ಕೊಪ್ಪಳ -ಪ್ರವಾಹದ ನಡುವೆಯೂ ಬರ, ಆತಂಕದಲ್ಲಿ ಅನ್ನದಾತ

By Sujatha NR  |  First Published Aug 6, 2024, 12:25 PM IST

ತುಂಗಭದ್ರಾ ನದಿ ಹಾಗೂ ಜಲಾಶಯಕ್ಕೆ ಕಳೆದೊಂದು ತಿಂಗಳಿಂದ ನೂರಾರು ಟಿಎಂಸಿ ನೀರು ಹರಿದು ಬಂದು ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೂ ಸಹ ಜಿಲ್ಲೆಯಲ್ಲಿ ಮಾತ್ರ ಬರದ ಛಾಯೆ ಆವರಿಸಿದ್ದು, ಅನ್ನದಾತ ಆತಂಕದಲ್ಲಿದ್ದಾನೆ.


 ಸೋಮರಡ್ಡಿ ಅಳವಂಡಿ

 ಕೊಪ್ಪಳ :  ತುಂಗಭದ್ರಾ ನದಿ ಹಾಗೂ ಜಲಾಶಯಕ್ಕೆ ಕಳೆದೊಂದು ತಿಂಗಳಿಂದ ನೂರಾರು ಟಿಎಂಸಿ ನೀರು ಹರಿದು ಬಂದು ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೂ ಸಹ ಜಿಲ್ಲೆಯಲ್ಲಿ ಮಾತ್ರ ಬರದ ಛಾಯೆ ಆವರಿಸಿದ್ದು, ಅನ್ನದಾತ ಆತಂಕದಲ್ಲಿದ್ದಾನೆ.

Tap to resize

Latest Videos

undefined

ಹೌದು, ಜಿಲ್ಲೆಯಲ್ಲಿ ಮತ್ತೆ ಬರದ ಛಾಯೆ ಕಾಣಿಸಿಕೊಂಡಿದೆ. ಕಳೆದ ವರ್ಷ ಹಂಗಾಮನ್ನು ರಾಜ್ಯ ಸರ್ಕಾರ ಹಸಿ ಬರ ಎಂದು ಘೋಷಣೆ ಮಾಡಿತ್ತು. ಈ ವರ್ಷವೂ ಅಂತಹದ್ದೆ ಹಸಿ ಬರ ರೈತರನ್ನು ಕಾಡುತ್ತಿದೆ.

ಬೆಳೆ ನೋಡಲು ಹಸಿರಾಗಿಯೇ ಇವೆ. ಆದರೆ, ಇರಬೇಕಾದಷ್ಟು ಹಸಿ ಇರದೆ ಇರುವುದರಿಂದ ಅವುಗಳು ಕಾಳುಕಟ್ಟದಂತೆ ಆಗುತ್ತಿವೆ. ವಾರದೊಳಗೆ ಮಳೆಯಾಗದಿದ್ದರೆ ಮುಂಗಾರು ಬೆಳೆ ಸಂಕಷ್ಟ ಎನ್ನುತ್ತಾರೆಇಲಾಖೆಯ ಅಧಿಕಾರಿಗಳು.

ಮಳೆ ಅಭಾವ:

ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ನಿರೀಕ್ಷೆಯಷ್ಟು ಮಳೆಯಾಗುತ್ತಿಲ್ಲ. ಪ್ರಾರಂಭದ ಜೂನ್ ತಿಂಗಳಲ್ಲಿ ಅತ್ಯುತ್ತಮವಾಗಿಯೇ ಬಿದ್ದ ಮಳೆ ಜುಲೈ ತಿಂಗಳಲ್ಲಿ ಕೈಕೊಟ್ಟಿದೆ.

ಜುಲೈ ತಿಂಗಳಲ್ಲಿ ವಾಡಿಕೆಯಂತೆ 66 ಮಿ.ಮೀ. ಮಳೆಯಾಗಬೇಕಾಗಿದ್ದರೂ ಆಗಿದ್ದು ಕೇವಲ 48 ಮಿ.ಮೀ. ಮಾತ್ರ. ಹೀಗಾಗಿ, ಶೇ. 28 ರಷ್ಟು ಮಳೆಯ ಅಭಾವ ಆಗಿದೆ. ಇದು ಹಸಿಯ ಕೊರತೆಯನ್ನುಂಟು ಮಾಡಿದೆ.

