ವರುಣನ ವಕ್ರದೃಷ್ಟಿಯಿಂದ ರಾಜ್ಯದಲ್ಲಿ ಬೆಳೆಯುವ ಅಕ್ಕಿಯೂ ಸರ್ಕಾರದ ಕೈಗೆ ಸಿಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಅಲ್ಪಸ್ವಲ್ಪ ಬೆಳೆದ ಅಕ್ಕಿ ಬೆಲೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ.
ಜಗದೀಶ ವಿರಕ್ತಮಠ
ಬೆಳಗಾವಿ(ಜೂ26): ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ ಜನಕ್ಕೆ 10 ಕೆಜಿ ಅಕ್ಕಿ ಕೊಡಲು ಒಂದೆಡೆ ಹೆಣಗಾಡುತ್ತಿದ್ದರೆ, ಮತ್ತೊಂದೆಡೆ ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಭತ್ತದ ಬೆಳೆ ಒಂದೆರಡು ಇಂಚು ಬೆಳೆದು ನೀರಿಲ್ಲದೆ ಕಮರುತ್ತಿದೆ. ಪರಿಣಾಮ ಪ್ರಸಕ್ತ ವರ್ಷ ರಾಜ್ಯದಲ್ಲಿ ಮಳೆ ಮಾತ್ರವಲ್ಲದೆ, ಅಕ್ಕಿಗೂ ಅಭಾವ ಎದುರಾಗುವ ಲಕ್ಷಣ ಗೋಚರಿಸುತ್ತಿದೆ.
ಬೆಳಗಾವಿ ಜಿಲ್ಲೆಯ ಬೆಳಗಾವಿ ಹಾಗೂ ಖಾನಾಪೂರ ತಾಲೂಕಿನ ಅರ್ಧ ಭಾಗದಲ್ಲಿ ಭತ್ತ ಪ್ರಮುಖ ಬೆಳೆಯಾಗಿದೆ. ಬೆಳಗಾವಿ ದಕ್ಷಿಣ ಭಾಗದ ಯಳ್ಳೂರ, ಮಚ್ಚೆ, ಸುಳಗಾ, ಧಾಮಣೆ, ಹಟ್ಟಿ, ಯರಮಾಳ, ಸಂತಿ ಬಸ್ತವಾಡ ಇನ್ನಿತರ ಕಡೆಗಳಲ್ಲಿ ಸುಮಾರು 1800 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬೆಳಗಾವಿ ಬಾಸುಮತಿ, ಕುಮುದ ತಳಿಯ ಭತ್ತ ಬೆಳೆಯಲಾಗುತ್ತದೆ. ಇನ್ನು ಉತ್ತರ ಭಾಗದ ಕಡೋಲಿ, ಅಗಸಗಾ, ಹೊನಗಾ, ಕಾಕತಿ, ಅಂಬೇವಾಡಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶ ಹಾಗೂ ಪೂರ್ವಭಾಗದ ಕುಡಚಿ, ನಿಲಜಿ, ಸಾಂಬ್ರಾ, ಮುಚ್ಚಂಡಿ, ಅಲಾರವಾಡ, ಹಲಗಾ, ಬಸ್ತವಾಡ, ಮಾವಿನಕಟ್ಟಿ, ಬಾಳೆಕುಂದ್ರಿ, ಹೊನ್ನಿಹಾಳ, ಬಸರಿಕಟ್ಟಿಸುತ್ತಲಿನ ಅಂದಾಜು 2000 ಎಕರೆ ಪ್ರದೇಶದಲ್ಲಿ ಇಂದ್ರಾಯಿಣಿ ತಳಿಯ ಭತ್ತ ಬೆಳೆಯಲಾಗುತ್ತದೆ. ಆದರೆ, ಈ ಬಾರಿಯ ಮುಂಗಾರು ಸ್ಥಳೀಯ ಭತ್ತದ ಬೆಳೆಗಾರರನ್ನು ಆತಂಕಕ್ಕೀಡು ಮಾಡಿದೆ.
