ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾದೇ ನಷ್ಟ ಅನುಭವಿಸಿದ ರೈತರು| ಕೊರೋನಾ ಹೊಡೆತಕ್ಕೆ ಸಿಲುಕಿ ಮಾವು ಸಾಗಾಟ, ಮಾರಾಟ ಸೇರಿ ಸೂಕ್ತ ಮಾರುಕಟ್ಟೆ ಇಲ್ಲದೇ ರೈತರ ಪರದಾಟ| ರೈತರಿಂದ ನೇರವಾಗಿ ಖರೀದಿಸಿ, ವೈಜ್ಞಾನಿಕವಾಗಿ ಸಂಸ್ಕರಿಸಿ ಸಂಘದ ಮೂಲಕವೇ ನೇರವಾಗಿ ಗ್ರಾಹಕರಿಗೆ ಮಾರಾಟ|
ಶಿವಕುಮಾರ ಕುಷ್ಟಗಿ
ಗದಗ(ಮೇ.13): ಕೊರೋನಾ ಲಾಕ್‌ಡೌನ್ ಎಫೆಕ್ಟ್‌ನಿಂದ ತೀವ್ರ ಸಮಸ್ಯೆ ಎದುರಿಸುತ್ತಿರುವ ರೈತರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲಾದೇ ನಷ್ಟ ಅನುಭವಿಸಿದ್ದಾರೆ. ಅದರಲ್ಲೂ ಲಕ್ಷಾಂತರ ರು. ಖರ್ಚು ಮಾಡಿ, ವರ್ಷಾನುಗಟ್ಟಲೇ ಕಾಯ್ದ ತೋಟಗಾರಿಕಾ ರೈತರಿಗೆ ತೀವ್ರ ತೊಂದರೆಯಾಗಿದ್ದು, ಅವರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಹುಲಕೋಟಿ ರೈತರು ಮುಂದಾಗಿದ್ದಾರೆ.
ಗದಗ ಜಿಲ್ಲೆಯ ಹುಲಕೋಟಿ, ಶ್ಯಾಗೋಟಿ, ದುಂದೂರ ಸೇರಿ ಹಲವು ಗ್ರಾಮದಲ್ಲಿ ಕೆಂಪು ಮಣ್ಣು ಹೆಚ್ಚಾಗಿ ಇರುವುದರಿಂದ ನಾಲ್ಕಾರು ದಶಕಗಳಿಂದ ಮಾವಿನ ಬೆಳೆಯನ್ನು ಬೆಳೆಯುತ್ತಿದ್ದಾರೆ. ಈ ಬಾರಿಯೂ 270 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಆದರೆ ಕೊರೋನಾ ಹೊಡೆತಕ್ಕೆ ಸಿಲುಕಿ ಮಾವು ಸಾಗಾಟ, ಮಾರಾಟ ಸೇರಿ ಸೂಕ್ತ ಮಾರುಕಟ್ಟೆಇಲ್ಲದೇ ರೈತರು ಪರದಾಡುವಂತಾಗಿದೆ.
ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರಿಗೆ ಉಡಿ ತುಂಬಿ ಸನ್ಮಾನ
ಸಂಘದ ಮೂಲಕ ಮಾರಾಟ
ಜಿಲ್ಲೆಯ ಹುಲಕೋಟಿ ಗ್ರಾಮದ ಕೆಲ ಪ್ರಗತಿಪರ ರೈತರು ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರದ ಮಾರ್ಗದರ್ಶನದಲ್ಲಿ ಹುಲಕೋಟಿ ಹಾರ್ಟಿಕಲ್ಚರ್ ಫಾರ್ಮರ್ಸ್ ಪ್ರೊಡ್ಯೂಸರ್ಸ್ ಸಂಘವನ್ನು ಹುಟ್ಟು ಹಾಕಿ ಕಳೆದ ನಾಲ್ಕೈದು ವರ್ಷದಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದರು. ಆದರೆ ಈ ವರ್ಷ ಅದನ್ನೇ ಗಂಭೀರವಾಗಿ ತೆಗೆದುಕೊಂಡು ತೊಂದರೆಯಲ್ಲಿರುವ ರೈತರ ನೆರವಿಗೆ ಧಾವಿಸಿದ್ದು, ರೈತರಿಂದ ನೇರವಾಗಿ ಖರೀದಿಸಿ, ಅದನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ (ಯಾವುದೇ ರಾಸಾಯನಿಕವಿಲ್ಲದೇ) ಸಂಘದ ಮೂಲಕವೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದು ಇದರಿಂದಾಗಿ ಸಂಘಕ್ಕೂ, ರೈತರಿಗೆ ಹೆಚ್ಚಿನ ಲಾಭ ಸಿಗುತ್ತದೆ ಅದು, ಈ ಲಾಕ್‌ಡೌನ್ ಸಂದರ್ಭದಲ್ಲಿ.
