ನಷ್ಟದಲ್ಲಿರೋದು ರೈತರೋ, ಸರ್ಕಾರಿ ನೌಕರರೋ: ನಾಗೇಂದ್ರ

By Kannadaprabha News  |  First Published Mar 11, 2023, 5:11 AM IST

ಅನ್ನದಾತನಾದ ರೈತ ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರಕ್ಕೆ ಹೊರೆಯಾಗುವುದಾದರೆ, ಸರ್ಕಾರಿ ನೌಕರರ ವೇತನ ಹೆಚ್ಚಳ ಹೊರೆಯಾಗುವುದಿಲ್ಲವೇ? ನಷ್ಟದಲ್ಲಿರುವವರು ರೈತರೋ, ಸರ್ಕಾರಿ ನೌಕರರೋ ಎಂಬುದನ್ನು ರಾಜ್ಯ ಬಿಜೆಪಿ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.


 ತುಮಕೂರು :  ಅನ್ನದಾತನಾದ ರೈತ ಬೆಳೆಯುವ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ರಾಜ್ಯ ಸರ್ಕಾರಕ್ಕೆ ಹೊರೆಯಾಗುವುದಾದರೆ, ಸರ್ಕಾರಿ ನೌಕರರ ವೇತನ ಹೆಚ್ಚಳ ಹೊರೆಯಾಗುವುದಿಲ್ಲವೇ? ನಷ್ಟದಲ್ಲಿರುವವರು ರೈತರೋ, ಸರ್ಕಾರಿ ನೌಕರರೋ ಎಂಬುದನ್ನು ರಾಜ್ಯ ಬಿಜೆಪಿ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಒತ್ತಾಯಿಸಿದರು.

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯಸಂಘದ ಜಿಲ್ಲಾ ಘಟಕದ ವತಿಯಿಂದ ತುಮಕೂರಿನಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ ವೇಳೆ ಮಾತನಾಡಿದರು.

Tap to resize

Latest Videos

ಇಂದು ಇಡೀ ರಾಜ್ಯದಲ್ಲಿ ಕೊಬ್ಬರಿ, ತೊಗರಿ, ಭತ್ತ, ಕಬ್ಬು, ಅಡಿಕೆ, ರಾಗಿ ಸೇರಿದಂತೆಉತ್ಪನ್ನಗಳ ಬೆಲೆ ಕುಸಿದಿದೆ. ಸರ್ಕಾರವೇ ನಿಗಧಿಪಡಿಸಿದ ಬೆಂಬಲ ಬೆಲೆಗಿಂತಲೂ ಅತಿ ಕಡಿಮೆ ಬೆಲೆಗೆ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದರೂ ಸರ್ಕಾರ ತಲೆ ಕೆಡಿಸಿಕೊಳ್ಳುತ್ತಿಲ್ಲ. ಕೃಷಿ ಉತ್ಪನ್ನಗಳ ಬೆಲೆಗಳು ಕುಸಿದಾಗ ನೆರವಿಗೆ ಬರಬೇಕಾಗಿದ್ದ ಆವರ್ತ ನಿಧಿ ಕೇವಲ ಹೆಸರಿಗೆ ಮಾತ್ರ ಇದೆ. ಆದರೆ 7 ನೇ ವೇತನ ಆಯೋಗಕ್ಕಾಗಿ ಸರ್ಕಾರಿ ನೌಕರರು ಒಂದು ದಿನ ಮುಷ್ಕರ ಮಾಡಿದ್ದಕ್ಕೆ ಸರ್ಕಾರ ಅವರ ವೇತನವನ್ನು ಶೇ.17ರಷ್ಟುಹೆಚ್ಚಳ ಮಾಡಿದೆ. ಆದರೆ ರೈತರು ಸಹಾಯಧನ ಹೆಚ್ಚಳ ಕೇಳಿದರೆ ಬಜೆಟ್‌ಗೆ ಹೊರೆಯಾಗುತ್ತದೆ ಎಂಬ ನೆಪವನ್ನು ಸರ್ಕಾರ ಹೇಳುತ್ತಿದೆ. ಸರ್ಕಾರಿ ನೌಕರರಿಗಿಂತ ಹೆಚ್ಚು ನಷ್ಟದಲ್ಲಿ ರೈತರಿದ್ದಾರೆ. ಹಾಗಾಗಿ ಸರ್ಕಾರ ರೈತರ ನೆರವಿಗೆ ಬರಬೇಕಾಗಿದೆ ಎಂದರು.

