Koppal News: ಬೇಸಗೆ ಬೆಳೆಗೆ ನಿತ್ಯ 250 ಕ್ಯುಸೆಕ್‌ ನೀರು ನೀಡುವಂತೆ ರೈತರು ಪಟ್ಟು

By Kannadaprabha News  |  First Published Dec 25, 2022, 10:53 AM IST

ಬೇಸಗೆ ಬೆಳೆಗಾಗಿ ನಿತ್ಯ 250 ಕ್ಯುಸೆಕ್‌ ನೀರನ್ನು ಕೊನೆ ಮತ್ತು ಕೆಳಭಾಗಕ್ಕೆ ಹರಿಸಬೇಕೆಂದು 31ನೇ ವಿತರಣಾ ನಾಲೆಯ ಹತ್ತು ಹತ್ತು ಹಳ್ಳಿಗಳ ರೈತ ಸಮೂಹ ಪಟ್ಟು ಹಿಡಿದಿದೆ. 31ನೇ ವಿತರಣಾ ನಾಲೆ ವ್ಯಾಪ್ತಿಯ ರೈತರ ಸಮಸ್ಯೆ ಪರಿಹಾರಕ್ಕಾಗಿ ಶಾಸಕ ಬಸವರಾಜ್‌ ದಢೇಸೂಗೂರು ಪಟ್ಟಣದಲ್ಲಿ ಶನಿವಾರ ಕರೆದಿದ್ದ ಸಭೆಯಲ್ಲಿ ನೀರಾವರಿ ಎಂಜಿನಿಯರ್‌ಗಳ ಸಮುಖದಲ್ಲಿ ರೈತರು ಈ ಬಿಗಿಪಟ್ಟು ಹಿಡಿದರು.


ಕಾರಟಗಿ (ಡಿ.25) : ಬೇಸಗೆ ಬೆಳೆಗಾಗಿ ನಿತ್ಯ 250 ಕ್ಯುಸೆಕ್‌ ನೀರನ್ನು ಕೊನೆ ಮತ್ತು ಕೆಳಭಾಗಕ್ಕೆ ಹರಿಸಬೇಕೆಂದು 31ನೇ ವಿತರಣಾ ನಾಲೆಯ ಹತ್ತು ಹತ್ತು ಹಳ್ಳಿಗಳ ರೈತ ಸಮೂಹ ಪಟ್ಟು ಹಿಡಿದಿದೆ. 31ನೇ ವಿತರಣಾ ನಾಲೆ ವ್ಯಾಪ್ತಿಯ ರೈತರ ಸಮಸ್ಯೆ ಪರಿಹಾರಕ್ಕಾಗಿ ಶಾಸಕ ಬಸವರಾಜ್‌ ದಢೇಸೂಗೂರು ಪಟ್ಟಣದಲ್ಲಿ ಶನಿವಾರ ಕರೆದಿದ್ದ ಸಭೆಯಲ್ಲಿ ನೀರಾವರಿ ಎಂಜಿನಿಯರ್‌ಗಳ ಸಮುಖದಲ್ಲಿ ರೈತರು ಈ ಬಿಗಿಪಟ್ಟು ಹಿಡಿದರು.

