೆಯ ಮಹಿಳೆಯರಿಗೆ ಆರ್ಥಿಕ ಸದೃಢತೆ ಕಲ್ಪಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಗಾರ್ಮೆಂಟ್ ಉದ್ಯಮದಲ್ಲಿ ಕಂಡು ಬರುತ್ತಿರುವ ಸಣ್ಣ ಮಟ್ಟದ ಕಂಪನ ದೊಡ್ಡದಾಗದಿರಲಿ ಎಂಬುದೇ ಎಲ್ಲರ ಆಶಯ.
ಗಾರ್ಮೆಂಟ್ಸ್ ಚಿತ್ರಣ:
ಪ್ರಸ್ತುತ ಶಿವಮೊಗ್ಗದಲ್ಲಿ ಗಾರ್ಮೆಂಟ್ ಕ್ಷೇತ್ರದ ದಿಗ್ಗಜ ಶಾಹಿ ಗಾರ್ಮೆಂಟ್‌ನ ಮೂರು ಘಟಕಗಳು ಕಾರ್ಯ ನಿರ್ವಹಿಸುತ್ತಿದೆ. ಶಿವಮೊಗ್ಗ ನಗರ, ಶಿವಮೊಗ್ಗ ಹೊರವಲಯದ ಮಾಚೇನಹಳ್ಳಿಯ ವಿಶೇಷ ವಿತ್ತ ವಲಯ, ಶಿಕಾರಿಪುರ ಹಾಗೂ ಸಾಗರದಲ್ಲಿ ಘಟಕಗಳಿವೆ. ಇದರಲ್ಲಿ ಮಿಲ್ ಮತ್ತು ಟೆಕ್ಸ್‌ಟೈಲ್ಸ್‌ನಲ್ಲಿ ತಲಾ ಮೂರು ಪಾಳಿ ಹಾಗೂ ಗಾರ್ಮೆಂಟ್‌ನಲ್ಲಿ ಸಾಮಾನ್ಯ ಪಾಳಿಯಲ್ಲಿ ಮಹಿಳೆಯರು ಕೆಲಸ ನಿರ್ವಹಿಸುತ್ತಿದ್ದಾರೆ.
ಮಹಿಳಾ ಕೆಲಸಗಾರರೇ ಹೆಚ್ಚು:
ಇದರ ಜೊತೆಗೆ ಶಿವಮೊಗ್ಗದಲ್ಲಿ ಸ್ಥಳೀಯ ಉದ್ಯಮಿಗಳು ಸ್ಥಾಪಿಸಿರುವ ನಾಲ್ಕೈದು ಗಾರ್ಮೆಂಟ್ ಘಟಕಗಳಲ್ಲೂ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಶಾಹಿ ಗಾರ್ಮೆಂಟ್‌ನ ಶಿವಮೊಗ್ಗ ಘಟಕದಲ್ಲೇ ಸುಮಾರು 7 ರಿಂದ 7500 ಮಹಿಳೆಯರು ಕೆಲಸ ಮಾಡುತ್ತಿದ್ದು, ಶಿಕಾರಿಪುರ ಮತ್ತು ಸಾಗರದ ಘಟಕಗಳೂ ಸೇರಿದರೆ ಕಾರ್ಮಿಕರ ಸಂಖ್ಯೆ 9 ಸಾವಿರ ದಾಟುತ್ತದೆ. ಹಾಗೆಯೇ ಶಿವಮೊಗ್ಗದಲ್ಲಿರುವ ಇತರೆ ಗಾರ್ಮೆಂಟ್‌ನಲ್ಲೂ ಸುಮಾರು 1500 ರಿಂದ 2 ಸಾವಿರ ಮಹಿಳಾ ಕೆಲಸಗಾರರು ಇದ್ದು ಗಾರ್ಮೆಂಟ್‌ನಿಂದಾಗಿ ಒಟ್ಟಾರೆ 12 ಸಾವಿರಕ್ಕೂ ಹೆಚ್ಚು ಮಹಿಳೆಯರು ಉದ್ಯೋಗ ಕಂಡುಕೊಂಡಿದ್ದಾರೆ.
