ತರಕಾರಿ ದರ ಕುಸಿತ : ಬೆಲೆ ಪಾತಾಳಕ್ಕಿಳಿದಿದ್ದರಿಂದ ರೈತ ಹೈರಾಣು

By Kannadaprabha NewsFirst Published Sep 21, 2021, 3:56 PM IST
Highlights
  • ಗ್ಯಾಸ್‌, ಪೆಟ್ರೋಲ್‌, ಡಿಸೇಲ್‌, ರೈತರು ಬಳಕೆ ಮಾಡುವ ರಸಗೊಬ್ಬರ, ಕ್ರಿಮಿನಾಶಕ ದರಗಳು ಆಕಾಶದೆತ್ತರದಲ್ಲಿ
  • ರೈತರು ಬೆಳೆದ ಹಸಿ ತರಕಾರಿಗಳ ದರ ಮಾತ್ರ ಪಾತಾಳಕ್ಕೆ ಇಳಿದಿದೆ

ವರದಿ : ಸೋಮರಡ್ಡಿ ಅಳವಂಡಿ

 ಕೊಪ್ಪಳ (ಸೆ.21):  ಗ್ಯಾಸ್‌, ಪೆಟ್ರೋಲ್‌, ಡಿಸೇಲ್‌, ರೈತರು ಬಳಕೆ ಮಾಡುವ ರಸಗೊಬ್ಬರ, ಕ್ರಿಮಿನಾಶಕ ದರಗಳು ಆಕಾಶದೆತ್ತರದಲ್ಲಿವೆ. ಆದರೆ, ರೈತರು ಬೆಳೆದ ಹಸಿ ತರಕಾರಿಗಳ ದರ ಮಾತ್ರ ಪಾತಾಳಕ್ಕೆ ಇಳಿದಿದೆ. ಬಾಳೆ ಹಣ್ಣು ಕೇಳುವವರು ಇಲ್ಲದಂತೆ ಆಗಿದೆ. ಹೀಗಾಗಿ, ರೈತ ಸಮುದಾಯ ತತ್ತರಿಸಿ ಹೋಗಿದೆ.

ಈರುಳ್ಳಿ, ಬೆಳ್ಳುಳ್ಳಿ, ಮೆಣಿಸಿನಕಾಯಿ, ಕ್ಯಾಬೇಜ್‌. ಟ್ಯೊಮೆಟೋ, ಬದನೆಕಾಯಿಯನ್ನು ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲ. ರೈತರು ಕಟಾವು ಮಾಡಿಕೊಂಡು ಬಂದರೆ ಹಮಾಲಿಯೂ ಬಾರದಷ್ಟುಅಗ್ಗಕ್ಕೆ ಕೇಳುತ್ತಿದ್ದಾರೆ. ಹೀಗಾಗಿ, ರೈತರು ಹಸಿ ತರಕಾರಿಯನ್ನು ಕಟಾವು ಮಾಡದೆ ಹಾಗೆ ಬಿಡುತ್ತಿದ್ದಾರೆ.

ನೆಲಕಚ್ಚಿದ ಈರುಳ್ಳಿ ದರ:

ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಪ್ರಸಕ್ತ ವರ್ಷ ಈರುಳ್ಳಿಯನ್ನು ಅಪಾರ ಪ್ರಮಾಣದಲ್ಲಿ ಬೆಳೆದಿದ್ದಾರೆ. ಈ ನಡುವೆ ಕೊಳೆರೋಗ ಬಂದು ಗುಣಮಟ್ಟದ ಈರುಳ್ಳಿಯೂ ಉತ್ಪಾದನೆಯಾಗಿಲ್ಲ. ಈ ನಡುವೆ ದರ ಕುಸಿತವಾಗಿದ್ದು, ನೂರಿನ್ನೂರು ರುಪಾಯಿಗೆ ಕ್ವಿಂಟಲ್‌ ಆದರೂ ಖರೀದಿ ಮಾಡುವವರು ಮಾರುಕಟ್ಟೆಯಲ್ಲಿ ಇಲ್ಲ.

ಕಲಬೆರಕೆ ತರಕಾರಿ ಪತ್ತೆ ಹೇಗೆ? ಹೀಗ್ಮಾಡಿ ಕ್ಷಣದಲ್ಲಿ ಪತ್ತೆಹಚ್ಚಿ!