13 ಜಿಲ್ಲೆಗಳಲ್ಲಿ ಕೊಬ್ಬರಿ ಉತ್ಪಾದನೆ:

ರೈತ ಸಂಘ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ರಾಜ್ಯದ 13 ಜಿಲ್ಲೆಗಳಲ್ಲಿ ಕೊಬ್ಬರಿಯನ್ನು ಉತ್ಪಾದಿಸಲಾಗುತ್ತದೆ. ಅದರಲ್ಲಿ ತುಮಕೂರು ಜಿಲ್ಲೆ ನಂಬರ್‌ ಒನ್‌ ಸ್ಥಾನದಲ್ಲಿದೆ. 2022ರಲ್ಲಿ ಒಂದು ಕ್ವಿಂಟಲ್‌ ಕೊಬ್ಬರಿ ಬೆಲೆ 18 ಸಾವಿರ ರು. ಇದ್ದು, ಪ್ರಸ್ತುತ ಅದು 8 ಸಾವಿರ ರು. ಗಳಿಗೆ ಕುಸಿದಿದೆ. ಇದಕ್ಕೆ ಕೇಂದ್ರ ಸರ್ಕಾರದ ಅಮದು ನೀತಿಯೇ ಕಾರಣ. ಚುನಾವಣಾ ದೃಷ್ಟಿಯಿಂದ ಆಮದು ಸುಂಕ ಕಡಿತಗೊಳಿಸಿದ ಕಾರಣ ನೆರೆಯ ಮಲೆಷಿಯಾ, ಶ್ರೀಲಂಕಾ, ಇಂಡೋನೇಷ್ಯಾದಿಂದ ತೆಂಗಿನ ಉತ್ಪನ್ನಗಳ ರಫ್ತು ಹೆಚ್ಚಾಗಿ, ಭಾರತದ ತೆಂಗಿನ ಬೆಲೆ ಕುಸಿದಿದೆ. ಸರ್ಕಾರ ಕೂಡಲೇ ಅಮದು ಸುಂಕವನ್ನು ಹೆಚ್ಚಿಸಿ ರೈತರ ನೆರವಿಗೆ ಬರಬೇಕು. ಹಾಗೆಯೇ ಈ ವರ್ಷದ ಮುಂಗಾರಿನಲ್ಲಿ ಆದ ಅತಿ ಹೆಚ್ಚು ಮಳೆಯಿಂದ ಕರೆ ಕಟ್ಟೆಗಳು ತುಂಬಿದ್ದು, ಬೆಳೆ ಹಾನಿಯಾಗಿತ್ತು. ಆ ಬೆಳೆಯನ್ನು ಹಿಂಗಾರಿನಲ್ಲಿ ತೆಗೆಯಲು ರೈತರು ಪಂಪ್‌ಸೆಟ್‌ಗಳನ್ನು ಚಾಲು ಮಾಡಿದ್ದಾರೆ. ಆದರೆ ಬೆಸ್ಕಾಂ ರೈತರೊಂದಿಗೆ ಚಲ್ಲಾಟವಾಡುತ್ತಿದೆ. ಸಮರ್ಪಕ ವಿದ್ಯುತ್‌ ಪೂರೈಕೆ ಮಾಡುತ್ತಿಲ್ಲ. ದಿನದ ಕನಿಷ್ಠ 8 ಗಂಟೆ ಕಾಲ ಸಮರ್ಪಕ ವಿದ್ಯುತ್‌ ಪೂರೈಕೆ ಮಾಡಬೇಕೆಂಬುದು ರೈತ ಸಂಘದ ಆಗ್ರಹವಾಗಿದೆ ಎಂದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಎ.ಗೋವಿಂದರಾಜು ಅವರ ನೇತೃತ್ವದಲ್ಲಿ ನೂರಾರು ರೈತರು ನಗರದ ಟೌನ್‌ಹಾಲ್‌ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಡಿಸಿ ಕಚೇರಿ ಬಳಿ ಸಮಾವೇಶಗೊಂಡು ಪ್ರತಿಭಟನೆ ನಡೆಸಿದರು.