ಅಣೆಕಟ್ಟೆಯಲ್ಲಿ 31 ಟಿಎಂಸಿ ನೀರು ಇರುವಾಗಲೇ 31ನೇ ವಿತರಣಾ ನಾಲೆಗೆ ಮಾಚ್‌ರ್‍ ಅಂತ್ಯದವರೆಗೂ ಬೇಸಿಗೆ ಬೆಳೆಗೆ ನೀರು ಕೊಟ್ಟಇತಿಹಾಸವಿದೆ. ಆದರೆ ಈ ಭಾರಿ 81 ಟಿಎಂಸಿ ನೀರು ಸಂಗ್ರಹವಿದೆ. ಇಷ್ಟೆಲ್ಲ ಇದ್ದ ಮೇಲೆ ನೀರು ನಿರ್ವಹಣೆ ಮಾಡಲು ಯಾಕೆ ಸಮಸ್ಯೆ? ಮುಖ್ಯನಾಲೆ ಮತ್ತು ವಿತರಣಾ ನಾಲೆ ವ್ಯಾಪ್ತಿಯ ಅಕ್ರಮ ಕೆರೆಗಳಿಗೆ ನಿರಂತವಾಗಿ ನೀರು ಹರಿಸುವುದನ್ನು ತಡೆಹಿಡಿಬೇಕು. ಹಾಡುಹಗಲೇ ಕಾಲುವೆಗಳಿಗೆ ಪೈಪ್‌ ಹಾಕಿ ನೀರು ಎತ್ತುವ ದಂಧೆ ನಿಲ್ಲಿಸಬೇಕು. ನೀರಗಳ್ಳತನ ಮತ್ತು ಅಕ್ರಮ ನೀರಾವರಿ ಪದ್ಧತಿಗೆ ಕಡಿವಾಣ ಹಾಕಿದರೆ ಮಾತ್ರ ನಮಗೆ ನಿತ್ಯ 250 ಕ್ಯುಸೆಕ್‌ ನೀರು ಕೊಡಲು ಸಾಧ್ಯ ಎಂದು ಕೊಟ್ನೆಕಲ್‌, ಜಮಾಪುರ, ಹಾಲಸಮುದ್ರ ಮತ್ತು ತಿಮ್ಮಾಪುರ ರೈತರು ಒತ್ತಾಯಿಸಿದರು.

Tap to resize

Latest Videos

undefined

Koppal News: ನಿರ್ವಹಣಾ ವೈಫಲ್ಯ: ಹಲವೆಡೆ ಕುಡಿವ ನೀರಿನ ಸಮಸ್ಯೆ

ಕಟಾವು ವೇಳೆ ನೀರು ವ್ಯರ್ಥ ಪೋಲಾಗಿದೆ. ಐಸಿಸಿ ಸಭೆಯಲ್ಲಿ ಬೇಸಿಗೆಗೆ ಬತ್ತ ಬೆಳೆಯಬೇಡಿ ಎಂದು ಹೇಳಿಲ್ಲ. ಹೀಗಿದ್ದ ಮೇಲೆ ಈಗ ಸಸಿ ಮಡಿಗಳನ್ನು ಹಾಕಿ ಬತ್ತ ನಾಟಿಗೆ ಸಿದ್ಧತೆ ಮಾಡಿದ ವೇಳೆ ರೈತರೊಂದಿಗೆ ಈ ರೀತಿ ಚೆಲ್ಲಾಟವಾದರೆ ಹೇಗೆ ಎಂದು ಅಧಿಕಾರಿಗಳನ್ನು ರೈತರು ಪ್ರಶ್ನಿಸಿದರು.

31/7, 31/9 ವಿತರಣಾ ಕಾಲುವೆಗೆ ಕನಿಷ್ಠ 50 ಕ್ಯುಸೆಕ್‌ ನೀರು ತಲುಪಿಲ್ಲ. 150 ಕ್ಯುಸೆಕ್‌ ನೀರು ಬಿಟ್ಟರೆ ಅದು ಕಾರಟಗಿ ಪಟ್ಟಣದ ವರೆಗೆ ಮಾತ್ರ ಬರುತ್ತದೆ. ಮೇಲ್ಭಾಗದಲ್ಲಿಯೇ ಎಲ್ಲ ನೀರನ್ನು ಅಕ್ರಮವಾಗಿ ಹರಿಸಿಕೊಳ್ಳುತ್ತಾರೆ. ಗ್ಯಾಂಗ್‌ಮನೆಗಳು ಗೇಜ್‌ ನಿರ್ವಹಣೆ ಮಾಡದೆ ಸಾಥ್‌ ನೀಡುತ್ತಿದ್ದಾರೆ. ಮೊದಲು ಎರಡು ದಿನಗಳಲ್ಲಿ ಅಕ್ರಮ ಮತ್ತು ಅತಿಕ್ರಮಣಕ್ಕೆ ಕಡಿವಾಣ ಹಾಕಿದರೆ ಮಾತ್ರ ನೀರು ಕೊನೆ ಮತ್ತು ಕೆಳಭಾಗಕ್ಕೆ ಸರಾಗವಾಗಿ ಹರಿಯುತ್ತದೆ ಎಂದು ರೈತರು ಮನದಟ್ಟಮಾಡಿಕೊಟ್ಟರು.