ಈಗಲೂ ಪುಣೆ ಈರುಳ್ಳಿ ಮಾರುಕಟ್ಟೆಬರುತ್ತಿರುವುದರಿಂದ ಸ್ಥಳೀಯವಾಗಿ ಉತ್ಪಾದನೆಯಾಗುತ್ತಿರುವ ಈರುಳ್ಳಿಯನ್ನು ಕೇಳುವವರೇ ಇಲ್ಲದಂತಾಗಿದೆ. ಹೀಗಾಗಿ, ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಈರುಳ್ಳಿಯನ್ನು ರೈತರು ಕಟಾವು ಮಾಡದೆ ಹಾಗೆ ಹರಗಿಬಿಟ್ಟಿದ್ದಾರೆ.

ಕೇಂದ್ರ ಸರ್ಕಾರ ಇಷ್ಟಾದರೂ ರಫ್ತು ಅನುಮತಿಯನ್ನು ನೀಡದೆ ಇರುವುದು ಮಾತ್ರ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈರುಳ್ಳಿ ದರ ಪಾತಳಕ್ಕೆ ಇಳಿದಿದ್ದರೂ ರಫ್ತು ನೀಡದೆ ಇರುವುದರಿಂದ ಮತ್ತೆ ಮತ್ತೆ ದರ ಕುಸಿಯುತ್ತಲೇ ಇದೆ. ಇಲ್ಲದಿದ್ದರೆ ಉತ್ತಮ ದರ ಸಿಗುತ್ತಿತ್ತು ಎಂದು ರೈತರು ಕೇಂದ್ರ ಸರ್ಕಾರದ ನಡೆಯ ಕುರಿತು ಹಿಡಿಶಾಪ ಹಾಕುತ್ತಿದ್ದಾರೆ.

ಈರುಳ್ಳಿಯ ಕತೆ ಈ ರೀತಿಯಾದ ಬೆಳ್ಳುಳ್ಳಿ ಕತೆಯೂ ಇದಕ್ಕಿಂತ ಭಿನ್ನವಾಗಿಲ್ಲ. ನೂರು ರುಪಾಯಿಗೆ ಕೆಜಿ ಮಾರುತ್ತಿದ್ದ ಈರುಳ್ಳಿಯನ್ನು ಈಗ ಬೀದಿಗೆ ನಿಂತು ನೂರು ರುಪಾಯಿಗೆ ಎರಡುವರೆ ಕೆಜಿ ಮಾರಾಟ ಮಾಡುತ್ತಿದ್ದಾರೆ. ರಾಜ್ಯಾದ್ಯಂತ ಈ ಬಾರಿ ತರಕಾರಿ ವಿಪುಲವಾಗಿ ಬೆಳೆಯಲಾಗಿದೆ. ಅದರಲ್ಲೂ ಮೆಣಸಿನಕಾಯಿ ದಾಖಲೆ ಪ್ರಮಾಣದಲ್ಲಿ ಬೆಳೆಯಲಾಗಿದೆಯಂತೆ. ಮೆಣಸಿನಬೀಜಕ್ಕಾಗಿ ಲಾಠಿ ಜಾಜ್‌ರ್‍ ಸಹ ಬಳ್ಳಾರಿಯಲ್ಲಿ ಪ್ರಸಕ್ತ ವರ್ಷ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

ದುರಂತ ಎಂದರೆ ಈಗ ಬೆಳೆದು ಅತ್ಯುತ್ತಮ ಇಳುವರಿ ಬಂದಿರುವ ಮೆಣಸಿನಕಾಯಿಯನ್ನು ಕ್ವಿಂಟಲ್‌ಗೆ .5-6 ನೂರಕ್ಕೆ ಕೇಳುತ್ತಿದ್ದಾರೆ. ಇವುಗಳನ್ನು ಕಟಾವು ಮಾಡಿಕೊಂಡು, ಮಾರುಕಟ್ಟೆಗೆ ತರಲು .6-7 ನೂರು ರುಪಾಯಿ ಬೇಕಾಗುತ್ತದೆ. ಅಂದರೆ ರೈತರಿಗೆ ಮಾರುಕಟ್ಟೆಯಲ್ಲಿ ಮಾರುವುದರಿಂದ ಹಮಾಲಿಯೂ ಬರುತ್ತಿಲ್ಲ ಎನ್ನುವಷ್ಟರ ಮಟ್ಟಿಗೆ ಮೆಣಸಿನಕಾಯಿ ದರ ಕುಸಿದಿದೆ.