ನೇಮಕ ಸ್ಥಗಿತ; ಕಾರ್ಮಿಕರ ಆತಂಕ
ದೇಶದ ಉತ್ಪಾದನಾ ವಲಯದಲ್ಲಿ ಕಂಡು ಬಂದಿರುವ ಹಿನ್ನಡೆಯಿಂದ ಸಿದ್ಧ ಉಡುಪು ಕ್ಷೇತ್ರವೂ ಹೊರತಾಗಿಲ್ಲ. ಬೇಡಿಕೆ ಕುಸಿತ, ಕಚ್ಚಾ ವಸ್ತುಗಳ ಬೆಲೆಯಲ್ಲಿನ ಏರಿಳಿತ, ಸಕಾಲಕ್ಕೆ ಸಿಗದ ಆರ್ಥಿಕ ನೆರವು ಸೇರಿದಂತೆ ವಿವಿಧ ಕಾರಣಗಳಿಂದ ಗಾರ್ಮೆಂಟ್ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿದೆ.
ಮಾನವೀಯತೆ ಮೆರೆದ ಮೀನುಗಾರರಿಗೆ ತೆಪ್ಪ ವಿತರಣೆ
ಇದಕ್ಕೆ ನಿದರ್ಶನ ಎಂಬಂತೆ ಶಿವಮೊಗ್ಗದಲ್ಲಿರುವ ವಿವಿಧ ಗಾರ್ಮೆಂಟ್‌ಗಳಲ್ಲಿ ಪ್ರತಿ ತಿಂಗಳು 30 ರಿಂದ 50 ಜನ ಮಹಿಳಾ ಕಾರ್ಮಿಕರು ಹೊಸದಾಗಿ ಸೇರ್ಪಡೆಗೊಳ್ಳುತ್ತಿದ್ದರು. ಈಗಾಗಲೇ ಕೆಲಸ ಮಾಡುತ್ತಿದ್ದು ಬೇರೆ ಬೇರೆ ಕಾರಣಗಳಿಗಾಗಿ ಕೆಲಸ ಬಿಟ್ಟು ಹೋಗುವವರಿಂದಲ್ಲದೆ, ಬೇಡಿಕೆ ಹೆಚ್ಚಳ ಪೂರೈಕೆ ಹಾಗೂ ಘಟಕದ ವಿಸ್ತರಣೆ ಹಿನ್ನೆಲೆಯಲ್ಲಿ ಮಹಿಳೆಯರು ಸಾಕಷ್ಟುಸಂಖ್ಯೆಯಲ್ಲಿ ಹೊಸದಾಗಿ ಸೇರ್ಪಡೆಗೊಳ್ಳುತ್ತಿದ್ದರು. ಆದರೆ ಕಳೆದೆರಡು ತಿಂಗಳಿನಿಂದ ಹೊಸದಾಗಿ ಯಾರನ್ನೂ ಕೆಲಸಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಬಿಟ್ಟು ಹೋಗುವ ಕೆಲಸಗಾರರ ಬದಲಿಗೆ ಬೇರೆ ಕಾರ್ಮಿಕರನ್ನೂ ನೇಮಕ ಮಾಡಿಕೊಳ್ಳುತ್ತಿಲ್ಲ. ಕೆಲಸ ಕೇಳಿಕೊಂಡು ಬರುವ ಮಹಿಳೆಯರಿಗೆ ಸದ್ಯಕ್ಕೆ ನಮ್ಮಲ್ಲಿ ಕೆಲಸ ಖಾಲಿ ಇಲ್ಲ ಎಂದು ಹೇಳಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ಗಾರ್ಮೆಂಟ್‌ನ ಅಧಿಕಾರಿಯೊಬ್ಬರು ತಿಳಿಸಿದರು.
-ಗೋಪಾಲ್ ಯಡಗೆರೆ