ಈ ಸಂಬಂಧ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ನೂಲೆನೂರು ಶಂಕರಪ್ಪ, ಜಿಲ್ಲಾ ಪದಾಧಿಕಾರಿಗಳಾದ ಜಿ.ಸಿ.ಶಂಕರಪ್ಪ, ದೊಡ್ಡಮಾಳಯ್ಯ, ರವೀಶ್‌, ಯುವಘಟಕದ ಚಿರತೆ ಚಿಕ್ಕಣ್ಣ,ವಿವಿಧ ತಾಲೂಕುಗಳ ಪದಾಧಿಕಾರಿಗಳಾದ ಕೆ.ಎನ್‌.ವೆಂಕಟೇಗೌಡ, ಸಿ.ಜಿ.ಲೋಕೇಶ್‌, ಭಾಗ್ಯಮ್ಮ, ಚಿಕ್ಕಬೋರೇಗೌಡ, ರಂಗಸ್ವಾಮಯ್ಯ, ಕೃಷ್ಣಪ್ಪ, ಡಿ.ಕೆ.ರಾಜು, ಪೂಜಾರಪ್ಪ, ರಂಗಹನುಮಯ್ಯ, ಶಬ್ಬೀರ್‌ ಪಾಷ ಸೇರಿದಂತೆ ನೂರಾರು ಜನ ರೈತರು ಪಾಲ್ಗೊಂಡಿದ್ದರು.

ಒಗ್ಗಟ್ಟಿನ ಕೊರತೆ ವಂಚನೆಗೆ ಕಾರಣ:

ರೈತರಲ್ಲಿ ಒಗ್ಗಟ್ಟಿನ ಕೊರತೆ ಮತ್ತು ಸ್ಪಷ್ಟರಾಜಕೀಯ ನಿಲುವು ಇಲ್ಲದಿರುವುದೇ ಈ ರೀತಿಯ ಸಂಕಷ್ಟಕ್ಕೆ ಸಿಲುಕಲು ಕಾರಣ. ಇದನ್ನು ಅರ್ಥ ಮಾಡಿಕೊಂಡಿರುವ ರಾಜಕೀಯ ಪಕ್ಷಗಳು ಇನ್ನಿಲ್ಲದ ಬಣ್ಣದ ಮಾತುಗಳನ್ನಾಡಿ, ವಂಚಿಸುತ್ತಿವೆ. ಹಾಗಾಗಿ ರೈತರು ಚುನಾವಣಾ ಸಂದರ್ಭದಲ್ಲಿಯಾದರೂ ಒಂದು ಸ್ಪಷ್ಟನಿಲುವು ಕೈಗೊಂಡು, ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ಪಕ್ಷಗಳಿಗೆ ತಕ್ಕ ಪಾಠ ಕಲಿಸಬೇಕೆಂದು ಬಡಗಲಪುರ ನಾಗೇಂದ್ರ ಕರೆ ನೀಡಿದರು. ಕೊಬ್ಬರಿಗೆ ಕ್ವಿಂಟಲ್‌ಗೆ 20 ಸಾವಿರ ಕನಿಷ್ಠ ಬೆಂಬಲ ಬೆಲೆ ನೀಡಬೇಕು, ರೈತರಿಗೆ ಕನಿಷ್ಠ 8 ಗಂಟೆಗಳ ಕಾಲ ತ್ರಿಫೇಸ್‌ ವಿದ್ಯುತ್‌ ಸರಬರಾಜು ಮಾಡಬೇಕು ಹಾಗೂ ಕೃಷಿ ಪೂರಕ ವಸ್ತುಗಳ ಬೆಲೆಗಳ ಹೆಚ್ಚಳವನ್ನು ಕಡಿತಗೊಳಿಸಬೇಕೆಂದು ಆಗ್ರಹಿಸಿದರು. 

click me!