ಟೊಮೆಟೋ, ಬದನೆಕಾಯಿ ದರವೂ ಕುಸಿದು ಹೋಗಿದೆ. 10 ಕೆಜಿಯ ಬುಟ್ಟಿ.60-100 ಮಾರಾಟವಾಗುತ್ತಿದ್ದುದು ಈಗ ಕೇವಲ ಹತ್ತಿಪ್ಪತ್ತು ರುಪಾಯಿಗೆ ಕೇಳುತ್ತಿದ್ದಾರೆ. ಆದರೆ, ಒಂದು ಬುಟ್ಟಿಕಟಾವು ಮಾಡಿಕೊಂಡು ಮಾರುಕಟ್ಟೆಗೆ ತರಲು .20 ರುಪಾಯಿ ಖರ್ಚಾಗುತ್ತದೆ. ರೈತರು ಬೆಳೆಗೆ ಮಾಡಿದ ಖರ್ಚು ದೂರ ಉಳಿಯಿತು, ಕಟಾವು ಮಾಡಿಕೊಂಡು ಮಾರುಕಟ್ಟೆಗೆ ತರುವುದಕ್ಕೂ ಮಾಡುವ ಖರ್ಚು ಬಾರದಿದ್ದರೆ ಹೇಗೆ?.

ಕಟಾವು ಮಾಡುತ್ತಿಲ್ಲ ರೈತರು:

ಹೀಗಾಗಿ, ರೈತರು ಈಗ ಕಟಾವು ಮಾಡುವುದನ್ನೇ ಬಿಟ್ಟಿದ್ದಾರೆ. ಸಾವಿರಾರು ಎಕರೆ ಪ್ರದೇಶದಲ್ಲಿ ಬೆಳೆದಿರುವ ಮೆಣಸಿನಕಾಯಿ ಅಲ್ಲಿಯೇ ಒಣಗಿ ಭೂಮಿಗೆ ಬೀಳುತ್ತಿವೆ ಹೊರತು ಕಟಾವು ಮಾಡುತ್ತಿಲ್ಲ. ಕಟಾವು ಮಾಡಿದರೆ ಕೂಲಿಯನ್ನು ಎಲ್ಲಿಂದ ತರಬೇಕು ಎನ್ನುತ್ತಾರೆ ರೈತರು. ಇದು ಕೇವಲ ಮೆಣಸಿನಕಾಯಿ ಕತೆಯಲ್ಲ, ಈರುಳ್ಳಿ, ಬದನೇಕಾಯಿ, ಕ್ಯಾಬೇಜ್‌ ಸೇರಿದಂತೆ ಎಲ್ಲದರ ಕತೆಯೂ ಅದೇ ಆಗಿದೆ.

ಬೆಳೆ ಬೆಳೆದಿರುವ ಪ್ರದೇಶದಲ್ಲಿ ಗಣನೀಯ ಏರಿಕೆಯಾಗಿರುವುದರಿಂದ ಹೀಗೆ ಆಗಿದೆ ಮತ್ತು ರಫ್ತು ಸಹ ಇಲ್ಲ. ಪಕ್ಕದ ರಾಜ್ಯವಾದ ಕೇರಳ ಮತ್ತು ತಮಿಳುನಾಡು ಸೇರಿದಂತೆ ಮೊದಲಾದೆಡೆ ಕೊರೋನಾ ಹಿನ್ನೆಲೆಯಲ್ಲಿ ಮಾರುಕಟ್ಟೆಬಂದಾಗಿವೆ. ಹೀಗಾಗಿ ಸಮಸ್ಯೆಯಾಗಿದೆ.

ಕೃಷ್ಣ ಉಕ್ಕುಂದ ಡಿಡಿ, ತೋಟಗಾರಿಕಾ ಇಲಾಖೆ ಕೊಪ್ಪಳ

ಈರುಳ್ಳಿಯನ್ನು ಏನು ಮಾಡಬೇಕು ಎನ್ನುವುದೇ ಗೊತ್ತಾಗುತ್ತಿಲ್ಲ. ಮಾರುಕಟ್ಟೆಯಲ್ಲಿ ತೀರಾ ಅಗ್ಗದ ದರ ಕೇಳುತ್ತಿದ್ದಾರೆ. ಹೀಗಾಗಿ, ಇನ್ನೂ ಕಟಾವು ಮಾಡುವುದಕ್ಕೆ ಹೋಗಿಲ್ಲ. ರೈತರನ್ನು ದೇವರೇ ಕಾಪಾಡಬೇಕು .

ಸಿದ್ದರಡ್ಡಿ ವೆಂಕಟಾಪುರ, ಈರುಳ್ಳಿ ಬೆಳೆದಿರುವ ರೈತ

click me!