ಇನ್ನು ಕೊಟ್ನೆಕಲ್‌ ಮತ್ತು ಈಳಿಗನೂರು ಭಾಗಕ್ಕೆ ಹರಿಯುವ 31/8ರ 2 ಪೈಪ್‌ಗಳಿಗೆ ಇಲ್ಲಿಯವರೆಗೂ ನೀರು ತಲುಪಿಲ್ಲ, ಮೊದಲು ಈ ಭಾಗಕ್ಕೆ ನೀರು ತಲುಪಿಸಿ. ಇಲ್ಲವಾದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ ಎಂದು ಎಚ್ಚರಿಸಿದರು.

ವಿತರಣಾ ಕಾಲುವೆಗಳಿಗೆ ಡಿ. 1ರಿಂದಲೇ ನೀರು ಹರಿಸಲಾಗಿದೆ. ಆದರೆ ನೀರು ತಲುಪಿಲ್ಲ. ನೀರು ಬರುವ ನಿರೀಕ್ಷೆಯಲ್ಲಿ ಬತ್ತ ನಾಟಿಗೆ ಸಿದ್ಧತೆ ನಡೆಸಿದ್ದೇವೆ. ಭೂಮಿ ಹದ ಮಾಡಿ ನೀರು ಹರಿಸಲು ಕಾಯುತ್ತಿದ್ದೇವೆ. ಇಷ್ಟೆಲ್ಲ ಸಿದ್ಧತೆ ಮಾಡಿಕೊಂಡ ನೀರಾವರಿ ಭಾಗಕ್ಕೆ ನೀರು ಹರಿಸದಿದ್ದರೆ ಹೇಗೆ? ನೀರಾವರಿ ಅಲ್ಲದ ಜಮೀನುಗಳಿಗೆ ಬತ್ತ ನಾಟಿಯಾಗಿದೆ. ಹಾಗಿದ್ದರೆ ಅಸಲಿ ನೀರಾವರಿ ರೈತರ ಪರಿಸ್ಥಿತಿ ಏನು ಎಂದು ರೈತರು ಪ್ರಶ್ನೆ ಮಾಡಿದರು.

ಕಾರಟಗಿ ವಿಭಾಗದ ಎಇ ನಾಗಪ್ಪ ಮಾತನಾಡಿ, 230 ಕ್ಯುಸೆಕ್‌ ನೀರು ಬಿಟ್ಟರೆ 31/9 ಉಪಕಾಲುವೆ ತಲುಪಿಸುವುದು ಕಷ್ಟಸಾಧ್ಯ. ಆದರೂ ನಿರ್ವಹಣೆ ಮಾಡಿ ತಲುಪಿಸುವ ವ್ಯವಸ್ಥೆ ಮಾಡಲಾಗುವುದು ಎಂದು ವಿವರಿಸುತ್ತಿದ್ದಂತೆ ಸಭೆ ಗೊಂದಲ ತಿರುಗಿತು.

ಐಸಿಸಿ ಸಭೆ ಪ್ರಕಾರ ನೀರು ಬಿಡುಗಡೆ ಮಾಡಲಾಗಿದೆ. 3 ದಿನಗಳಿಂದ 2,500 ಕ್ಯುಸೆಕ್‌ ನೀರನ್ನು ಮುಖ್ಯ ನಾಲೆಗೆ ಹರಿಸಲಾಗುತ್ತಿದೆ. ನೀರಿನ ಬೇಡಿಕೆ ಹೆಚ್ಚಿದೆ, ಗೇಜ್‌ ಫಿಕ್ಸ್‌ ಮಾಡಿ ವಾರಂಬದಿ ಪದ್ಧತಿ ಪ್ರಕಾರ ನೀರು ಬಿಡುಗಡೆಗೆ ಮಾಡಲು ನಿರ್ಧರಿಸುತ್ತೇವೆ. ಮೇಲ್ಭಾಗದಲ್ಲಿ ನೀರು ನಿರ್ವಹಣೆ ಮತ್ತು ಅಕ್ರಮ ತಡೆಯುತ್ತೇವೆ. ಮುಖ್ಯನಾಲೆ ಮೇಲೆ ಡಿಸಿ 144 ಸೆಕ್ಷೆನ್‌ ಜಾರಿ ಮಾಡಿದ್ದಾರೆ. ಮುಂದಿನ ಹಂತಕ್ಕೆ ಮುಖ್ಯನಾಲೆಗೆ 3,500 ನೀರು ಹರಿಸಲಾಗುವುದು ಎಂದು ವಡ್ಡರಹಟ್ಟಿವಿಭಾಗದ ಎಇಇ ಎಚ್‌. ಸತ್ಯಪ್ಪ ಸಭೆಗೆ ತಿಳಿಸಿದರು. ಸಭೆಗೆ ಹಾಲಸಮುದ್ರ, ತಿಮ್ಮಾಪುರ, ಬೂದುಗುಂಪಾ, ಕೊಟ್ನೆಕಲ್‌, ಈಳಿಗನೂರು, ಉಳೇನೂರು, ಜಮಾಪುರ ಇನ್ನಿತರ ಭಾಗದ ರೈತರು ಇದ್ದರು.