ಇವರದ್ದೇ ಪ್ಯಾಕಿಂಗ್ ಇದೆ:
ರೈತರ ಜಮೀನುಗಳಲ್ಲಿ ಬೆಳೆದ ಮಾವನ್ನು ಸಂಘಕ್ಕೆ ರೈತರೇ ತಲುಪಿಸಬೇಕು. ಸದ್ಯ ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಬೆಲೆ ನೀಡುವ ಸಂಘ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತದೆ. ಈ ಮಾವನ್ನು ಸಂಸ್ಕರಿಸಿ (ಅಡಿಹಾಕುವುದು) 53 ಡಿಗ್ರಿ ಉಷ್ಣಾಂಶದ ನೀರಿನಲ್ಲಿ ಅವುಗಳನ್ನು ಸ್ವಚ್ಛಗೊಳಿಸಿ, ಬ್ಯಾಕ್ಟಿರಿಯಾ ಮುಕ್ತಗೊಳಿಸಿ, ಬಾಕ್ಸ್‌ಗಳಲ್ಲಿ ಪ್ಯಾಕಿಂಗ್ ಮಾಡಲಾಗುತ್ತದೆ. ಬಾಕ್ಸ್‌ಗಳ ಮೇಲೆ ಪ್ಯಾಕಿಂಗ್ ದಿನಾಂಕ ಮತ್ತು ಅದನ್ನು ಎಷ್ಟುದಿನಕ್ಕೆ ಗ್ರಾಹಕರು ಬಳಸಬೇಕು ಎನ್ನುವ ವಿವರ ಕೂಡಾ ನಮೂದಿಸಿ ಸಂಘದ ಮೂಲಕ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದ್ದು, ರೈತರಿಗೂ ಉತ್ತಮ ಬೆಲೆ ಸಿಗುತ್ತಿದೆ, ಸಂಘಕ್ಕೂ ಲಾಭವಾಗುತ್ತಿದೆ.
ಭಾರಿ ಬೇಡಿಕೆ:
ಈ ರೀತಿಯ ಸಾವಯವ ಕೃಷಿಯಲ್ಲಿ ಬೆಳೆದ, ಅಡಿ ಹಾಕಿ ಹಣ್ಣು ಮಾಡಿದ (ಕಾರ್ಬೈಡ್ ಹಾಕದ) ಮಾವಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಾರಿ ಬೇಡಿಕೆ ಬಂದಿದ್ದು, ಸದ್ಯಕ್ಕೆ ಸಂಘದ ಮೂಲಕ ನಿತ್ಯವೂ 1 ಟನ್‌ನಷ್ಟು ಮಾವು ಮಾರಾಟವಾಗುತ್ತಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಹಣ್ಣಿನ ದರಕ್ಕಿಂತ ಅರ್ಧ ಬೆಲೆಗೆ ಮಾವು ಗ್ರಾಹಕರಿಗೆ ಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಭಾರೀ ಬೇಡಿಕೆ ಸೃಷ್ಟಿಯಾಗಿದೆ.
ನಮ್ಮ ಸಂಘದ ಮೂಲಕ ಈಗಾಗಲೇ ಗದಗ ಜಿಲ್ಲೆಯಲ್ಲಿ ಬೆಳೆದ ಎಲ್ಲಾ ಮಾವನ್ನು ಖರೀದಿಸಿ, ಸಂಸ್ಕರಿಸಿ ಮಾರಾಟ ಮಾಡಿದ್ದೇವೆ. ನಮ್ಮ ಮಾರಾಟ ವ್ಯವಸ್ಥೆಗೆ ಮೆಚ್ಚಿ ಧಾರವಾಡ ಜಿಲ್ಲೆಯಿಂದಲೂ ಪ್ರತಿ ನಿತ್ಯ 2 ಲಾರಿ ಮಾವು ಮಾರಾಟಕ್ಕಾಗಿ ನಮ್ಮ ಸಂಘಕ್ಕೆ ಬರುತ್ತಿದೆ. ಬರುವ ವರ್ಷದಿಂದ ಇದನ್ನು ಹೆಚ್ಚಿನ ಕ್ರಮಗಳ ಮೂಲಕ ಮಾರಾಟ ವ್ಯವಸ್ಥೆಗೆ ಚಿಂತನೆ ನಡೆಸಲಾಗಿದೆ ಎಂದು ಹುಲಕೋಟಿ ಸಂಘದ ಅಧ್ಯಕ್ಷ ವಿಶ್ವನಾಥ ಹಿರೇಗೌಡರ ಹೇಳಿದ್ದಾರೆ.
ಹುಲಕೋಟಿ ಹಣ್ಣಿಗೆ ಬೆಂಗಳೂರಿನಿಂದ ಭಾರಿ ಬೇಡಿಕೆ ಬಂದಿದ್ದು, ದೊಡ್ಡ ಅಪಾರ್ಟಮೆಂಟ್‌ನವರು ಇಲ್ಲಿಯೇ ಬಂದು ಮಾರಾಟ ಮಾಡಿ ನಿಮಗೆ ಸಾರಿಗೆ ವೆಚ್ಚ ಮತ್ತು ಇಲ್ಲಿ ಮಾರಾಟಕ್ಕೆ ಅನುವು ಮಾಡಿಕೊಡುತ್ತೇವೆ ಎಂದಿದ್ದಾರೆ. ಮುಂದಿನ ವರ್ಷದಿಂದ ಆ ಕಾರ್ಯಕ್ಕೂ ನಾವು ಅಣಿಯಾಗುತ್ತೇವೆ. ರೈತರು ಹೆದರದೇ ಮಾವು ಬೆಳೆಯಬೇಕು. ಸಾಧ್ಯವಾದಷ್ಟುಖರ್ಚಿಲ್ಲದ ವೈಜ್ಞಾನಿಕ ವಿಧಾನ ವಿವರಿಸಿ, ಮಾವು ಸಂಸ್ಕರಣೆಯ ಬಗ್ಗೆ ರೈತರಿಗೂ ಹೆಚ್ಚಿನ ತಿಳವಳಿಕೆ ನೀಡಿ, ಹೆಚ್ಚಿನ ಲಾಭ ತಂದು ಕೊಡುವುದೇ ಸಂಘದ ಮೂಲ ಉದ್ದೇಶ ಎಂದು ಗುರುನಾಥಗೌಡ ಓದುಗೌಡ್ರ ಅವರು ತಿಳಿಸಿದ್ದಾರೆ.