ಇದು ಸರಾಸರಿ ಕೊರತೆ ಪ್ರಮಾಣ. ಆದರೆ ಅಧಿಕೃತವಾಗಿ ಮಳೆಯ ಪ್ರಮಾಣ ಇನ್ನೂ ಕಡಿಮೆ ಇದೆ. ಗಂಗಾವತಿ ತಾಲೂಕಿನಲ್ಲಿ ಶೇ. 50ರಷ್ಟು ಮಳೆಯ ಕೊರತೆಯಾಗಿದ್ದರೆ ಕೊಪ್ಪಳ ತಾಲೂಕಿನಲ್ಲಿ ಶೇ. 40, ಕುಷ್ಟಗಿಯಲ್ಲಿ ಶೇ. 53 ಹಾಗೂ ಕುಕನೂರು ತಾಲೂಕಿನಲ್ಲಿ ಶೇ. 42ರಷ್ಟು ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿರುವ ವರದಿಯನ್ನು ಕೃಷಿ ಇಲಾಖೆ ಅಧಿಕೃತವಾಗಿ ನೀಡಿದೆ.

ಹೀಗಾಗಿ, ಜಿಲ್ಲೆಯಲ್ಲಿ ಮತ್ತೆ ಬರದ ಛಾಯೆ ಆವರಿಸಿದ್ದು, ವಾರದೊಳಗೆ ಮಳೆಯಾಗದಿದ್ದರೆ ಬೆಳೆಯನ್ನು ಕಾಪಾಡಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುತ್ತಾರೆ ರೈತರು. ಆದರೆ, ಈ ವಾರದಲ್ಲಿ ಅತ್ಯುತ್ತಮ ಮಳೆ ಬರುತ್ತದೆ ಎನ್ನುವ ವರದಿ ಹವಾಮಾನ ಇಲಾಖೆಯದ್ದಾಗಿದ್ದು, ಇದರ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು.

ತುರ್ತು ಮಳೆ ಬೇಕು:

ಜಿಲ್ಲೆಯಲ್ಲಿ ಈಗ ತುರ್ತಾಗಿ ಮಳೆ ಬೇಕಾಗಿದೆ. ಮಳೆಯ ಅಭಾವದ ನಡುವೆಯೂ ಜಿಲ್ಲೆಯಲ್ಲಿ ಆಗೊಮ್ಮೆ, ಈಗೊಮ್ಮೆ ಸುರಿಯುವ ತುಂತುರು ಮಳೆ ಹಾಗೂ ತಂಪಾದ ವಾತಾವರಣದಿಂದ ಬೆಳೆ ಜೀವ ಹಿಡಿದುಕೊಂಡು ನಿಂತಿವೆ. ಅವುಗಳು ಫಸಲು ಕೊಡಬೇಕು ಎಂದರೆ ತುರ್ತಾಗಿ ಮಳೆ ಬೇಕಾಗಿದೆ ಎನ್ನುತ್ತಾರೆ ರೈತರು.

ಬಿತ್ತನೆ:

ಜಿಲ್ಲೆಯಲ್ಲಿ ಪ್ರಸಕ್ತ ವರ್ಷ ಪ್ರಾರಂಭದಲ್ಲಿ ಮುಂಗಾರು ಮಳೆ ಅತ್ಯುತ್ತಮವಾಗಿ ಆಗಿದ್ದರಿಂದ ಶೇ. 90ಕ್ಕೂ ಹೆಚ್ಚು ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ 3.19 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಇದ್ದು, ಈ ಪೈಕಿ 2.90 ಲಕ್ಷ ಹೆಕ್ಟೇರ್‌ನಷ್ಟು ಬಿತ್ತನೆಯಾಗಿದೆ. ಇನ್ನುಳಿದಿರುವುದು ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಭತ್ತ ನಾಟಿ ಮಾತ್ರ, ಉಳಿದಂತೆ ಮುಂಗಾರು ಸಂಪೂರ್ಣ ಬಿತ್ತನೆಯಾಗಿದೆ.

ಜಿಲ್ಲೆಯಲ್ಲಿ ಮೆಕ್ಕೆಜೋಳ 1.30 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದರೆ, 60 ಸಾವಿರ ಸಜ್ಜೆ, 65 ಸಾವಿರ ಹೆಕ್ಚೇರ್ ಭತ್ತ, 18 ಸಾವಿರ ಹೆಕ್ಟೇರ್ ಹೆಸರು ಹಾಗೂ 37 ಸಾವಿರ ಹೆಕ್ಟೇರ್ ತೊಗರಿ ಬಿತ್ತನೆಯಾಗಿದೆ.

click me!