ಅಕ್ರಮ ಕೆರೆಗಳಿಗೆ ನೀರು ನಿಲ್ಲಿಸಿ...

ಶಾಸಕ ಬಸವರಾಜ ದಢೇಸೂಗೂರು ಮಾತನಾಡಿ, ನಿತ್ಯ 31ನೇ ವಿತರಣಾ ಕಾಲುವೆಗೆ 250 ಕ್ಯುಸೆಕ್‌ ನೀರು ಬಿಡುಗಡೆ ಮಾಡಿಸಲಾಗುವುದು. ಕಾಲುವೆ ಮೇಲ್ಭಾಗದಲ್ಲಿ ಅಕ್ರಮ ಕೆರೆಗಳಿಗೆ ನೀರು ಹರಿಸುವುದನ್ನು ನಿಲ್ಲಿಸಿ. ಅಕ್ರಮ ಕೆರೆ ಮಾಡಿಕೊಂಡವರು ಬತ್ತ ನಾಟಿ ಮಾಡಿದ್ದಾರೆ. ಈಗ ಕೊನೆ ಮತ್ತು ಕೆಳಭಾಗದ ಕೊಟ್ನಕೆಲ್‌, ಹಾಲಸಮುದ್ರ, ತಿಮ್ಮಾಪುರ, ಈಳಿಗನೂರು ಭಾಗಕ್ಕೆ ನೀರು ತಲುಪಿಸಿದರೆ 48 ಸಾವಿರ ಎಕರೆ ಪ್ರದೇಶಕ್ಕೆ ನೀರು ತಲುಪಿಸದಂತಾಗುತ್ತದೆ ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಿದರು. ನೀರುಗಳ್ಳತನ ತಡೆಯಲು ಪೊಲೀಸರು, ಗ್ಯಾಂಗ್‌ಮನ್‌ಗಳು ಮತ್ತು ಆಯಾ ಗ್ರಾಮದ ಇಬ್ಬರು ಯುವರ ಪಡೆ ಮಾಡಿ ಕಾಲುವೆ ಮೇಲೆ ಗಸ್ತು ತಿರುಗಿಸುವ ವ್ಯವಸ್ಥೆ ಮಾಡಿ. ಸಸಿ ಮಡಿಗೆ ಮತ್ತು ನಾಟಿಗೆ ನೀರು ಮುಟ್ಟಿಸುವ ಕೆಲಸ ಅಧಿಕಾರಿಗಳ ಮೇಲಿದೆ ಎಂದರು. 24ಕೆಆರ್‌ಟಿ:1 ಮತ್ತು 1ಬಿ-ಕಾರಟಗಿಯಲ್ಲಿ ಶಾಸಕ ಬಸವರಾಜ ದಢೇಸೂಗೂರು ಅವರ ಕಚೇರಿಯಲ್ಲಿ ಶನಿವಾರ 31ನೇ ವಿತರಣಾ ಕಾಲುವೆ ವ್ಯಾಪ್ತಿಯ ನೀರಿನ ಸಮಸ್ಯೆ ನಿವಾರಣೆಗೆ ನೀರಾವರಿ ಅಧಿಕಾರಿಗಳ ಮತ್ತು ರೈತರ ಸಭೆಯಲ್ಲಿ ಮಾತನಾಡಿದರು.

click me!