ಬೆಳಗಾವಿಯಲ್ಲಿ ಕನ್ನಡ ಉಳಿಯಲು ಲಿಂಗರಾಜ ಕಾಲೇಜ ಕಾರಣ: ಡಾ. ಪ್ರಭಾಕರ ಕೋರೆ
ಪ್ರತಿ ಎಕರೆಗೆ 22ರಿಂದ 25 ಕ್ವಿಂಟಲ್ ಭತ್ತ ಬೆಳೆಯುವ ರೈತರು, ನೆರೆಯ ಗೋವಾ, ಮಹಾರಾಷ್ಟ್ರ, ಬೆಳಗಾವಿಯ ವಿವಿಧ ಪ್ರದೇಶಗಳಿಗೆ ಹಾಗೂ ಬೆಂಗಳೂರು, ಹೈದ್ರಾಬಾದ್ ಸೇರಿದಂತೆ ದಕ್ಷಿಣ ಭಾರತದ ನಾನಾ ಪ್ರದೇಶಗಳಿಗೆ ಬೆಳಗಾವಿಯಲ್ಲಿನ ಬಾಸುಮತಿ, ಇಂದ್ರಾಯಿಣಿ ಹಾಗೂ ಸಾಯಿರಾಮ್ ತಳಿಯ ಅಕ್ಕಿ ರಫ್ತಿಗೆ ಕಾರಣರಾಗುತ್ತಿದ್ದರು. ಆದರೆ, ಪ್ರಸಕ್ತ ಹಂಗಾಮಿನಲ್ಲಿ ಮಳೆ ಕೊರತೆ ಭತ್ತ, ಅಕ್ಕಿ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದ್ದು, ಭಾರೀ ಪ್ರಮಾಣದಲ್ಲಿ ಇಳಿವರಿ ಕುಂಠಿತಗೊಳ್ಳಲಿದೆ ಎಂಬ ಆತಂಕ ಎದುರಾಗಿದೆ.
ವರುಣನ ವಕ್ರದೃಷ್ಟಿಯಿಂದ ರಾಜ್ಯದಲ್ಲಿ ಬೆಳೆಯುವ ಅಕ್ಕಿಯೂ ಸರ್ಕಾರದ ಕೈಗೆ ಸಿಗಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಅಲ್ಪಸ್ವಲ್ಪ ಬೆಳೆದ ಅಕ್ಕಿ ಬೆಲೆಯೂ ಗಣನೀಯ ಪ್ರಮಾಣದಲ್ಲಿ ಏರಿಕೆ ಕಾಣುವ ಸಾಧ್ಯತೆ ಇದೆ.
ಭತ್ತದ ಸಸಿ ಉಳಿಸಲು ಕೊಡದಲ್ಲಿ ನೀರು!
ಈ ಬಾರಿ ಮಳೆರಾಯ ಮುನಿಸಿಕೊಂಡಂತೆ ಕಾಣಿಸುತ್ತಿದೆ. ಜೂನ್ ತಿಂಗಳು ಮುಗಿಯುತ್ತಿದ್ದರೂ ಮಳೆಯಾಗದ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಭತ್ತ ಬೆಳೆದ ರೈತರು ನಷ್ಟದ ಭೀತಿ ಎದುರಿಸುತ್ತಿದ್ದಾರೆ. ಉತ್ತಮ ಮುಂಗಾರು ಮಳೆಯಾಗುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದ ರೈತರು ಮೇ ತಿಂಗಳ ಕೊನೆಯ ವಾರದಲ್ಲೇ ಭತ್ತದ ಒಣ ಬಿತ್ತನೆ ಆರಂಭಿಸಿದ್ದರು. ಅಲ್ಲದೇ ಕೆಲ ರೈತರು ನಾಟಿಗಾಗಿ ಭತ್ತದ ಸಸಿ ಕೂಡ ಬೆಳೆಸಿದ್ದರು. ಆದರೆ ಮಳೆ ಕೈಕೊಟ್ಟಿದ್ದರಿಂದ ಎಳೆಯ ಸಸಿ ಕಮರಿ ಹೋಗುತ್ತಿದೆ. ಈ ಮಧ್ಯೆ ರೈತರು ಭತ್ತದ ಸಸಿ ಉಳಿಸಿಕೊಳ್ಳಲು ಕೊಡದಿಂದ ನೀರು ತಂದು ಹಾಕಿ ಬೆಳೆ ರಕ್ಷಣೆಯ ಕಾರ್ಯದಲ್ಲಿ ತೊಡಗಿದ್ದಾರೆ.